ವಾಣಿಜ್ಯ

ಸರ್ಕಾರಿ ಬ್ಯಾಂಕ್‌ಗಳ ಸ್ಥಿತಿ

ಸರ್ಕಾರಿ ಬ್ಯಾಂಕ್‌ಗಳ ಸ್ಥಿತಿ
Published On :

ದೇಶದ ಅತಿ ದೊಡ್ಡ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್‌ನ 'ಸಾಲದ ಅರ್ಹತೆಯ ದರ್ಜೆಯನ್ನು' ವಿಶ್ವತ ಎರಡು ಪ್ರಮುಖ ಮೌಲ್ಯಮಾಪನ ಸಂಸ್ಥೆಗಳು ಮೂಡೀಸ್ ಮತ್ತು ಸ್ಟ್ಯಾಂಡರ್ಡ್ಸ್ ಆ್ಯಂಡ್ ಪೂರ್ ಇಳಿಸಿವೆ.
ಭಾರತೀಯ ಸ್ಟೇಟ್ ಬ್ಯಾಂಕ್ ಈ ಕ್ರಮದಿಂದ ವಿದೇಶಗಳಲ್ಲಿ ಸಾಲ ಎತ್ತುವುದಕ್ಕೆ ಬ್ಯಾಂಕಿಗೆ ಅಡ್ಡಿ ಬಂದಿಲ್ಲ ಎಂದಿದೆ. ಆದರೆ ಸಾಲದ ವಿಶ್ವಾಸಾರ್ಹತೆಯ ಪ್ರಶ್ನೆ ಇದು. ಪ್ರತಿಷ್ಠೆಯ ಪ್ರಶ್ನೆ. ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳ ದರ್ಜೆಯೂ ಕೆಳಗೆಬಂದಿದೆ. ನಿಜ. ದೇಶದ ಬ್ಯಾಂಕಿಂಗ್ ವ್ಯವಸ್ಥೆ ಹೇಳಿಕೊಳ್ಳುವಷ್ಟು ತೃಪ್ತಿಕರವಾಗಿಲ್ಲ. ಆದರೆ, ಅದರಲ್ಲಿ ಹೆಚ್ಚಿನ ಪಾಲು ಸರ್ಕಾರಿಸ್ವಾಮ್ಯದ ಬ್ಯಾಂಕ್‌ಗಳೇ ಯಾಕಾಗಬಾರದು?
ಕುಸಿಯುತ್ತಿರುವ ಅರ್ಥವ್ಯವಸ್ಥೆ, ಕೆಟ್ಟ ಸಾಲದ ಹೊರೆ, ರಿಸರ್ವ್ ಬ್ಯಾಂಕಿನ ಆದ್ಯತೆಯಲ್ಲಿ ಇನ್‌ಫ್ಲೇಷನ್‌ಗೇ ಹೆಚ್ಚು ಗಮನ ಇರುವುದರಿಂದ ಈ ಪರಿಸ್ಥಿತಿ ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಇರುವಷ್ಟು ಸ್ವಾತಂತ್ರ್ಯ ಸರ್ಕಾರಿ ಬ್ಯಾಂಕ್‌ಗಳಿಗೆ ಇಲ್ಲದಿರುವುದು ಇನ್ನೊಂದು ಕಾರಣ. ಒಂದು ಅಂದಾಜಿನ ಪ್ರಕಾರ, ಸರ್ಕಾರಿ ಬ್ಯಾಂಕ್‌ಗಳ ಕೆಟ್ಟ ಸಾಲದ ಪ್ರಮಾಣ ಒಟ್ಟು ಸಾಲದ ಶೇ.10ರಷ್ಟು. ಈಗ ಹಲವಾರು ಸರ್ಕಾರಿ ಬ್ಯಾಂಕ್‌ಗಳು ಬಂಡವಾಳವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಅದಕ್ಕೆ ಸರ್ಕಾರಕ್ಕೇ ಮೊರೆ ಇಡುವುದು ಬಿಟ್ಟು ಬೇರೆ ಮಾರ್ಗವೇ ಇಲ್ಲ. ಈ ಪರಿಸ್ಥಿತಿಯ ದುರಸ್ತಿಗೆ ಕಟ್ಟುನಿಟ್ಟಿನ ಆಡಳಿತ ವ್ಯವಸ್ಥೆ ಬೇಕು.

ಟಾಟಾ ಷೇರುಗಳು
ದೇಶದ ಅತಿದೊಡ್ಡ ಪ್ರತಿಷ್ಠಿತ ಔದ್ಯಮಿಕ ಗುಂಪೆಂದು ಹೆಸರಾಗಿರುವ ಟಾಟಾ ಗುಂಪಿನ ಈಗಿನ ಪ್ರಮುಖ ಸೈರಸ್ ಮಿಸ್ತ್ರಿ, ಪೇಟೆಯಲ್ಲಿ ತಮ್ಮ ಗುಂಪಿನ ಕಂಪನಿಗಳ ಷೇರುಗಳನ್ನೇ ಎರಡು ವಾರಗಳಿಂದಲೂ ದೊಡ್ಡ ಪ್ರಮಾಣದಲ್ಲೇ ಕೊಳ್ಳುತ್ತಿದ್ದಾರೆ.
ಇದರ ಹಿಂದಿನ ಉದ್ದೇಶವಾದರೂ ಏನು? ತಮ್ಮ ಕಂಪನಿಗಳ ಆಂತರಿಕ ಶಕ್ತಿಯಲ್ಲಿ ತಮಗಿರುವ ವಿಶ್ವಾಸದ ಪ್ರದರ್ಶನ. ಇಂಥ ದಿಟ್ಟತನವನ್ನು ಪೇಟೆಯೂ ಮೆಚ್ಚಿದೆ. ಈ ವರ್ಷದಲ್ಲಿ ಅನೇಕ ಟಾಟಾ ಕಂಪನಿಗಳ ಷೇರು ಬೆಲೆ ಬಿದ್ದಿರುವ ಪ್ರವೃತ್ತಿಯನ್ನು ತಡೆಯುವ ಪ್ರಯತ್ನ ಯಶಸ್ವಿಯಾಗಲೂಬಹುದು. ಸೈರಸ್ ಮಿಸ್ತ್ರಿ ಕುಟುಂಬ ಟಾಟಾ ಸನ್ಸ್‌ನ ಅತಿ ದೊಡ್ಡ ಷೇರುದಾರ ಸಂಸ್ಥೆ.

ಬೀದಿ ಬದಿಯ ವ್ಯಾಪಾರ
ಇಡೀ ದೇಶದಲ್ಲಿನ ಅಸಂಘಟಿತ ವಲಯದಲ್ಲಿ ಒಂದು ಕೋಟಿಗೂ ಹೆಚ್ಚಿನ ಬೀದಿ ಬದಿಯ ವ್ಯಾಪಾರಿಗಳು ಎರಡನೇ ಸ್ಥಾನ ಪಡೆದ ವರ್ಗ. ಆದರೆ ಅವರಿಗೆ ಇದುವರೆಗೆ ಯಾವುದೇ ಕಾಯಿದೆಯ ರಕ್ಷಣೆಯೂ ಇರಲಿಲ್ಲ. ಕೆಲವು ರಾಜ್ಯಗಳಲ್ಲಿ ತೋರಿಕೆಯ ನಿಯಮಗಳಿದ್ದರೂ, ಅದಕ್ಕೆ ಸಂವಿಧಾನದತ್ತ ಕಾಯಿದೆಯ ಬೆಂಬಲವಿರಲಿಲ್ಲ. ಈ ವ್ಯಾಪಾರಿಗಳು ಸಾವಿರ ಕೋಟಿಗೂ ಹೆಚ್ಚಿನ ಮಾಮೂಲಿ ಹಫ್ತಾ ಪಾವತಿ ಮಾಡುತ್ತಿದ್ದಾರೆನ್ನುವ ಅಂದಾಜುಗಳು ಪ್ರಕಟವಾಗಿವೆ. ಮುಂಬೈನ ಏಕತಾ ಹಾಕರ್ಸ್ ಯೂನಿಯನ್ ಈ ವಿಚಾರವನ್ನು ಸುಪ್ರೀಂ ಕೋರ್ಟಿನಲ್ಲಿ ಕೊಂಡೊಯ್ದಿದ್ದು 2002ರಲ್ಲಿ. ಈಗ ಸುಪ್ರೀಂ ಕೋರ್ಟ್ ಈ ವರ್ಗಕ್ಕೆ ಕಾಯಿದೆಯ ರಕ್ಷಣೆ ಪಡೆಯುವ ಅರ್ಹತೆ ಇದೆ ಎನ್ನುವ ತೀರ್ಪು ನೀಡಿದೆ.
ಬೃಹತ್ ನಗರಗಳಲ್ಲಿನ ರಸ್ತೆಗಳಲ್ಲಿ ಈಗ ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಎರ್ರಾಬಿರ್ರಿಯಾಗಿರುವ ಹಿನ್ನೆಲೆಯಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೂ ಬದುಕುವ ಹಕ್ಕನ್ನು ಒದಗಿಸಬೇಕಾದರೆ, ಬೀದಿಯ ಪಾದಚಾರಿ ಪಥದಲ್ಲಿ ನಡೆಯುವ ಹಕ್ಕು ಪಾದಚಾರಿಗಳಿಲ್ಲವೇ?
ಈ ಸಮಸ್ಯೆಗೆ ಕಾಯಿದೆಯ ಮೂಲಕ ಪರಿಹಾರವನ್ನು ಪಡೆಯಲು ಹೈಕೋರ್ಟ್‌ಗಳಿಗೆ ಮೊರೆ ಇಡುವ ಹಕ್ಕನ್ನು ಸುಪ್ರೀಂ ಕೋರ್ಟ್ ನೀಡಿದೆ. ಮುಂದೇನು? ಗೊತ್ತಿಲ್ಲ.

ಕೊನೆ ಮಾತು
ರಿಸರ್ವ್ ಬ್ಯಾಂಕ್‌ನ ನೂತನ ಗವರ್ನರ ರಘುರಾಮನ್ ರಾಜನ್ ಎರಡು ವಿಶಿಷ್ಟ ಸಮಸ್ಯೆಗಳ ಪರಿಶೀಲನೆ, ಪರಿಹಾರದ ಶಿಫಾರಸು ಮಾಡಲು ನೇಮಿಸಿರುವ ಎರಡು ಸಮಿತಿಗಳಲ್ಲೂ ಐಎಎಸ್ ಅಧಿಕಾರಿಗಳು, ಸರ್ಕಾರಿ ಉದ್ಯಮಗಳ ಅಧಿಪತಿಗಳು ಇಲ್ಲದೇ ಇರುವುದು ಒಂದು ಪವಾಡವೇ ಅಲ್ಲವೇ?

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.