ಮನಿ ಟ್ರಾನ್ಸ್‌ಫರ್

ಬರೋಬ್ಬರಿ 238 ವರ್ಷಗಳ ಇತಿಹಾಸ ಇರುವ ಭಾರತೀಯ ಅಂಚೆ ಇಲಾಖೆ ಹಲವು ಬದಲಾವಣೆಗಳಿಗೆ ತನ್ನನ್ನು ತೆರೆದುಕೊಂಡಿದೆ. ಹಳೆಯ ಸೇವೆಗಳು ಹೊಸ ವ್ಯವಸ್ಥೆಗೆ ಬದಲಾಗಿವೆ. ಅದಕ್ಕೊಂದು ಉತ್ತಮ ಉದಾಹರಣೆ ಮನಿ ಆರ್ಡರ್ ಕಳುಹಿಸುವ ವ್ಯವಸ್ಥೆ. ಫಾರಂ ಭರ್ತಿ ಮಾಡಿ ಅದನ್ನು ಕೌಂಟರ್‌ನಲ್ಲಿ ಕೊಟ್ಟು... ಹೀಗೆ ಹಲವು ಹಂತಗಳಿಗೆ ಈಗ ಆಂಶಿಕ ತೆರೆ ಬಿದ್ದಿದೆ. ಹಳೆಯ ವ್ಯವಸ್ಥೆ ಜತೆಗೆ ಹೊಸ ವ್ಯವಸ್ಥೆಯಾದ ಇನ್‌ಸ್ಟಾಂಟ್ ಮನಿ ಆರ್ಡರ್ (ಐಎಂಒ) ಜಾರಿಗೆ ಬಂದಿದೆ.
ಏನಿದು ಐಎಂಒ?
ಊರಲ್ಲಿದ್ದವರು ಅಂಚೆ ಇಲಾಖೆಗೆ ಹೋಗಿ ದುಡ್ಡು ಪಡೆಯಬೇಕಾದ ವ್ಯಕ್ತಿಯ ವಿಳಾಸ ನೀಡಿ ಹಣ ಪಾವತಿ ಮಾಡುತ್ತಿದ್ದ ಪದ್ಧತಿಯೇ ಇಲ್ಲೂ ಅನ್ವಯಿಸುತ್ತದೆ. ಆದರೆ, ಮೊದಲಿನಂತೆ ನಾಲ್ಕಾರು ದಿನಗಳು ಹಿಡಿಯುವುದಿಲ್ಲ. ದುಡ್ಡು ಪಾವತಿ ಮಾಡಿದ ಕ್ಷಣಾರ್ಧದಲ್ಲೇ ನಿಗದಿತ ವ್ಯಕ್ತಿಗೆ ಹಣ ತಲುಪುತ್ತದೆ. ಆನ್‌ಲೈನ್ ಮೂಲಕವೇ ವ್ಯವಹಾರ.
ಜಮಾ ಹೇಗೆ?
ಅಂಚೆ ಇಲಾಖೆಗೆ ಹೋಗಿ 'ಟು ರೆಮಿಟ್ ಪೇಮೆಂಟ್' (ಟಿಆರ್‌ಪಿ-1) ಪಡೆದು ದುಡ್ಡು ಪಡೆಯಬೇಕಾದ ವ್ಯಕ್ತಿಯ ಪೂರ್ಣ ಹೆಸರು, ವಿಳಾಸ ಸೇರಿದಂತೆ ಇನ್ನಿತರ ಮಾಹಿತಿ ಭರ್ತಿ ಮಾಡಬೇಕು. ಬುಕಿಂಗ್ ಕ್ಲರ್ಕ್ ಬಳಿ ಭರ್ತಿ ಮಾಡಿದ ಪ್ರತಿ ನೀಡಿದರೆ ಅದರಲ್ಲಿರುವ ಪೂರ್ಣ ವಿವರ ಪಡೆದು 16 ಅಂಕಿಯ ಗೌಪ್ಯ ಸಂಖ್ಯೆಯುಳ್ಳ ಕಂಪ್ಯೂಟರ್ ರಸೀದಿ ನೀಡುತ್ತಾರೆ. ಇದು ಸೀಲ್ಡ್ ಆಗಿರುವುದರಿಂದ ಕ್ಲರ್ಕ್‌ಗೂ ಆ ಸಂಖ್ಯೆಗಳು ಗೊತ್ತಿರುವುದಿಲ್ಲ.
ಪಡೆಯುವುದು ಹೇಗೆ?
ದುಡ್ಡು ಪಡೆಯುವ ವ್ಯಕ್ತಿಗೆ ಹಣ ಜಮಾ ಮಾಡಿದ ವೇಳೆ ನೀಡಿರುವ 16 ಅಂಕಿಯ ಗೌಪ್ಯ ಸಂಖ್ಯೆಗಳನ್ನು ಎಸ್‌ಎಂಎಸ್ ಅಥವಾ ಫೋನ್ ಮಾಡಿ ನೀಡಬೇಕು. ಆ ಸಂಖ್ಯೆಯನ್ನು ಪಡೆದು ಹತ್ತಿರದ ಅಂಚೆ ಇಲಾಖೆಗೆ ಹೋಗಿ 'ಟು ಮೇಕ್ ಪೇಮೆಂಟ್' (ಟಿಎಂಪಿ-1) ಫಾರ್ಮ್ ಭರ್ತಿ ಮಾಡಬೇಕು. ಜತೆಗೆ ಭಾವಚಿತ್ರವಿರುವ ಗುರುತಿನ ಚೀಟಿ ತೋರಿಸಬೇಕು. ಎಲ್ಲವೂ ಸರಿಯಾಗಿದ್ದರೆ ಕ್ಷಣಾರ್ಧದಲ್ಲೇ ದುಡ್ಡು ಪಡೆಯಬಹುದು. 20,000 ಸಾವಿರದವರೆಗೂ ದುಡ್ಡನ್ನೇ ನೀಡಲಾಗುತ್ತದೆ. ಅದಕ್ಕಿಂತಲೂ ಮೇಲ್ಪಟ್ಟಿದ್ದರೆ ಚೆಕ್ ಮೂಲಕ ನೀಡಲಾಗುತ್ತದೆ. ಅಂಚೆ ಇಲಾಖೆಯಲ್ಲೇ ಖಾತೆ ಇದ್ದರೆ ನೇರವಾಗಿ ಅಲ್ಲಿಗೇ ಜಮಾ ಮಾಡಲಾಗುತ್ತದೆ.
ಎಲ್ಲೆಲ್ಲಿ ದುಡ್ಡು ಪಡೆಯಬಹುದು?
ಐಎಂಒ ಮೂಲಕ ಕಳುಹಿಸಿದ ದುಡ್ಡು ಪಡೆಯಲು ಹತ್ತಿರದ ಕೇಂದ್ರ ಅಂಚೆಕಚೇರಿಗೆ ತೆರಳಬೇಕು. ಅಲ್ಲಿ 16 ಅಂಕೆಗಳ ಗೌಪ್ಯ ಸಂಖ್ಯೆ ನೀಡಿದರೆ ದುಡ್ಡು ಪಡೆಯಬಹುದು. ಕೇವಲ ಐಎಂಒ ವ್ಯವಸ್ಥೆ ಇರುವ ಅಂಚೆ ಕಚೇರಿಗಳಲ್ಲಿ ಮಾತ್ರ ಈ ದುಡ್ಡನ್ನು ಪಡೆಯಬಹುದು. ಸದ್ಯ ದೇಶದ ಪ್ರಮುಖ 11 ನಗರಗಳಲ್ಲಿ 24 ಶಾಖೆಗಳ ಮೂಲಕ ವಹಿವಾಟು ನಡೆದಿದೆ. ಬೆಂಗಳೂರಿನ ಕೇಂದ್ರ ಅಂಚೆ ಕಚೇರಿ, ರಾಜಾಜಿನಗರ ಹಾಗೂ ಜಯನಗರ ಅಂಚೆ ಕಚೇರಿಗಳಲ್ಲಿ ಐಎಂಒ ವ್ಯವಸ್ಥೆ ಜಾರಿಯಲ್ಲಿದೆ. ಶೀಘ್ರವೇ ರಾಜ್ಯದ ವಿವಿಧ ಕೇಂದ್ರಗಳಲ್ಲೂ ಆರಂಭವಾಗಲಿದೆ.
ಬ್ಯಾಂಕ್‌ಗಿಂತಲೂ ಪರವಾಗಿಲ್ವಾ?
ಬ್ಯಾಂಕ್‌ಗಳಿಗಿಂತಲೂ ಅಂಚೆ ಇಲಾಖೆ ವಹಿವಾಟು ಸುರಕ್ಷಿತ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಂದು ಅದುವೇ ಶ್ರೇಷ್ಠ ಅಲ್ಲ. ಬ್ಯಾಂಕ್‌ನಲ್ಲಿ ವಹಿವಾಟಿಗೆ ವಿಧಿಸುವ ಕಮಿಷನ್‌ಗೆ ಹೋಲಿಸಿದರೆ ಅಂಚೆ ಇಲಾಖೆ ಗ್ರಾಹಕ ಸ್ನೇಹಿ. ಆದರೆ, ಬ್ಯಾಂಕ್‌ಗೆ ತೆರಳಿ ಸಂಬಂಧಿಸಿದ ವ್ಯಕ್ತಿಗೆ ದುಡ್ಡು ಜಮಾ ಮಾಡಿದರೆ ಕ್ಷಣಾರ್ಧದಲ್ಲೇ ಹತ್ತಿರದ ಎಟಿಎಂಗೆ ಹೋಗಿ ದುಡ್ಡು ಪಡೆಯಬಹುದು. ಐಎಂಒ ಪದ್ಧತಿಯಲ್ಲಿ ಈ ವ್ಯವಸ್ಥೆ ಇಲ್ಲ. ಖುದ್ದು ಅಂಚೆ ಇಲಾಖೆಗೆ ಹೋಗಿ ಫಾರ್ಮ್ ಭರ್ತಿ ಮಾಡಿ ದುಡ್ಡು ಪಡೆಯಬೇಕು. ಅಲ್ಲದೇ 50000ಕ್ಕೆ ವಹಿವಾಟು ಸೀಮಿತಗೊಳಿಸಿದ್ದರಿಂದ ಇದು ವ್ಯಾಪಾರಿಗಳಿಗೆ ಅನುಕೂಲವಾಗುವುದಿಲ್ಲ. ಹೀಗಾಗಿ ಇದು ಬ್ಯಾಂಕ್‌ಗಳಿಗೆ ಹೋಲಿಸಿದರೆ ಸಪ್ಪೆ ವ್ಯವಸ್ಥೆ.
ಎಷ್ಟು ಸುರಕ್ಷಿತ?
16 ಅಂಕಿಗಳ ಗೌಪ್ಯ ಸಂಖ್ಯೆ ನೀಡಿದರೆ ಮಾತ್ರ ದುಡ್ಡು ಪಡೆಯಬಹುದು ಎಂಬುದು ಒಪ್ಪತಕ್ಕ ಮಾತು. ಆದರೆ, ಇದು ದುರುಪಯೋಗವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಭಾವಚಿತ್ರವಿರುವ ಗುರುತಿನ ಚೀಟಿ ತೋರಿಸಿ ಹಣ ಪಡೆಯುವ ವ್ಯವಸ್ಥೆ ಇದ್ದರೂ ಎಡವಟ್ಟಾಗುವ ಸಂಭವ ಇದೆ. ಸ್ವಲ್ಪ ಯಾಮಾರಿದರೂ ಸಾವಿರಾರು ರುಪಾಯಿ ಕೈ ತಪ್ಪುವ ಭೀತಿ ಇರುತ್ತದೆ. ಹೊಸ ವ್ಯವಸ್ಥೆ ನಡುವೆ ಕುಂದಿದಂತೆ ಕಂಡುಬರುವ ಅಂಚೆ ಇಲಾಖೆಗೆ ನೂತನ ವ್ಯವಸ್ಥೆಗಳನ್ನು ಜಾರಿಗಳಿಸಿ ಅನುಷ್ಠಾನಗೊಳಿಸಲೇಬೇಕಾಗಿದೆ. ಆನ್‌ಲೈನ್ ಬ್ಯಾಂಕಿಂಗ್ ವಹಿವಾಟು ಆರಂಭವಾದಾಗಿನಿಂದಂತಲೂ ಎಂಒ ಎಂಬ ಹೆಸರೇ ಮರೆತು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಪಾರ್ಸಲ್, ಅಂಚೆ ವ್ಯವಹಾರದಲ್ಲೇ ಕಾಲ ಕಳೆಯುವುದು ಅಸಾಧ್ಯ.
ಬೇಕಾದ ದಾಖಲೆಗಳು
- ಮತದಾರರ ಭಾವಚಿತ್ರ
- ಪಾನ್ ಕಾರ್ಡ್
- ಭಾವಚಿತ್ರವಿರುವ ಪಡಿತರ ಚೀಟಿ
- ಅಂಚೆ ಇಲಾಖೆ ಗುರುತಿನ ಚೀಟಿ
- ಡ್ರೈವಿಂಗ್ ಲೈಸೆನ್ಸ್
- ಶಾಲೆ, ಕಾಲೇಜಿನ ಗುರುತಿನ ಚೀಟಿ
- ಕಚೇರಿಯ ಗುರುತಿನ ಚೀಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


