ವಾಣಿಜ್ಯ

ಹೊಸ ಪಾಲಿಸಿ

ನಿಮ್ಮಲ್ಲಿ ಜೀವ ವಿಮೆ ಇಲ್ಲವೆ? ಹಾಗಿದ್ದರೆ ಪಡೆಯಲು ಮುಂದಾಗಿದ್ದರೆ ಶೇ.3.09ರಷ್ಟು ಸೇವಾ ತೆರಿಗೆ ನೀವು...

ಹೊಸ ಪಾಲಿಸಿ
Published On :

ನಿಮ್ಮಲ್ಲಿ ಜೀವ ವಿಮೆ ಇಲ್ಲವೆ? ಹಾಗಿದ್ದರೆ ಪಡೆಯಲು ಮುಂದಾಗಿದ್ದರೆ ಶೇ.3.09ರಷ್ಟು ಸೇವಾ ತೆರಿಗೆ ನೀವು ನೀಡಲೇಬೇಕು. ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್ ಡಿಎ)ದ ಹೊಸ ನಿಯಮದ ಪ್ರಕಾರ ಇದು ಜಾರಿಯಾಗಲಿದೆ. ಇಷ್ಟು ಮಾತ್ರವಲ್ಲ, ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ಯ 45 ವಿಮಾ ಯೋಜನೆಗಳು ರದ್ದಾಗಲಿವೆ ಮತ್ತು ಹೊಸ ರೂಪದಲ್ಲಿ ಜಾರಿಯಾಗಲಿವೆ. ಅಂದಹಾಗೆ, ಸೇವಾ ತೆರಿಗೆಯನ್ನು ಎಲ್‌ಐಸಿ ಮತ್ತು ಖಾಸಗಿ ಕಂಪನಿಗಳ ವಿಮೆ ಯೋಜನೆಗಳಿಗೆ ಕೊಡಲೇಬೇಕು. ವಿಮೆ ಖರೀದಿ ಮತ್ತು ಮೆಚ್ಯುರಿಟಿ ವೇಳೆ ತೆರಿಗೆ ಪಾವತಿ ಮಾಡಲೇಬೇಕು.

ಎರಡು ವರ್ಷ ಹಳೆಯದ್ದು...
ವಿಮಾ ಕ್ಷೇತ್ರಕ್ಕೆ ಸೇವಾ ತೆರಿಗೆ ವಿಧಿಸಬೇಕು ಎಂಬ ವಿಚಾರ ಎರಡು ವರ್ಷ ಹಳೆಯದ್ದು. ವಿಮಾ ಏಜೆಂಟರ ಮತ್ತು ಇತರರ ವಿರೋಧದ ಹಿನ್ನೆಲೆಯಲ್ಲಿ ವಿಚಾರ ಅಂತಿಮವಾಗಿರಲಿಲ್ಲ. ಕೇಂದ್ರ ಸಂಪುಟದಲ್ಲಿ ಮತ್ತು ಸಂಸತ್‌ನಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ವಿಮಾ ಉತ್ಪನ್ನಗಳಿಗೆ ಶೇ.3.09ರಷ್ಟು ಸೇವಾ ತೆರಿಗೆ ನೀಡುವ ಬಗ್ಗೆ ನಿರ್ಧಾರಕ್ಕೆ ಬರಲಾಗಿತ್ತು. ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ ಈ ವರ್ಷದ ಫೆಬ್ರವರಿಯಲ್ಲಿ ಗೆಜೆಟ್ ಪ್ರಕಟಣೆ ಹೊರಡಿಸಿತ್ತು.

ಯಾವುಕ್ಕೆ ಅನ್ವಯ?
ಹಳೆಯ ಪಾಲಿಸಿಗಳಿಗೆ ಅಂದರೆ, ಈಗಾಗಲೇ ನಾವು- ನೀವೆಲ್ಲರೂ ಹೊಂದಿರುವ ವಿಮೆಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಹೊಸತಾಗಿ ಯಾರು ವಿಮೆ ಹೊಂದಲು ಬಯಸುತ್ತಾರೋ ಅವರಿಗೆ ಅದು ಅನ್ವಯ ಆಗುತ್ತದೆ.

ಲೆಕ್ಕಾಚಾರ ಹೇಗೆ?
ಪಾಲಿಸಿ ಖರೀದಿಸಿದಾಗ ಮತ್ತು ಮೆಚ್ಯುರಿಟಿ ಹೊಂದಿದಾಗ ಶೇ.3.09ರಷ್ಟು ಸೇವಾ ತೆರಿಗೆ ನೀಡಬೇಕಾಗುತ್ತದೆ.
ಉದಾಹರಣೆಗೆ ಒಂದು ಲಕ್ಷ ಮೌಲ್ಯದ ವಿಮೆ ಮಾಡುವ ವೇಳೆ ಶೇ.3.09ರಷ್ಟು ಅಂದರೆ 3,090 ರು. ಅನ್ನು ತೆರಿಗೆಯಾಗಿ ಕೊಡಬೇಕು. ಹಾಗೆಯೇ ಅದೇ ವಿಮೆ ಮೆಚ್ಯುರಿಟಿಗೆ ಬಂದಾಗ ಅಷ್ಟೇ ಮೊತ್ತವನ್ನು ಸೇವಾ ತೆರಿಗೆಯಾಗಿ ನೀಡಬೇಕು.

ಗ್ರಾಹಕರಿಗೆ ಹೊರೆಯಾದೀತೇ?
ವಿಮೆ ಖರೀದಿ ಮತ್ತು ಅದನ್ನು ಮತ್ತೆ ಹಿಂಪಡೆಯುವ ವೇಳೆ ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ಪ್ರಸ್ತಾಪ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುವಂತೆ ಮಾಡಿವೆ. ಅವುಗಳು ಹೀಗಿವೆ.

  •     ವಿಮೆಗೆ ಸೇವಾ ತೆರಿಗೆ ವಿಧಿಸುವ ಅಗತ್ಯ ಇರಲಿಲ್ಲ. ಇದರಿಂದಾಗಿ ಅನಗತ್ಯ ವೆಚ್ಚವನ್ನು ಪಾಲಿಸಿದಾರನ ಮೇಲೆ ಹೇರಿದಂತಾಗುತ್ತದೆ.
  •     ಭಾರತೀಯ ಜೀವ ವಿಮಾ ನಿಗಮ ಶೇ.80ರಷ್ಟು ವಹಿವಾಟು ಹೊಂದಿದೆ. ಶೇ.20ರಷ್ಟು ಮಾತ್ರ ಖಾಸಗಿ ಕಂಪನಿಗಳು ಮತ್ತು ಇತರ ವಿಮಾ ಕ್ಷೇತ್ರದಲ್ಲಿ ವ್ಯವಹಾರ ಮಾಡುತ್ತಿವೆ. ಎಲ್‌ಐಸಿಯ ಮಾರುಕಟ್ಟೆ ವಶಪಡಿಸಿಕೊಳ್ಳಲು ಕೇಂದ್ರದ ಮೇಲೆ ಪ್ರಭಾವ ಬೀರಿ ಖಾಸಗಿ ಕಂಪನಿಗಳ ಒತ್ತಡದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ತೆರಿಗೆ ವಿಧಿಸಿದೆ.
  •     ತೆರಿಗೆ ಪ್ರಸ್ತಾಪದಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ವಿಮೆ ಮಾಡಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ. ಗ್ರಾಮೀಣ ಪ್ರದೇಶಗಳಿಗೆ ತೆರಳಿದಾಗ ಸೇವಾ ತೆರಿಗೆ ಇದೆ ಎಂಬ ನೆಪವೊಡ್ಡಿ ವಿಮೆ ಖರೀದಿಸಲು ಬಾರದೆ ಇರಬಹುದು.
  •     ಪಾಲಿಸಿದಾರರಿಂದ ಸಂಗ್ರಹಿಸಿದ ಮೊತ್ತವನ್ನು ಷೇರುಪೇಟೆಯಲ್ಲಿ ಹೂಡುವುದರಿಂದ ಲಾಭ-ನಷ್ಟ ಎರಡರ ಸಾಧ್ಯತೆಯೂ ಇದೆ. ಜನಸಾಮಾನ್ಯರು ಕಷ್ಟಪಟ್ಟು ಉಳಿಸಿದ ಹಣವನ್ನು ಈ ರೀತಿಯ ಪ್ರಯೋಗಿಸುವುದು ಬೇಡ.
ಸರ್ಕಾರಕ್ಕೇನು ಲಾಭ?
ಯಾಕೆ ಹೀಗೆ?
  •     ಸದ್ಯ ಇರುವ ನಿಯಮದಲ್ಲಿ ನಿಗದಿತ ಅವಧಿಗಿಂತ ಮೊದಲೇ ಪಾಲಿಸಿಯನ್ನು ಸರಂಡರ್ ಮಾಡಿದಾಗ ಪಾಲಿಸಿದಾರನಿಗೆ ಸಿಗುವ ಮೊತ್ತ ಕಡಿಮೆಯಾಗುತ್ತದೆ. ಹೊಸ ನಿಯಮ ಪ್ರಕಾರ ಇಂಥ ಸಂದರ್ಭದಲ್ಲಿ ಸಿಗುವ ಮೊತ್ತ ಹೆಚ್ಚಾಗಿರುತ್ತದೆ.
  •     ವಿಮಾ ಉತ್ಪನ್ನಗಳನ್ನು ಮತ್ತಷ್ಟು ಗ್ರಾಹಕ ಸ್ನೇಹಿಯಾಗಿಸಬೇಕು.
  •     ಹೊಸ ನಿಯಮ ಪ್ರಕಾರ ಜೀವ ವಿಮೆಯ ಕನಿಷ್ಠ ಅವಧಿ ಹತ್ತು ವರ್ಷ ಆಗಲಿದೆ.
  •     ಪಾಲಿಸಿದಾರ ಆಯ್ಕೆ ಮಾಡಿದ ವಿಮೆಯಂತೆ ಹಾಗೂ ಆತ ಎಷ್ಟು ವರ್ಷ ಕಾಲ ವಿಮೆಯ ಕಂತು ಪಾವತಿಸಿದ್ದಾನೆ ಎಂಬ ಆಧಾರದ ಮೇಲೆ ವಿಮೆ ಸರಂಡರ್ ಮಾಡಿದಾಗ ಬಾಕಿ ಮೊತ್ತ ಸಿಗುತ್ತದೆ.
  •     ವಿಮೆ ಅವಧಿ 10 ವರ್ಷ ಮತ್ತು ಅದಕ್ಕಿಂತ ಹೆಚ್ಚಾಗಿದ್ದಾಗ ಪಾಲಿಸಿಯನ್ನು ಸರಂಡರ್ ಮಾಡಬೇಕಾದರೆ ಮೂರು ವರ್ಷಗಳ ಪ್ರೀಮಿಯಂ ಪಾವತಿಸಬೇಕು. ಒಟ್ಟು ಎಷ್ಟು ಪ್ರೀಮಿಯಂ ಪಾವತಿಸಿರುತ್ತೇವೆಯೋ ಅದರ ಶೇ.30ರಷ್ಟು ಮೊತ್ತ ಪಾಲಿಸಿದಾರನಿಗೆ ಸಿಗುತ್ತದೆ.
- ಸದಾಶಿವ ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.