ಈರುಳ್ಳಿ ಮುಟ್ಟಿದರೆ ಸುಡುತ್ತೆ

ಮಹಾರಾಷ್ಟ್ರದ ಲಾಸಲಗಾಂವ ಈರುಳ್ಳಿ ಮಾರುಕಟ್ಟೆ ದೇಶದ ಅತಿ ದೊಡ್ಡ ಮಾರುಕಟ್ಟೆ. ಇಲ್ಲಿ ಪ್ರತಿವರ್ಷ ಭಾರಿ ಪ್ರಮಾಣದ ವ್ಯವಹಾರ. ಈರುಳ್ಳಿ ಬೆಲೆ ಬಿದ್ದಾಗ ವ್ಯಾಪಾರಸ್ಥರು ವಿದೇಶಗಳತ್ತ ನೋಡುತ್ತಾರೆ. ಆಗ ಸರ್ಕಾರ ರಫ್ತಿಗೆ ಕನಿಷ್ಠ ಬೆಲೆ ನಿಗದಿ ಮಾಡುತ್ತೆ. ರೈತರು ಮಾಲು ಮಾರುವಂತಿಲ್ಲ. ಬೆಲೆ ದುಬಾರಿ ಆಗುತ್ತೆ.
ಅದೇ ರೀತಿ, ಆಂತರಿಕ ಪೇಟೆಯಲ್ಲಿ ಈರುಳ್ಳಿ ಬೆಲೆ ದೆಹಲಿಯಲ್ಲಿ ವಿಪರೀತದ ಮಟ್ಟಕ್ಕೆ ಹೋದರೆ ಸರ್ಕಾರ ಈರುಳ್ಳಿ ಆಮದಿಗೆ ಉತ್ತೇಜನ ಕೊಡುತ್ತದೆ. ಇದ್ಯಾವ ನೀತಿ? ಈ ವ್ಯವಹಾರದಲ್ಲಿ ಮುಕ್ತ ನೀತಿ ಎಲ್ಲಿದೆ? ಈಗ ಲಾಸಲಗಾಂವ ಪೇಟೆಗೆ ಬರುವ ವ್ಯವಹಾರಸ್ಥರು, ರೈತರು ಕೇಳುತ್ತಿರುವ ಪ್ರಶ್ನೆ ಇದು. ಈಗ ಲಾಸಲಗಾಂವದಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 9 ರುಪಾಯಿ. ರೈತರಿಗೆ, ಸರ್ಕಾರ ರಫ್ತಿಗೆ ಸಬ್ಸಿಡಿ ಕೊಡಬೇಕಾದ ಸ್ಥಿತಿ. ಈ ವಿಪರ್ಯಾಸಕ್ಕೆ ಯಾರು ಹೊಣೆ? ಸರ್ಕಾರವೇ. ಬೇರೆ ಯಾರಾದರೂ ಹೇಗೆ ಹೊಣೆಯಾಗ್ತಾರೆ? ಇದೂ ಒಂದು ನೀತಿಯೇ.
ಮಹಾರಾಷ್ಟ್ರದ ಬೃಹತ್ ಕೃಷಿ ಉತ್ಪನ್ನಗಳ ಮಾರಾಟದ ಪೇಟೆಯಲ್ಲಿ ಈಚೆಗೆ ಕಂಡು ಬಂದಿರುವ ಇನ್ನೊಂದು ಪ್ರವೃತ್ತಿ: ಸರ್ಕಾರಿ ನೌಕರರು, ಉಪಾಧ್ಯಾಯರು, ವಕೀಲರು-ವೈದ್ಯರು, (ಬ್ಯಾಂಕಿನ ದೃಷ್ಟಿಯಲ್ಲಿ ಗಟ್ಟಿ ಕುಳ ಎನಿಸಿಕೊಂಡವರು) ತಮ್ಮ ಉಳಿತಾಯ ಹಾಗೂ ಬ್ಯಾಂಕ್ ಸಾಲದಿಂದ ಈರುಳ್ಳಿ, ಸೋಯಾ ಬೀನ್, ಹತ್ತಿಯ ಮೇಲೆ ಬಂಡವಾಳವನ್ನು ಹೂಡಿ, ಅವರವರ ಮನೆಯಲ್ಲೇ ಮಾಲನ್ನು ದಾಸ್ತಾನಿಟ್ಟು, ಬೆಲೆ ಏರಿದಾಗ ಮಾರಿ, ತಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಳ್ಳುವ ತಂತ್ರವನ್ನು ಕಂಡು ಹಿಡಿದಿದ್ದಾರೆ. ಒಬ್ಬ ಸಾಮಾನ್ಯ ಮಾಸ್ತರ ಮೂರೇ ತಿಂಗಳಲ್ಲಿ ನಾಲ್ಕು ಲಕ್ಷ ರುಪಾಯಿಗಳ ಬಂಡವಾಳವನ್ನು ದುಪ್ಪಟ್ಟು ಮಾಡಿಕೊಂಡ ಉದಾಹರಣೆಗಳಿವೆ. ಆದರೆ ಆ ಜನಕ್ಕೆ ಪ್ರಚಾರ ಬೇಡ. ನಿಜ. ಕೃಷಿ ಉತ್ಪನ್ನಗಳು ಹಾಗೂ ಇತರ ಕೆಲವು ವಸ್ತುಗಳಿಗೆ ಸಂಬಂಧಿಸಿದ ಒಂದು ಮಾರಾಟದ ವಿನಿಮಯ ಕೇಂದ್ರ ಅಥವಾ ಎಕ್ಸ್‌ಛೇಂಜ್ ಇದೆ. ಆದರೆ ಅಲ್ಲಿನ ಪಟ್ಟಿಯಲ್ಲಿ ಈರುಳ್ಳಿ ಸೇರಿಲ್ಲ.
ಪ್ರಗತಿಯ ವೇಗ ಸಾಲದು
2012-13, 2013-14ರ ಅಂದಾಜು ಪ್ರಗತಿಯ ವೇಗದ ಅಂಕಿ- ಅಂಶಗಳನ್ನು ಸರ್ಕಾರ ಪ್ರಕಟಿಸಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನ ಹಾಗೂ ಸೇವಾ ಸೌಲಭ್ಯಗಳ ಮೌಲ್ಯದ ಏರಿಕೆಯ ಲೆಕ್ಕದಲ್ಲಿ ವಾರ್ಷಿಕ ಹೆಚ್ಚಳದ ಪ್ರಮಾಣ ಸುಮಾರು ಶೇಕಡಾ 0.1ರಷ್ಟು. ಇದನ್ನೇ ಹೊಗಳುವವರೂ ಇದ್ದಾರೆ. ಆ ವಿಚಾರ ಬೇರೆ. ಆದರೆ ಪ್ರಗತಿಗೆ ದೊಡ್ಡ ಕಾರಣ ಕೃಷಿ ವಲಯದಲ್ಲಿನ ಸಾಧನೆ. ಅದೇನೂ ಶಾಶ್ವತವಲ್ಲವಲ್ಲ. ಔದ್ಯಮಿಕ ಉತ್ಪಾದನೆಯ ಮೌಲ್ಯದಲ್ಲಿ ಏರಿಕೆ ಕಂಡು ಬರುತ್ತಿಲ್ಲ. ಸೇವಾ ಸೌಲಭ್ಯದ ಮೌಲ್ಯವೂ ಏರುತ್ತಿಲ್ಲ. ಇದರಿಂದ ಗ್ರಾಹಕರಿಗೆ ಚಿಲ್ಲರೆ ವ್ಯಾಪಾರದ ಹಂತದಲ್ಲಿನ ಹಣದ ಅತಿ ಪ್ರಸರಣದ ಫಲ ಸಿಕ್ಕಿರಬೇಕು. ಆಹಾರ ಧಾನ್ಯಗಳ ಬೆಲೆಯಲ್ಲಿ ಇಳಿತವೇ ಇದಕ್ಕೆ ಕಾರಣ. ಇದು ತಾತ್ಕಾಲಿಕವೇ ಅಲ್ಲವೇ?
ಕೊನೆ ಮಾತು
ನಿತ್ಯ ಬಳಕೆಯ ವಸ್ತುಗಳನ್ನು (ಖಾದ್ಯ ವಸ್ತುಗಳು, ಗೃಹಕೃತ್ಯಕ್ಕೆ ಅಗತ್ಯವಾದ ವಸ್ತುಗಳು, ಇತ್ಯಾದಿ) ಮಾರಾಟ ಮಾಡುವುದಕ್ಕೆ ಈಗ ಮಾರಾಟದ ಕಂಪೆನಿಗಳು ಬಳಸುತ್ತಿರುವ ಹಲವಾರು ತಂತ್ರಗಳಲ್ಲಿ ಪ್ರತಿಷ್ಠಿತರ (ಅಮಿತಾಭ್ ಬಚ್ಚನ್, ಸಚಿನ್ ತೆಂಡೂಲ್ಕರ್, ದೀಪಿಕಾ ಪಡುಕೋಣೆ ಇತ್ಯಾದಿ) ಫೋಟೋ, ಹೆಸರು ಹಾಗೂ ಧ್ವನಿಯನ್ನು ಸೇರಿಸಿ, ಅವರೇ ಗ್ರಾಹಕರಿಗೆ ಆ ವಸ್ತುಗಳನ್ನು ಕೊಳ್ಳಲು ಶಿಫಾರಸ್ಸು ಮಾಡುವುದೂ ಒಂದು. ಈ ರೀತಿಯ ವ್ಯಾಪಾರ ಲಾಭದಾಯಕವೇ. ಆದರೆ ಆ ಪ್ರತಿಷ್ಠಿತರು ಆ ವಸ್ತುಗಳನ್ನು ನಿಜವಾಗಲೂ ಬಳಸಿರುತ್ತಾರಾ? ಸಾಮಾನ್ಯವಾಗಿ ಇಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಈ ವಿಚಾರದಲ್ಲಿ ಒಂದು ಗಂಭೀರ ಎಚ್ಚರಿಕೆ: ಬದಲಾದ ಕಂಪನಿ ಕಾಯಿದೆಯಂತೆ, ಸಾಮಾನ್ಯ ಜನರಿಗೆ ವಸ್ತುಗಳನ್ನು ಕೊಳ್ಳಲು ಶಿಫಾರಸ್ಸು ಮಾಡುವವರು ಅದಕ್ಕೆ ಹೊಣೆಗಾರರಾಗಬೇಕು. ಗುಣಮಟ್ಟದ ವ್ಯತ್ಯಾಸವಾದರೆ ಶಿಫಾರಸ್ಸು ಮಾಡುವವರೂ ಶಿಕ್ಷಾರ್ಹರು.
-ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


