ವಾಣಿಜ್ಯ

ಭಾರತದ 'ವಾರನ್ ಬಫೆಟ್', ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್ ಜುಂಜುನ್ ವಾಲಾ ನಿಧನ

ಷೇರು ಮಾರುಕಟ್ಟೆ ಲೋಕದ ದಿಗ್ಗಜ, ಹಿರಿಯ ಉದ್ಯಮಿ ರಾಕೇಶ್ ಜುಂಜುನ್ ವಾಲಾ ಭಾನುವಾರ ಬೆಳಗ್ಗೆ 6.45ಕ್ಕೆ ನಿಧನರಾಗಿದ್ದಾರೆ. ಭಾರತದ 'ವಾರೆನ್ ಬಫೆಟ್' ಎಂದು ಕರೆಯಲ್ಪಡುವ ರಾಕೇಶ್ ಜುಂಜುನ್ ವಾಲಾ ಅವರಿಗೆ 62 ವರ್ಷ ವಯಸ್ಸಾಗಿತ್ತು.

ಭಾರತದ 'ವಾರನ್ ಬಫೆಟ್', ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್ ಜುಂಜುನ್ ವಾಲಾ ನಿಧನ
ರಾಕೇಶ್ ಜುಂಜುನ್ ವಾಲಾ
Published On :

ಮುಂಬೈ: ಷೇರು ಮಾರುಕಟ್ಟೆ ಲೋಕದ ದಿಗ್ಗಜ, ಹಿರಿಯ ಉದ್ಯಮಿ ರಾಕೇಶ್ ಜುಂಜುನ್ ವಾಲಾ ಭಾನುವಾರ ಬೆಳಗ್ಗೆ 6.45ಕ್ಕೆ ನಿಧನರಾಗಿದ್ದಾರೆ. ಭಾರತದ 'ವಾರೆನ್ ಬಫೆಟ್' ಎಂದು ಕರೆಯಲ್ಪಡುವ ರಾಕೇಶ್ ಜುಂಜುನ್ ವಾಲಾ ಅವರಿಗೆ 62 ವರ್ಷ ವಯಸ್ಸಾಗಿತ್ತು.

ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ರಾಕೇಶ್ ಜುಂಜುನ್ ವಾಲಾ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 

ಜುಂಜುನ್ ವಾಲಾ 1960, ಜುಲೈ 5ರಂದು ಜನಿಸಿದ್ದು ಮುಂಬೈನಲ್ಲಿ ಬೆಳೆದಿದ್ದರು. 1985ರಲ್ಲಿ ಸಿಡಿನ್ಹೆಮ್ ಕಾಲೇಜಿನಲ್ಲಿ ಪದವಿ ಗಳಿಸಿ ಬಳಿಕ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ನಲ್ಲಿ ಶಿಕ್ಷಣ ಮುಗಿಸಿ ಷೇರು ಮಾರುಕಟ್ಟೆ ಹೂಡಿಕೆ ಕ್ಷೇತ್ರಕ್ಕೆ ಕಾಲಿಟ್ಟರು.

ಜುಂಜುನ್‌ವಾಲಾ ಅವರು RARE ಎಂಟರ್‌ಪ್ರೈಸಸ್ ಎಂಬ ಖಾಸಗಿ ಒಡೆತನದ ಷೇರು ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದರು. ಅವರು ಈ ತಿಂಗಳ ಆರಂಭದಲ್ಲಿ ಭಾರತದ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್‌ನ ಮಾಲೀಕರೂ ಆಗಿದ್ದರು.

ವಿಮಾನಯಾನವು ಉತ್ತಮವಾಗಿ ಕಾರ್ಯನಿರ್ವಹಿಸದಿರುವಾಗ ಅವರು ವಿಮಾನಯಾನವನ್ನು ಪ್ರಾರಂಭಿಸಲು ಏಕೆ ಯೋಜಿಸಿದ್ದಾರೆ ಎಂದು ಬಹಳಷ್ಟು ಜನರು ಪ್ರಶ್ನಿಸಿದರು, ಅದಕ್ಕೆ ಅವರು ನಾನು ವೈಫಲ್ಯಕ್ಕೆ ಸಿದ್ಧನಾಗಿದ್ದೇನೆ ಎಂದು ಉತ್ತರಿಸಿದ್ದರು. ಭಾರತದ ಷೇರು ಮಾರುಕಟ್ಟೆಯ ಬಗ್ಗೆ ಉತ್ಸುಕರಾಗಿದ್ದರು. ಅವರು ಖರೀದಿಸಿದ ಬಹುತೇಕ ಷೇರುಗಳು ಉತ್ತಮ ವಹಿವಾಟು ನಡೆಸಿ ಅಪಾರ ಹಣ ಗಳಿಸುತ್ತಿದ್ದವು.

ಸಂಪತ್ತಿನ ಒಡೆಯ: ಫೋರ್ಬ್ಸ್ ಪಟ್ಟಿ ಪ್ರಕಾರ ಜುಂಜುನ್‌ವಾಲಾ ಅವರ ನಿವ್ವಳ ಆಸ್ತಿಮೌಲ್ಯ USD 5.8 ಶತಕೋಟಿ (ಸುಮಾರು 46,000 ಕೋಟಿ ರೂಪಾಯಿ) ಆಗಿತ್ತು.

ಕೇವಲ 5 ಸಾವಿರ ರೂಪಾಯಿಗಳ ಬಂಡವಾಳದೊಂದಿಗೆ ಕಾಲೇಜಿನಲ್ಲಿದ್ದಾಗ ಸ್ಟಾಕ್ ಮಾರುಕಟ್ಟೆಗಳಲ್ಲಿ ತನ್ನ ಪಯಣವನ್ನು ಪ್ರಾರಂಭಿಸಿದ ರಾಕೇಶ್ ಜಂಜುನ್ ವಾಲಾ, ಇತ್ತೀಚೆಗೆ ಮಾಜಿ ಜೆಟ್ ಏರ್‌ವೇಸ್ ಸಿಇಒ ವಿನಯ್ ದುಬೆ ಮತ್ತು ಇಂಡಿಗೋ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್ ಅವರೊಂದಿಗೆ ಸೇರಿ ಭಾರತದ ಹೊಸ ಬಜೆಟ್ ಕ್ಯಾರಿಯರ್ ನ್ನು ಪ್ರಾರಂಭಿಸಲು ಆಕಾಶ ಏರ್ ನ್ನು ಪ್ರಾರಂಭಿಸಿದರು. ವಿಮಾನಯಾನ ಸಂಸ್ಥೆಯು ಮುಂಬೈನಿಂದ ಅಹಮದಾಬಾದ್‌ಗೆ ಮೊದಲ ವಿಮಾನದೊಂದಿಗೆ ಈ ತಿಂಗಳು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಮಿಡಾಸ್ ಸ್ಪರ್ಶ ಹೊಂದಿರುವ ಹೂಡಿಕೆದಾರ, ಅವರು ದೇಶದ 48 ನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಶಿಕ್ಷಣದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅವರು ಲೆಕ್ಕಪರಿಶೋಧನೆ ಮಾಡುವ ಬದಲು ದಲಾಲ್ ಸ್ಟ್ರೀಟ್ ನ್ನು ಆಯ್ಕೆ ಮಾಡಿದರು.

1985 ರಲ್ಲಿ, ಜುಂಜುನ್ವಾಲಾ 5,000 ರೂಪಾಯಿಗಳನ್ನು ಬಂಡವಾಳವಾಗಿ ಹೂಡಿಕೆ ಮಾಡಿದರು. ಸೆಪ್ಟೆಂಬರ್ 2018 ರ ಹೊತ್ತಿಗೆ, ಆ ಬಂಡವಾಳವು 11,000 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. 

ಸ್ಟಾರ್ ಹೆಲ್ತ್, ಟೈಟಾನ್, ರಾಲಿಸ್ ಇಂಡಿಯಾ, ಎಸ್ಕಾರ್ಟ್ಸ್, ಕೆನರಾ ಬ್ಯಾಂಕ್, ಇಂಡಿಯನ್ ಹೋಟೆಲ್ಸ್ ಕಂಪನಿ, ಆಗ್ರೋ ಟೆಕ್ ಫುಡ್ಸ್, ನಜಾರಾ ಟೆಕ್ನಾಲಜೀಸ್ ಮತ್ತು ಟಾಟಾ ಮೋಟಾರ್ಸ್‌ನಂತಹ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ಒಟ್ಟಾರೆಯಾಗಿ, ಜೂನ್ ತ್ರೈಮಾಸಿಕದ ಅಂತ್ಯದ ವೇಳೆಗೆ ಅವರು 47 ಕಂಪನಿಗಳಲ್ಲಿ ಪಾಲನ್ನು ಹೊಂದಿದ್ದರು. ಟೈಟಾನ್, ಸ್ಟಾರ್ ಹೆಲ್ತ್, ಟಾಟಾ ಮೋಟಾರ್ಸ್ ಮತ್ತು ಮೆಟ್ರೋ ಬ್ರಾಂಡ್‌ಗಳು ಅವರ ಕೆಲವು ದೊಡ್ಡ ಷೇರುಗಳಾಗಿವೆ. 

ಅವರು ಹಂಗಾಮಾ ಮೀಡಿಯಾ ಮತ್ತು ಆಪ್ಟೆಕ್‌ನ ಅಧ್ಯಕ್ಷರಾಗಿದ್ದರು. ವೈಸ್ರಾಯ್ ಹೋಟೆಲ್ಸ್, ಕಾನ್ಕಾರ್ಡ್ ಬಯೋಟೆಕ್, ಪ್ರೊವೊಗ್ ಇಂಡಿಯಾ ಮತ್ತು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನಂತಹ ಸಂಸ್ಥೆಗಳ ನಿರ್ದೇಶಕರ ಮಂಡಳಿಯಲ್ಲಿದ್ದಾರೆ.

ಜುಲೈ 5, 1960 ರಂದು ರಾಜಸ್ಥಾನಿ ಕುಟುಂಬದಲ್ಲಿ ಜನಿಸಿದ ಜುಂಜುನ್ವಾಲಾ ಬಾಂಬೆಯಲ್ಲಿ ಬೆಳೆದರು. ಅಲ್ಲಿ ಅವರ ತಂದೆ ಆದಾಯ ತೆರಿಗೆ ಆಯುಕ್ತರಾಗಿ ಕೆಲಸ ಮಾಡಿದರು. ಅವರು ಸಿಡೆನ್ಹ್ಯಾಮ್ ಕಾಲೇಜಿನಿಂದ ಪದವಿ ಪಡೆದರು. ನಂತರ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ ಸೇರಿಕೊಂಡರು.

ಅವರು 1986 ರಲ್ಲಿ ಟಾಟಾ ಟೀಯ 5,000 ಷೇರುಗಳನ್ನು 43 ರೂಪಾಯಿಗೆ ಖರೀದಿಸಿದಾಗ ಅವರು ದೊಡ್ಡ ಲಾಭ ಗಳಿಸಿದರು. ಮೂರು ತಿಂಗಳೊಳಗೆ ಅದು 143 ರೂಪಾಯಿಗೆ ಏರಿಕೆಯಾಯಿತು. ಮೂರು ವರ್ಷದಲ್ಲಿ 20-25 ಲಕ್ಷ ರೂಪಾಯಿ ಗಳಿಸಿದವು.  ಜುಂಜುನ್‌ವಾಲಾ ಷೇರು ಮಾರುಕಟ್ಟೆ ಪ್ರವೇಶಿಸಿದಾಗ, ಸೆನ್ಸೆಕ್ಸ್ 150 ಪಾಯಿಂಟ್ ಗಳಲ್ಲಿತ್ತು. ಅವರ ಖಾಸಗಿ ಒಡೆತನದ ಸ್ಟಾಕ್ ಟ್ರೇಡಿಂಗ್ ಸಂಸ್ಥೆ ರೇರ್ ಎಂಟರ್‌ಪ್ರೈಸಸ್ ಅವರ ಹೆಸರಿನ ಮೊದಲ ಎರಡು ಅಕ್ಷರಗಳಿಂದ ಮತ್ತು ಷೇರು ಮಾರುಕಟ್ಟೆ ಹೂಡಿಕೆದಾರರಾಗಿರುವ ಅವರ ಪತ್ನಿ ರೇಖಾ ಅವರ ಹೆಸರನ್ನು ಒಳಗೊಂಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.