ಮೋದಿ ಎಫೆಕ್ಟ್ಸ್ ಅಂದಾಜು

ಷೇರು ಬಜಾರಿನಲ್ಲಿ ಹಲವು ಕಂಪನಿಗಳು ಬಿಡಿ ಬಿಡಿ ಷೇರುಗಳನ್ನು ಮಾರುವ- ಕೊಳ್ಳುವ ವ್ಯವಹಾರದಿಂದ ಒಂದು ಗುಚ್ಛದ ಷೇರುಗಳನ್ನೇ ಮಾರಲು ಹೊರಟಿವೆ.
ಇದೊಂದು ನೂತನ ಪ್ರಯೋಗ. ಆ ಗುಚ್ಛವನ್ನು ಸಿದ್ಧಪಡಿಸಿದ ರೀತಿ ಹೇಗೆ? ಮುಂದಿನ ಸರ್ಕಾರದ ಮೇಲೆ ನರೇಂದ್ರ ಮೋದಿ ಅವರ ಪ್ರಭಾವ ದಟ್ಟವಾಗಿರುವ ಸಂಭವ ಹೆಚ್ಚಾಗಿರುವುದರಿಂದ, ಆ ಸಂದರ್ಭದಲ್ಲಿ ಯಾವ ಯಾವ ವಲಯದ ಕಂಪನಿಗಳಿಗೆ ಅನುಕೂಲವಾಗುತ್ತದೆ ಎನ್ನುವುದನ್ನು ಅಂದಾಜಿನ ಮೇಲೆ ಲೆಕ್ಕ ಹಾಕಿ, ಅದನ್ನು ಒಂದು ಗುಚ್ಛದ ಸ್ವರೂಪದಲ್ಲೇ ಮಾರುವುದು.
ಇಲ್ಲಿ ವ್ಯಾಪಾರದ ಉದ್ದೇಶವೇ ಹೆಚ್ಚು. ರಾಜಕೀಯ ಲಾಭದ ಉದ್ದೇಶದಿಂದ ಈ ಗುಚ್ಛಗಳನ್ನು ಮಾರುತ್ತಿಲ್ಲ. ಆದರೆ ಅದರ ಹಿನ್ನೆಲೆಯಲ್ಲಿರುವುದು ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಪ್ರಭಾವ ಮುಂದಿನ ವ್ಯವಸ್ಥೆಯಲ್ಲಿ ಹೆಚ್ಚಾಗಿರುತ್ತದೆ ಎನ್ನುವ ನಂಬಿಕೆ.
ನಿಜ. ಇದು ಒಂದು ರೀತಿಯಲ್ಲಿ ಜೂಜೇ. ಆದರೆ ಪೇಟೆಗೆ ಜೂಜೇನೂ ಹೊಸದಲ್ಲ. ನೇರವಾದ ಬಾಜಿ ವ್ಯವಹಾರವೂ ಜೋರಾಗಿಯೇ ನಡೆದಿದೆ ಎಂದು ಹಲವಾರು ವರದಿಗಳು ತಿಳಿಸಿವೆ. ಪ್ರತಿ ಸಂಜೆ ಲೆಕ್ಕ ಚುಕ್ತ ಮಾಡುವ ಬಾಜಿಯೂ ಈಗ ಪೇಟೆಯ ಆಜೂಬಾಜೂ ವಲಯಗಳಲ್ಲಿದೆ. ಇದೇನೂ ಒಳ್ಳೆಯ ಪ್ರವೃತ್ತಿಯಲ್ಲ. ದೇಶದ ಆರ್ಥಿಕ ವಲಯದ ಏರುಪೇರುಗಳನ್ನೇ ಜೂಜಾಟಕ್ಕೆ ಆಧಾರವಾಗಿಡುವುದು ವ್ಯವಹಾರಸ್ಥರ ಕೆಲಸವಲ್ಲ. ಅದು ಜೂಜುಕೋರರ ಕೆಲಸ.
ಇದೇ ಸಮಯದಲ್ಲೇ ಬಿಜೆಪಿ ನಾಯಕರು ತಮ್ಮ ಚುನಾವಣೆ ರಾಜಕೀಯದ ಅಂಗವಾಗಿ ರಾಬರ್ಟ್ ವಾಧ್ರಾ (ಪ್ರಿಯಾಂಕಾ ಪತಿ) ಅವರ ಕೆಲವು ವ್ಯವಹಾರಗಳನ್ನು ಕುರಿತು ವಾಗ್ದಾಳಿ ನಡೆಸಿದ ಪರಿಣಾಮವಾಗಿ ದೇಶದ ದೊಡ್ಡ ರಿಯಲ್ ಎಸ್ಟೇಟ್ ಕಂಪೆನಿ ಡಿಎಲ್‌ಎಫ್‌ನ ಷೇರು ಬೆಲೆ ಕೆಳಗೆ ಬಿದ್ದಿದೆ. ಬಿಜೆಪಿ ನಾಯಕರ ಉದ್ದೇಶ ಆ ಷೇರಿನ ಬೆಲೆಯನ್ನು ಬೀಳಿಸುವುದಾಗಿರಲಿಲ್ಲ.
ಸುದ್ದಿಯಲ್ಲಿ ಎಂ.ಎಫ್.ಗಳು
ಪೇಟೆಯಲ್ಲಿ ಬೀಸುವ ಗಾಳಿಯ ದಿಕ್ಕನ್ನು ಗುರುತಿಸುವ ರೀತಿಯಲ್ಲಿ ಮ್ಯೂಚುಯೆಲ್ ಫಂಡ್‌ಗಳು ಈಗ ಐಟಿ ಕಂಪನಿಗಳ ಸಹವಾಸವನ್ನು ಬಿಟ್ಟು ಬ್ಯಾಂಕ್‌ಗಳ ಷೇರುಗಳ ಮೇಲೆ ಬಂಡವಾಳ ಹೂಡುತ್ತಿವೆ. ರುಪಾಯಿಯ ಮೌಲ್ಯ, ಡಾಲರ್ ವಿರುದ್ಧ ಗಟ್ಟಿಯಾಗುತ್ತಿರುವುದರ ಪರಿಣಾಮ ಇದು.
ಭಾರತೀಯ ಸ್ಟೇಟ್ ಬ್ಯಾಂಕ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್‌ಗಳ ಷೇರುಗಳಿಗೆ ಈಗ ದೆಸೆ. ಈ ವ್ಯವಹಾರದ ಹಿಂದೆ ಇರುವುದೂ ನರೇಂದ್ರ ಮೋದಿ ಅವರ ಯಶಸ್ಸಿನ ವಿಚಾರದಲ್ಲಿ ಇರುವ ನಂಬಿಕೆ. ಮುಂದೆ ಯಾವ ಸರ್ಕಾರ ಬಂದರೂ ಬ್ಯಾಂಕ್‌ಗಳಿಗೆ ಒಳ್ಳೆಯದಾಗುವ ಸಂಭವವಿದೆ. ಆದರೆ, ನರೇಂದ್ರ ಮೋದಿ ಬಂದರೆ ಹೆಚ್ಚು ಅನುಕೂಲ ಬ್ಯಾಂಕಿಂಗ್ ಉದ್ಯಮಕ್ಕೆ ಒದಗುವುದೆಂದು ಪೇಟೆಯ ಮಾತುಗಾರರು ನಂಬಿದ್ದಾರೆ ನಿಜ. ಆ ನಂಬಿಕೆಗೆ ಸದ್ಯಕ್ಕೆ ಭದ್ರವಾದ ಆರ್ಥಿಕ ವ್ಯವಹಾರದ ಬುನಾದಿ ಇಲ್ಲ. ಅದು ಷೇರು ಪೇಟೆಯ ಧೈರ್ಯ.
ಬ್ಯಾಂಕಿಂಗ್ ಉದ್ಯಮದ ಈಗಿನ ಬೇನೆ ಅನುಮಾನಾಸ್ಪದವಾದ ಅಥವಾ ಕೆಟ್ಟ ಸಾಲದ ಪ್ರಮಾಣ ಹೆಚ್ಚುತ್ತಿರುವುದು. ಅದರಲ್ಲೂ ಸರ್ಕಾರಿ ಬ್ಯಾಂಕ್‌ಗಳಲ್ಲಿ ಈ ಪ್ರವೃತ್ತಿ ಎದ್ದು ಕಾಣುತ್ತಿದೆ.
ಬ್ಯಾಂಕ್ ಷೇರುಗಳನ್ನು ಈಗಿನ ಮಟ್ಟದಲ್ಲಿ ಕೊಳ್ಳುವುದು ಲಾಭದಾಯಕವೇ. ಲಾಭ ಸಿಗಬಹುದು. ಆದರೆ ರಾತ್ರಿ ಕಳೆದು ಬೆಳಗಾಗುವುದರ ಒಳಗಾಗಿ ಶ್ರೀಮಂತರಾಗುವ ಕನಸು ನಿಜವಾಗಲ್ಲ. ಮಧ್ಯಮಾವಧಿ (ಮೂರು ವರ್ಷ) ದೀರ್ಘಾವಧಿ (ಐದು ವರ್ಷ) ಕಾಯುವ ಸಹನೆ ಬೇಕು.
ಕೊನೆ ಮಾತು
ವಿದೇಶಿ ಮೌಲ್ಯಮಾಪನ ಸಂಸ್ಥೆಗಳೂ ಈಗ ಭಾರತೀಯ ರಾಜಕೀಯದ ಕಡೆಗೇ ಹೆಚ್ಚು ಗಮನ ಹರಿಸಿದಂತಿದೆ. ಸ್ವದೇಶೀ ಉದ್ಯಮ ವಲಯದ- ವಿದೇಶಿ ಹಣ ಎರಡೂ ಸಂಸ್ಥೆಗಳಿಗಿರುವುದು ಒಂದೇ ಆಸೆ. ಪೇಟೆ ಚುರುಕಾಗಬೇಕು, ಆಗಬಹುದೇನೋ.
ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


