ನಟ ದರ್ಶನ್ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಸಂಜನಾ!
ವಾಹಿನಿಯೊಂದರ ಟಾಕ್ ಶೋ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟಿ ಸಂಜನಾ ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದು, ನಟ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಂಗಳೂರು: ವಾಹಿನಿಯೊಂದರ ಟಾಕ್ ಶೋ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟಿ ಸಂಜನಾ ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದು, ನಟ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ವಿವಾದಗಳಿಗೇನೂ ಕಡಿಮೆ ಇಲ್ಲ, ನಿತ್ಯ ಒಂದಿಲ್ಲೊಂದು ವಿವಾದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತವೆ. ನಟ ಯಶ್ ಬಗ್ಗೆ ಕಿರಿಕ್ ನಟಿ ರಶ್ಮಿಕಾ ಮಂದಣ್ಣ ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದು ತಣ್ಣಗಾದ ಬೆನ್ನಲ್ಲೇ ಬಿಗ್ ಬಾಸ್‌ನ ಭುವನ್ ಹಾಗೂ ಪ್ರಥಮ್ ಅವರ ಕೋಳಿ ಜಗಳ ಶುರುವಾಗಿತ್ತು. ಇನ್ನೇನು ಇದೂ ಕೂಡ ಮುಗಿತು ಎನ್ನುತ್ತಿರುವಾಗಲೇ ಮತ್ತೊಂದು ವಿವಾದ ಭುಗಿಲೆದ್ದಿದೆ.
ಇದೀಗ ಬಿಗ್ ಬಾಸ್ ಸ್ಪರ್ಧಿ ಮತ್ತು ಧಾರಾವಾಹಿ ನಟಿ ಸಂಜನಾ ಅವರು ನಟ ದರ್ಶನ್ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದು, ನಟಿ ಸಂಜನಾ ವಿರುದ್ಧ ದರ್ಶನ್ ಅಭಿಮಾನಿಗಳು ಗರಂ ಆಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಿರೂಪಕ ಅಕುಲ್ ಬಾಲಾಜಿ ಅವರ ಟಾಕ್ ಶೋ ಒಂದರಲ್ಲಿ ಭಾಗವಹಿಸಿದ್ದ ನಟಿ ಸಂಜನಾ ದರ್ಶನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶೋ ನಲ್ಲಿ ಬಿಗ್ ಬಾಸ್ ನ ಇತರೆ ಸ್ಪರ್ಧಿಗಳಾಗಿದ್ದ ಪ್ರಥಮ್ ಹಾಗೂ ಕಿರಿಕ್ ಕೀರ್ತಿ ಜೊತೆ ಭಾಗವಹಿಸಿದ್ದ ಸಂಜನಾ, ದರ್ಶನ್ ಸಿನಿಮಾದಲ್ಲಿ ಜಾಸ್ತಿ ಬಿಲ್ಡಪ್ ಇರುತ್ತೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮ ಪ್ರಸಾರವಾಗಿದ್ದು, ದರ್ಶನ್ ಅಭಿಮಾನಿಗಳು ಈ ಹೇಳಿಕೆ ಸಂಬಂಧ ಸಂಜನಾ ವಿರುದ್ಧ ಗರಂ ಆಗಿದ್ದಾರೆ. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಸಂಜನಾ ವಿರುದ್ಧ ಕಿಡಿಕಾರುತ್ತಿರುವ ಅಭಿಮಾನಿಗಳು ಸಂಜನಾ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಅಭಿಮಾನಿಗಳ ಎಚ್ಚರಿಕೆಗೆ ಕ್ಯಾರೇ ಎನ್ನದ ಸಂಜನಾ?
ಆದರೆ ಅಭಿಮಾನಿಗಳ ಎಚ್ಚರಿಕೆ ಹೊರತಾಗಿಯೂ ನಟಿ ಸಂಜನಾ ಮಾತ್ರ ತಾವು ಮಾಡದ ತಪ್ಪಿಗೆ ಕ್ಷಮೆ ಕೇಳುವುದಿಲ್ಲ. ಆ ಸಮಯದಲ್ಲಿ ನನಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ, ಅದು ನನ್ನ ಅನಿಸಿಕೆಯೇ ಹೊರತು, ಯಾರಿಗೂ ಇದರ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರವಿಲ್ಲ ಎಂದು ಟೀಕಾಕಾರರಿಗೆ ಉತ್ತರಿಸಿದ್ದಾರೆ. ಅಲ್ಲದೆ ಈ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ನಟಿ ಸಂಜನಾ ತಮ್ಮ ಫೇಸ್‌ಬುಕ್ ಅಕೌಂಟ್ ಅನ್ನು ಬ್ಲಾಕ್ ಮಾಡಿಕೊಂಡಿದ್ದು, ಈ ಬಗ್ಗೆ ಖಾಸಗಿ ಮಾಧ್ಯಮದಲ್ಲೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷಮೆ ಕೇಳೋಲ್ಲ
ನಟ ದರ್ಶನ್ ಅವರ ದರ್ಶನವಾದಾಗ ನಾನು ನಡೆದ ವಿಷಯ ತಿಳಿಸುವೆ. ನನ್ನ ಅಭಿಪ್ರಾಯ ಏನು ಅಂಥ ಹೇಳುವೆ. ಯಾವ ಅರ್ಥದಲ್ಲಿ ನಾನು ಹೇಳಿದ್ದೇನೆ ಎಂಬುದನ್ನು ಅವರಿಗೆ ವಿವರಿಸುವೆ. ಅಷ್ಟಕ್ಕೂ ಅವರು ( ನಟ ದರ್ಶನ್ ) ಇಂಥ ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಟೀಕೆಗಳು ಒಂದು ಮಿತಿಯಲ್ಲಿದ್ದರೆ ಒಳ್ಳೆಯದು. ಇಲ್ಲಾಂದ್ರೆ ಸೀದಾ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವೆ. ಅಷ್ಟಕ್ಕೂ ನಾನೇನೂ ಇದನ್ನೇ (ಸಿನಿಮಾ ಇಂಡಸ್ಟ್ರಿ) ನೆಚ್ಚಿಕೊಂಡು ಕುಳಿತಿಲ್ಲ. ನನಗೆ ನನ್ನ ತಂದೆಯ ಬಿಸಿನೆಸ್ ಬೇಕಾದಷ್ಟಿದೆ. ಅದನ್ನು ನೋಡಿಕೊಂಡು ಹೋದರೆ ಸಾಕು ನನಗೆ ಎಂದು ಸಂಜನಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


