'ತೆಲುಗು ಸ್ಟಾರ್ ಹೀರೋಗಳು ಕನ್ನಡ ಸೂಪರ್ ಸ್ಟಾರ್ ಡಾ.ರಾಜ್ ಕುಮಾರ್ ರನ್ನು ನೋಡಿ ಕಲಿಯಬೇಕು'
ಸಂಭಾವನೆ ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ತೆಲುಗು ಸ್ಟಾರ್ ಹೀರೋಗಳು ಕನ್ನಡ ಸೂಪರ್ ಸ್ಟಾರ್ ಡಾ.ರಾಜ್ ಕುಮಾರ್ ರನ್ನು ನೋಡಿ ಕಲಿಯಬೇಕು ಎಂದು ಖ್ಯಾತ ತೆಲುಗು ನಟ ಪೋಸಾನಿ ಕೃಷ್ಣ ಮುರಳಿ ಹೇಳಿದ್ದಾರೆ.

ಹೈದರಾಬಾದ್: ಸಂಭಾವನೆ ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ತೆಲುಗು ಸ್ಟಾರ್ ಹೀರೋಗಳು ಕನ್ನಡ ಸೂಪರ್ ಸ್ಟಾರ್ ಡಾ.ರಾಜ್ ಕುಮಾರ್ ರನ್ನು ನೋಡಿ ಕಲಿಯಬೇಕು ಎಂದು ಖ್ಯಾತ ತೆಲುಗು ನಟ ಪೋಸಾನಿ ಕೃಷ್ಣ ಮುರಳಿ ಹೇಳಿದ್ದಾರೆ.
ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಇಳಿಕೆ ಮಾಡುವ ಆಂಧ್ರ ಪ್ರದೇಶ ಸರ್ಕಾರದ ಪ್ರಸ್ತಾವನೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೋಸಾನಿ ಕೃಷ್ಣ ಮುರಳಿ ಅವರು, ಕೊರೋನಾ ಸಾಂಕ್ರಾಮಿಕ ಸಂಕಷ್ಟದಲ್ಲಿ ಜನ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ದುಬಾರಿ ಹಣ ನೀಡಿ ಥಿಯೇಟರ್ ಗೆ ಬಂದು ಸಿನಿಮಾ ನೋಡುವುದು ಕಷ್ಟದ ವಿಚಾರ. ಹೀಗಾಗಿ ಥಿಯೇಟರ್ ಗಳಲ್ಲಿ ಸಿನಿಮಾ ಟಿಕೆಟ್ ದರ ಇಳಿಸುವ ಆಂಧ್ರ ಪ್ರದೇಶ ಸರ್ಕಾರದ ಪ್ರಸ್ತಾವನೆಗೆ ತಮ್ಮ ಬೆಂಬಲ ಇದೆ ಎಂದು ಹೇಳಿದರು.
ಇದೇ ವೇಳೆ ಕೋಟಿ ಕೋಟಿ ಸಂಭಾವನೆ ಪಡೆಯುವ ತೆಲುಗು ಸ್ಚಾರ್ ನಟರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರದ ನಿರ್ಧಾರದಿಂದ ನಿರ್ಮಾಪಕರಿಗೆ, ವಿತರಕರಿಗೆ ತೊಂದರೆಯಾಗಬಹುದು. ಆದರೆ ತೆಲುಗು ನಟ-ನಟಿಯರು, ಸೂಪರ್ ಸ್ಟಾರ್ ಹೀರೋಗಳು ತಮ್ಮ ದುಬಾರಿ ಸಂಭಾವನೆಯನ್ನು ಕಡಿಮೆ ಮಾಡಿಕೊಂಡರೆ ನಿರ್ಮಾಪಕರ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಿದರು.
ಡಾ. ರಾಜ್ ಕುಮಾರ್ ರನ್ನು ನೋಡಿ ಕಲಿಯಬೇಕು
ಇದೇ ವೇಳೆ ಕರ್ನಾಟಕದ ಸೂಪರ್ ಸ್ಟಾರ್ ನಟ ಡಾ.ರಾಜ್ ಕುಮಾರ್ ಅವರು ನಮಗೆ ಮಾದರಿಯಾಗಬೇಕು. ಈಗಿನ ಕೆಲ ನಟರು ಒಂದು ಅಥವಾ ಎರಡು ಚಿತ್ರಗಳು ಯಶಸ್ಸು ಕಂಡರೆ ಸಾಕು... ತಮ್ಮ ಸಂಭಾವನೆಯನ್ನು ಕೋಟಿಗಳ ಲೆಕ್ಕಾಚಾರದಲ್ಲಿ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಸಿನಿಮಾರಂಗದಲ್ಲಿ ದಶಕಗಳ ಕಾಲ ಯಶಸ್ಸಿನ ಉತ್ತುಂಗದಲ್ಲಿದ್ದರೂ ಡಾ.ರಾಜ್ ಕುಮಾರ್ ನಿರ್ಮಾಪಕರನ್ನು ಉತ್ತುಂಗ ಸ್ಥಾನದಲ್ಲಿಟ್ಟಿದ್ದರು. ಒಮ್ಮೆ ಡಾ. ರಾಜ್ ಕುಮಾರ್ ಅವರು ಎಲ್ಲ ನಿರ್ಮಾಪಕರನ್ನು ಮತ್ತು ವಿತರಕರನ್ನು ತಮ್ಮಮನೆಗೆ ಔತಣಕೂಟಕ್ಕೆ ಆಹ್ವಾನಿಸಿ ಊಟ ಹಾಕಿ ಬಳಿಕ ಅವರೊಂದಿಗೆ ಸಭೆ ನಡೆಸಿದರು. ಈ ವೇಳೆ ಎಲ್ಲರನ್ನೂ ಉದ್ದೇಶಿಸಿ ನನ್ನ ಕುಟುಂಬ ಬೆಳೆಯುತ್ತಿದೆ. ಅವರ ಪೋಷಣೆ ಕೂಡ ಮುಖ್ಯ. ನನ್ನನ್ನೇ ನಂಬಿರುವವರ ಸಂಖ್ಯೆ ದೊಡ್ಡದಿದೆ.
ಹೀಗಾಗಿ ನನ್ನ ಸಂಭಾವನೆಯನ್ನು 25 ಸಾವಿರ ರೂ.ಗಳಷ್ಟು ಹೆಚ್ಚಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ. ಅದೂ ಕೂಡ ನೀವು ಒಪ್ಪಿಕೊಂಡರೆ ಮಾತ್ರ ಎಂದು ಹೇಳಿದರು. ಇದಕ್ಕೆ ಅಚ್ಚರಿಗೊಂಡ ನಿರ್ಮಾಪಕರು... ಸಾರ್ ನೀವು ಓರ್ವ ಸ್ಟಾರ್ ನಟ.. ನಿಮ್ಮ ಸಂಭಾವನೆ ಹೆಚ್ಚಿಸಿಕೊಳ್ಳಲು ನಮ್ಮ ಅನುಮತಿ ಏಕೆ... ನೀವು ಹೆಚ್ಚಿಸಿಕೊಳ್ಳಿ ಸಾರ್... ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಡಾ.ರಾಜ್ ಕುಮಾರ್ ಅವರು ನೀವಿದ್ದರೆ ನಾವು... ನೀವು ಚಿತ್ರ ಮಾಡಿದರೆ ಅದರನ್ನು ನಾವು ಪಾತ್ರ ಮಾಡುತ್ತೇವೆ. ಹೀಗಾಗಿ ನಿಮ್ಮ ಅಭಿಪ್ರಾಯ ಕೂಡ ಮುಖ್ಯ ಎಂದು ಹೇಳಿದರು.
ಡಾ.ರಾಜ್ ಕುಮಾರ್ ಅಂತಹ ಮೇರುನಟರಿಂದ ಮಾತ್ರ ಇಂತಹ ಕಾರ್ಯ ಸಾಧ್ಯ. ಇಂದಿನ ಪೀಳಿಗೆಯ ನಟರು ಅವರನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ಪೋಸಾನಿ ಕೃಷ್ಣ ಮುರಳಿ ಹೇಳಿದ್ದಾರೆ.
ಇನ್ನು ಸುದ್ದಿಗೋಷ್ಠಿಯಲ್ಲಿ ನಟ ಪೋಸಾನಿ ಕೃಷ್ಣ ಮುರಳಿ ನಟ ಪವನ್ ಕಲ್ಯಾಣ್ ಮತ್ತು ಅವರ ಅಭಿಮಾನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜಕೀಯಕ್ಕೆ ಮನೆ ಹೆಣ್ಣುಮಕ್ಕಳನ್ನು ಎಳೆದು ತರುವುದು ಸರಿಯಲ್ಲ ಎಂದು ಕಿಡಿಕಾರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


