ಒಂದು ಸರ್ಕಾರಿ ಬ್ಯಾಂಕಿನ ಕಥೆ
ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಎನ್ನುವ ಸರ್ಕಾರಿ ಬ್ಯಾಂಕೊಂದಿದೆ ಎನ್ನುವುದೇ ಅನೇಕರಿಗೆ ಗೊತ್ತಿರಲಿಲ್ಲ. ಯೂನಿಯನ್ ...

ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಎನ್ನುವ ಸರ್ಕಾರಿ ಬ್ಯಾಂಕೊಂದಿದೆ ಎನ್ನುವುದೇ ಅನೇಕರಿಗೆ ಗೊತ್ತಿರಲಿಲ್ಲ. ಯೂನಿಯನ್ ಬ್ಯಾಂಕ್ ಗೊತ್ತು. ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ ಗೊತ್ತು. ಆದರೆ ದಿವಾಳಿಯ ಅಂಚಿನಲ್ಲಿ ಬಂದು ನಿಂತಿದ್ದ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಹೆಸರು ಪ್ರಚಾರ ಪಡೆದಿದ್ದು ಈಗಲೇ. ಕೊಲ್ಕತ್ತಾ ಮೂಲದ ಬ್ಯಾಂಕ್ ಅದು. ಕೆಲವೇ ವಾರಗಳ ಹಿಂದೆ ಈ ಬ್ಯಾಂಕ್ ಅಕ್ಷರಶಃ ಪಾಪರ್ ಚೀಟಿಯನ್ನು ಪಡೆಯುವ ಸ್ಥಿತಿಯನ್ನು ತಲುಪಿತ್ತು. ಆರೇ ತಿಂಗಳಲ್ಲಿ 1700 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿತ್ತು. ಬ್ಯಾಂಕಿನ ಛೇರ್‌ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಅರ್ಚನಾ ಭಾರ್ಗವ ತಮ್ಮ ಪ್ರತಿಷ್ಠಿತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಆ ಸ್ಥಾನಕ್ಕೆ ಬಂದು ಹತ್ತು ತಿಂಗಳಾಗಿತ್ತು ಅಷ್ಟೇ.
ಈಗ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ 800 ಕೋಟಿ ರೂಪಾಯಿಗಳ ಬಾಂಡ್‌ಗಳನ್ನು ಈಕ್ವಿಟಿಯಾಗಿ (ಷೇರು ಬಂಡವಾಳ) ಪರಿವರ್ತಿಸಿದೆ. ಇನ್ನೂ ಹನ್ನೊಂದು ಕೋಟಿ ಷೇರುಗಳನ್ನು ಮಾರಲಿದೆ (ಬೆಲೆ ನಿಗದಿಯಾಗಿಲ್ಲ). ಆಗ ಬ್ಯಾಂಕಿನ ಸ್ಥಿತಿ ಸುಧಾರಿಸುವುದಂತೆ.
ಈ ವ್ಯವಹಾರ ನಿಜವಾಗಲೂ ಎಡಗೈನಿಂದ ಬಲಗೈಗೆ, ಬಲಗೈನಿಂದ ಎಡಗೈಗೆ ಹಣ ಹಸ್ತಾಂತರವಾದದ್ದೇ ವಿನಾ ಬೇರೆ ಏನೂ ಅಲ್ಲ. ಹೊಸ ಹಣ ಸೃಷ್ಟಿಯಾಗಲಿಲ್ಲ. ಸರ್ಕಾರ ಬ್ಯಾಂಕ್‌ಗಳಿಗೆ ಬಾಂಡ್‌ಗಳನ್ನು ಕೊಡುತ್ತದೆ. ಅನಂತರ ಬ್ಯಾಂಕ್ ಸರ್ಕಾರಕ್ಕೆ ಹಣ ಕೊಡುತ್ತದೆ. ಸರ್ಕಾರವೇ ಬ್ಯಾಂಕಿನ ಮಾಲೀಕ. ಶೇಕಡಾ 88ರಷ್ಟು ಬಂಡವಾಳ ಸರ್ಕಾರದ್ದೇ. ಇದೆಲ್ಲವೂ ಗೊತ್ತಿದ್ದರೂ ಪೇಟೆಯಲ್ಲಿ ಕಳೆದ ವಾರ ಬ್ಯಾಂಕಿನ ಷೇರು ಬೆಲೆ (ಸರ್ಕಾರದ ಶ್ರಮದಿಂದ) ಏರಿದೆ. ಇದಕ್ಕೇನು ಹೇಳಬೇಕು? ಈ ಬ್ಯಾಂಕಿನಲ್ಲಿ ಆಂತರಿಕವಾಗಿ ವಿಪರೀತ ಜಗಳಗಳಿವೆಯಂತೆ. ಆಡಳಿತ ವೈಫಲ್ಯದ ಪ್ರಮಾಣ ಹೆಚ್ಚು ಅನುಮಾಸ್ಪದ, ಕೆಟ್ಟ ಸಾಲದ ಲೆಕ್ಕ ಗಾಬರಿ ಹುಟ್ಟಿಸುವಂತಹದ್ದು.
ದಲಾಲ ಬೀದಿಯಲ್ಲಿ ಗೊಂದಲ
ದಲಾಲ ಬೀದಿಯಲ್ಲಿ ಈಗ ವಿದೇಶಿ ಸಂಸ್ಥೆಗಳ ವ್ಯವಹಾರ ನಡೆಯುತ್ತಿರುವುದರಿಂದ ಪೇಟೆಯಲ್ಲಿನ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದರೂ, ಸೂಚ್ಯಂಕಗಳ ಏರಿಕೆಯ ಪ್ರಕ್ರಿಯೆ ನಿಜವಾಗಲೂ ಗೊಂದಲವನ್ನು ಮೂಡಿಸಿದೆ. ಸೂಚ್ಯಂಕಗಳ ಏರಿಕೆಗೆ ಅನುಕೂಲವಾಗುವಂತಹ ಆಂತರಿಕ ಕಾರಣ ಯಾವುದೂ ಇಲ್ಲ. ಅಂತಾರಾಷ್ಟ್ರೀಯ ಪರಿಸ್ಥಿತಿಯೇ ಏರಿಕೆಗೆ ಕಾರಣ. ವಿದೇಶಿ ಸಂಸ್ಥೆಗಳು ಭಾರತದಲ್ಲಿ ಮತ್ತೆ ಕೊಳ್ಳುವ ವ್ಯವಹಾರವನ್ನು ಆರಂಭಿಸಿವೆ. ಪೇಟೆಯಲ್ಲಿ ಚೇತರಿಕೆಯ ಸ್ಥಿತಿ ಮೂಡಿದೆ.
ಮುಂದೆ ಹೇಗೆ?
ಅಭಿವೃದ್ಧಿ ವೇಗ ಸ್ವಲ್ಪ ಹೆಚ್ಚಬಹುದು. ಇನ್‌ಫ್ಲೇಷನ್ ಏರಿಕೆಯ ದರದ ನಿಯಂತ್ರಣ ಸಾಧ್ಯವಾಗಬಹುದು. ಚಾಲ್ತಿ ಲೆಕ್ಕದ ಕೊರತೆಯೂ ಕಡಿಮೆಯಾಗಬಹುದು. ಆದರೂ, ಪೇಟೆಯಲ್ಲಿ ಅನಿಶ್ಚಯದ ವಾತಾವರಣ ಮಾಯವಾಗುವುದಿಲ್ಲ. ಚುನಾವಣೆಯ ಮಹಾ ಮಂಥನದ ಅಂತಿಮ ಪರಿಣಾಮವನ್ನು ಯಾರೂ ಊಹಿಸುವುದು ಸಾಧ್ಯವಿಲ್ಲ. ಆದರೂ ಎಲ್ಲರ ಬಯಕೆ- ನಿಧಾನವಾಗಿಯಾದರೂ ಪ್ರಗತಿಯ ವೇಗ ಹೆಚ್ಚಬೇಕು, ಹೆಚ್ಚುತ್ತದೆ.
ಬಂಡವಾಳ ಹೂಡಿಕೆ ವಿಚಾರ
ಕಳೆದ ಎರಡು ವರ್ಷಗಳಿಂದಲೂ ಕಾರ್ಪೊರೇಟ್ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದೆ. ಸ್ಥಿರಾಸ್ತಿಯ ವ್ಯವಹಾರ ಭರಾಟೆ, ಚಿನ್ನವನ್ನು ಕೊಳ್ಳುವ ಅವಾಂತರದಲ್ಲಿ ಕಾರ್ಪೊರೇಟ್ ವಲಯಕ್ಕೆ ಹಣ ಬರುವುದು ಕಡಿಮೆಯಾಗಿದೆ. ಸರ್ಕಾರದ ನೀತಿಯ ವಿಚಾರದಲ್ಲೂ ಅನಿಶ್ಚಿತತೆ ಇದೆ.
ಕೊನೆ ಮಾತು
ಬಡ್ಡಿ ದರದ ಭಾರ ನಿಜವಾಗಲೂ ಕಾರ್ಪೊರೇಟ್‌ಗಳಿಗೆ ಈಗ ವಿಪರಿತ ಜಾಸ್ತಿ ಎನಿಸುತ್ತಿದೆ. ದುಡಿದಿದ್ದೆಲ್ಲ ಬಡ್ಡಿಗೇ ಹೋದರೆ ದುಡಿಯಬೇಕೇಕೆ?
-ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


