ನಿಮಗಿದೆಯಾ ಭದ್ರತೆ?
ಇಂದಿನ ದಿನಮಾನದಲ್ಲಿ ವಿಮೆ ಎಲ್ಲರ ಅಗತ್ಯ. ಅಗಾಧವಾದ ಯೋಜನೆಗಳ ಆಯ್ಕೆ ಗ್ರಾಹಕರ ಮುಂದಿರುತ್ತವೆ. 'ಭವಿಷ್ಯದ ಬಗ್ಗೆ ಸಾಕಷ್ಟು ಚಿಂತನೆ ...

ಇಂದಿನ ದಿನಮಾನದಲ್ಲಿ ವಿಮೆ ಎಲ್ಲರ ಅಗತ್ಯ. ಅಗಾಧವಾದ ಯೋಜನೆಗಳ ಆಯ್ಕೆ ಗ್ರಾಹಕರ ಮುಂದಿರುತ್ತವೆ. 'ಭವಿಷ್ಯದ ಬಗ್ಗೆ ಸಾಕಷ್ಟು ಚಿಂತನೆ ಒಳಗೊಂಡಿರುವ ಯೊಜನೆಗಳು' ಎನ್ನುವ ಹೆಸರಿನಲ್ಲಿ ಇವು ಆಕರ್ಷಿಸುತ್ತವೆ. ಇಂದಿನ ದಿನಗಳಲ್ಲಿ ಸಾಕಷ್ಟು ವಿಧದ ಜೀವ ವಿಮಾ ಯೋಜನೆಗಳು ಕಂಡುಬರುತ್ತವೆ. ನಿರ್ದಿಷ್ಟ ಅವಧಿಯ ಯೊಜನೆಗಳು, ಸಂಪ್ರದಾಯಬದ್ಧ ಯೋಜನೆಗಳು, ದತ್ತಿ ಯೋಜನೆಗಳು, ಪಿಂಚಣಿ ಯೊಜನೆಗಳು ಹೀಗೆ ಮುಂತಾದ ಯೋಜನೆಗಳು ವಿಮಾ ಕ್ಷೇತ್ರದ ವಿಸ್ತಾರತೆ ಹೆಚ್ಚಿಸಿವೆ.
ಜೀವ ವಿಮಾ ಯೋಜನೆ ಮಾಡಿಸುವ ಮುನ್ನ ಗ್ರಾಹಕರು ಈ ವಿಮೆ ತಮ್ಮ ಅವಶ್ಯಕತೆಗೆ ಸೂಕ್ತವಾಗಿ ಸ್ಪಂದಿಸಬಲ್ಲುದೇ ಎಂಬುದನ್ನು ಮನಗಾಣಬೇಕು. ಏಜೆಂಟ್‌ಗಳ ಒತ್ತಾಯಕ್ಕೆ ಬಲಿಯಾಗಿ ಜೀವವಿಮೆ ಮಾಡಿಸಿದರೆ ಭವಿಷ್ಯದಲ್ಲಿ ಸಮಸ್ಯೆಗಳಿಗೆ ಸಿಲುಕಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಪಾಲಿಸಿ ಮಾಡಿಸಿದ ಮೇಲೆ ಚಾಚೂ ತಪ್ಪದೆ ಪಾಲಿಸಬೇಕಾದ ಅನಿವಾರ್ಯತೆ ಇದೆ. 10 ವರ್ಷದ ವಿಮೆ ಮಾಡಿಸಿದಲ್ಲಿ ಅವಧಿ ಪೂರೈಸುವ ತನಕ ನಿದಿಷ್ಟ ಮೊತ್ತದ ಕಂತು ಕಟ್ಟುತ್ತಿರಬೇಕು. ಸರಂಡರ್ ಮಾಡಬಹುದಾಗಿದ್ದರೂ, ಅದರಿಂದ ಪ್ರಯೋಜನವಾಗಲಿದೆಯೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು. ಏಕೆಂದರೆ ಸರಂಡರ್ ಮಾಡಿದಾಗ ಕಡಿಮೆ ಹಣ ಸಿಗುವುದಾದರೆ 'ಇಷ್ಟು ದಿನ ಕಂತುಕಟ್ಟಿ ಏನು ಪ್ರಯೋಜನ?' ಎನ್ನುವಂತಾಗಬಾರದು ಅಲ್ಲವೆ?
ವಿಮಾ ಯೋಜನೆಗಳಲ್ಲಿ ನಿಮ್ಮ ಸ್ಥಿತಿಗತಿಗೆ ಅನುಕೂಲವಾಗುವ, ಸಹಾಯವಾಗುವ ಒಂದು ನಿರ್ದಿಷ್ಟ ಯೋಜನೆ ಆಯ್ಕೆ ಮಾಡಿಕೊಳ್ಳಿ. ವಿಮೆ ಎಂಬುದು ಮುಂದಿನ ದಿನಗಳಲ್ಲಿ ಅನಿರೀಕ್ಷಿತವಾಗಿ ಉಂಟಾಗಬಹುದು ಎಂದು ಅಂದಾಜಿಸಲಾಗುವ ಸಮಸ್ಯೆಗಳಿಂದ ಹೊರಬರಲು ವಹಿಸುವ ಮುಂಜಾಗ್ರತೆ. ನೀವು ಆಕಸ್ಮಿಕ ದುರಂತಕ್ಕೆ ಒಳಗಾದರೆ ಕುಟುಂಬಕ್ಕೆ ಹಣಕಾಸಿನ ಅಭಾವ ಉಂಟಾಗಬಾರದು ಎಂಬ ರಕ್ಷಣಾ ವ್ಯವಸ್ಥೆ. ಮುಂದಿನ ದಿನಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಎಂದು ಕೂಡಿಡುವ ಮೊತ್ತ ಎಂದೂ ಪರಿಗಣಿಸಬಹುದು. ಮದುವೆಗೆ, ನಿವೃತ್ತಿಯ ನಂತರದ ದಿನಗಳಿಗೆ ಹೀಗೆ ನಾನಾ ಉದ್ದೇಶಗಳಿಗಾಗಿ ಕ್ರಮಬದ್ಧವಾಗಿ ಕೂಡಿಡುವ ನಿಧಿ ಎಂಬುದಾಗಿಯೂ ಹೇಳಬಹುದು. 'ತೆರಿಗೆ ಉಳಿಸುವ ಜಾಣ್ಮೆ' ಎಂಬುದು ಇನ್ನೂ ಜಾಣತನದ ಉತ್ತರ.
ಆಯ್ಕೆಗೂ ಮುನ್ನ...
'ಹಣಕಾಸಿನ ಗುರಿ ಏನು?' ಎಂಬುದರ ಸ್ಪಷ್ಟ ಚಿತ್ರಣ ನಿಮ್ಮ ಕೈಯಲ್ಲಿ ಇರಬೇಕು. ಸದ್ಯದ ಆರ್ಥಿಕ ಸ್ಥಿತಿ ಮತ್ತು ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಆರ್ಥಿಕ ಸ್ಥಿತಿ ಬಗ್ಗೆ ಅರಿವಿರಬೇಕು. ಅವುಗಳ ಅಂದಾಜು ನಿಮ್ಮ ಕೈಗೆ ಸಿಕ್ಕಮೇಲೆ ವಿಮಾ ಯೋಜನೆಗಳನ್ನು ತಡವುತ್ತಾಬರಬೇಕು. 'ಯಾವ ಯೋಜನೆ ತನ್ನ ಅವಶ್ಯಕತೆಗಳನ್ನು ಪೂರೈಸುತ್ತದೆ?' ಎಂಬ ಊಹೆ ಮೇರೆಗೆ ಯೋಜನೆಯೊಂದನ್ನು ಆಯ್ಕೆ ಮಾಡಿ. ವಿಮೆ ಮೂಲಕ ಮುಂದಿನ ಭವಿಷ್ಯ ಹಸನಾಗಿಸಬಹುದು ಎಂಬ ವಿಶ್ವಾಸ ಮೂಡಿದಲ್ಲಿ ಮುಂದಿನ ಹೆಜ್ಜೆ ಧಾರಾಳವಾಗಿ ಇಡಬಹುದು.
ಮುಂದಿನ ಪ್ರಶ್ನೆ ಎಷ್ಟು ಮೊತ್ತಕ್ಕೆ ವಿಮೆ ಮಾಡಿಸಬೇಕು ಎನ್ನುವುದು. ಕಂತುಗಳನ್ನು ಹೇಗೆ ಕಟ್ಟುತ್ತೀರಿ? ವಾರ್ಷಿಕವಾಗಿ ಕಟ್ಟುತ್ತೀರೋ? ಅಥವಾ ತ್ರೈಮಾಸಿಕವಾಗಿ ಕಟ್ಟುತ್ತೀರೋ? ಕಂತು ಕಟ್ಟುವ ಸಾಧ್ಯತೆ, ಅನುಕೂಲಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಿ. ನಿರ್ದಿಷ್ಟ ಮೊತ್ತವನ್ನು ವರ್ಷದಲ್ಲಿ ಒಂದೇ ಬಾರಿಗೆ ಕಟ್ಟಲು ಅನಾನುಕೂಲವಾಗುತ್ತದೆ ಎಂದಾದರೆ ಅದೇ ಮೊತ್ತವನ್ನು ಮೂರು ಪಾಲಾಗಿ ಮಾಡಿ ನಾಲ್ಕು ತಿಂಗಳಿಗೊಮ್ಮೆ ಕಟ್ಟುವ ಕಂತಾಗಿ ಮಾಡಿಕೊಳ್ಳಬಹುದು.
ಎಷ್ಟು ಅವಧಿಯವರೆಗೆ ಹಣ ಕಟ್ಟುತ್ತೀರಿ ಎಂಬುದರ ಸೂಕ್ಷ್ಮ ಅರಿವು ಇರಬೇಕು. ಹಣಕಾಸಿನ ಗುರಿ ಆಧರಿಸಿ ಅವಧಿ ವಿಸ್ತರಿಸಿಕೊಳ್ಳಬೇಕು. ಉದಾಹರಣೆಗೆ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಹಣ ಉಳಿಸುತ್ತೀರಿ ಎಂದಾದರೆ 10 ವರ್ಷಾವಧಿಯ ವಿಮೆ ಮಾಡಿಸಿಕೊಳ್ಳಬಹುದು. ನಿವೃತ್ತಿ ಬದುಕಿನ ಉಪಯೋಗಕ್ಕೆ ಅಥವಾ ಮಗಳ ಮದುವೆಗೆ ಎಂಬ ಗುರಿ ಹೊಂದಿದ್ದರೆ 25-30 ವರ್ಷಾವಧಿಗೆ ವಿಸ್ತರಿಕೊಳ್ಳಬಹುದು.
(ಲೇಖಕರು ಬಜಾಜ್ ಅಲಯನ್ಸ್ ಲೈಫ್ ಇನ್ಶೂರೆನ್ಸ್‌ನ ಮಾರುಕಟ್ಟೆ ಮತ್ತು ಅಭಿವೃದ್ಧಿ ಅಧಿಕಾರಿ)
ಯಾವ ರೀತಿಯ ಹೂಡಿಕೆ ಇಷ್ಟ?
ಯೋಜನೆಗಳ ಸ್ವರೂಪ ಹೇಗೇ ಇದ್ದರೂ ಪಾಲಿಸಿಗಳಲ್ಲಿ ಮೂಲಭೂತವಾಗಿ ಎರಡು ವಿಧಗಳಿವೆ. ಷೇರು ಮಾರುಕಟ್ಟೆ ಆಧಾರಿತವಾದದ್ದು ಮತ್ತು ಸಾಂಪ್ರದಾಯಿಕ ಯೋಜನೆಗಳು. ಯುನಿಟ್-ಲಿಂಕಡ್ ಪ್ಲಾನ್
ಇಲ್ಲಿ ಪಾಲಿಸಿ ಅವಧಿ ಸಿಗುವ ಮೊತ್ತದ ಅಂದಾಜು ಇರುವುದಿಲ್ಲ. ಏಕೆಂದರೆ ನೀವು ಕಟ್ಟಿದ ಮೊತ್ತವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಲಾಗುತ್ತದೆ. ಎಷ್ಟು ಮೊತ್ತಕ್ಕೆ ವಿಮೆ ಮಾಡಿಸಿದ್ದೀರೊ ಅದಕ್ಕಿಂತ ಹೆಚ್ಚಿನ ಅಥವಾ ಕಡಿಮೆ ಮೊತ್ತ ಸಿಗಬಹುದು. ಇದು ಸಂಪೂರ್ಣವಾಗಿ ಷೇರು ಮಾರುಕಟ್ಟೆಯನ್ನು ಆಧರಿಸಿರುತ್ತದೆ. ಹೂಡಿಕೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿದ್ದಲ್ಲಿ ಯುನಿಟ್ ಲಿಂಕಡ್ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು. ಅವಧಿ ಮುಗಿಯುವ ಹೊತ್ತಿಗೆ ಷೇರು ಮಾರುಕಟ್ಟೆ ಏರುಗತಿಯಲ್ಲಿದ್ದರೆ ಅಧಿಕ ಮೊತ್ತ ಸಿಗಬಹುದು. ನೀವು ಹೂಡಿದ್ದಕ್ಕಿಂತ ಕಡಿಮೆ ಮೊತ್ತ ಸಿಕ್ಕರೂ ಅಚ್ಚರಿ ಇಲ್ಲ.
ಸಾಂಪ್ರದಾಯಿಕ ಯೋಜನೆ
ಇಂಥ ಪಾಲಿಸಿಗಳಲ್ಲಿ ಅವಧಿಯ ನಂತರ ಲಭ್ಯವಾಗುವ ಮೊತ್ತದ ನಿಖರ ಮಾಹಿತಿ ಪ್ರಾರಂಭದಲ್ಲೇ ಸಿಗುತ್ತದೆ. ನೀವು ಕಟ್ಟುವ ಒಟ್ಟು ಮೊತ್ತ ಮತ್ತು ಒಟ್ಟಾರೆ ಅವಧಿಯ ನಂತರ ಸಿಗುವ ಒಟ್ಟು ಮೊತ್ತದ ನಿರ್ದಿಷ್ಟ ಮಾಹಿತಿ ಇರುತ್ತದೆ.
ತೆರಿಗೆ ವಿನಾಯಿತಿ!
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ನೀವು ಪಾವತಿಸಿದ ವಿಮಾ ಕಂತಿಗೆ ತೆರಿಗೆ ವಿನಾಯಿತಿ ದೊರೆಯಲಿದೆ. ಕಳೆದ ಬಾರಿ ಐಆರ್‌ಡಿಎ ನೀಡಿರುವ ವರದಿಯಂತೆ 23 ಖಾಸಗಿ ವಿಮಾ ಯೋಜನೆಗಳು ಚಾಲ್ತಿಯಲ್ಲಿವೆ. ಕೇವಲ 5 ವಿಮಾ ಸಂಸ್ಥೆಗಳು ಶೇಕಡಾ 90 ಕ್ಲೈಂ ಸೆಟ್ಲಮೆಂಟ್ ಹೊಂದಿವೆ.
- ರಿತುರಾಜ್ ಭಟ್ಟಾಚಾರ್ಯ
(ಲೇಖಕರು ಬಜಾಜ್ ಅಲಯನ್ಸ್ ಲೈಫ್ ಇನ್ಶೂರೆನ್ಸ್‌ನ ಮಾರುಕಟ್ಟೆ ಮತ್ತು ಅಭಿವೃದ್ಧಿ ಅಧಿಕಾರಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


