ತಿಂಗಳಿಗೆ ₹80,000 ಗಳಿಸಿದ್ರೂ ಶ್ರೀಮಂತರಲ್ಲ! ಅಮೆರಿಕದ ಬಡವರಿಗಿಂತ ಭಾರತದ ಶ್ರೀಮಂತರ ಆದಾಯವೇ ಕಡಿಮೆ ಎಂದ ವಿಶ್ವ ಬ್ಯಾಂಕ್
ಭಾರತದಲ್ಲಿ ಒಬ್ಬ ವ್ಯಕ್ತಿ ತಿಂಗಳಿಗೆ ₹80,000 ಗಳಿಸುತಿದ್ದಾನೆ ಅಂದರೆ ಆತ ಶ್ರೀಮಂತ ವ್ಯಕ್ತಿ. ಆದರೆ, ಅದೇ ಹಣವನ್ನ ಮತ್ತೊಂದು ದೇಶದಲ್ಲಿನ ಕಡುಬಡವ ಕೂಡ ಒಂದು ತಿಂಗಳಿಗೆ ದುಡಿಯುತ್ತಾನೆ ಗೊತ್ತಾ? ಇದನ್ನ ನಾವಲ್ಲ, ವಿಶ್ವ ಬ್ಯಾಂಕ್ ಹೇಳ್ತಾ ಇರೋದು.! ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಭಾರತದಲ್ಲಿ ಒಬ್ಬ ವ್ಯಕ್ತಿ ತಿಂಗಳಿಗೆ ₹80,000 ಗಳಿಸುತಿದ್ದಾನೆ ಅಂದರೆ ಆತ ಶ್ರೀಮಂತ ವ್ಯಕ್ತಿ.! ಆದರೆ, ಅದೇ ಹಣವನ್ನ ಮತ್ತೊಂದು ದೇಶದಲ್ಲಿನ ಕಡುಬಡವ ಕೂಡ ಒಂದು ತಿಂಗಳಿಗೆ ದುಡಿಯುತ್ತಾನೆ ಗೊತ್ತಾ? ಹೌದು, ಜಾಗತಿಕ ಆರ್ಥಿಕತೆಯಲ್ಲಿ ಸಂಪತ್ತಿನ ಅಸಮಾನತೆ ಎಷ್ಟು ಆಳವಾಗಿದೆ ಎಂದರೆ, ಅಮೆರಿಕ ಅಥವಾ ಯುರೋಪಿನಂತಹ ಶ್ರೀಮಂತ ದೇಶಗಳ ಅತ್ಯಂತ ಬಡವರ ಸರಾಸರಿ ಜೀವನಮಟ್ಟ ಮತ್ತು ಆಸ್ತಿ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಅತ್ಯಂತ ಶ್ರೀಮಂತರ ಆಸ್ತಿಗಿಂತ ಹೆಚ್ಚಿದೆ! ಇದನ್ನ ನಾವಲ್ಲ, ವಿಶ್ವ ಬ್ಯಾಂಕ್ ಹೇಳ್ತಾ ಇರೋದು.
ಹೌದು, ವಿಶ್ವ ಬ್ಯಾಂಕ್ನ ಬಡತನ ಮತ್ತು ಅಸಮಾನತೆ ವೇದಿಕೆ ಬಿಡುಗಡೆ ಮಾಡಿರುವ 2026ರ ವರದಿಯ ಪ್ರಕಾರ, ಮುಂದುವರಿದ ದೇಶಗಳ ಅತ್ಯಂತ ಬಡವರಿಗಿಂತಲೂ ಭಾರತದ ಶ್ರೀಮಂತ ಜನರ ಸರಾಸರಿ ಜೀವನ ಮಟ್ಟ ಮತ್ತು ಆದಾಯದ ಮಿತಿ ಕಡಿಮೆಯಾಗಿದೆ. ಜಾಗತಿಕವಾಗಿ ಕೊಳ್ಳುವ ಶಕ್ತಿಯ ಆಧಾರದ ಮೇಲೆ ವಿವಿಧ ದೇಶಗಳ ಜನರ ದೈನಂದಿನ ಆದಾಯ ಹಾಗೂ ಬಳಕೆಯ ಮಿತಿಯನ್ನು ಹೋಲಿಸಿ ಈ ಆಘಾತಕಾರಿ ವರದಿಯನ್ನು ನೀಡಲಾಗಿದೆ.
ಆದಾಯದ ಮಿತಿಯ ಹೋಲಿಕೆ:
ಭಾರತದ ಶ್ರೀಮಂತ ಶೇ. 10 ರಷ್ಟು ಜನ: ಭಾರತದಲ್ಲಿ ಅತ್ಯಂತ ಶ್ರೀಮಂತರ ಪಟ್ಟಿಗೆ ಸೇರುವ ಶೇ. 10 ರಷ್ಟು ಜನರ ದೈನಂದಿನ ಆದಾಯ ಅಥವಾ ಬಳಕೆಯ ಮಿತಿ ಪ್ರತಿ ವ್ಯಕ್ತಿಗೆ ಕೇವಲ $10 (ಸುಮಾರು ₹840) ಆಗಿದೆ.
ಅಮೆರಿಕದ ಬಡವ ಶೇ. 10 ರಷ್ಟು ಜನ: ಅಮೆರಿಕದ ಅತ್ಯಂತ ಕೆಳಸ್ತರದಲ್ಲಿರುವ (ಬಡ) ಶೇ. 10 ರಷ್ಟು ಜನರ ದೈನಂದಿನ ಆದಾಯದ ಮಿತಿ ಪ್ರತಿ ವ್ಯಕ್ತಿಗೆ $25 (ಸುಮಾರು ₹2,100) ಆಗಿದೆ.
ಅಂದರೆ, ಭಾರತದ ಶ್ರೀಮಂತ ವರ್ಗದ ಕನಿಷ್ಠ ಆದಾಯದ ಮಿತಿಗಿಂತ ಅಮೆರಿಕದ ಬಡವರ ಆದಾಯದ ಮಿತಿ ಎರಡೂವರೆ ಪಟ್ಟು ಹೆಚ್ಚಾಗಿದೆ.

ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!
ಇತರ ದೇಶಗಳ ಬಡವರ ಸ್ಥಿತಿ ಹೇಗಿದೆ?
ಭಾರತದ ಶ್ರೀಮಂತ ಶೇ. 10 ರಷ್ಟು ಜನರಿಗೆ ಹೋಲಿಸಿದರೆ ($10), ಕೆನಡಾದ ಬಡವರ ದೈನಂದಿನ ಆದಾಯ $31 ಆಗಿದ್ದರೆ, ಜರ್ಮನಿ ಮತ್ತು ಆಸ್ಟ್ರೇಲಿಯಾದ ಬಡವರ ಆದಾಯ ತಲಾ $28 ರಷ್ಟಿದೆ. ಅದರಂತೆ, ವರದಿಯ ಪ್ರಕಾರ ಭಾರತದ ಅತ್ಯಂತ ಕೆಳಸ್ತರದಲ್ಲಿರುವ ಶೇ. 10 ರಷ್ಟು ಬಡ ಜನರ ದೈನಂದಿನ ಆದಾಯ ಅಥವಾ ಬಳಕೆಯ ಮಿತಿ ಪ್ರತಿ ವ್ಯಕ್ತಿಗೆ ಕೇವಲ $3 (ಸುಮಾರು ₹250) ಆಗಿದೆ.
ಹಾಗಾದ್ರೆ, ಭಾರತದ ಅಗ್ರ ಶೇ. 10 ಯಾರು?
ಭಾರತದ ಆರ್ಥಿಕ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ತಿಂಗಳಿಗೆ ₹80,000 ಗಳಿಸುವ ವ್ಯಕ್ತಿಯು ಭಾರತದ ಅಗ್ರ ಶೇ. 10 ರಷ್ಟು ಅತಿ ಹೆಚ್ಚು ಆದಾಯ ಗಳಿಸುವವರ ಪಟ್ಟಿಗೆ ಸೇರುತ್ತಾನೆ. ಆದರೆ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಈ ಆದಾಯದ ಮಟ್ಟ ಅತ್ಯಂತ ಸಾಮಾನ್ಯವಾಗಿದೆ.
ಮತ್ತೊಂದೆಡೆ, ಅಮೆರಿಕದ ಮೇಲ್ವರ್ಗದ ಶೇ. 10 ರಷ್ಟು ಶ್ರೀಮಂತರ ದೈನಂದಿನ ಮಿತಿ $173 ಅಂದಾಜು ₹14,532 ಆಗಿದ್ದರೆ, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ $129 ಅಂದಾಜು ₹10,836 ಹಾಗೂ ಜರ್ಮನಿಯಲ್ಲಿ $128 ಅಂದಾಜು ₹10,752 ಆಗಿದೆ. ಅಂದರೆ, ಈ ದೇಶಗಳ ಅತ್ಯಂತ ಶ್ರೀಮಂತ ವರ್ಗದ ಒಬ್ಬ ವ್ಯಕ್ತಿಯು ದಿನವೊಂದಕ್ಕೆ ಕನಿಷ್ಠ ₹10,000 ದಿಂದ ₹14,500 ಕ್ಕೂ ಅಧಿಕ ಹಣವನ್ನು ಗಳಿಸುತ್ತಾರೆ ಅಥವಾ ಖರ್ಚು ಮಾಡುತ್ತಾರೆ ಎಂದು ವಿಶ್ವ ಬ್ಯಾಂಕ್ನ ವರದಿ ತಿಳಿಸಿದೆ.
ಒಟ್ಟಾರೆಯಾಗಿ, ಭಾರತವು ಕಳೆದ ಕೆಲವು ದಶಕಗಳಲ್ಲಿ ಬಡತನ ನಿರ್ಮೂಲನೆಯಲ್ಲಿ ಅತ್ಯಂತ ವೇಗದ ಪ್ರಗತಿ ಸಾಧಿಸಿದ್ದರೂ, ದೇಶದ ಒಟ್ಟಾರೆ ಜನರ ಆದಾಯ ಮಟ್ಟ ಮತ್ತು ಉತ್ಪಾದಕತೆ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಇನ್ನು ಅತ್ಯಂತ ಕೆಳಮಟ್ಟದಲ್ಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಅದರಂತೆ, ಭಾರತ ಕೇವಲ ಬಡತನ ರೇಖೆಯನ್ನು ದಾಟಿದರೆ ಸಾಲದು, ಬದಲಿಗೆ ಇಡೀ ಸಮಾಜದ ಆದಾಯದ ಮಟ್ಟವನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ವರದಿ ಹೇಳುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



