ವ್ಯಾಪಾರಿಗಳಿಗೆ ಹಬ್ಬದ ಗುಡ್ನ್ಯೂಸ್: ₹2,000 ಮೇಲಿನ MDR ಶುಲ್ಕ ಜಾರಿ ಮುಂದೂಡಿದ ಸರ್ಕಾರ
ದಸರಾ ಹಾಗೂ ದೀಪಾವಳಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡು, ಅಕ್ಟೋಬರ್ 15ರಿಂದ ಜಾರಿಗೆ ಬರಬೇಕಿದ್ದ ₹2,000 ಕ್ಕಿಂತ ಹೆಚ್ಚಿನ ಯುಪಿಐ ಮರ್ಚೆಂಟ್ ವಹಿವಾಟುಗಳ ಮೇಲಿನ ಎಂಡಿಆರ್ ವ್ಯಾಪಾರಿ ಶುಲ್ಕವನ್ನು NPCI ದೀಪಾವಳಿಯ ನಂತರಕ್ಕೆ ಮುಂದೂಡಿದೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ್ರ): ದಸರಾ ಹಾಗೂ ದೀಪಾವಳಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡು, ಅಕ್ಟೋಬರ್ 15ರಿಂದ ಜಾರಿಗೆ ಬರಬೇಕಿದ್ದ ₹2,000 ಕ್ಕಿಂತ ಹೆಚ್ಚಿನ ಯುಪಿಐ ಮರ್ಚೆಂಟ್ ವಹಿವಾಟುಗಳ ಮೇಲಿನ 0.4% ಎಂಡಿಆರ್ ವ್ಯಾಪಾರಿ ಶುಲ್ಕವನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾವು ದೀಪಾವಳಿಯ ನಂತರಕ್ಕೆ ಮುಂದೂಡಿದೆ. ಆ ಕುರಿತ ವರದಿ ಇಲ್ಲಿದೆ:
ಈ ಹಿಂದೆ ಅಕ್ಟೋಬರ್ 15, 2026 ರಿಂದ ಜಾರಿಗೆ ಬರಬೇಕಿದ್ದ ಶೇಕಡಾ 0.4ರಷ್ಟು ಎಂಡಿಆರ್ (MDR - ಮರ್ಚೆಂಟ್ ಡಿಸ್ಕೌಂಟ್ ರೇಟ್) ಶುಲ್ಕದ ನಿಯಮವನ್ನು, ಹಬ್ಬದ ಸೀಸನ್ನಲ್ಲಿ ವರ್ತಕರು ಮತ್ತು ಗ್ರಾಹಕರಿಗೆ ತೊಂದರೆಯಾಗದಂತೆ ತಡೆಯಲು ದೀಪಾವಳಿ ಮುಗಿದ ತಕ್ಷಣ ಜಾರಿಗೊಳಿಸಲು NPCI ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದರ ನಿಖರವಾದ ಜಾರಿ ದಿನಾಂಕವನ್ನು ಶೀಘ್ರದಲ್ಲೇ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಹಾಗಾದ್ರೆ, ಮುಂದೂಡಿಕೆಗೆ ಪ್ರಮುಖ ಕಾರಣಗಳೇನು?
ಹಬ್ಬದ ಸೀಸನ್ ಮತ್ತು ವ್ಯಾಪಾರಿಗಳ ಮನವಿ: ದೀಪಾವಳಿ ಮತ್ತು ಧನ್ತೇರಸ್ ಹಬ್ಬಗಳ ಮುನ್ನಾದಿನಗಳಲ್ಲಿ ಡಿಜಿಟಲ್ ವ್ಯಾಪಾರವು ಗರಿಷ್ಠ ಮಟ್ಟದಲ್ಲಿರುತ್ತದೆ. ಈ ಸಮಯದಲ್ಲಿ ಹೊಸ ಶುಲ್ಕ ವಿಧಿಸಿದರೆ ಗ್ರಾಹಕರ ಮತ್ತು ವ್ಯಾಪಾರಿಗಳ ಉತ್ಸಾಹಕ್ಕೆ ಧಕ್ಕೆಯಾಗಬಹುದು ಎಂದು ವ್ಯಾಪಾರಿ ಸಂಘಟನೆಗಳು ಹಾಗೂ ಫಿಂಟೆಕ್ ಕಂಪನಿಗಳು ನಿಯಮ ಮುಂದೂಡುವಂತೆ ಎನ್ಪಿಸಿಐಗೆ ಮನವಿ ಮಾಡಿದ್ದವು.
ತಾಂತ್ರಿಕ ಸಿದ್ಧತೆ: ಬ್ಯಾಂಕುಗಳು ಮತ್ತು ಪಾವತಿ ಆ್ಯಪ್ಗಳಿಗೆ ತಮ್ಮ ಸಾಫ್ಟ್ವೇರ್ ಹಾಗೂ ಬಿಲ್ಲಿಂಗ್ ವ್ಯವಸ್ಥೆಯನ್ನು ಹೊಸ ನಿಯಮಕ್ಕೆ ತಕ್ಕಂತೆ ಅಪ್ಡೇಟ್ ಮಾಡಿಕೊಳ್ಳಲು ಹೆಚ್ಚಿನ ಸಮಯಾವಕಾಶ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಾಮಾನ್ಯ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ
ಈ ಎಂಡಿಆರ್ ಶುಲ್ಕವು ಕೇವಲ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಸಾಮಾನ್ಯ ಗ್ರಾಹಕರಿಗಲ್ಲ. ಅದರಂತೆ, ಗ್ರಾಹಕರು ಎಂದಿನಂತೆ ಉಚಿತವಾಗಿಯೇ ಯುಪಿಐ ಪಾವತಿ ಮಾಡಬಹುದು. ವ್ಯಾಪಾರಿಗಳು ಈ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜೊತೆಗೆ, ಸ್ನೇಹಿತರು ಅಥವಾ ಕುಟುಂಬದವರಿಗೆ ಹಣ ಕಳುಹಿಸುವ ಪೀರ್-ಟು-ಪೀರ್ (P2P) ವಹಿವಾಟುಗಳಿಗೆ ಯಾವುದೇ ಮಿತಿಯಿಲ್ಲದೆ ಸಂಪೂರ್ಣ ಉಚಿತವಾಗಿರಲಿದೆ.
ಮುಂದುವರೆದು, ಸಣ್ಣ ವ್ಯಾಪಾರಿಗಳು ಮತ್ತು ₹2,000 ವರೆಗಿನ ಸಣ್ಣ ಮೌಲ್ಯದ ವ್ಯಾಪಾರಿ ವಹಿವಾಟುಗಳು (P2M) ಈ ನಿಯಮದಿಂದ ಹೊರಗುಳಿಯಲಿವೆ. ದೇಶದ ಒಟ್ಟು ಯುಪಿಐ ಮರ್ಚೆಂಟ್ ವಹಿವಾಟುಗಳಲ್ಲಿ ಶೇ. 95 ಕ್ಕೂ ಹೆಚ್ಚು ಭಾಗ ₹2,000 ಕ್ಕಿಂತ ಕಡಿಮೆ ಇರುವುದರಿಂದ ಸಣ್ಣ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಹಾಗಾದ್ರೆ, ಯಾವ ವಹಿವಾಟಿಗೆ ಎಷ್ಟು ಶುಲ್ಕ?
ಸಾಮಾನ್ಯ ವ್ಯಾಪಾರಿಗಳಿಗೆ: ₹2,000 ಕ್ಕಿಂತ ಹೆಚ್ಚಿನ ಪಾವತಿಗಳಿಗೆ 0.4% ಶುಲ್ಕ (ಗರಿಷ್ಠ ಮಿತಿ ₹300).
ವಿಶೇಷ ವಿಭಾಗಗಳಿಗೆ: ರೈಲ್ವೆ, ಟೆಲಿಕಾಂ, ಇನ್ಶೂರೆನ್ಸ್ ಮತ್ತು ಇಂಧನ ಪಾವತಿಗಳಿಗೆ ₹2,000 ಕ್ಕಿಂತ ಹೆಚ್ಚಿನ ವಹಿವಾಟಿನ ಮೇಲೆ ಕೇವಲ ₹5 ನಿಗದಿತ ಶುಲ್ಕ ಅನ್ವಯಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



