ಶುಭದಿನ ಬರುತೈತೆ: ಯಾವಾಗ? ಯಾರಿಗೆ ?

ನರೇಂದ್ರ ಮೋದಿ ಪ್ರಧಾನಿಯಾಗುವುದು ಖಚಿತವಾದ ಕೂಡಲೇ ಸಂಘ ಪರಿವಾರದ ಮೊಳಗಿಸಿದ ಕೂಗು; 'ಶುಭದಿನ ಬರುತೈತೆ'. ಆದರೆ ಆ ಘೋಷಣೆಯಲ್ಲಿ ಯಾವಾಗ ಎನ್ನುವುದನ್ನು ಹೇಳಲಿಲ್ಲ. ಅದು ಅವರಿಗೂ ಗೊತ್ತಿರಲಿಲ್ಲ!
ಪ್ರಧಾನಿಯಾಗಿ, ನರೇಂದ್ರ ಮೋದಿ ಪ್ರತಿನಿತ್ಯ ಒಂದಲ್ಲ ಒಂದು ಸಭೆ, ಸಮಾರಂಭದಲ್ಲಿ ಮಾತಾಡಿದ್ದಾರೆ, ನಿತ್ಯ ಚುಟುಕು ಪ್ರಮಾಣದ ನೀತಿ ನಿರೂಪಣೆ ನಡೆದಿದೆ. ಆದರೆ ಎಲ್ಲವೂ ಬಾಯಿ ಮಾತಿನಲ್ಲೇ ಉಳಿದುಕೊಂಡಿದೆ.
ಪ್ರಖ್ಯಾತ ಆರ್ಥಿಕ ವಿಚಾರಗಳ ಅಂಕಣಕಾರ ಸ್ವಾಮಿನಾಥನ್ ಎಸ್. ಅಯ್ಯಂಗಾರ್, ತಮ್ಮ ಬಜೆಟ್ ದಿನದ ಅಂಕಣಕ್ಕೆ ಕೊಟ್ಟಿದ್ದ ಶೀರ್ಷಿಕೆ: ಮಾತು- ಮಾತು- ಮಾತು ಸಾಕಿನ್ನು ಮಾತು ಕೆಲಸ ಮಾಡಿ.
ಬಜೆಟ್ ಪೂರ್ವ ಆರ್ಥಿಕ ಪರಾಮರ್ಶೆ, ಬಜೆಟ್ ಮಂಡನೆಗೆಂದೇ ಸಿದ್ಧಪಡಿಸಿದ್ದ ದಾಖಲೆಗಳ ಪರಿಶೀಲನೆಯ ಅನಂತರ ಪೇಟೆಯಲ್ಲಿ ಏಕ್‌ದಮ್ ಮುಂಬೈ ಸ್ಟಾಕ್ ಎಕ್ಸ್‌ಛೇಂಜ್‌ನ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ದಿಢೀರನೆ ಎರಡು-ಮೂರು ದಿನಗಳಲ್ಲಿ ಸುಮಾರು 600 ಅಂಶಗಳು ಕುಸಿದವು.
ಅದೇನೂ ಅಪಾಯಕಾರಿ ಸುದ್ದಿಯಲ್ಲ. ಇದ್ದಕ್ಕಿದ್ದಂತೆ ಷೇರು ಪೇಟೆಯಲ್ಲಿ ವಿಪರೀತ ಚಟುವಟಿಕೆ ಕಂಡುಬಂದಾಗ, ಅನೇಕ ಕಂಪನಿಗಳ ಷೇರುಗಳ ಬೆಲೆ ವಿಪರೀತ ಏರಿತ್ತು. ಲಾಭದ ಆಸೆ ಜನ ಮುಗಿಬಿದ್ದು ಷೇರು ಮಾರಿದರು. ಏರಿದ್ದ ಬೆಲೆ ಬಿತ್ತು. ಅದು ನಿರೀಕ್ಷಿತವೇ.
ಆದರೂ ಸೆನ್ಸೆಕ್ಸ್ ಆರೋಗ್ಯಕರವಾದ 25000ದ ಆಜೂಬಾಜೂ ಇದೆ. ರೇಲ್ವೆ ಬಜೆಟ್‌ನಲ್ಲಿ ಖಾಸಗಿ- ವಿದೇಶೀ ಬಂಡವಾಳಕ್ಕೆ ನೀಡಿರುವ ಒತ್ತನ್ನು ಗಮನಿಸಿದರೆ, ಬಜೆಟ್‌ನಲ್ಲಿ ಗುರುವಾರ ಜೇಟ್ಲಿ ಅವರು ಯಾವ ಗುಳಿಗೆ ಕೊಡ್ತಾರೋ ಎನ್ನುವ ಚಿಂತೆ ಪೇಟೆಯನ್ನು ಕಾಡಿತ್ತು. ಆದರೆ ಹಾಗೇನೂ ಆಗಲಿಲ್ಲ. ಬಜೆಟ್‌ನಲ್ಲಿ ಅಂಥ ಹೆದರಿಕೆಗೆ ಕಾರಣವಿರಲಿಲ್ಲ.
ಹೊಸ ಷೇರುಗಳ ಭರಾಟೆ ಸಾಧ್ಯ
ಅನೇಕರು ಈಗ ತಮ್ಮಲ್ಲಿದ್ದ ಷೇರುಗಳನ್ನು ಮಾರಿ ಅದನ್ನು ನಗದಾಗಿ ಪರಿವರ್ತಿಸಿದ ಹಿನ್ನೆಲೆಯನ್ನು ಗಮನಿಸಬೇಕು. ಬಜೆಟ್ ಅನಂತರದ ವಾರಗಳಲ್ಲಿ ಬೆಲೆಗಳು ಏರಿದಾಗ ಹೊಸ ಷೇರು ಕೊಳ್ಳಲು ಹಣಕ್ಕಾಗಿ ಪರದಾಡುವ ಸ್ಥಿತಿ ಬರಬಾರದೆನ್ನುವುದೇ ಪೇಟೆಯ ಜನರ ಆಸೆ.
ಬಲ್ಲವರ ಪ್ರಕಾರ ಸರ್ಕಾರಿ ಕಂಪನಿಗಳ ಷೇರು ಮಾರಿ ಸುಮಾರು 62,000 ಕೋಟಿ ರುಪಾಯಿಗಳನ್ನು ಸರ್ಕಾರ ಬಂಡವಾಳ ಪೇಟೆಯಿಂದ ಪ್ರತ್ಯಕ್ಷವಾಗಿ- ಪರೋಕ್ಷವಾಗಿ ಕದಿಯಬೇಕಾಗಿದೆ. ಅದು ಅನಿವಾರ್ಯ. ಆದರೆ ಈ ಪ್ರಕ್ರಿಯೆಯನ್ನು ದಿಢೀರನೇ ಆರಂಭಿಸುವ ಉದ್ದೇಶ ಸರ್ಕಾರಕ್ಕ ಇಲ್ಲ, ವ್ಯವಹಾರಸ್ಥರಲ್ಲೂ ಇಲ್ಲ. ಕನಿಷ್ಠ ಮೂರು ನಾಲ್ಕು ತಿಂಗಳಾದರೂ ಕಾಯಲೇ ಬೇಕಾಗುತ್ತದೆ. ಒಂದೇ ಬಾರಿಗೆ ಷೇರುಗಳ ಗುಡ್ಡಗಳನ್ನು ಪೇಟೆಗೆ ತರುವ ಉದ್ದೇಶವಿಲ್ಲ.
ಮ್ಯೂಚುವಲ್ ಫಂಡ್‌ಗಳು
ಕಳೆದ ವರ್ಷದ ಲೆಕ್ಕದಲ್ಲಿ ಎಲ್ಲ ಪ್ರಮುಖ ಮ್ಯೂಚುವಲ್ ಫಂಡ್‌ಗಳೂ ಚೆನ್ನಾಗಿ ಕೆಲಸ ಮಾಡಿವೆ. ಇಲ್ಲಿ ಗಮನಿಸ ಬೇಕಾದ ವಿಚಾರವೆಂದರೆ, ಸ್ವಲ್ಪ ಕೆಟ್ಟಕಾಲದ ಕರಿಮೋಡಗಳು ಕಂಡ ಕೂಡಲೇ ಪೇಟೆಯಿಂದ ಪಲಾಯನ ಮಾಡಿದರೆ ನಷ್ಟ ನಿಮ್ಮದೇ. ಈಗ ವೈಯುಕ್ತಿಕ ವ್ಯವಹಾರಸ್ಥರು ಹೆಚ್ಚಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹಾಕುತ್ತಿಲ್ಲ. ಅದಕ್ಕೆ ಕಾರಣ ಹಿಂದೆ ಕೈ ಸುಟ್ಟುಕೊಂಡಿದ್ದು. ಈಗ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬರುತ್ತಿದೆ. ನಿಮ್ಮ ಎಚ್ಚರದಲ್ಲಿ ನೀವಿರಿ.
ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


