ಉಪ್ಪಿ-2 ನಂತರ ಉಪೇಂದ್ರ ಕಲ್ಪನಾ-2..!
ತಮ್ಮದೇ ನಿರ್ದೇಶನದ ಉಪ್ಪಿ-2 ಚಿತ್ರದ ಯಶಸ್ಸಿನ ಸಂತಸದಲ್ಲಿರುವ ನಟ-ನಿರ್ದೇಶಕ ಉಪೇಂದ್ರ ಶೀಘ್ರದಲ್ಲಿಯೇ ಮತ್ತೊಂದು ಹೊಸ ಚಿತ್ರವನ್ನು ಕೈಗೆತ್ತುಕೊಳ್ಳಲ್ಲಿದ್ದಾರೆ....

ತಮ್ಮದೇ ನಿರ್ದೇಶನದ ಉಪ್ಪಿ-2 ಚಿತ್ರದ ಭರ್ಜರಿ ಯಶಸ್ಸಿನ ಸಂತಸದಲ್ಲಿರುವ ನಟ-ನಿರ್ದೇಶಕ ಉಪೇಂದ್ರ ಶೀಘ್ರದಲ್ಲಿಯೇ ಮತ್ತೊಂದು ಹೊಸ ಚಿತ್ರವನ್ನು ಕೈಗೆತ್ತುಕೊಳ್ಳಲ್ಲಿದ್ದಾರೆ. ಉಪ್ಪಿ-2 ನಂತೆಯೇ ಉಪೇಂದ್ರ ಅವರ ಮುಂದಿನ ಚಿತ್ರ ಮತ್ತೆ ಸೀಕ್ವೆಲ್ ಆಗಿರುವುದು ವಿಶೇಷ.
ಈ ಬಾರಿ ನಟ ಉಪೇಂದ್ರ ಅವರು ಕಲ್ಪನಾ ಚಿತ್ರದ ಸೀಕ್ವೆಲ್ ಕಲ್ಪನಾ-2ರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ನಟ-ನಿರ್ದೇಶಕ ರಾಘವ ಲಾರೆನ್ಸ್ ಈ ಚಿತ್ರವನ್ನು ಕಾಂಚನಾ ಮತ್ತು ಕಾಂಚನಾ-2 ಎಂಬ ಶೀರ್ಷಿಕೆಗಳಲ್ಲಿ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಿದ್ದರು. ಎರಡೂ ಭಾಷೆಗಳಲ್ಲಿ ಭರ್ಜರಿ ಯಶಗಳಿಸಿದ್ದ ಚಿತ್ರ ಕನ್ನಡಕ್ಕೆ ಕಲ್ಪನಾ ಆಗಿ ರಿಮೇಕ್ ಆಗಿತ್ತು. ಹಾಸ್ಯಭರಿತ ಹಾರರ್ ಚಿತ್ರವಾಗಿದ್ದ ಕಲ್ಪನಾ ಚಿತ್ರ ಭರ್ಜರಿ ಯಶಸ್ಸು ಗಳಿಸದಿದ್ದರೂ ನಿರ್ಮಾಪಕರಿಗೆ ಮೋಸ ಮಾಡಿರಲಿಲ್ಲ. ಹೀಗಾಗಿ ಅದೇ ಯಶಸ್ಸನ್ನು ಮುಂದುವರೆಸಲು ಕಲ್ಪನಾ-2 ಚಿತ್ರವನ್ನು ಉಪೇಂದ್ರ ಕೈಗೆತ್ತಿಕೊಳ್ಳಲ್ಲಿದ್ದಾರೆ. ಆದರೆ ಈ ಬಾರಿ ಚಿತ್ರದ ನಿರ್ದೇಶನದ ಹೊಣೆಯನ್ನು ಹಿರಿಯ ನಿರ್ದೇಶಕ ನಾಗಣ್ಣ ಅವರು ವಹಿಸಿಕೊಂಡಿದ್ದಾರೆ.
ಇನ್ನು ನಾಗಣ್ಣ ಮತ್ತು ಉಪೇಂದ್ರ ಜೋಡಿ ಇದೇ ಮೊದಲ ಬಾರಿಗೆ ಏನೂ ಒಂದಾಗುತ್ತಿಲ್ಲ. ಈ ಹಿಂದೆ ಕುಟುಂಬ, ಗೋಕರ್ಣ, ಗೌರಮ್ಮ ಮತ್ತು ದುಬೈ ಬಾಬು ಎಂಬ 4 ಯಶಸ್ವೀ ಚಿತ್ರಗಳನ್ನು ನೀಡಿದ ಖ್ಯಾತಿ ಈ ಜೋಡಿಗಿದೆ. ಹೀಗಾಗಿಯೇ 5ನೇ ಚಿತ್ರ ಕಲ್ಪನಾ-2 ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಇದಲ್ಲದೆ ನಾಗಣ್ಣ ನಿರ್ದೇಶನದ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಅಭೂತಪೂರ್ವ ಯಶಸ್ಸುಕಂಡಿತ್ತು. ಇದೇ ಯಶಸ್ಸಿನ ಬೆನ್ನಲ್ಲೇ ಕಲ್ಪನಾ-2 ಚಿತ್ರದ ಹೊಣೆಯನ್ನು ನಾಗಣ್ಣ ಹೊತ್ತಿದ್ದಾರೆ.
ಗಾಂಧಿನಗರದ ಮೂಲಗಳ ಪ್ರಕಾರ ನಿರ್ದೇಶಕ ನಾಗಣ್ಣ ಈಗಾಗಲೇ ಚಿತ್ರದ ಸಿದ್ಧತೆಗಳನ್ನು ನಡೆಸಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ನಾಲ್ಕು ಬಾರಿ ಯಶಸ್ಸು ಸಾಧಿಸಿರುವ ಈ ಜೋಡಿ ಸತತ 5ನೇ ಬಾರಿಯೂ ಯಶಸ್ಸು ಸಾಧಿಸಲಿದೆಯೇ ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


