ವಾಣಿಜ್ಯ

ಮೈದಾಸ್ ಟಚ್‌ನ ಜೇಟ್ಲಿ

ಮೈದಾಸ್ ಟಚ್‌ನ ಜೇಟ್ಲಿ
Published On :

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಅರುಣ ಜೇಟ್ಲಿ ಅವರು ವಿತ್ತಮಂತ್ರಿಯಾಗುವುದು ಖಚಿತವಾಗಿತ್ತು. ಈಗ ಅವರು ಅಮೃತಸರದಲ್ಲಿ ಚುನಾವಣೆಯಲ್ಲಿ ಸೋತಿದ್ದರೂ, ರಾಜ್ಯಸಭೆ ಸದಸ್ಯರಾಗಿ ಮುಂದುವರಿದಿದ್ದಾರೆ. ಅವರೇ ವಿತ್ತಮಂತ್ರಿಯೂ ಆಗಿದ್ದಾರೆ.
ಇದೇ ಅವಕಾಶವನ್ನು ಕಾಯುತ್ತಿದ್ದ ವಾಣಿಜ್ಯೋದ್ಯಮಿಗಳು, ಬಂಡವಾಳ ಪೇಟೆಯ ವ್ಯವಹಾರಸ್ಥರು ಅವರ ಮುಂದೆ ತಮ್ಮ ತುರ್ತು ಮನವಿಗಳನ್ನು ಸಲ್ಲಿಸಿದ್ದಾರೆ. ಅದನ್ನೆಲ್ಲ ಪರಿಶೀಲಿಸಿ ಸರ್ಕಾರ ನಿರ್ಧಾರ ಪ್ರಕಟವಾಗುವುದರಲ್ಲಿ ವಿಳಂಬವಾದರೆ ಈಗ ಮೂಡಿರುವ ಉತ್ಸಾಹ ಕುಗ್ಗಿ ಹೋಗುತ್ತದೆ.
ಒಂದು ಕಾಲದಲ್ಲಿ ಅರುಣ ಜೇಟ್ಲಿ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತಂತೆ. ಈಗಲೂ ಅವರ ಕೈಗಳಲ್ಲಿ ಆ ಶಕ್ತಿ ಉಳಿದುಕೊಂಡಿದೆಯೇ ಎನ್ನುವುದು ಯಕ್ಷಪ್ರಶ್ನೆ. ಪೇಟೆಯ ಸೂಚ್ಯಂಕಗಳ ಮಟ್ಟ ಹಾಗೂ ಬಂಡವಾಳವನ್ನು ಪರಿಣಾಮಕಾರಿಯಾಗಿ ಬಳಸುವುದೇ ವಿತ್ತಮಂತ್ರಿಯ ದಕ್ಷತೆಗೆ ಅಳತೆಗೋಲು. ಅರುಣ ಜೇಟ್ಲಿ ಈಗ ಆ ಹಾದಿಯಲ್ಲಿ ಸಾಗುತ್ತಿರುವಂತಿದೆ.
ಉದಾಹರಣೆಗೆ ಅವರ ಮೊಟ್ಟಮೊದಲ ಹೇಳಿಕೆಯೇ ಪೇಟೆಯಲ್ಲಿ ಹೊಸ ಷೇರುಗಳ ಮಾರಾಟದ 'ಬರವನ್ನು' ನೀಗಿಸುವುದೇ ಆಗಿತ್ತು, ಈಗ ಹೊಸ ಕಂಪೆನಿಗಳಿಗೆ ಧೈರ್ಯ ಬಂದಿರುವಂತಿದೆ. ಪೇಟೆಯಲ್ಲಿ ಇನ್ನು ಕೆಲವೇ ವಾರಗಳಲ್ಲಿ ಹೊಸ ಷೇರುಗಳ ಭರಾಟೆಯನ್ನು ನಿರೀಕ್ಷಿಸಬಹುದು.
ಆದರೆ ಈಗ ತತ್‌ಕ್ಷಣದಲ್ಲಿ ಮ್ಯೂಚುಯಲ್ ಫಂಡ್‌ಗಳು, ಹೊಸ ಫಂಡ್ ಆಫರ್‌ಗಳನ್ನು ಬಿಡುಗಡೆ ಮಾಡಲು ಆ ಸಂಸ್ಥೆಯ ಕನಿಷ್ಠ ಬಂಡವಾಳ 50 ಕೋಟಿ ರುಪಾಯಿಗಳಷ್ಟಾದರೂ ಇರಬೇಕು ಎನ್ನುವ ನಿಯಮವನ್ನು ಸೆಬಿ ಜಾರಿಗೆ ತಂದಿದೆ. ಪೇಟೆಯಲ್ಲಿನ ಹದಿನಾರು ಪ್ರತಿಷ್ಠಿತ ಫಂಡ್‌ಗಳ ಯೋಜನೆಗಳಿಗೆ ಈ ನಿಯಂತ್ರಣ ನುಂಗಲಾರದ ತುತ್ತು. ಈ ಪರಿಸ್ಥಿತಿಯನ್ನು ಜೇಟ್ಲಿ ಅವರೇ ನಿಭಾಯಿಸಬೇಕು.
ಜೇಟ್ಲಿ ಉದ್ದೇಶ
ಅರುಣ ಜೇಟ್ಲಿ ಈಗಾಗಲೇ ಪ್ರಕಟಿಸಿರುವ ಉದ್ದೇಶಗಳು ಗಮನಾರ್ಹ. ಎಲ್ಲ ಬಗೆಯ ಬಂಡವಾಳ ಹೂಡಿಕೆದಾರರನ್ನು ಮುಕ್ತವಾಗಿ ಸ್ವಾಗತಿಸುವುದು. ಸದ್ಯದಲ್ಲಿ ಜಾಗತಿಕ ಪೇಟೆಯಲ್ಲಿ ಭಾರತೀಯ ಬಂಡವಾಳ ಪೇಟೆಯ ವಿಶ್ವಾಸಾರ್ಹತೆ ಬಲವಾಗಿಲ್ಲ. ಮೂಲಸೌಲಭ್ಯ, ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಉತ್ತೇಜನ ನೀಡಿ, ಅದರ ಮೂಲಕ ಔದ್ಯಮಿಕ ವಲಯದ ಪ್ರಗತಿಯ ವೇಗವನ್ನು ಹೆಚ್ಚಿಸುವುದರಿಂದ ಈಗಿನ ಕೊರತೆಯನ್ನು ನೀಗಿಸಬಹುದು.
ಪೇಟೆಯಲ್ಲಿ ಷೇರು ಬೇಕು
ಚೈತನ್ಯ ಪೂರ್ಣವಾದ ಬಂಡವಾಳ ಪೇಟೆಗೆ ಬೇಕಾಗಿರುವುದು ಪೇಟೆಯಲ್ಲಿ ಚಲಾವಣೆಯಾಗುವ ಷೇರುಗಳು. ಬೃಹತ್ ಉದ್ಯಮಗಳು ತಮ್ಮ ರಾಜಾ ಷೇರುಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡರೆ, ಪೇಟೆಯಲ್ಲಿ ಷೇರುಗಳೇ ಲಭ್ಯವಿಲ್ಲದಂತೆ ಆಗಬಹುದು. ಅದಕ್ಕೇ ಹೊಸ ನಿಯಮದಂತೆ ಖಾಸಗಿ ಕಂಪನಿಗಳ ಷೇರುಗಳಲ್ಲಿ ಕನಿಷ್ಠ ಪಕ್ಷ ಕಾಲು ಭಾಗದಷ್ಟು ಷೇರು ಮುಕ್ತ ಪೇಟೆಯಲ್ಲಿರಬೇಕು.
ಈಗ ಇದೇ ನಿಯಮವನ್ನು ಸರ್ಕಾರಿ ವಲಯದ ಕಂಪೆನಿಗಳಿಗೂ ಅನ್ವಯಿಸುವ ಚಿಂತನೆ ಆರಂಭವಾಗಿದೆ. ಆ ಚಿಂತನೆ ಕಾರ್ಯಗತವಾದರೆ ಸರ್ಕಾರಿ ಕಂಪೆನಿಗಳ, ಸುಮಾರು 60,000 ಕೋಟಿ ರೂಪಾಯಿಗಳಷ್ಟು ಮೌಲ್ಯದ ಷೇರುಗಳು ಮುಕ್ತ ಪೇಟೆಗೆ ಬರಬೇಕಾಗುವುದು, ಇದೇನೂ ದಿಢೀರ್ ಕ್ರಮವಲ್ಲ, ಮೂರು ವರ್ಷಗಳಲ್ಲಿ ಆಗಬೇಕಾದ ಪ್ರಕ್ರಿಯೆ. ಸರ್ಕಾರ ಕೋಲ್ ಇಂಡಿಯಾ ಸಂಸ್ಥೆಯಿಂದಲೇ ಸುಮಾರು 36000 ಕೋಟಿ ರುಪಾಯಿಗಳ ಮೌಲ್ಯದ ಷೇರು ಮಾರಬೇಕು. ವ್ಯಾಪಾರ ಇದಕ್ಕಿಂತ ಒಳ್ಳೆಯ ಅವಕಾಶ ಬೇಕಾ?

ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.