ಎಟಿಎಂ ಆತಂಕ
ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಿದ್ದು ಹಳೇ ಸಂಗತಿ. ಆ ವೇಳೆ ಭದ್ರತಾ ಸಿಬ್ಬಂದಿ ಇಲ್ಲದ..

ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಿದ್ದು ಹಳೇ ಸಂಗತಿ. ಆ ವೇಳೆ ಭದ್ರತಾ ಸಿಬ್ಬಂದಿ ಇಲ್ಲದ, ಸಿಸಿಟಿವಿ ವ್ಯವಸ್ಥೆ ಇಲ್ಲದ ಎಟಿಎಂಗಳಿಗೆ ಬೀಗ ಹಾಕಬೇಕು ಎಂಬ ಕಾನೂನು ಕಡ್ಡಾಯವಾಗಿ ಅನುಷ್ಠಾನವಾಯಿತು. ನಂತರ ಅದನ್ನು ಹಿಂಪಡೆಯಲಾಗಿತ್ತು. ಆದರೆ ಇದೀಗ ಮತ್ತೆ ನಗರ ಪೊಲೀಸ್ ಆಯುಕ್ತರು ಭದ್ರತೆ ಇಲ್ಲದ ಎಟಿಎಂಗಳಿಗೆ ಬೀಗ ಮುದ್ರೆ ಜಡಿಯುವ ಮಾತಾಡುತ್ತಿದ್ದಾರೆ.
ಎಟಿಎಂಗಳು ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಗಳು. ಇವುಗಳ ರಕ್ಷಣೆಯ ಹೊಣೆ ಸ್ವಲ್ಪ ಮಟ್ಟಿಗೆ ಪೊಲೀಸ್ ಇಲಾಖೆಯ ಮೇಲೂ ಇರುತ್ತಿದ್ದು, ಇದನ್ನು ಸೆಕೆಂಡರಿ ಹೊಣೆಗಾರಿಕೆ ಎನ್ನಬಹುದು. ಬ್ಯಾಂಕಿಂಗ್ ಉದ್ಯಮದಲ್ಲಿ ಇತ್ತೀಚೆಗೆ 'ಹೊರಗುತ್ತಿಗೆ ಪರ್ವ' ಜೋರಾಗಿ ಕೇಳಿ ಬರುತ್ತಿದೆ. ಸುಸ್ತಿ ಸಾಲದಲ್ಲಿ ಸುಸ್ತಾಗಿರುವ ಬ್ಯಾಂಕುಗಳು ನಿರ್ವಹಣಾ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಕೋರ್ ಇಲ್ಲದ ಬ್ಯಾಂಕಿಂಗ್ ಚಟುವಟಿಕೆಗಳನ್ನು ಕಾಯಂ ನೌಕರರಿಂದ ತೆಗೆದು ಹೊರಗುತ್ತಿಗೆಗೆ ಕೊಡಲಾಗುತ್ತಿದೆ. ಈಗಾಗಲೇ ಕ್ಲಿಯರಿಂಗ್ ವ್ಯವಸ್ಥೆಯ ಕೆಲವು ಚಟುವಟಿಕೆಗಳನ್ನು ಹೊರ ಗುತ್ತಿಗೆಗೆ ಕೊಡಲಾಗಿದ್ದು, ಎಟಿಎಂ ವ್ಯವಸ್ಥೆ ಮುಂದಿನ ಹೆಜ್ಜೆಯಾಗಿದೆ. ಕೆಲವು ಬ್ಯಾಂಕುಗಳು ಎಟಿಎಂಗಳ ನಿರ್ವಹಣೆ ಮತ್ತು ಸುರಕ್ಷತೆಯನ್ನು ಹೊರಗುತ್ತಿಗೆಗೆ ಕೊಟ್ಟರೆ, ಇನ್ನುಳಿದ ಬ್ಯಾಂಕುಗಳು ಕೇವಲ ಸುರಕ್ಷತೆಯನ್ನು ಹೊರಗುತ್ತಿಗೆಗೆ ಕೊಟ್ಟಿವೆ.
ಯಾರಿವರು?
-ಸಾಮಾನ್ಯವಾಗಿ ಈ ಸೆಕ್ಯುರಿಟಿ ಹೊರಗುತ್ತಿಗೆಯವರು ಮಿಲಿಟರಿ ಅಥವಾ ಪೊಲೀಸ್ ಇಲಾಖೆಯಿಂದ ನಿವೃತ್ತರಾದವರು ಅಥವಾ ರಾಜೀನಾಮೆ ಕೊಟ್ಟು ಬಂದವರು. ಇವರಲ್ಲಿ ಹಲವರು ಹೊರರಾಜ್ಯದವರು.
- ಇವರ ಬಳಿ ಕೆಲಸ ಮಾಡುವ ಗಾರ್ಡ್‌ಗಳಲ್ಲಿ ಶೇ.90ಕ್ಕಿಂತ ಹೆಚ್ಚು ಜನರು ಈಶಾನ್ಯ ಭಾರತದವರು ಮತ್ತು ನೇಪಾಳ, ಬಿಹಾರ, ಉತ್ತರಪ್ರದೇಶ, ಒರಿಸ್ಸಾಕ್ಕೆ ಸೇರಿದವರು.
- ಎಟಿಎಂನಲ್ಲಿ ಏನಾದರೂ ಸಮಸ್ಯೆಯಾದರೆ ಮುಂದೇನು ಮಾಡಬೇಕು ಎಂದು ಕಾರ್ಯಪ್ರವೃತ್ತರಾಗಲು ತಿಳಿವಳಿಕೆ ಇಲ್ಲದವರು. ಮೂರಡಿ ಉದ್ದದ ಲಾಠಿಯೇ ಇವರ ಅಸ್ತ್ರ. ಎಟಿಎಂ ರಕ್ಷಣೆ ಹೋಗಲಿ, ಎಟಿಮ್ ಗ್ರಾಹಕರ ರಕ್ಷಣೆ ಬದಿಗಿರಲಿ. ಬಹುತೇಕ ಗಾರ್ಡ್‌ಗಳು ಸ್ವರಕ್ಷಣೆ ಮಾಡಿಕೊಳ್ಳಲಾರದಷ್ಟು ದೈಹಿಕವಾಗಿ ದುರ್ಬಲರು. ಇವರು ಯಾರೂ ಖಾಸಗಿ ಭದ್ರತಾ ಏಜೆನ್ಸಿ ನಿಯಂತ್ರಣ ಕಾಯ್ದೆಯ ಪ್ರಕಾರ ಅರ್ಹತೆ ಹೊಂದಿರುವುದಿಲ್ಲ.
ಬದಲಿ ಗಾರ್ಡ್ ಬರದಿದ್ದರೆ ಈತನ ಡ್ಯೂಟಿ ನಿರಂತರವಾಗಿ ನಿದ್ರೆ, ವಿಶ್ರಾಂತಿ ಇಲ್ಲದೆ ನಡೆಯುತ್ತದೆ.
ಎಷ್ಟು ಮಂದಿ ಗಾರ್ಡ್‌ಗಳು?
- ಸದ್ಯದ ಅಂದಾಜಿನ ಪ್ರಕಾರ ಎಟಿಎಂಗಳಿಗೆ 1.50 ಲಕ್ಷ ಗಾರ್ಡ್‌ಗಳ ಅವಶ್ಯವಿದೆ.
- ಸೆಕ್ಯುರಿಟಿ ವ್ಯವಸ್ಥೆಯನ್ನು ಹೊರಗುತ್ತಿಗೆಗೆ ಕೊಡದೆ ಇನ್ನಿತರ ಸಿಬ್ಬಂದಿಯಂತೆ ಕಾಯಂ ನೇಮಕಾತಿ ಮಾಡಿಕೊಂಡರೆ, ಅವರ ಎಲ್ಲ ವಿಚಾರಗಳು ಬ್ಯಾಂಕಿನ ಬಳಿ ಇರುತ್ತದೆ. ಹೀಗಾಗಿ ಬೇಲಿಯೇ ಎದ್ದು ಹೊಲ ಮೇಯುವ ಸಂಭವ ಕಡಿಮೆ.
- ನಿರ್ವಹಣೆ ವೆಚ್ಚ ಹೆಚ್ಚಾದರೂ ಸೆಕ್ಯುರಿಟಿ ಸಮಸ್ಯೆ ಸ್ವಲ್ಪ ಕಡಿಮೆಯಾಗಬಹುದು. ಇತ್ತೀಚೆಗೆ ಸೆಕ್ಯುರಿಟಿ ಗಾರ್ಡ್‌ಗಳೇ ಎಟಿಎಂ ದರೋಡೆಯಲ್ಲಿ ಭಾಗಿಯಾಗಿರುವ ಘಟನೆಗಳು ವರದಿಯಾಗಿವೆ.
ಎಟಿಎಂ ಹಾಕುವ ಮಾನದಂಡವೇನು?
- ಎಟಿಎಂನ ಮೂಲ ಉದ್ದೇಶ ತುರ್ತು ಹಣ ಪೂರೈಸುವುದು. ಆದರೆ ಅದು ಹಣದ ಎಲ್ಲ ಅವಶ್ಯವನ್ನು ಪೂರೈಸುವ ಸಾಧನವಾಗಿ ಮಾರ್ಪಾಡಾಗಿದೆ.
- ಗ್ರಾಹಕರ ಎಲ್ಲ ಹಣಕಾಸು ವ್ಯವಹಾರ ಬ್ಯಾಂಕಿನ ಹೊರಗೆ ಎಟಿಎಂ ಮೂಲಕ ನಡೆಯಬೇಕೆನ್ನುವ ತನ್ನ ದೂರಗಾಮಿ ಯೋಜನೆ ಸಾರ್ಥಕವಾಗುತ್ತಿರುವುದಕ್ಕೆ ಸರ್ಕಾರ, ಬ್ಯಾಂಕ್‌ಗಳು ತೃಪ್ತಿ ಪಡೆಯುತ್ತಿವೆ. ಅಂತೆಯೇ ಇದರಿಂದಾಗುವ ಆರ್ಥಿಕ- ಸಾಮಾಜಿಕ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳದೇ ಬ್ಯಾಂಕುಗಳು ನಾಯಿಕೊಡೆಗಳಂತೆ ಎಟಿಎಂ ಅನ್ನು ಸ್ಥಾಪಿಸುತ್ತಿವೆ.
- ಬ್ಯಾಂಕ್ ಶಾಖೆ ತೆರೆಯುವಾಗ ಮಾಡುವ ಸರ್ವೇಯನ್ನು ಎಟಿಎಂ ತೆರೆಯುವಾಗ ಮಾಡುವುದಿಲ್ಲ. ಎಟಿಎಂ ನಿರ್ವಹಣಾ ವೆಚ್ಚ ಮತ್ತು ಅಲ್ಲಿ ನಡೆಯುವ ಸರಾಸರಿ ವ್ಯವಹಾರವನ್ನು ಯಾವ ಬ್ಯಾಂಕೂ ಗಮನಿಸಿದಂತೆ ಕಾಣುವುದಿಲ್ಲ. ಈಗ ದೇಶದಲ್ಲಿ 1.33 ಲಕ್ಷ ಎಟಿಎಂಗಳು ಇವೆ ದಿನಕ್ಕೆ ಸರಾಸರಿ 20-30 ಹೊಸ ಎಟಿಎಂಗಳು ಓಪನ್ ಆಗುತ್ತಿವೆ.
ಸಿಬ್ಬಂದಿ ಎಷ್ಟಿದ್ದಾರೆ?
- ಕೇವಲ ಶೇ.50 ಎಟಿಎಂಗಳಿಗೆ ಸಶಸ್ತ್ರ ಗಾರ್ಡ್‌ಗಳಿದ್ದಾರೆ ಮತ್ತು 1.15 ಲಕ್ಷ ಎಟಿಮ್‌ಗಳಿಗೆ ಸಿಸಿಟಿವಿ ಇವೆ. ಬೆಂಗಳೂರಿನಲ್ಲಿ 2,500 ಎಟಿಎಂಗಳು ಇವೆ.
- ಒಂದು ಎಟಿಎಂ ತೆರೆಯಲು ತಗುಲುವ ವೆಚ್ಚ ರು. 3-4 ಲಕ್ಷ. ಮಾಸಿಕ ನಿರ್ವಹಣಾ ವೆಚ್ಚ ಸ್ಥಳ ವಿದ್ಯುತ್ ಬಿಲ್ ಮತ್ತು ಬಾಡಿಗೆ ಆಧರಿಸಿ. ಅದು ಸುಮಾರು ರು. 15- 60 ಸಾವಿರ ವರೆಗೆ.
- ಮಾಸಿಕ ಸರಾಸರಿ ರು. 6- 7 ಸಾವಿರ ವಹಿವಾಟು ಆದರೆ ಮಾತ್ರ ಎರಡು ವರ್ಷದಲ್ಲಿ ಎಟಿಎಂ ಲಾಭ ಗಳಿಸಬಹುದು.
ಎಟಿಎಂ ಹೇಗೆ ಎತ್ತ?
- ಅಮೆರಿಕದಲ್ಲಿ 10 ಲಕ್ಷ ಜನರಿಗೆ 1,200 ಎಟಿಎಂ. ಭಾರತದಲ್ಲಿ 100 ಎಟಿಎಂಗಳು
- ಬ್ಯಾಂಕಿನ ಶೇ. 45ರಷ್ಟು ಗ್ರಾಹಕರಿಂದ ಮಾತ್ರ ಎಟಿಎಂ ಸೌಲಭ್ಯ ಬಳಕೆ
- ಸರ್ಕಾರಿ ಬ್ಯಾಂಕ್‌ಗಳ ಜತೆಗೆ ಖಾಸಗಿ ಕಂಪನಿಗಳೂ 5 ಸಾವಿರ ವೈಟ್ ಲೇಬಲ್ ಎಟಿಎಂಗಳಿಗೆ ಅವಕಾಶ
- -ರಮಾನಂದ ಶರ್ಮಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


