ಬಜಾರಿನ ಮೇಲೆ ಚುನಾವಣೆ ಪರಿಣಾಮ
ದೇಶದ ಆಡಳಿತದ ಸ್ವರೂಪವನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಮಹಾ ಚುನಾವಣೆಯ ಪ್ರಕ್ರಿಯೆ ಷೇರು ಬಜಾರು ...

ದೇಶದ ಆಡಳಿತದ ಸ್ವರೂಪವನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಮಹಾ ಚುನಾವಣೆಯ ಪ್ರಕ್ರಿಯೆ ಷೇರು ಬಜಾರು ಹಾಗೂ ಉದ್ಯಮಗಳ ಮೇಲೆ ಪರಿಣಾಮ ಬೀರಲೇಬೇಕು, ಬೀರುತ್ತದೆ. ಅನುಮಾನ ಬೇಡ.
2004ರಲ್ಲಿ ಚುನಾವಣೆಯ ಅನಂತರ ಪೇಟೆಯಲ್ಲಿ ಮಂಕು ಕವಿದಿತ್ತು. ಚುನಾವಣೆಯ ಫಲಿತಾಂಶ ಪೇಟೆಯ ಮಾತುಗಾರರ ನಿರೀಕ್ಷೆಯಂತಿರಲಿಲ್ಲ. ಅವರು ಬಿಜೆಪಿ ಗೆಲ್ಲುವ ನಿರೀಕ್ಷೆಯನ್ನು ಹೊಂದಿದ್ದರು. ಅದು ಈಡೇರಲಿಲ್ಲ. 2009ರ ಚುನಾವಣೆಯ ಸಮಯದಲ್ಲಿ ಪೇಟೆಯ ಜನರ ಮುಂದೆ ಇದ್ದ ದೊಡ್ಡ ಸಮಸ್ಯೆ ಭದ್ರತೆಯದ್ದೇ. ನಿರೀಕ್ಷಿಸಿದಂತೆಯೇ, ಸ್ವರೂಪದಲ್ಲಿ ಚೌ ಚೌ ಎನಿಸಿದರೂ, ಸಾಮಾನ್ಯ ಆಡಳಿತದಲ್ಲಿ ಭದ್ರತೆಯನ್ನು ಮೂಡಿಸುವ ಭರವಸೆ ಮೂಡಿತ್ತು. ಪೇಟೆ ಚೇತರಿಸಿಕೊಂಡಿತ್ತು. ಅಲ್ಲಿ ಇಲ್ಲಿ ಅವಾಂತರಗಳ ಸಮಯದಲ್ಲಿ ಏರುಪೇರು ಆಗಿರಬಹುದಷ್ಟೇ.
ಈಗ ಪೇಟೆಯ ಜನ ಅವರದ್ದೇ ಆದ ತರ್ಕ, ಭವಿಷ್ಯವಾಣಿ ಹಾಗೂ ಅದೃಷ್ಟವನ್ನು ನಂಬಿಕೊಂಡು ನರೇಂದ್ರ ಮೋದಿ - ಬಿಜೆಪಿಯ (ಹಳೆಯ ಬಿಜೆಪಿ ಅಲ್ಲ) ಮೇಲೆ ಬಾಜಿ ಕಟ್ಟಿರುವಂತಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಕವಿದಿರುವ ಹತಾಶೆಗೆ ಪೇಟೆ ಬಯಸಿರುವ ಉತ್ತರವನ್ನು ನರೇಂದ್ರ ಮೋದಿ ಮೂಲಕ ನಿರೀಕ್ಷಿಸಬಹುದೆ?
ಇನ್ನೊಂದು ಚಿತ್ರ
ಪೇಟೆಯ ಜನರ ಸಹಜ-ನೈಸರ್ಗಿಕ ಉತ್ಸಾಹದ ಹಿನ್ನೆಲೆಯಲ್ಲಿ ದೆಹಲಿಯ ವಿತ್ತ ಮಂತ್ರಾಲಯದಲ್ಲಿ ಒಂದು ವಿಶೇಷ ಚಿಂತಕರ ಪಡೆಯೇ ರೂಪುಗೊಂಡಿದೆ. ಪೇಟೆ ನಂಬಿರುವ ಭವಿಷ್ಯ ಏರುಪೇರಾದರೆ, ವಿತ್ತ ಪ್ರಪಂಚದಲ್ಲೇ ಅಲ್ಲೋಲಕಲ್ಲೋಲವಾಗಲೂಬಹುದು. ವಿದೇಶಿ ಸಂಸ್ಥೆಗಳು ಈಗ ಹೂಡಿರುವ ಹಣದ ಮೊತ್ತ ಸುಮಾರು 900 ಕೋಟಿ ಡಾಲರ್‌ಗಳು. ಅಷ್ಟೊಂದು ಬಂಡವಾಳ ಹಠಾತ್ತನೆ ಕಾಲ್ತೆಗೆದರೆ, ರುಪಾಯಿಯ ಮೇಲೆ ಬೀಳುವ ಒತ್ತಡವನ್ನು ನಿಭಾಯಿಸುವುದು ಹೇಗೆ?
ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮನ್ ರಾಜನ್ ಅವರೂ ಆತಂಕದಿಂದಲೇ ಹಲವು ಮಾತುಗಳನ್ನು ಆಡಿದ್ದಾರೆ. ನಿಜ, ವಿನಾಕಾರಣವಾಗಿ, ವಿಪರೀತ ಉತ್ಸಾಹದಲ್ಲಿ ಅಲೆಗಳನ್ನು ಎಬ್ಬಿಸಿರುವವರಿಗೆ, ಅದನ್ನು ನಿಯಂತ್ರಿಸುವ ವಿಧಾನಗಳು ಗೊತ್ತಿದ್ದಂತೆ ಇಲ್ಲ. ಅದು ಅವರ ಜವಾಬ್ದಾರಿಯೂ ಅಲ್ಲ.
ಆದರೂ ಭಾರತದಂತಹ ಒಂದು ದೊಡ್ಡ ಆರ್ಥಿಕ ವ್ಯವಸ್ಥೆ ಪಾಪರ್ ಚೀಟಿಯ ಹಂತವನ್ನು ಮುಟ್ಟುವುದು ಸಾಧ್ಯವೇ ಇಲ್ಲ. ಇಲ್ಲಿನ ಜನರ ಕಷ್ಟ ಸಹಿಸುವ ಶಕ್ತಿ ಹಿಂದೆಯೂ ಪರೀಕ್ಷೆಗೆ ಗುರಿಯಾಗಿದೆ. ಕ್ಷಾಮಡಾಮಗಳನ್ನು ಎದುರಿಸಿದ ಅನುಭವವೂ ಇದೆ. ಈಗ ತಂತ್ರಜ್ಞಾನವೂ ಲಭ್ಯವಾಗಿರುವುದರಿಂದ ಕಷ್ಟಕ್ಕೆ ಹೆದರಬೇಕಾಗಿಲ್ಲ. ಆದರೆ ಅದು ಬಾರದಂತೆ ನೋಡಿಕೊಳ್ಳುವುದು ಜಾಣತನ.
ಸರಾಸರಿ ಉದ್ಯಮಗಳು
ದೇಶದ ನಾಲ್ಕು ಉಕ್ಕಿನ ಕಾರ್ಖಾನೆಗಳು ಈಗ ಉತ್ತರ ಪ್ರದೇಶದ ಗೂಂಡಾ ಕ್ಷೇತ್ರದಲ್ಲಿ ಒಂದು ಶಾಲೆಯ ನಿರ್ಮಾಣಕ್ಕೆ ಹೆಣಗುತ್ತಿವೆ. ಗೂಂಡಾ ಉಕ್ಕು ಮಂತ್ರಿ ಬೇಣಿ ಪ್ರಸಾದ್ ಮೂನ್ ಅವರ ಕ್ಷೇತ್ರ. ಕೋಲ್ ಇಂಡಿಯಾದ ಒಂದು ಅಂಗ ಸಂಸ್ಥೆ ಒಡಿಶಾದ ತಾಲ್ಚೇರ್‌ನಲ್ಲಿ ಮೆಡಿಕಲ್ ಕಾಲೇಜ್ ನಿರ್ಮಿಸುವ ಹೊಣೆಯನ್ನು ಹೊತ್ತಿದೆ. ಅದಕ್ಕೂ ರಾಜಕಾರಣವೇ ಕಾರಣ.
ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುವುದು ಹೀಗಲ್ಲ. ರಾಜಕಾರಣ - ಸರ್ಕಾರಿ ಉದ್ಯಮದ ನಡುವಣ ಕೊಂಡಿಯನ್ನು ಕಳಚಿ ಹಾಕಲೇಬೇಕು. ಶಾಲೆ, ಕಾಲೇಜು ನಿರ್ಮಾಣಕ್ಕೆ ಬೇರೆ ವ್ಯವಸ್ಥೆ ಇದೆ.
ಕೊನೆ ಮಾತು
ಷೇರು-ಸೆಕ್ಯೂರಿಟಿಗಳ ವ್ಯವಹಾರದಲ್ಲಿ ಡಿಮ್ಯಾಟ್ ವ್ಯವಸ್ಥೆಯನ್ನು ವಿಸ್ತರಿಸಲು ಅತಿ ಅಗ್ಗದ ಏರ್ಪಾಡು ಮಾಡಿದರೂ, ಅದು ಪೇಟೆಯ ಜನಕ್ಕೆ ಆಕರ್ಷಣೀಯವಾಗಿ ಕಂಡಿಲ್ಲ. 220 ಲಕ್ಷ ಈಕ್ವಿಟಿದಾರರ ಪೈಕಿ ಶೇಕಡಾ ಎರಡರಷ್ಟು ಮಂದಿಯೂ ಅದನ್ನು ಬಳಸುತ್ತಿಲ್ಲ ಯಾಕೆ?
-ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


