ಬಜೆಟ್ ಯೋಜನೆ

ಹತ್ತು ವರ್ಷಗಳ ಬಳಿಕ ಹೊಸ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಲವು ವಿಚಾರಗಳಿಂದ ಕಂಗೆಟ್ಟಿರುವ ದೇಶದ ಅರ್ಥವ್ಯವಸ್ಥೆ ಹೊಸ ನಿರ್ಧಾರಗಳತ್ತ ಎದುರು ನೋಡುತ್ತಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಮಂಡಿಸಲಿರುವ 2014-15ರ ಮುಂಗಡ ಪತ್ರದಲ್ಲಿ ಹಲವು ವಿಚಾರಗಳು ಘೋಷಣೆಯಾಗಲಿವೆ. ಕುಸಿದಿರುವ ಆರ್ಥಿಕತೆ, ಹಣದುಬ್ಬರ ಆರ್ಥಿಕ ಬೆಳವಣಿಗೆಗೆ ಕೊಡಲಿಯೇಟು ನೀಡುತ್ತಿವೆ. ವಿಶೇಷವಾಗಿ ಸಬ್ಸಿಡಿ ವಿಚಾರ ಕೇಂದ್ರವನ್ನು ಚಿಂತೆಗೀಡು ಮಾಡಿರುವ ವಿಚಾರ. ಹೇಳಿ ಕೇಳಿ ಪೆಟ್ರೋಲ್ ದರ ನಿಗದಿ ವಿಚಾರ ಕೇಂದ್ರ ಸರ್ಕಾರ ವ್ಯಾಪ್ತಿಯಿಂದ ಹೊರತಾಗಿದೆ. ಈಗ ಡೀಸೆಲ್ ಮತ್ತು ಅಡುಗೆ ಅನಿಲಕ್ಕೆ ನೀಡಲಾಗುತ್ತಿರುವ ಸಬ್ಸಿಡಿಯೂ ಕೇಂದ್ರಕ್ಕೆ ಹೊರೆಯಾಗುತ್ತಿದೆ.
12 ಅಲ್ಲ 9?
ಯುಪಿಎ ಸರ್ಕಾರ ತನ್ನ ಅಧಿಕಾರದ ಅವಧಿಯ ಕೊನೆಯ ದಿನಗಳಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಅನ್ನು 9ರಿಂದ 12ಕ್ಕೆ ಹೆಚ್ಚಿಸಿತ್ತು. ಆದರೆ ಈಗ ಮೋದಿ ನೇತೃತ್ವದ ಸರ್ಕಾರ ಅದನ್ನು 9ಕ್ಕೆ ಇಳಿಸಲು ಚಿಂತನೆ ನಡೆಸುತ್ತಿದೆ. ಅದಕ್ಕೆ ಅದು ಕೊಡುವ ಕಾರಣವಿಷ್ಟು. ಪ್ರತಿ ಕುಟುಂಬಕ್ಕೆ 12 ಸಬ್ಸಿಡಿ ಸಹಿತ ಸಿಲಿಂಡರ್ ನೀಡುವುದರಿಂದ ಕೇಂದ್ರದ ಬೊಕ್ಕಸಕ್ಕೆ ಭಾರ ಹೆಚ್ಚುತ್ತಿದೆ. ಆದರೆ 12 ಇರುವುದನ್ನು 9ಕ್ಕೆ ಇಳಿಸಿದರೆ ಕೇಂದ್ರದ ಮೇಲೆ ಬೀಳುವ ಸಬ್ಸಿಡಿ ಭಾರ ತಗ್ಗುತ್ತದೆ. ಜತೆಗೆ ಅದು ಎಲ್ಲರಿಗೂ ಹಂಚಿ ಹೋಗುತ್ತದೆ. ಹೀಗಾಗಿ ಅದರ ಲಾಭ ಎಲ್ಲರಿಗೂ ಸಿಗುತ್ತದೆ ಎನ್ನುವುದು ಸರ್ಕಾರದ ವಾದ.
ವಿದೇಶಿ ಹೂಡಿಕೆಗೆ ಅವಕಾಶ
ಮೂಲ ಸೌಕರ್ಯ, ರಕ್ಷಣೆ, ವಿಮೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡುವ ಬಗ್ಗೆ ಚಿಂತನೆಗಳಿವೆ. ರೇಲ್ವೆ ಇಲಾಖೆಯಲ್ಲಿ ವಿಶೇಷವಾಗಿ ಬುಲೆಟ್ ಟ್ರೈನ್ ಮತ್ತು ಸರಕು ಸಾಗಣೆ ಬಗ್ಗೆ ವಿಶೇಷ ಮಾರ್ಗ ನಿರ್ಮಿಸುವ ಬಗ್ಗೆ ಮೋದಿ ಸರ್ಕಾರ ವಿದೇಶಿ ಹೂಡಿಕೆ ನಿರೀಕ್ಷಿಸುತ್ತಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ....
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ ತರಬೇಕು ಎನ್ನುವುದು ಹಿಂದಿನ ಯುಪಿಎ ಸರ್ಕಾರದ ಕನಸೂ ಆಗಿತ್ತು. ಆದರೆ ಮೈತ್ರಿಕೂಟ ರಾಜಕಾರಣ ಅದಕ್ಕೆ ಅವಕಾಶ ಕೊಡಲಿಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಅನುತ್ಪಾದಕ ಆಸ್ತಿ (ನಾನ್ ಪರ್ಫಾಮಿಂಗ್ ಅಸೆಟ್) ರು. 2.8 ಲಕ್ಷ ಕೋಟಿ ಇದೆ. ಅದನ್ನು ತಗ್ಗಿಸಲು ಕೇಂದ್ರ ಸರ್ಕಾರ ಹೆಣಗಾಡಬೇಕಾಗಿದೆ.
ವಿಮೆಯಲ್ಲಿ ಯಾಕೆ?
ಭಾರತೀಯ ವಿಮಾ ಕ್ಷೇತ್ರದಲ್ಲಿ ಕೆಲ ವರ್ಷಗಳ ಹಿಂದಿನವರೆಗೆ ಭಾರತೀಯ ಜೀವ ವಿಮಾ ನಿಗಮ ಮಾತ್ರ ಇತ್ತು. ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಿದರೂ ತೀರಾ ಇತ್ತೀಚಿನ ವರ್ಷಗಳ ವರೆಗೂ ಖಾಸಗಿ ವಿಮಾ ಸಂಸ್ಥೆಗಳ ಸೇವೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿರಲಿಲ್ಲ. ವಿದೇಶಿ ಹೂಡಿಕೆಗೆ ಅನುವು ಮಾಡಿಕೊಳ್ಳುವುದರಿಂದ ವಿಮಾ ಗ್ರಾಹಕರಿಗೆ ಹೆಚ್ಚಿನ ಪ್ರಮಾಣದ ವಿಮೆ ಉತ್ಪನ್ನಗಳು ಲಭ್ಯವಾಗಲಿವೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎನ್ನುವುದು ಹಣಕಾಸು ಕ್ಷೇತ್ರದ ಪಂಡಿತರ ಅಂಬೋಣ.
ಉದ್ಯೋಗ ಸೃಷ್ಟಿ
ಪ್ರತಿ ವರ್ಷ 1.20 ಕೋಟಿ ಮಂದಿ ಯುವಕರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಕ್ಕಾಗಿ ಸೇರ್ಪಡೆಯಾಗುತ್ತಾರೆ. ಅವರಿಗೆ ಸೂಕ್ತ ಉದ್ಯೋಗ ಸೃಷ್ಟಿಯ ಕೆಲಸವಾಗಬೇಕಾಗಿದೆ. ಇದಲ್ಲದೆ ಬಹು ಚರ್ಚಿತ ಬಹುಬ್ರಾಂಡ್ ಚಿಲ್ಲರೆ ಕ್ಷೇತ್ರದಲ್ಲಿ ಶೇ.100 ಎಫ್‌ಡಿಐ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ.
ಚೇತರಿಕೆ ಮುನ್ಸೂಚನೆ
ಹೊಸ ಸರ್ಕಾರದ ನಿರ್ಧಾರಗಳು ಉತ್ತಮವಾಗಿವೆ ಎನ್ನುವುದಕ್ಕೆ ಪೂರ್ವ ಸೂಚನೆಯಾಗಿ ಷೇರುಪೇಟೆ ಸಂವೇದಿ ಸೂಚ್ಯಂಕ ಉತ್ತಮವಾಗಿಯೇ ಸ್ಪಂದಿಸುತ್ತಿದೆ. ಕಳೆದ ಶುಕ್ರವಾರ ಮೇ 16ರ ಬಳಿಕ ಎರಡನೇ ಬಾರಿಗೆ 25 ಸಾವಿರವನ್ನು ದಾಟಿದ್ದು ಗಮನಾರ್ಹ. ಅದೇ ರೀತಿ ಚಿನ್ನ- ಬೆಳ್ಳಿ ಬೆಲೆ ಕೂಡ ಇಳಿದಿದೆ.
15
ಕೋಟಿ ಜನರಿಗೆ ಅಂದರೆ ಶೇ.97 ಮಂದಿಗೆ 12 ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಸಿಗುತ್ತಿದೆ.
89.2
ಶೇಕಡಾ ಮಂದಿ ಮಾತ್ರ 9 ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಸಿಕ್ಕಿದೆ.
1,15,000
ಕೋಟಿ ರು. ಕೇಂದ್ರ ಸರ್ಕಾರದ ಮೇಲೆ ಇರುವ ಆಹಾರ ಸಬ್ಸಿಡಿ ಮೊತ್ತ.
65,000
ಕೋಟಿ ರು. 2014-15 ಹಣಕಾಸು ವರ್ಷಕ್ಕೆ ಇರುವ ಆಹಾರ ಸಬ್ಸಿಡಿ ಮೊತ್ತ.
26
ಶೇಕಡಾ ಸದ್ಯ ವಿಮಾ ಕ್ಷೇತ್ರದಲ್ಲಿರುವ ಎಫ್‌ಡಿಐ.
ಬೋಲ್ಡ್ ಡಿಸಿಷನ್ ಇರಲಿ ಆದರೆ...
ಕೈಗಾರಿಕಾ ಕ್ಷೇತ್ರ ಮತ್ತು ಇತರ ಉದ್ದಿಮೆಗಳಿಂದ ಆಗಾಗ ಕೇಳಿಬರುತ್ತಿರುವ ಮಾತೇ ಇದು. 1991ರಲ್ಲಿ ನಮ್ಮ ಅರ್ಥ ವ್ಯವಸ್ಥೆ ಉದಾರೀಕರಣ ವ್ಯವಸ್ಥೆಗೆ ತೆರೆದುಕೊಂಡ ಬಳಿಕ ಕೈಗೊಂಡದ್ದೆಲ್ಲ ಕಠಿಣ ನಿರ್ಧಾರವೇ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಮ್ಮ ದೇಶಿಯ ಹಿತಾಸಕ್ತಿಗೆ ಮಾರಕವಾಗಬಾರದು. ವಿಶೇಷವಾಗಿ ದೇಶದ ಕೃಷಿ ಕ್ಷೇತ್ರಕ್ಕೆ ಉದಾರೀಕರಣದಿಂದಾಗಿ ಭಾರಿ ಪೆಟ್ಟು ಬಿದ್ದಿದೆ. ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಲಾಭದಾಯಕ ಅಲ್ಲ ಎಂಬ ನಿರ್ಣಯಕ್ಕೆ ಬೆಳೆಗಾರರು ಬಂದಂತಿದೆ. ಮೋದಿ ಸರ್ಕಾರ ಕೃಷಿ ಕ್ಷೇತ್ರವನ್ನೂ ಕಡೆಗಣಿಸದೆ ಅದೂ ಲಾಭದಾಯಕವಾಗಿಸಲು ಹೆಚ್ಚಿನ ಕ್ರಮ ಕೈಗೊಳ್ಳಬೇಕಾದ ಆದ್ಯತೆಯೂ ಇದೆ. ಹೀಗಾಗಿ, ಬೋಲ್ಡ್ ಡಿಸಿಷನ್ (ಕಠಿಣ ನಿರ್ಧಾರ) ದೇಶಿಯ ವ್ಯವಸ್ಥೆಯ ಕೊರಳು ಕೊಯ್ಯುವಂತಾಗಬಾರದು.
= ಸದಾಶಿವ ಕೆ
.khandige29@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


