ವಾಣಿಜ್ಯ

ಷೇರುಗಳಿಗೆ ಶುಕ್ರದೆಸೆ

ಷೇರುಗಳಿಗೆ ಶುಕ್ರದೆಸೆ
Published On :

ಐಪಿಒಗಳಿಗೆ ಸಮಯ ಬೇಕು...
ಸ್ವತಂತ್ರ ಉದ್ಯಮಸ್ನೇಹಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಯಾರ ಹಂಗೂ ಇಲ್ಲದಂಥ ಏಕಪಕ್ಷೀಯ ಸ್ಪಷ್ಟ ಬಹುಮತದ ಸರ್ಕಾರವನ್ನು ರಚಿಸಿದ ಅನಂತರ ವಾಣಿಜ್ಯೋದ್ಯಮ ವಲಯದಲ್ಲಿ ಸಂಭ್ರಮ ತುಂಬಿ ತುಳುಕುತ್ತಿದೆ. ಕಳೆದ ಹಲವು ವರ್ಷಗಳಿಂದಲೂ ಪೇಟೆಗೆ ಒಳ್ಳೆಯ ಹೊಸ ಷೇರುಗಳೇ ಬಂದಿರಲಿಲ್ಲ. ಈಗ ಆ ಕೊರತೆ ನೀಗಬಹುದೆನ್ನುವ ಆಸೆ ಚಿಮ್ಮಿದೆ. ಆದರೆ ಅದು ದಿಢೀರನೆ ಆಗುವ ಕೆಲಸವಲ್ಲ.
ಕಂಪನಿಗಳು ಹೊಸ ಷೇರುಗಳ ಮಾರಾಟಕ್ಕೆ ಈಗ ಬಂಡವಾಳ ಪೇಟೆಯ ನಿಯಂತ್ರಕ ಸಂಸ್ಥೆಗೆ ಅರ್ಜಿ ಸಲ್ಲಿಸಿದರೂ, ಷೇರು ಪೇಟೆಗೆ ಬದಲು ಕಾಲಾವಕಾಶ ಬೇಕು. ಕೆಲವು ತಿಂಗಳಾದರೂ ಬೇಕೇ ಬೇಕಾಗುತ್ತದೆ. ಆ ಪ್ರಕ್ರಿಯೆಯೇ ಹಾಗೆ. ಅಲ್ಲಿಯವರೆಗೂ ಪೇಟೆಯ ಜನ ಹಳೆ ಷೇರುಪೇಟೆಯ ವ್ಯವಹಾರದಲ್ಲೇ ಮುಳುಗಿರಬೇಕು. ಹಿಂದೆ ಪ್ರಕಟಿಸಿದ್ದ ಕೆಲವು ಷೇರುಗಳು ಈಗ 'ಫಾಲೋ ಆನ್‌' ರೂಪದಲ್ಲಿ ಪೇಟೆಗೆ ಬರಲೂಬಹುದು. ಉಳಿದಂತೆ ವ್ಯವಹಾರ ಖಾಸಗಿ ಬಂಡವಾಳ ಕಂಪನಿಗಳ ಮೂಲಕವೇ ನಡೆಯಬೇಕು.
ಪ್ರಾಯಶಃ ವಿತ್ತೀಯ ಕಂಪನಿಗಳು, ಸರ್ಕಾರಿ ಬ್ಯಾಂಕ್‌ಗಳ ಷೇರುಗಳ ಪೇಟೆಗೆ ಬಂದರೂ ಬರಬಹುದು. ಬ್ಯಾಂಕಿಂಗ್ ಸಂಸ್ಥೆಗಳ ಷೇರುಗಳಿಗೆ ಶುಕ್ರದೆಸೆ ಆರಂಭದ ಲಕ್ಷಣಗಳೂ ಕಂಡುಬರುತ್ತಿವೆ.
ಅನುಭವಸ್ಥರಿಗೆ ನೌಕರಿ
ಷೇರು ಬಜಾರಿನಲ್ಲಿ ಚಟುವಟಿಕೆ ಆರಂಭವಾಗುತ್ತಿದ್ದಂತೆಯೇ, ದಲಾಲರ ಕಾರ್ಯಾಲಯಗಳಲ್ಲಿ ಅನುಭವಸ್ಥ ನೌಕರರ ಅಗತ್ಯ ಕಂಡುಬಂದಿದೆ. ಕೆಲವು ದಲಾಲ ಸಂಸ್ಥೆಗಳು ಮೇ ಹದಿನಾರರಿಂದಲೇ ಉತ್ತಮ ಪ್ರತಿಭಾವಂತ ನೌಕರಿಗಾಗಿ ಹುಡುಕುತ್ತಿವೆ.
ಸುಮಾರು ಆರು ವರ್ಷ (2008ರ ಅನಂತರ) ಬೀಗಮುದ್ರೆ ಹಾಕಿದ್ದ ಕೆಲವು ಸಂಸ್ಥೆಗಳು ಈಗ ಚುರುಕಾಗುತ್ತಿವೆ. ಅಷ್ಟೇ ಅಲ್ಲ ಷೇರುಪೇಟೆಯ ವ್ಯವಹಾರದಲ್ಲಿ, ಅಪೇಕ್ಷೆ ಪಡುವವರಿಗೆ ವಿಶೇಷ ಸಲಹೆಗಳನ್ನು ನೀಡಬಲ್ಲ ಸಲಹೆಗಾರರಿಗೂ ಈಗ ಬೇಡಿಕೆ ಬರಬಹುದು. ಕಳೆದು ಹೋಗಿದ್ದ ಉದ್ಯೋಗದ ಅವಕಾಶಗಳು ಮತ್ತೆ ಸಿಗಲಿವೆ.
ಈಗಾಗಲೇ ಕೆಲವು ಹಿರಿಯ ಕಸುಬುದಾರರು ತಮ್ಮ ಹಳೇ ಷೇರುಗಳ ದಾಖಲೆಗಳ ಪುಟವನ್ನು ತಿರುವಿ ಹಾಕುತ್ತಿದ್ದಾರೆ. ಇಂಥ ಚಟುವಟಿಕೆ ಒಂದು ಹಂತಕ್ಕೆ ಬರಲು ಅರುಣ್ ಜೇಟ್ಲಿ ಅವರ ಚೊಚ್ಚಲ ಬಜೆಟ್ ಮಂಡನೆ ಆಗಬೇಕು. ಅದೇನೂ ದೂರವಿಲ್ಲ.
ಔಷಧಗಳ ಬೆಲೆ ವಿಚಾರ
ಔಷಧಗಳ ಅಂಗಡಿಗೆ ಆಗಾಗ್ಗೆ ಹೋಗಲೇಬೇಕಾದವರ ಅನುಭವದಲ್ಲಿ ಹೆಚ್ಚು ಕಡಿಮೆ ಪ್ರತಿ ತಿಂಗಳೂ ಬೆಲೆಗಳ ಏರಿಕೆ ಕೈ ಕಚ್ಚುತ್ತಿದೆ. ಗ್ರಾಹಕರಿಗೆ ಯಾವುದೇ ಮುನ್ಸೂಚನೆ ಕೊಡದೇ, ಬೆಲೆಗಳ ಏರಿಕೆಗೆ ಯಾವುದೇ ಕಾರಣವನ್ನೂ ನೀಡದೇ ಕೆಲವು ಅಗತ್ಯ ಔಷಧಗಳ ಬೆಲೆ ಶೇ. 20ರಿಂದ 30ರ ವರೆಗೂ ಹೆಚ್ಚಿದೆ.
ಈ ವಿಷಯವನ್ನು ಗಮನಿಸಿರುವ ನ್ಯಾಷನಲ್ ಫಾರ್ಮ್ ಪ್ರೈಸಿಂಗ್ ಅಥಾರಿಟಿ (ಬೆಲೆ ನಿಗದಿ ಪ್ರಾಧಿಕಾರ) ರಾಜ್ಯಗಳಿಂದ ಸೂಕ್ತ ಸಲಹೆಗಳನ್ನು ಕೇಳಿದೆ. ಸಹಜವಾಗಿಯೇ ರಾಜ್ಯ ಸರ್ಕಾರಗಳ ಸಲಹೆಗಳು ಔಷಧ ತಯಾರಿಕಾ ಕಂಪನಿಗಳಿಗೆ ಇಷ್ಟವಾಗುವುದಿಲ್ಲ. ಔಷಧಿಗಳ ಬೆಲೆ ನಿಯಂತ್ರಣ, ನಿಗದಿಯ ವಿವಾದ ಮತ್ತೆ ತಲೆ ಎತ್ತುವಂತೆ ಕಂಡುಬರುತ್ತಿದೆ.

ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.