ನಿಜ ಜೀವನದಲ್ಲಿ ನಾವು ಒಟ್ಟಿಗೆ ಕಲಿಯುತ್ತಿದ್ದೇವೆ, ಮುನ್ನಡೆಯುತ್ತಿದ್ದೇವೆ: ನಟಿ ಮಿಲನಾ ನಾಗರಾಜ್
ನಾವು ಮುಕ್ತ ಚರ್ಚೆಗಳನ್ನು ನಡೆಸುತ್ತೇವೆ. ನಾನು ಕೃಷ್ಣನಿಂದ ಪ್ರತಿಕ್ರಿಯೆಯನ್ನು ಕೇಳುತ್ತೇನೆ ಮತ್ತು ನಾವು ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ. ನಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ನಡುವೆ ಸಮತೋಲನ ಸಾಧಿಸುವುದು ಅತ್ಯಗತ್ಯ ಮತ್ತು ನಾವು ನಿರಂತರವಾಗಿ ಕಲಿಯುತ್ತಿದ್ದೇವೆ ಮತ್ತು ಒಟ್ಟಿಗೆ ಮುನ್ನಡೆಯುತ್ತಿದ್ದೇವೆ' ಎನ್ನುತ್ತಾರೆ ನಟಿ ಮಿಲನಾ.

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ನಟನಾ ಪಯಣವು ನಮ್ ದುನಿಯಾ ನಮ್ ಸ್ಟೈಲ್ ಚಿತ್ರದ ಮೂಲಕ ಪ್ರಾರಂಭವಾಯಿತು ಮತ್ತು ನಂತರ ಅವರು ಚಾರ್ಲಿ, ಲವ್ ಮಾಕ್‌ಟೇಲ್ 1 ಮತ್ತು 2, ಮಿಸ್ಟರ್ ಬ್ಯಾಚುಲರ್ ಮತ್ತು ಲವ್ ಬರ್ಡ್ಸ್‌ನಂತಹ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅವರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಇದೀಗ ಮುಂಬರುವ 'ಕೌಸಲ್ಯ ಸುಪ್ರಜಾ ರಾಮ' ಚಿತ್ರದಲ್ಲಿಯೂ ಮುಂದುವರಿಯುತ್ತಿದೆ. ನಿರ್ದೇಶಕ ಶಶಾಂಕ್ ಅವರ ಈ ಚಿತ್ರ ಈ ವಾರ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
'ಆರಂಭದಲ್ಲಿ, ನಾನು ಚಿತ್ರದ ಭಾಗವಾಗಿರಲಿಲ್ಲ. ಆದರೆ, ನಾನು ಕೃಷ್ಣನಿಗೆ ನೀಡಿದ ಸ್ಕ್ರಿಪ್ಟ್ ಅನ್ನು ಓದಿದಾಗ, ಅದು ಮನರಂಜನೆ ಜೊತೆಗೆ ಪುರುಷ ಪ್ರಧಾನ ವ್ಯವಸ್ಥೆಯ ಚಿತ್ರಣವಿರುವುದನ್ನು ನೋಡಿದೆ. ಕಥೆ ಕುತೂಹಲಕಾರಿಯಾಗಿತ್ತು. ಆದರೆ, ಶಶಾಂಕ್ ಅವರು ನನಗೆ ಒಂದು ಪಾತ್ರವನ್ನು ನೀಡಲು ಮುಂದಾದಾಗ, ಕೃಷ್ಣ ಅವರೊಂದಿಗೆ ಪದೇ ಪದೆ ನಟಿಸಿರುವುದಿರಂದ ಹಿಂದೇಟು ಹಾಕಿದೆ ಮತ್ತು ನನ್ನ ಕಳವಳವನ್ನು ನಿರ್ದೇಶಕರ ಬಳಿ ಹೇಳಿಕೊಂಡೆ. ಆದರೆ, ಆ ಪಾತ್ರಕ್ಕೆ ನಟನಾ ಕೌಶಲ್ಯವಿರುವ ಅನುಭವಿ ಕಲಾವಿದರ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು. ಇದೊಂದು ವಿಭಿನ್ನ ಮತ್ತು ಬೋಲ್ಡ್ ಪಾತ್ರವಾಗಿದ್ದು, ಪ್ರೇಕ್ಷಕರು ಮತ್ತು ಅನೇಕ ಕುಟುಂಬಗಳಿಗೆ ಇದು ಕನೆಕ್ಟ್ ಆಗುತ್ತದೆ ಎಂದು ನಾನು ನಂಬುತ್ತೇನೆ' ಎನ್ನುತ್ತಾರೆ ಮಿಲನಾ.
ಈ ಬಗ್ಗೆ ಮಾತನಾಡುವ ಕೃಷ್ಣ, 'ನನ್ನ ಹಿಂದಿನ ಚಿತ್ರಗಳು ರೊಮ್ಯಾನ್ಸ್ ಜೊತೆಗೆ ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದವು. ಆದರೆ, ಕೌಸಲ್ಯ ಸುಪ್ರಜಾ ರಾಮ ಪೂರ್ಣ ಪ್ರಮಾಣದ ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಕಾಲೇಜಿನಿಂದ ಪ್ರಾರಂಭವಾಗುವ ವ್ಯಕ್ತಿಯ ವಿಶಿಷ್ಟ ಪ್ರಯಾಣದ ಕುರಿತು ಹೇಳುತ್ತದೆ. ಇದು ಲವ್ ಮಾಕ್‌ಟೇಲ್‌ಗೆ ಹೋಲಿಕೆಯಾಗುತ್ತದೆ. ಆದರೆ, ಈ ಸಿನಿಮಾ ಫ್ಯಾಮಿಲಿ ಎಂಟರ್‌ಟೈನರ್ ಜೊತೆಗೆ ಲವ್ ಸ್ಟೋರಿಯನ್ನು ಸಂಯೋಜಿಸಿದೆ' ಎಂದು ಹೇಳುತ್ತಾರೆ.
ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವಲ್ಲಿ ಮಾತುಕತೆ ಮತ್ತು ನಿರ್ಧಾರದ ಮಹತ್ವವನ್ನು ಒತ್ತಿಹೇಳುವ ಕೃಷ್ಣ, 'ವೃತ್ತಿಪರರು ಮತ್ತು ಸಂಗಾತಿಗಳಾಗಿ, ನಾವು ಎಲ್ಲ ವಿಚಾರಗಳನ್ನೂ ಒಟ್ಟಿಗೆ ಚರ್ಚಿಸುತ್ತೇವೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ, ನಾವು ಅದನ್ನು ಚರ್ಚಿಸುತ್ತೇವೆ ಮತ್ತು ಪರಿಹಾರವನ್ನು ಕಂಡುಕೊಳ್ಳುತ್ತೇವೆ. ಮಿಲನಾ ಸಾಕಷ್ಟು ವಿಮರ್ಶಾತ್ಮಕ ಮತ್ತು ಆಕೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ. ನಾವಿಬ್ಬರೂ ಯೋಚಿಸಲು ಮತ್ತು ನಿರ್ಧರಿಸಲು ನಮ್ಮ ಸಮಯವನ್ನು ತೆಗೆದುಕೊಳ್ಳುತ್ತೇವೆ ಮತ್ತು ಈ ವಿಧಾನವು ನಮಗೆ ಚೆನ್ನಾಗಿ ಕೆಲಸ ಮಾಡಿದೆ' ಎನ್ನುತ್ತಾರೆ.
'ನಮ್ಮ ಪ್ರಯಾಣದ ಉದ್ದಕ್ಕೂ, ಸೆಟ್‌ಗಳಲ್ಲಿ ಮತ್ತು ಹೊರಗೆ ಎರಡೂ ಕಡೆಗಳಲ್ಲಿ ನಾವು ಮುಕ್ತ ಚರ್ಚೆಗಳನ್ನು ನಡೆಸುತ್ತೇವೆ. ನಾನು ಕೃಷ್ಣನಿಂದ ಪ್ರತಿಕ್ರಿಯೆಯನ್ನು ಕೇಳುತ್ತೇನೆ ಮತ್ತು ನಾವು ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ. ನಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ನಡುವೆ ಸಮತೋಲನ ಸಾಧಿಸುವುದು ಅತ್ಯಗತ್ಯ ಮತ್ತು ನಾವು ನಿರಂತರವಾಗಿ ಕಲಿಯುತ್ತಿದ್ದೇವೆ ಮತ್ತು ಒಟ್ಟಿಗೆ ಮುನ್ನಡೆಯುತ್ತಿದ್ದೇವೆ' ಎನ್ನುತ್ತಾರೆ ನಟಿ ಮಿಲನಾ.
ಕೌಸಲ್ಯ ಸುಪ್ರಜಾ ರಾಮ ಸಿನಿಮಾವನ್ನು ನಿರ್ದೇಶಕ ಶಶಾಂಕ್ ಮತ್ತು ನಟ-ರಾಜಕಾರಣಿ ಬಿ.ಸಿ. ಪಾಟೀಲ್ ಜಂಟಿಯಾಗಿ ನಿರ್ಮಿಸಿದ್ದು, ನಟಿ ಬೃಂದಾ ಆಚಾರ್ಯ, ನಾಗಭೂಷಣ, ರಂಗಾಯಣ ರಘು, ಸುಧಾ ಬೆಳವಾಡಿ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


