ವಾಣಿಜ್ಯ

ಜಾಹೀರಾಯ್ತು

ಹೇಳಿ ಕೇಳಿ ಇನ್ನು ಮೂರು ತಿಂಗಳ ಕಾಲ ದೇಶಾದ್ಯಂತ ಚುನಾವಣಾ ಸಮಯ. ಜಾಹೀರಾತು ಸಂಸ್ಥೆಗಳಿಗೆ ಮತ್ತು ಏಜೆನ್ಸಿಗಳಿಗೆ ಬಿಡುವಿಲ್ಲದ...

ಜಾಹೀರಾಯ್ತು
Published On :

ಹೇಳಿ ಕೇಳಿ ಇನ್ನು ಮೂರು ತಿಂಗಳ ಕಾಲ ದೇಶಾದ್ಯಂತ ಚುನಾವಣಾ ಸಮಯ. ಜಾಹೀರಾತು ಸಂಸ್ಥೆಗಳಿಗೆ ಮತ್ತು ಏಜೆನ್ಸಿಗಳಿಗೆ ಬಿಡುವಿಲ್ಲದ ಕೆಲಸ. ಹಾಗೆಂದು ಈಗ ಕಡಿಮೆ ಎಂಬ ಅರ್ಥವಲ್ಲ. ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳು ಎಲ್ಲ ಮಾಧ್ಯಮಗಳಲ್ಲಿ ಮತದಾರರನ್ನು ಆಕರ್ಷಿಸಲು ಬಣ್ಣಬಣ್ಣದ ಜಾಹೀರಾತು ನೀಡಲು ಆರಂಭಿಸಿವೆ. ಈಗ ಕಾಲ ಬದಲಾಗಿದೆ. ಅದರಂತೆ ಪ್ರಚಾರ ಮಾಧ್ಯಮಗಳೂ ಹೊಸತನ ಪಡೆದುಕೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ ಆರಂಭವಾಗಿದೆ.
ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 500 ಕೋಟಿ ಪ್ರಚಾರ ಮತ್ತು ಜಾಹೀರಾತಿಗಾಗಿ ವೆಚ್ಚ ಮಾಡುತ್ತಿವೆ. ಇದಕ್ಕಾಗಿ ತಮ್ಮದೇ ಪಕ್ಷಗಳ ಮಾಧ್ಯಮ ವಿಭಾಗದ ಜತೆ ವೃತ್ತಿಪರ ಜಾಹೀರಾತು ಸಂಸ್ಥೆಗಳ ಮೊರೆ ಹೋಗಿವೆ. ಹೊಸ ಮಾದರಿ ಜಾಹೀರಾತು ಸಾಧನ, ಪ್ರಚಾರ ಸಾಮಗ್ರಿಗಳ ಜತೆ ಹೊರಬರಲು ಹಣ ವೆಚ್ಚ ಮಾಡುತ್ತಿವೆ.
ಟಿವಿ ಚಾನೆಲ್‌ಗಳು, ಮುದ್ರಣ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳು ಒಟ್ಟಾಗಿ, ಜತೆಗೆ ಆಯಾ ಅಭ್ಯರ್ಥಿಗಳೂ ಎಲ್ಲ ಹಂತದ ಟಿವಿ ಚಾನೆಲ್‌ಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಜಾಹೀರಾತು ಕ್ಷೇತ್ರದ ಪಂಡಿತರ ಪ್ರಕಾರ ಪ್ರಸಕ್ತ ಚುನಾವಣೆಯಲ್ಲಿ ಹಣ ಹೂಡಿಕೆ ಮಾಡಿದಷ್ಟು ಹಿಂದೆ ಎಂದೂ ಆಗಿರಲಿಲ್ಲ.
ಯಾರು? ಹೇಗೆ?
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಪ್ರಚಾರ ಕಾರ್ಯದ ಉಸ್ತುವಾರಿ ಹೊತ್ತಿರುವುದು ಮೆಡಿಸನ್ ಮೀಡಿಯಾ ಔಟ್‌ಲುಕ್. ಅದೇ ಸಂಸ್ಥೆಯ ಅಂದಾಜಿನಲ್ಲಿ ಹೇಳುವುದಿದ್ದರೆ ಪ್ರಸಕ್ತ ವರ್ಷ ದೇಶದ ಒಟ್ಟಾರೆ ಜಾಹೀರಾತು ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ನೀಡುವ ಜಾಹೀರಾತು ಶೇ.50ರಷ್ಟು ಹೆಚ್ಚು ಬೆಳವಣಿಗೆ ಕಂಡುಕೊಳ್ಳಲಿದೆ. ಈ ಪೈಕಿ ಶೇ.16.8ರಷ್ಟು ಪ್ರಮಾಣದ್ದು ರಾಜಕೀಯ ಜಾಹೀರಾತುಗಳೇ ಆಗಿರುತ್ತವೆ!
ಇನ್ನು ಕಾಂಗ್ರೆಸ್ ಪರ ಜಾಹೀರಾತು ಮತ್ತು ಪ್ರಚಾರದ ಉಸ್ತುವಾರಿ ಹೊತ್ತುಕೊಂಡದ್ದು ಡೆನ್ಸು ಮತ್ತು ಟಾಪ್‌ರೂಟ್. ಆದರೆ ಸಾರ್ವಜನಿಕ ಸಂಪರ್ಕದ ಉಸ್ತುವಾರಿಯ ಹೊಣೆಯನ್ನು ಜೆನಿಸಿಸ್ ಬರ್ಸನ್ ಮಾರ್ಸ್‌ಟೆಲರ್ ಹೊರಲಿದೆ.
ಹೊಸತೇನು?
ದೇಶದಲ್ಲಿ ಇದ್ದಿದ್ದ ಟ್ರೆಂಡ್ ಹೇಗೆಂದರೆ ನಮ್ಮಲ್ಲಿಯೇ ಇರುವ ಪ್ರಮುಖ ಜಾಹೀರಾತು ಸಂಸ್ಥೆಗಳಿಗೆ ರಾಜಕೀಯ ಪಕ್ಷಗಳು ಮನ್ನಣೆಯ ಮಣೆ ಹಾಕುತ್ತಿದ್ದವು. ಈ ವರ್ಷದಿಂದ ಅದು ಕಾಣೆಯಾಗಿದೆ. ಈಗ ಏನಿದ್ದರೂ ಪಕ್ಷದ ಪ್ರಚಾರ ನಿರ್ವಹಣೆಗಾಗಿ ವಿದೇಶಗಳ ಜನಪ್ರಿಯ ಸಂಸ್ಥೆಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಕೆಂಪು ಹಾಸಿನ ಸ್ವಾಗತ ಕೊಟ್ಟಿವೆ. ಹೀಗಾಗಿಯೇ, ಜಾಹೀರಾತುಗಳಲ್ಲಿ ಅದ್ಧೂರಿತನ ಮತ್ತು ನಾಜೂಕು ಎದ್ದು ಕಾಣುತ್ತದೆ.
ಹೆಚ್ಚಾಗುತ್ತದೆ
ಮಾರ್ಚ್ ತಿಂಗಳ ಮಧ್ಯಭಾಗದಿಂದ ಮತ್ತು ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಸುದ್ದಿ ವಾಹಿನಿಗಳು ಮತ್ತು ಸ್ಥಳೀಯವಾಗಿರುವ ಚಾನೆಲ್‌ಗಳ ವೀಕ್ಷಕರ ಸಂಖ್ಯೆ ಹೆಚ್ಚುತ್ತದೆ. ಇಂಥ ಸಂದರ್ಭದಲ್ಲಿ ಟಿ.ವಿ.ಗಳಲ್ಲಿ ಜಾಹೀರಾತುಗಳ ಸಂಖ್ಯೆ ಹೆಚ್ಚುತ್ತದೆ. ಜತೆಗೆ ಸುದ್ದಿ ವಾಹಿನಿಗಳು 5-10 ಕೋಟಿ ವರೆಗೆ ಜಾಹೀರಾತು ಪ್ಯಾಕೇಜ್‌ಗಳನ್ನು ನೀಡಲಾರಂಭಿಸುತ್ತವೆ.



ಬೆಳಗುವುದೇ ಭಾರತ?
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ 'ಭಾರತ ಪ್ರಕಾಶಿಸುತ್ತಿದೆ' ಎಂಬ ಜಾಹೀರಾತನ್ನು ನೀಡಿತ್ತು. ಆದರೆ ಅದು ಸಂಪೂರ್ಣ ವಿಫಲವಾಗಿ, ಪ್ರತಿಪಕ್ಷವಾಗಿದ್ದ ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿತ್ತು. ಈಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೂಡ 'ಭಾರತ್ ನಿರ್ಮಾಣ್‌' ಹೆಸರಲ್ಲಿ ತಾನು ಕೈಗೊಂಡಿರುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಮತ್ತು ಅದರ ಫಲಾನುಭವಿಗಳನ್ನು ತೋರಿಸುತ್ತಿದೆ.




ಹಿಂದಿನ ಜಾಹೀರಾತು ಪ್ರಚಾರಗಳು
    1989ರಲ್ಲಿ ಕಾಂಗ್ರೆಸ್ 'ಭಾರತಕ್ಕಾಗಿ ನನ್ನ ಹೃದಯ ಮಿಡಿಯುತ್ತಿದೆ' ಎಂದು ಜಾಹೀರಾತು ಸಂಸ್ಥೆಯೊಂದು ರೂಪಿಸಿದ್ದ ಜಾಹೀರಾತು ಭಾರಿ ಪ್ರಚಾರ ಪಡೆದಿತ್ತು. ಅಂತಿಮವಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲು ಅನುಭವಿಸಿತು.
    2004ರಲ್ಲಿ ಎನ್‌ಡಿಎ ನೀಡಿದ್ದ 'ಇಂಡಿಯಾ ಶೈನಿಂಗ್‌' ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ನಿರೀಕ್ಷಿತ ಫಲ ತಂದುಕೊಟ್ಟಿರಲಿಲ್ಲ.
    2009ರಲ್ಲಿ ಕಾಂಗ್ರೆಸ್ ಕೊಂಚ ತಪ್ಪನ್ನು ತಿದ್ದಿಕೊಳ್ಳುವಲ್ಲಿ ಪ್ರಯತ್ನ ಮಾಡಿತ್ತು. 2004ರಲ್ಲಿ ಇಂಡಿಯಾ ಶೈನಿಂಗ್ ಜಾಹೀರಾತು ಮಾಡಿದ್ದ ಲಿಯೋ ಬರ್ನೆಟ್ ತಪ್ಪುಗಳನ್ನು ತಿದ್ದಿಕೊಂಡು, ಆಮ್ ಆದ್ಮಿ (ಜನಸಾಮಾನ್ಯ)ಗೆ ಅನುಕೂಲವಾಗುವಂಥ ಘೋಷವಾಕ್ಯಗಳನ್ನು ರಚನೆಗೆ ಹೆಚ್ಚು ಒತ್ತು ನೀಡಿತ್ತು. ಅದಕ್ಕೆ ಪೂರಕವಾಗಿ ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ಸ್ಲಂಡಾಗ್ ಮಿಲಿಯನೇರ್‌ನ 'ಜೈಹೋ' ಘೋಷ ವಾಕ್ಯದ ಹಕ್ಕುಗಳನ್ನು ಪಡೆದುಕೊಂಡಿತ್ತು. ಈ ಮೂಲಕ ಅದು ಜಾಹೀರಾತು ಯುದ್ಧದಲ್ಲಿ ಯಶಸ್ಸು ಕಂಡಿತು. ಅದೇನೇ ಇರಲಿ, ಈ ಬಾರಿಯ ಚುನಾವಣಾ ಜಾಹೀರಾತು ಹಿಂದಿನ ವರ್ಷಗಳಿಗಿಂತ ಭಿನ್ನವಾಗಿರುವುದಂತೂ ಸತ್ಯ.


ಸದಾಶಿವ ಕೆ.
khandige29@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.