ವಾಣಿಜ್ಯ

ಡಿಜಿಟಲ್ ಎಸ್‌ಬಿಐ

ಡಿಜಿಟಲ್ ಎಸ್‌ಬಿಐ
Published On :

ದೇಶಿಯ ಬ್ಯಾಂಕಿಂಗ್ ಕ್ಷೇತ್ರದಲ್ಲೀಗ ಒಳ್ಳೇ ದಿನಗಳು ಶುರು!
ಹೊಸ ತಲೆಮಾರಿನ ಜನರಿಗಾಗಿ ಹೊಸ ಪರಿಕಲ್ಪನೆಯ ಬ್ಯಾಂಕ್ ತೆರೆಯುತ್ತಿದೆ. ಈ ಬ್ಯಾಂಕ್‌ಗಳಲ್ಲಿ ಮ್ಯಾನೇಜರ್ ಬೇಕಿಲ್ಲ, ಖಜಾಂಚಿಯೂ ಬೇಕಿಲ್ಲ, ಕ್ಲರ್ಕ್‌ಗಳಂತೂ ಅಗತ್ಯವೇ ಇಲ್ಲ. ಇದು ಡಿಜಿಟಲ್ ಶಾಖೆ. ಇಲ್ಲಿ 10 ನಿಮಿಷದಲ್ಲೇ ಡೆಬಿಟ್ ಕಾರ್ಡ್‌ನೊಂದಿಗೆ ಬ್ಯಾಂಕ್ ಖಾತೆ ತೆರೆಯಲು ಸಾಧ್ಯ!
ಹೌದು, ಇದು ಡಿಜಿಟಲ್ ಜಮಾನ. ದೇಶದ ಬ್ಯಾಂಕಿಂಗ್ ಇತಿಹಾಸದಲ್ಲೇ ಮೊಟ್ಟಮೊದಲು 208 ವರ್ಷಗಳಷ್ಟು ಹಳೆಯದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ತಲೆಮಾರಿನ ತನ್ನ ಹೊಸ ಗ್ರಾಹಕರಿಗಾಗಿ ಈ ಸೌಲಭ್ಯವನ್ನು ನೀಡಲು ಮುಂದಾಗಿದೆ.
ಗ್ರಾಹಕರ ಸಮಯ ಹಾಗೂ ಶ್ರಮವನ್ನು ಉಳಿಸಲು 'ಎಸ್‌ಬಿಐ ಇನ್‌ಟಚ್‌' ಹೆಸರಿನಲ್ಲಿ ದೇಶಾದ್ಯಂತ ಬ್ಯಾಂಕ್ ಇಂಥ ಶಾಖೆ ತೆರೆಯುತ್ತಿದೆ. ಇದರ ಪ್ರಥಮ ಹೆಜ್ಜೆಯಾಗಿ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಈಗಾಗಲೇ 7 ಶಾಖೆ ಉದ್ಘಾಟನೆಗೊಂಡಿದ್ದು, ಗ್ರಾಹಕರಿಗೆ ಸೇವೆ ನೀಡಲಾರಂಭಿಸಿವೆ. ದೆಹಲಿ ಶಾಖೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇತ್ತೀಚೆಗೆ ಚಾಲನೆ ನೀಡಿದ್ದಾರೆ.
ಯುವ ಗ್ರಾಹಕರಿಗಾಗಿ...
ದೇಶದ ಯುವ ಜನತೆಯನ್ನು, ಐಟಿ ಉದ್ಯೋಗಿಗಳನ್ನೇ ಗುರಿಯಾಗಿರಿಸಿ ಎಸ್‌ಬಿಐ ಡಿಜಿಟಲ್ ಶಾಖೆ ತೆರೆಯುತ್ತಿದೆ. ಬಹು ರಾಷ್ಟ್ರೀಯ ಬ್ಯಾಂಕ್‌ಗಳತ್ತ ಮುಖ ಮಾಡಿದ್ದ ಯುವ ಜನತೆಯೀಗ ದೇಶದ ಅತಿ ದೊಡ್ಡ ಅಷ್ಟೇ ಹಳೆಯ ಬ್ಯಾಂಕ್‌ನೆಡೆಗೆ ವಾಲುವಂತೆ ಮಾಡಿದೆ. ತನ್ಮೂಲಕ ಕೇವಲ ಹಿರಿಯ ಗ್ರಾಹಕರ ಪಿಂಚಣಿ ಖಾತೆಯ, ಸರ್ಕಾರಿ ನೌಕರರ ಸಂಬಳದ ಖಾತೆಯ ಬ್ಯಾಂಕ್ ಎಂಬ ಹಣೆಪಟ್ಟಿಯಿಂದಲೂ ಹೊರ ಬರಲಿದೆ. ದೇಶದ ಅರ್ಧದಷ್ಟು ಜನ ಇಂದು 25ರ ಆಸುಪಾಸಿನ ವಯಸ್ಸಿನವರಾಗಿದ್ದು, 2020ರ ವೇಳೆಗೆ ದೇಶದಲ್ಲಿ ಸರಾಸರಿ ಶೇ.29 ಯುವಕರೇ ಆಗಿರುತ್ತಾರೆ. ಇಂಥ ಗ್ರಾಹಕರಿಗೆ ಡಿಜಿಟಲ್ ಶಾಖೆಯಿಂದ ಹೆಚ್ಚು ಪ್ರಯೋಜನ ಪಡೆಯಬಹುದು ಎಂಬುದು ಎಸ್‌ಬಿಐ ಉದ್ದೇಶ. ಎಸ್‌ಬಿಐ ಈಗಾಗಲೇ ದೇಶಾದ್ಯಂತ 13,000 ಬ್ಯಾಂಕ್ ಶಾಖೆ ಹೊಂದಿದ್ದು, ಸರ್ಕಾರಿ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಯಿದೆ.
ಏನಿದು ಡಿಜಿಟಲ್ ಬ್ರ್ಯಾಂಚ್?
ಮೊಬೈಲ್ ಮತ್ತು ಇಂಟರ್‌ನೆಟ್ ಇಂದು ಮನೆಮಾತಾಗಿದ್ದು, ಇವುಗಳ ಮೂಲಕವೇ ಡಿಜಿಟಲ್ ಶಾಖೆ ಕಾರ್ಯಾಚರಿಸುತ್ತದೆ. ಗ್ರಾಹಕರೊಂದಿಗೆ ಸಂವಹನಕ್ಕಾಗಿ ಶಾಖೆಯ ಗೋಡೆಯಲ್ಲಿ ಎಲ್‌ಸಿಡಿ ಮಾನಿಟರ್ ಅಳವಡಿಸಲಾಗುತ್ತದೆ. ಡಿಜಿಟಲ್ ಶಾಖೆಗೆ ಭೇಟಿ ನೀಡಿ ಕೆಲವೇ ಸಮಯದಲ್ಲಿ ಖಾತೆ ತೆರೆಯುವ ವ್ಯವಸ್ಥೆ ಕಲ್ಪಿಸಲಾಗುತ್ತೆ.
ಕಾರ್, ಮನೆ ಮತ್ತು ಶೈಕ್ಷಣಿಕ ಸಾಲವನ್ನು ಈ ಶಾಖೆ ಮೂಲಕ ಅನುಮೋದನೆ ಪಡೆಯಬಹುದು. ಇಷ್ಟಲ್ಲದೇ ಇನ್ಸೂರೆನ್ಸ್, ಮ್ಯೂಚುವಲ್ ಫಂಡ್ ಸೇರಿದಂತೆ ವಿವಿಧ ಹಣಕಾಸು ನಿರ್ವಹಣೆಗೆ ಸಂಬಂಧಿತ ಮಾಹಿತಿ ಹಾಗೂ ಸಲಹೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಶಾಖೆಯಲ್ಲಿ ಪರಿಣತರಿಂದ ಪಡೆಯಬಹುದು.
ಆ್ಯಕ್ಸೆಂಚರ್ ಜತೆ ಒಪ್ಪಂದ
ಎಸ್‌ಬಿಐ ತನ್ನ ಗ್ರಾಹಕರಿಗೆ ಡಿಜಿಟಲ್ ಸೇವೆ ನೀಡಲು ಗ್ಲೋಬಲ್ ಟೆಕ್ನೋಲಜಿ ಸರ್ವಿಸ್ ಕಂಪನಿ ಆ್ಯಕ್ಸೆಂಚರ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಕಂಪನಿ ಬ್ಯಾಂಕ್ ಸಿಬ್ಬಂದಿಗೆ ಈ ಕುರಿತು ತರಬೇತಿ ನೀಡುವುದರಿಂದ ಹಿಡಿದು, ಶಾಖೆಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಡುವಲ್ಲಿ ಸಹಾಯ ಮಾಡುತ್ತದೆ.
ಎಲ್ಲೆಲ್ಲಿ ತೆರೆದಿದೆ?
ದೆಹಲಿಯ ಸೌತ್ ಎಕ್ಸ್‌ಟೆನ್ಷನ್, ಬೆಂಗಳೂರಿನ ಮಂತ್ರಿ ಮಾಲ್ ಹಾಗೂ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ, ಮುಂಬೈನ ಪೊನೆಕ್ಸ್ ಮಾಲ್‌ನಲ್ಲಿ, ಚೆನ್ನೈಯಲ್ಲಿ ಎಕ್ಸ್‌ಪ್ರೆಸ್ ಎವಿನ್ಯೂ, ಅಹ್ಮದಾಬಾದ್‌ನ ಹಿಮಾಲಯ ಮಾಲ್ ಹಾಗೂ ಕೋಲ್ಕತ್ತಾದ ಖಾಸಗಿ ಮಾಲ್‌ಗಳಲ್ಲಿ ಡಿಜಿಟಲ್ ಶಾಖೆ ಈಗಾಗಲೇ ಕಾರ್ಯಾರಂಭಿಸಿವೆ. ವಾರದ ಎಲ್ಲ ದಿನಗಳಲ್ಲಿ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಗ್ರಾಹಕರಿಗೆ ತೆರೆದಿರುತ್ತದೆ.

= ರಾಘವೇಂದ್ರ ಅಗ್ನಿಹೋತ್ರಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.