ವಾಣಿಜ್ಯ

ಠೇವಣಿ ವಿಮೆ

ಠೇವಣಿ ವಿಮೆ
Published On :

ನಮ್ಮ ಬ್ಯಾಂಕಿನಲ್ಲಿ ನಿಮ್ಮ ಠೇವಣಿ ಸುರಕ್ಷಿತ. ಅವಶ್ಯ ಬಿದ್ದಾಗ ನಗದು ಮಾಡಿಕೊಳ್ಳಬಹುದು. ಅದಕ್ಕೂ ಮಿಗಿಲಾಗಿ ನಮ್ಮಲ್ಲಿರುವ ನಿಮ್ಮ ಠೇವಣಿಗೆ ಇನ್ಷೂರೆನ್ಸ್ ಇದೆ...
ಬ್ಯಾಂಕಿನಲ್ಲಿ ಠೇವಣಿ ಇಡಲು ಹೋದಾಗ ಪ್ರತಿಯೊಬ್ಬ ಗ್ರಾಹಕನೂ ಬ್ಯಾಂಕಿನವರು ಹೇಳುವ ಈ ಮಾತುಗಳನ್ನು ಕೇಳಿರಬಹುದು. ಆದರೆ ಯಾವ ಗ್ರಾಹಕನೂ ಠೇವಣಿಗೆ ಇರುವ ಇನ್ಷೂರೆನ್ಸ್ ಬಗ್ಗೆ ವಿವರವಾಗಿ ಕೇಳುವುದಿಲ್ಲ. ಬ್ಯಾಂಕಿನವರೂ ಇದನ್ನು ವಿವರಿಸುವುದಿಲ್ಲ. ಗ್ರಾಹಕರು ತಮ್ಮ ಠೇವಣಿಗೆ ಇನ್ಷೂರೆನ್ಸ್ ಇದೆ ಎನ್ನುವ ವಿಶ್ವಾಸದಿಂದ ಠೇವಣಿ ಇಡುತ್ತಾರೆ.
ಹಾಗೆಂದರೇನು?
ಐವತ್ತರ ದಶಕದಲ್ಲಿ ಹಲವು ಬ್ಯಾಂಕುಗಳು ವಿಫಲವಾಗಿದ್ದರಿಂದ ಠೇವಣಿದಾರರು ಠೇವಣಿಯನ್ನು ಕಳೆದುಕೊಂಡು ಬೀದಿಪಾಲಾದರು. ಆ ದಿನಗಳಲ್ಲಿ ಹಣ ಕಳೆದುಕೊಂಡು ಬೀದಿಗೆ ಬಿದ್ದ ಠೇವಣಿದಾರನ ರಕ್ಷಣೆಗೆ ಯಾವುದೇ ಸಂಸ್ಥೆಗಳಿರಲಿಲ್ಲ. ಅಮಾಯಕ ಠೇವಣಿದಾರನ ರಕ್ಷಣೆ, ಹಣಕಾಸು ಸ್ಥಿರತೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ ಹೆಚ್ಚಿಸಲು, ಮುಖ್ಯವಾಗಿ ಸಣ್ಣ ಮತ್ತು ಮಧ್ಯಮವರ್ಗದ ಗ್ರಾಹಕರ ಮತ್ತು ಠೇವಣಿದಾರರ ರಕ್ಷಣೆಗಾಗಿ 1961ರಲ್ಲಿ ಡೆಪಾಸಿಟ್ ಇನ್ಷೂರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಎಂಬ ಸಂಸ್ಥೆಯನ್ನು ಸಂಸತ್ತಿನ ಕಾಯ್ದೆಯ ಮೂಲಕ ಆರ್‌ಬಿಐ ಹುಟ್ಟು ಹಾಕಿತು. ಇದಕ್ಕೆ ಬೇಕಾದ ಹಣಕಾಸನ್ನೂ ಆರ್‌ಬಿಐ ಒದಗಿಸಿತು. ಇದರ ಅರಂಭಿಕ ಬಂಡವಾಳ ರು. 50 ಕೋಟಿಯಾಗಿತ್ತು.
ಸದಸ್ಯರು ಯಾರು?
    ಎಲ್ಲ ಕಮರ್ಷಿಯಲ್ ಬ್ಯಾಂಕ್‌ಗಳು
    ದೇಶದಲ್ಲಿರುವ ಎಲ್ಲ ವಿದೇಶಿ ಬ್ಯಾಂಕ್‌ಗಳ ಶಾಖೆಗಳು
    ರೀಜನಲ್ ರೂರಲ್ ಬ್ಯಾಂಕ್‌ಗಳು
    ಲೋಕಲ್ ಏರಿಯಾ ಬ್ಯಾಂಕ್‌ಗಳು
    ಎಲ್ಲ ಕೇಂದ್ರ ಪ್ರಾಥಮಿಕ ಸಹಕಾರಿ ಬ್ಯಾಂಕ್‌ಗಳು
ನಿಯಮಗಳೇನು?
    ಅವು ಭಾರತದಲ್ಲೇ ಕಾರ್ಯ ನಿರ್ವಹಿಸುತ್ತಿರಬೇಕು.
    ಒಂದು ಬ್ಯಾಂಕ್ ಡಿಐಸಿಜಿಸಿ ಜತೆ ನೋಂದಣಿ ಮಾಡಿಕೊಂಡಾಗ ಅದು ಬ್ಯಾಂಕ್‌ಗೆ ಪ್ರಚಾರಕ್ಕಾಗಿ ಸಾಮಗ್ರಿಗಳನ್ನು ನೀಡುತ್ತದೆ.
ವಿಮಾ ಸೌಲಭ್ಯಕ್ಕೆ ಯಾವ ಠೇವಣಿಗಳು ಅರ್ಹ?
    ಉಳಿತಾಯ ಖಾತೆ
    ಚಾಲ್ತಿ ಖಾತೆ
    ನಿಶ್ಚಿತ ಅವಧಿ ಠೇವಣಿಗಳು
    ರಿಕರಿಂಗ್ ಡಿಪಾಸಿಟ್‌ನಲ್ಲಿರುವ ಠೇವಣಿಗಳು
ಯಾವುದಕ್ಕಿಲ್ಲ ಈ ಸೌಲಭ್ಯ?
    ಬ್ಯಾಂಕಿನಲ್ಲಿರುವ ವಿದೇಶಿ ಸರ್ಕಾರದ ಠೇವಣಿಗಳು
    ರಾಜ್ಯ ಮತ್ತು ಕೇಂದ್ರ ಸರ್ಕಾರದ ಠೇವಣಿಗಳು
    ಅಂತರ್ ಬ್ಯಾಂಕ್ ಡಿಪಾಸಿಟ್‌ಗಳು
    ಸ್ಟೇಟ್ ಕೋ- ಆಪರೇಟಿವ್ ಬ್ಯಾಂಕ್‌ಗಳಲ್ಲಿರುವ ಭೂ ಅಭಿವೃದ್ಧಿ ಬ್ಯಾಂಕ್‌ಗಳ ಠೇವಣಿಗಳು
    ಪ್ರಾಥಮಿಕ ಸಹಕಾರಿ ಸೊಸೈಟಿಗಳು ಮತ್ತು ಮೇಘಾಲಯ, ಚಂಡೀಗಡ, ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪ, ದಾದರ್ ಮತ್ತು ನಾಗರ್ ಹವೇಲಿಯಲ್ಲಿರುವ ಸಹಕಾರಿ ಬ್ಯಾಂಕ್‌ಗಳು
ಪ್ರೀಮಿಯಂ ಎಷ್ಟು?
    ಈ ವ್ಯವಸ್ಥೆ ಆರಂಭವಾದಾಗ ಪ್ರತಿ ರು. 100ಕ್ಕೆ ಪ್ರೀಮಿಯಂ 5 ಪೈಸೆ ಇತ್ತು. ಈಗ ರು. 100ಕ್ಕೆ 10 ಪೈಸೆ ಪ್ರೀಮಿಯಮ್ ಇದೆ. ಇದನ್ನು ಗ್ರಾಹಕರ ತಲೆಗೆ ಹಾಕದೆ ಬ್ಯಾಂಕುಗಳೇ ನೇರವಾಗಿ ಪ್ರತಿ ವರ್ಷ ಮೇ ಮತ್ತು ನವೆಂಬರ್‌ನಲ್ಲಿ ಡಿಐಸಿಜಿಸಿಗೆ ಕಳುಹಿಸುತ್ತವೆ.
    ಬ್ಯಾಂಕ್‌ಗಳು 3 ತಿಂಗಳು ಪ್ರೀಮಿಯಮ್ ಕಳುಹಿಸದಿದ್ದರೆ ಸದಸ್ಯತ್ವ ಕಳೆದುಕೊಳ್ಳುತ್ತವೆ.
    ನಿಮ್ಮ ಡಿಪಾಸಿಟ್ ಹಣ ಎಷ್ಟೇ ಇರಲಿ. ನಿಮಗೆ ಸಿಗುವ ಗರಿಷ್ಠ ವಿಮಾ ಹಣ ರು. 1,00,000 ಮಾತ್ರ ಅಥವಾ ನಿಮ್ಮ ಠೇವಣಿ ಇರುವಷ್ಟು. ಈ ಲೆಕ್ಕ ಹಾಕುವಾಗ ಒಂದು ಬ್ಯಾಂಕನ್ನು ಗಣನೆಗೆ ತೆಗೆದುಕೊಳ್ಳುತ್ತಾರೆಯೇ ವಿನಾ ಒಂದು ಶಾಖೆಯನ್ನಲ್ಲ.
    ಒಬ್ಬ ವ್ಯಕ್ತಿಯು ಒಂದು ಬ್ಯಾಂಕಿನ ನಾಲ್ಕು ಶಾಖೆಗಳಲ್ಲಿ ಹತ್ತು ಖಾತೆಗಳನ್ನು ಹೊಂದಿರಬಹುದು ಮತ್ತು ಒಟ್ಟು 12 ಲಕ್ಷ ಠೇವಣಿ ಇರಬಹುದು.
    ಬ್ಯಾಂಕ್ ಮುಳುಗಿ ಹೋದರೆ ವಿಮೆ ಹಣ ಕೊಡಬೇಕಾದರೆ ಆತನಿಗೆ ಸಿಗುವುದು ಕೇವಲ ರು. 1 ಲಕ್ಷ ಮಾತ್ರ. ಇದು ಅಸಲಿಗೆ ಮಾತ್ರವಲ್ಲ ಬಡ್ಡಿಗೂ ಸಿಗುತ್ತದೆ.
ಯಾವಾಗ ಸಿಗುತ್ತದೆ?
    ಬ್ಯಾಂಕ್ ವಿಫಲವಾದಾಗ.
    ಒಂದು ಬ್ಯಾಂಕ್ ಮತ್ತೊಂದರ ಜತೆ ವಿಲೀನವಾದಾಗ ಲಿಕ್ವಿಡೇಟರ್ ಮೂಲಕ ಹಣ ಕೊಡುತ್ತದೆ.
    ನೀತಿ ನಿಯಮಾವಳಿ ಮತ್ತು ಕಾನೂನು ಪ್ರಕಾರ ಕ್ಲೇಮ್ ಸ್ವೀಕೃತವಾದ ಎರಡು ತಿಂಗಳಲ್ಲಿ ವಿಮಾ ಹಣ ನೀಡಬೇಕಾಗುತ್ತದೆ.
    ಯಾವುದೇ ಠೇವಣಿದಾರನೊಂದಿಗೆ ಡಿಐಸಿಜಿಸಿ ನೇರವಾಗಿ ವ್ಯವಹರಿಸುವುದಿಲ್ಲ. ಇದು ಸಂಬಂಧಪಟ್ಟ ಬ್ಯಾಂಕಿನೊಂದಿಗೆ ಮಾತ್ರ ವ್ಯವಹರಿಸುತ್ತದೆ.
    ಈ ವಿಮಾ ವ್ಯವಸ್ಥೆ ಇತ್ತೀಚೆಗೆ ಬ್ಯಾಂಕುಗಳು ಹೇಳುವ ಡಿಪಾಸಿಟ್ ಮೇಲಿನ ಉಚಿತ ಅಪಘಾತ ವಿಮೆಗೆ ಹೊರತಾಗಿದೆ. ಈ ವಿಮೆ ಬಡ, ಮಧ್ಯಮ ವರ್ಗದವರ ಸಣ್ಣ ಸಣ್ಣ ಡಿಪಾಸಿಟ್‌ಗಳಿಗೆ ವರದಾಯಕ.

= ರಮಾನಂದ ಶರ್ಮಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.