ವಾಣಿಜ್ಯ

ಉಳಿಗಾಲ

ಇಂದು ಪ್ರತಿ ವಸ್ತುವನ್ನೂ ಹತ್ತಾರು ಬಾರಿ ಯೋಚಿಸಿ ಖರೀದಿಸಬೇಕು. ಬೆಂಗಳೂರಿ ನಂಥ ನಗರಗಳೇ ಏಕೆ, ಎರಡು ಮತ್ತು ಮೂರನೇ..

ಉಳಿಗಾಲ
Published On :

ಇಂದು ಪ್ರತಿ ವಸ್ತುವನ್ನೂ ಹತ್ತಾರು ಬಾರಿ ಯೋಚಿಸಿಯೇ ಖರೀದಿಸಬೇಕು. ಬೆಂಗಳೂರಿನಂಥ ನಗರಗಳೇ ಏಕೆ, ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಗಂಡ ಮತ್ತು ಹೆಂಡತಿ ದುಡಿದೇ ಸಂಸಾರ ರಥ ಎಳೆಯಬೇಕಾದ ಪರಿಸ್ಥಿತಿ ಇದೆ.
ಆರಂಭದಲ್ಲಿ ಪತಿ-ಪತ್ನಿ ದುಡಿಯುತ್ತಿದ್ದರೂ, ನಂತರ ದಿನಗಳಲ್ಲಿ ಕಾಲಸ್ಥಿತಿ ಮತ್ತು ಆರೋಗ್ಯ ಕಾರಣಗಳಿಂದ ಒಬ್ಬರೇ ದುಡಿಯಬೇಕಾದ ಸಂದರ್ಭಗಳು ಬಂದೊದಗುತ್ತವೆ. ಇಂಥ ಪರಿಸ್ಥಿತಿಯಲ್ಲಿ ಪ್ರತಿ ವಿಚಾರಗಳ ಬಗ್ಗೆ ಚಿಂತಿಸಲೇಬೇಕು. ಕೆಲವೊಂದು ಮಿತವ್ಯಯ ಕ್ರಮಗಳನ್ನು ಅನುಸರಿಸಲೇಬೇಕು.

ಶಾಪಿಂಗ್
'ತುಂಬಾ ಬೇಜಾರಾಗಿದೆ ಶಾಪಿಂಗ್‌ಗೆ ಹೋಗೋಣ ಬಾರೆ' ಎಂದು ಖರೀದಿ ಯುದ್ಧಕ್ಕೆ ಬೆಂಗಳೂರಿನ ಮಂದಿ ಹೊರಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಅಗತ್ಯವಿದ್ದರೂ ಇಲ್ಲದಿದ್ದರೂ ವಸ್ತುಗಳನ್ನು ಖರೀದಿಸುತ್ತಾರೆ. ಹಣ ಉಳಿಸುವ ನಿಟ್ಟಿನಲ್ಲಿ ಮೊದಲು ಇಂಥ ಪರಿಪಾಠಕ್ಕೆ ಪೂರ್ಣವಿರಾಮ ಹಾಕಬೇಕು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸುವ ಮುನ್ನ ಬ್ಯಾಲೆನ್ಸ್ ಚೆಕ್ ಮಾಡಿಕೊಂಡರೆ ಅನುಕೂಲ.

ಹೋಟೆಲ್
ಹೋಟೆಲ್ ಊಟ ನಗರಗಳಲ್ಲಿ ಸಾಮಾನ್ಯವಾಗಿರುವ ಪರಿಪಾಠ. ಊಟ, ಬ್ರೇಕ್‌ಫಾಸ್ಟ್‌ಗೆ ಹೋಗುವುದು ಬೇಡ ಎಂದು ನಾವು ತಿಳಿ ಹೇಳಿದರೆ ಕಂಜೂಸ್ ಬುದ್ಧಿ ತೋರಿಸ್ತಾರೆ ಎಂಬ ಆಪಾದನೆ ಬಂದೀತು. ಆದರೆ, ಅವರವರ ಹಣಕಾಸು ವೆಚ್ಚದ ಲೆಕ್ಕಾಚಾರ ನೋಡಿಕೊಳ್ಳಲು ಕೆಲವು ಕಠಿಣ ನಿರ್ಧಾರಗಳು ಅಗತ್ಯವಿರುತ್ತದೆ ಅಲ್ಲವೇ? ಇದರಿಂದಾಗಿ ನಮ್ಮ ಜೇಬಿಗೆ ಹಿತ. ಏನಂತೀರಿ?

ಪ್ರವಾಸ, ವಿಹಾರ
ವಾರದ 5 ಅಥವಾ 6 ದಿನಗಳ ಬಿಡುವಿಲ್ಲದ ಕೆಲಸದ ಬಳಿಕ ವೀಕೆಂಡ್ ಎಂಜಾಯ್ ಮಾಡುವ ಪದ್ಧತಿ ಈಗ ಸಾಮಾನ್ಯ. ಇಂಥ ಪರಿಸ್ಥಿತಿಯಲ್ಲಿ ಅದಕ್ಕೆ ಅಲ್ಪವಿರಾಮ ಹಾಕಿದರೆ ಉತ್ತಮ. ವೀಕೆಂಡ್ ಪ್ರವಾಸವನ್ನು  6 ತಿಂಗಳು ಅಥವಾ ವರ್ಷಕ್ಕೊಮ್ಮೆ ಹಾಕಿದರೆ ಬಹಳ ಅನುಕೂಲ.

ನಿತ್ಯದ ಪ್ರಯಾಣ
ಕಚೇರಿಗೆ ಮತ್ತು ಯಾವುದೇ ಕಾರ್ಯಕ್ರಮಗಳಿಗೆ ತೆರಳುವಾಗ ಸಾರ್ವಜನಿಕ ಸಾರಿಗೆ ಬಳಸುವುದು ಉತ್ತಮ. ಎಲ್ಲ ರೀತಿಯಿಂದಲೂ ಇದು ಅನುಕೂಲ.

ಗೃಹೋಪಯೋಗಿ ವಸ್ತುಗಳ ಬಳಕೆ
ಮಿತವ್ಯಯ ಸಾಧಿಸಲು ಕುಟುಂಬ ಸದಸ್ಯರೆಲ್ಲರೂ ಕಲಿಯಲೇಬೇಕು. ವಿಶೇಷವಾಗಿ ವಿದ್ಯುತ್ ಉಪಕರಣಗಳ ಬಳಕೆ (ಗೀಸರ್, ಹವಾನಿಯಂತ್ರಣ ವ್ಯವಸ್ಥೆ, ಫ್ಯಾನ್, ಕಂಪ್ಯೂಟರ್ ಇತ್ಯಾದಿ) ಮೇಲೆ ನಿಯಂತ್ರಣ ಇರಬೇಕು.ಬಳಕೆಯಾದ ಬಳಿಕ ಸ್ವಿಚ್ ಆಫ್ ಮಾಡಿದರೆ ಅನಗತ್ಯ ವಿದ್ಯುತ್ ಬಿಲ್ ಪಾವತಿ ಮಾಡುವುದನ್ನು ತಪ್ಪಿಸಿದರೆ ಕೊಂಚ ದುಡ್ಡುಳಿಯುತ್ತದೆ.

ಷೇರು- ವ್ಯವಹಾರ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮತ್ತು ವ್ಯವಹಾರ ಮಾಡುವ ಮುನ್ನ ಬಹಳ ಎಚ್ಚರ ಅಗತ್ಯ. ಏಕೆಂದರೆ, ಇದು ರಿಸ್ಕ್ ಇರುವ ಜಗತ್ತು. ಕೊಂಚ ಏರುಪೇರಾದರೆ ಹೂಡಿಕೆಯಾದ ಹಣ ಕೂಡ ನಷ್ಟವಾಗುತ್ತದೆ. ಉಳಿತಾಯಕ್ಕೆ ವಿಮೆ, ನಿಗದಿತ ಠೇವಣಿಗಳಲ್ಲಿ ಹಣ ಹೂಡಿಕೆ ಮಾಡಬಹುದು.

ಹಬ್ಬ- ಹರಿದಿನಗಳು
ಇಂಥ ದಿನಗಳಲ್ಲಿ ಆಡಂಬರ ಖಂಡಿತವಾಗಿಯೂ ಬೇಡ. ಸರಳವಾಗಿದ್ದರೆ ಅನುಕೂಲ. ವಿಚಾರ ಇಷ್ಟೆ. ಹಬ್ಬದ ಆಚರಣೆ ಬಳಿಕ ಅಲಂಕಾರಿಕ ಸಾಧನಗಳನ್ನು ವಿಲೇವಾರಿ ಮಾಡುವ ಹೊಣೆ ನಮ್ಮ ಮೇಲೆಯೇ ಇರುತ್ತದೆ. ಜೇಬಿಗೂ ಹಿತ, ಕೆಲಸವೂ ಕಡಿಮೆ.

ಆಹಾರ ಸಾಮಗ್ರಿ ಬಳಕೆ
ಹಿತ, ಮಿತ ಮತ್ತು ರುಚಿ. ಈ ನೀತಿಯನ್ನು ಅಚ್ಚುಕಟ್ಟಾಗಿ ಪಾಲಿಸಿ. ಇದರಿಂದಾಗಿ ಅಡುಗೆಗೆ ಬಳಸುವ ವಸ್ತುಗಳು ಉಳಿಯುತ್ತವೆ. ಪರೋಕ್ಷವಾಗಿ ಅದಕ್ಕೆ ಕೊಟ್ಟ ದುಡ್ಡೂ ಉಳಿಯುತ್ತದೆ. ಮಾಲ್‌ಗಳಲ್ಲಿ ಕೊಳ್ಳುವುದಕ್ಕಿಂತ ಸಾಮಾನ್ಯ ಕಿರಾಣಿ ಅಂಗಡಿಗಳಲ್ಲೇ ಕೊಳ್ಳುವುದು ಅನುಕೂಲ. ಏಕೆಂದರೆ ಮಾಲ್‌ಗಳಲ್ಲಿ ಬಣ್ಣದ ಜಾಹೀರಾತು ಮೂಲಕ ನಮ್ಮ ಕಿಸೆಗೆ ಕನ್ನ ಹಾಕುವುದೇ ಹೆಚ್ಚು.

ಫೋನ್, ಮೊಬೈಲ್, ಇಂಟರ್‌ನೆಟ್
ಅಗತ್ಯ ಸಂದೇಶ ಕಳುಹಿಸಲು ಎಸ್‌ಎಂಎಸ್ ಬಳಸಿ. ಮನೆಯಲ್ಲಿ ಇಂಟರ್‌ನೆಟ್ ಸಂಪರ್ಕ ಇದ್ದರೆ ಮೊಬೈಲ್‌ನಲ್ಲಿ 3ಜಿ, 4ಜಿ ಎಂದು ನೆಟ್ ಸಂಪರ್ಕ ಬೇಡ. ಅದೇ ರೀತಿ ಮೊಬೈಲ್ ಮಾತುಕತೆ ಕೂಡ ಅಗತ್ಯಕ್ಕೆ ತಕ್ಕಂತೆ ಇರಲಿ.

- ಜಯಗೌರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.