ಉಳಿಸೋದೆ ನಮ್ ಬುಸಿನೆಸ್ಸು

ಭಾರತೀಯರ ಉತ್ತಮ ಅಭ್ಯಾಸವೆಂದರೆ ಉಳಿತಾಯ. ಯಾವುದೇ ವಸ್ತು ಬಳಕೆಯಿದ್ದರೂ ಎಷ್ಟು ಸಾಧ್ಯವೋ ಅಷ್ಟು ಉಳಿಸಿಕೊಳ್ಳಲು ನೋಡುತ್ತಾರೆ. ಹಣಕಾಸಿನ ವಿಚಾರಕ್ಕೆ ಬಂದರಂತೂ ನಮ್ಮ ದೇಶದವರು ಇತರರಿಗಿಂತ ಹೆಚ್ಚು ಜಾಗರೂಕರು.
2008ರ ಆರ್ಥಿಕ ಹಿಂಜರಿತ ವಿಶ್ವದ ಹೆಚ್ಚಿನ ರಾಷ್ಟ್ರಗಳನ್ನು ತಟ್ಟಿದ್ದರೂ, ದೇಶದ ಅರ್ಥವ್ಯವಸ್ಥೆಗೆ ಅದರ ಬಿಸಿ ಅಷ್ಟಾಗಿ ತಟ್ಟಿರಲಿಲ್ಲ. ಏಕೆಂದರೆ, ವಿವಿಧ ಮೂಲಗಳಲ್ಲಿ ದೇಶದ ಜನರು ಕಷ್ಟಪಟ್ಟು ಕೂಡಿಟ್ಟಿದ್ದ ಬೃಹತ್ ಮೊತ್ತ ಪರೋಕ್ಷವಾಗಿ ಸರ್ಕಾರದ ನೆರವಿಗೆ ಬಂದಿತ್ತು.
ಪ್ರಮಾಣ ಹೆಚ್ಚಳ
ಆರ್‌ಬಿಐ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ದೇಶದ ಜನರಲ್ಲಿ ಉಳಿತಾಯದ ಮನೋಭಾವನೆ ಇನ್ನೂ ಹೆಚ್ಚುತ್ತಿದೆಯಂತೆ. 2011-12 ಹಣಕಾಸು ವರ್ಷದ ಪ್ರಮಾಣಕ್ಕಿಂತ 2012-13ನೇ ವಿತ್ತೀಯ ವರ್ಷದಲ್ಲಿ ಉಳಿತಾಯದ ಪ್ರಮಾಣದ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ನಿಜಕ್ಕೂ ಇದು ಖುಷಿಯ ವಿಚಾರ. ಈ ರೀತಿ ಪ್ರಸ್ತಾಪಿಸಲು ಒಂದು ಕಾರಣವಿದೆ. ಜಾಗತೀಕರಣ ಆರಂಭವಾಗಿ ಕೆಲ ವರ್ಷಗಳ ವರೆಗೆ 'ಸಾಲ ಮಾಡಿಯಾದರೂ ತುಪ್ಪ ತಿನ್ನು' ಎಂಬ ಪಾಶ್ಚಿಮಾತ್ಯ ರಾಷ್ಟ್ರಗಳ ಧೋರಣೆ ನಮ್ಮ ಜನರ ಮನಸ್ಸಿಗೆ ಬಂದಿದೆ. ಆದರೆ, ಅಂಥ ಮೋಹದ ಬಲೆ ಈಗ ಕೊಂಚ ಕಳಚಲಾರಂಭಿಸಿದೆ. ಸದ್ಯದ ಹಣಕಾಸು ಸ್ಥಿತಿ, ಪಾಶ್ಚಿಮಾತ್ಯ ಮತ್ತು ಐರೋಪ್ಯ ಒಕ್ಕೂಟಗಳಲ್ಲಿನ ಬಿಕ್ಕಟ್ಟಿನಿಂದ ಪಾಠ ಕಲಿತಂತಿರುವ ದೇಶದ ಜನರು 'ಉಳಿತಾಯವಿಲ್ಲದಿದ್ದರೆ ಉಳಿಗಾಲವಿಲ್ಲ' ಎಂಬ ಮಾತನ್ನು ಮನವರಿಕೆ ಮಾಡಿಕೊಂಡಿದ್ದಾರೆ.
ನೋ ರಿಸ್ಕ್ ಪ್ಲೀಸ್
ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಹಣಕಾಸು ಸಲಹೆಗಾರರ ಹತ್ತಿರ ಬರುವವರು ಕೇಳುವುದು ಒಂದೇ ಮಾತು 'ಹೆಚ್ಚು ಲಾಭ ಆಗದಿದ್ದರೂ ಚಿಂತೆಯಿಲ್ಲ. ಹೂಡಿಕೆ ಮಾಡಿದ ಹಣ ಬರುವ ಖಾತರಿ ನೀಡುವ ಯೋಜನೆಗಳನ್ನು ಹೇಳಿ'. ಏಕೆಂದರೆ, ಸದ್ಯದ ದಿನಮಾನಗಳಲ್ಲಿ ಹಣಕಾಸು ಕ್ಷೇತ್ರದ ಮಾರುಕಟ್ಟೆ ಏರಿಳಿತ ಸಾಮಾನ್ಯ. ಹೀಗಾಗಿ ಹೆಚ್ಚು ಲಾಭದ ಆಸೆಗೆ ಬಿದ್ದು ಇದ್ದ ಹಣವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ತಂದುಕೊಳ್ಳುವುದು ಯಾಕೆ ಎನ್ನುವುದು ಹೆಚ್ಚಿನ ಜನರ ವಾದ.
ಬ್ಯಾಂಕ್ ಠೇವಣಿಯೇ ಪ್ರೀತಿ
ಹೇಳಿ ಕೇಳಿ, ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸುವುದೆಂದರೆ ಭಾರತೀಯರಿಗೆ ಅತಿ ಪ್ರಿಯ ವಿಚಾರ. ಏಕೆಂದರೆ, ದೇಶದ ಹೆಚ್ಚಿನ ಹಣಕಾಸು ವ್ಯವಹಾರ ನಡೆಯುವುದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ. ಇದರಿಂದಾಗಿ ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಲ್ಲಿ ಇರಿಸಲಾಗಿದ್ದ ಠೇವಣಿ ಮೊತ್ತ ಶೇ.12ರಷ್ಟು ಏರಿಕೆಯಾಗಿದೆ. ಅಂದರೆ ರು. 6.2 ಲಕ್ಷ ಕೋಟಿಗೆ ತಲುಪಿದೆ. ಮ್ಯೂಚುಯಲ್ ಫಂಡ್ ಕ್ಷೇತ್ರದಲ್ಲಿ 2011-12ನೇ ಹಣಕಾಸು ವರ್ಷದಲ್ಲಿದ್ದದ್ದು ರು. 4,500 ಕೋಟಿ. ಆದರೆ, 2012-13ನೇ ಹಣಕಾಸು ವರ್ಷದಲ್ಲಿ ಆ ಮೊತ್ತ ರು. 34,400 ಕೋಟಿಗೆ ಹೆಚ್ಚಿತು.
ಷೇರುಗಳ ಮೆಲೂ ಹೆಚ್ಚಿತು...
ಹೀಗಿದ್ದರೂ ಷೇರುಗಳ ಮೇಲಿನ ಪ್ರೀತಿ ಜನರಿಗೇನೂ ಕಡಿಮೆಯಾಗಿಲ್ಲ. ಆದರೆ ಬ್ಯಾಂಕ್ ಠೇವಣಿ, ಮ್ಯೂಚುಯಲ್ ಫಂಡ್ ಕ್ಷೇತ್ರಗಳಲ್ಲಿ ಹೂಡಿಕೆ ಆದಷ್ಟು ಧಾರಾಳವಾಗಿ ಹೂಡಿಕೆಯಾಗಿಲ್ಲ. 10, 600 ಕೋಟಿ ಇದ್ದ ಮೊತ್ತ 27, 400 ಕೋಟಿಗೆ ತಲುಪಿದೆ. ವಿಮಾ ಕ್ಷೇತ್ರ ಮತ್ತೊಂದು ಸಾಂಪ್ರದಾಯಿಕ ಹೂಡಿಕೆ ಕ್ಷೇತ್ರ. ಆದರೆ 2011-12 ಮತ್ತು 2012-13ನೇ ಸಾಲಿಗೆ ಹೋಲಿಸಿಕೊಂಡಾಗ ಕ್ರಮವಾಗಿ 1.90 ಲಕ್ಷ ಕೋಟಿಯಿಂದ 1.80 ಲಕ್ಷ ಕೋಟಿಗೆ ಇಳಿಕೆಯಾಗಿದೆ. ವಿಮಾ ಕ್ಷೇತ್ರದಲ್ಲಿ ತಂದಿರುವ ಬದಲಾವಣೆ ಮತ್ತು ಇತರ ಮಾರುಕಟ್ಟೆ ಸಂಬಂಧಿ ವಿಚಾರಗಳಿಂದಾಗಿ ಈ ಕ್ಷೇತ್ರದಲ್ಲಿ ಹೂಡಿಕೆ ಕೊಂಚ ಮಂಕಾಗಿದೆ ಎಂದು ವ್ಯಾಖ್ಯಾನಿಸಬಹುದು. ಹೀಗಾಗಿ ಕಳೆದ ಎರಡು ಹಣಕಾಸು ವರ್ಷಗಳಲ್ಲಿ ವಿಮಾ ಕಂಪನಿಗಳು ಸಂಗ್ರಹಿಸಿದ ಪ್ರೀಮಿಯಂ ಮೊತ್ತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
- ರು. 11 ಲಕ್ಷ ಕೋಟಿ - ದೇಶದಲ್ಲಿರುವ ಮನೆಗಳಲ್ಲಿ ಸಂಗ್ರಹವಾಗಿರುವ ಉಳಿತಾಯದ ಮೊತ್ತ.
- 6.2 ಲಕ್ಷ ಕೋಟಿ - ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಲಾಗಿರುವ ಭಾರತೀಯರ ಹಣ.
- 1.60 ಲಕ್ಷ ಕೋಟಿ- ಭವಿಷ್ಯ ನಿಧಿ ಮತ್ತು ಪಿಂಚಣಿ ಕ್ಷೇತ್ರದಲ್ಲಿನ ಉಳಿತಾಯದ ಮೊತ್ತ.
- ರು. 34 ಸಾವಿರ ಕೋಟಿ - ಷೇರು ಮಾರುಕಟ್ಟೆ, ಡಿಬೆಂಚರ್ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯಾಗಿರುವ ಮೊತ್ತ.
- 1.06 ಲಕ್ಷ ಕೋಟಿ - ಅಂಚೆ ಇಲಾಖೆಯ ಉಳಿತಾಯ ಯೋಜನೆ, ಚಿನ್ನ, ಬೆಳ್ಳಿ ಮತ್ತು ಇತರ ಕ್ಷೇತ್ರಗಳಲ್ಲಿ ಉಳಿತಾಯವಾಗಿರುವ ಮೊತ್ತ.
khandige29@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


