ಷೇರು ಹುಶಾರು

ಬಜಾರಿನಲ್ಲಿ ಕೇಳಿದ ಎಚ್ಚರಿಕೆ ಗಂಟೆ
ಲೋಕಸಭೆ ಚುನಾವಣೆಯ ಪ್ರಚಾರ ಸಮರದ ಅಬ್ಬರದಲ್ಲಿ ಆ ಸಮರದ ಒಂದು ಭಾಗವಾಗಿ, ಕುಣಿದಾಡುತ್ತಿದ್ದ ಷೇರು ಬಜಾರು, ಅಂತಿಮ ಹಂತದಲ್ಲಿ ಹಲವು ಬಗೆಯ ಎಚ್ಚರಿಕೆಯ ಮಾತುಗಳನ್ನು ಕೇಳಬೇಕಾಗಿದೆ.
ಹೂಡಿಕೆದಾರರಲ್ಲಿ ಒಂದು ವರ್ಗ ಹೇಗಾದರೂ ಆಗಲಿ, ಎನ್ನುವಂತೆ ಸಾಧ್ಯವಿರುವಷ್ಟೂ ಲಾಭವನ್ನು ಗಳಿಸಿ, ಚುನಾವಣೆಯ ಅನಂತರದ ಪರಿಸ್ಥಿತಿಯನ್ನು ನೋಡಿಕೊಂಡು ಹೂಡಿಕೆಯ ಕಾರ್ಯಾಚರಣೆ ಒಳ್ಳೆಯದು ಎನ್ನುವ ನಿರ್ಧಾರಕ್ಕೆ ಬಂದಿರುವಂತಿದೆ. ಈ ವರ್ತನೆಯಲ್ಲಿ ಅಚ್ಚರಿಪಡಬೇಕಾದ್ದೇನೂ ಇಲ್ಲ. ಪೇಟೆಯ ಜನರಿಗೆ ಮುನ್ನುಗ್ಗುವುದೂ ಗೊತ್ತು, ಹಿಂದಕ್ಕೆ ಸರಿಯುವುದೂ ಗೊತ್ತು.
ಇದುವರೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಷೇರುಗಳನ್ನೇನೂ ದೊಡ್ಡ ರೀತಿಯಲ್ಲಿ ಮಾರಿದ ಪ್ರಕರಣಗಳಿಲ್ಲ. ಆದರೆ, ಈಚೆಗೆ ಹೂಡಿಕೆಯ ಪ್ರಮಾಣ ಕಡಿಮೆಯಾಗುತ್ತಿದೆ. ಸ್ಥಳೀಯ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರುತ್ತಲೇ ಇದ್ದಾರೆ.
ಕಡಿಮೆ ಡಿವಿಡೆಂಡ್ ಪಾವತಿ
ಹಲವು ಬೃಹತ್ ಕಂಪನಿಗಳು ಇನ್ನೂ ತಮ್ಮ ವಿತ್ತೀಯ ಫಲಿತಾಂಶದ ವಿವರಗಳನ್ನು ಪ್ರಕಟಿಸಿಲ್ಲ. ಆದರೆ ಇದುವರೆಗೆ ಲಭ್ಯವಿರುವ ಮಾಹಿತಿಯಂತೆ, ಈ ಬಾರಿಯ ಡಿವಿಡೆಂಡ್ ವರಮಾನ ಕಡಿಮೆಯಾಗಬಹುದು. ಡಿವಿಡೆಂಡ್ ಪಾವತಿಯಲ್ಲಿ ಉದ್ಯಮ ವಲಯ ಐಟಿ ಕಂಪನಿಗಳ ಹಾದಿಯನ್ನೇ ಹಿಡಿಯುವುದು ಸಹಜ. ಈ ವರ್ಷ ಐಟಿ ಕಂಪನಿಗಳಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚು ಡಿವಿಡೆಂಡ್ ಸಿಕ್ಕಿದೆ. ಆದರೂ ಒಟ್ಟಾರೆ ಲೆಕ್ಕ ಹಿಡಿದರೆ, ಡಿವಿಡೆಂಡ್ ಪಾವತಿಯ ಪ್ರಮಾಣದ ಪ್ರಗತಿ 2013-14ನೇ ಸಾಲಿನ ಲೆಕ್ಕದಲ್ಲಿ ದೊಡ್ಡ ಕೊರತೆಯನ್ನೇ ಪ್ರಕಟಿಸಬಹುದು. ಐಟಿ ಕಂಪನಿಗಳು, ಕೆಲವು ಖಾಸಗಿ ಬ್ಯಾಂಕ್‌ಗಳು ಹಿಂದಿಗಿಂತ ಹೆಚ್ಚು ಡಿವಿಡೆಂಡ್ ಕೊಟ್ಟರೂ, ಒಟ್ಟಾರೆ ಲೆಕ್ಕ ಹಿಡಿದರೆ ಡಿವಿಡೆಂಡ್ ವರಮಾನ ಕಡಿಮೆಯೇ.
ಷೇರು ಬೆಲೆಯ ಗತಿ
ಡಿವಿಡೆಂಡ್ ಪಾವತಿಗೂ, ಪೇಟೆಯ ಷೇರು ಬೆಲೆಗೂ ಸಂಬಂಧ ಇದ್ದೇ ಇದೆ. ವಸ್ತುಗಳ ತಯಾರಿಕಾ ವಲಯದಲ್ಲಿ ಡಿವಿಡೆಂಡ್ ಪಾವತಿ ಕುಗ್ಗಿರುವುದರಿಂದ ಪೇಟೆಯಲ್ಲಿ ಆ ಷೇರುಗಳ ಬೆಲೆ ಇಳಿಮುಖವಾಗುವ ಸಂಭವವೂ ಇದ್ದಿದ್ದೇ.
ಪೇಟೆಯ ಜನರ ಉತ್ಸಾಹ ಕಡಿಮೆಯಾಗಿಲ್ಲ. ಆದರೂ ಚುನಾವಣೆಯ ಪ್ರಚಾರ ಸಮರದ ಆರಂಭದ ದಿನಗಳಲ್ಲಿ ಚಿಮ್ಮುತ್ತಿರುವ ಉತ್ಸಾಹ ಕೊನೆಯ ವಾರಗಳಲ್ಲಿ ಒಂದು ರೀತಿಯ ಸಮತೋಲನದ ಸ್ಥಿತಿಯನ್ನು ಪ್ರತಿಬಿಂಬಿಸಿದ್ದು ನಿಜ.
ಚುನಾವಣೆ ಫಲಿತಾಂಶ ಏನಾದರೂ ಆಗಲಿ, ವಿಪರೀತ ಉತ್ಸಾಹ ಅಥವಾ ಹಿನ್ನಡೆಗಳೆರಡೂ ಆರಂಭದ ದಿನಗಳ ಅವಾಂತರವನ್ನು ಕಳೆದುಕೊಂಡ ಅನಂತರ, ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ, ವಿದೇಶೀ ಹಣದ ಪೂರೈಕೆಗೆ ಯಾವ ತೊಂದರೆಯೂ ಆಗಲಿಕ್ಕಿಲ್ಲ ಎನ್ನುವ ಆಶಾವಾದವೂ ಮೊಟ್ಟಮೊದಲ ಬಾರಿಗೆ ಈಗ ಕಾಣಿಸಿಕೊಂಡಿದೆ.
ಕೊನೆ ಮಾತು
ಹಲವು ಬೃಹತ್ ಕಂಪನಿಗಳು ತಮ್ಮ ಹೊಸ ಷೇರುಗಳನ್ನು ಮಾರಾಟಕ್ಕೆ ಬಿಡಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿರುವಂತಿವೆ. ಜೂನ್ ಕೊನೆ, ಜುಲೈ ಆರಂಭದಲ್ಲಿ ಹೊಸ ಷೇರುಗಳ ಪೇಟೆಯಲ್ಲಿ ಚಟುವಟಿಕೆ ದೊಡ್ಡ ರೀತಿಯಲ್ಲೇ ಆರಂಭವಾಗಲಿದೆ.
ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


