ಕಾಯೋ ಕಾಲ

ಮುಂಬೈ ಷೇರುಪೇಟೆ ಸೂಚ್ಯಂಕ ನವೆಂಬರ್‌ನಲ್ಲಿ 21,000 ಗಡಿ ತಲುಪಿದರೂ ಕೆಲವೇ ಕಲವು ಷೇರುಗಳ ಬೆಲೆ ಏರಿಕೆ ಕಂಡಿವೆ. ಹಲವಾರು ಕಂಪನಿಗಳ ಷೇರುಗಳ ಬೆಲೆ ಮೇಲೆ ಬರದೇ ಇರುವುದು ಹಲವು ಹೂಡಿಕೆದಾರರ ನಿದ್ದೆಗೆಡಿಸಿರುವುದು ಸುಳ್ಳಲ್ಲ.
ದೇಶ, ಹೊರದೇಶದಲ್ಲಿನ ಆರ್ಥಿಕ ಸ್ಥಿತಿ, ಇನ್ನಿತರ ಹಲವು ಕಾರಣಗಳಿಂದ 2008ರ ವೇಳೆ ಕುಸಿತ ಕಂಡ ಭಾರತೀಯ ಷೇರುಪೇಟೆ ನಂತರದ ದಿನಗಳಲ್ಲೂ ಕುಸಿತ ಕಾಣುತ್ತಲೇ ಸಾಗಿತು. ಇದರ ಪರಿಣಾಮ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸೇರಿದಂತೆ ಹಲವು ಬೃಹತ್ ಕಂಪನಿಗಳ ಷೇರುಗಳ ಬೆಲೆ ತೀವ್ರ ಇಳಿಮುಖಗೊಂಡವು. ಇನ್ನು ಉಳಿದ ಹಲವಾರು ಕಂಪನಿಗಳ ಷೇರುಗಳ ಸ್ಥಿತಿಯಂತೂ ಅಯೋವುಯ. ಇದರಿಂದ ದೀರ್ಘಾವಧಿ ಷೇರು ಹೂಡಿಕೆದಾರರು ನಷ್ಟದಲ್ಲಿ ಸಿಲುಕುವಂತಾಯಿತು.
ಮುಂದಿನ ದಿನಗಳಲ್ಲಾದರೂ ತಮ್ಮ ಷೇರುಗಳ ಬೆಲೆ ಮೇಲೆ ಬರಬಹುದೆಂದು ಹಲವು ವರ್ಷಗಳಿಂದ ಕಾಯುತ್ತಿರುವ ಹಲವು ಹೂಡಿಕೆದಾರರಿಗೆ ಷೇರು ಸೂಚ್ಯಂಕ ಏರುತ್ತಿರುವುದು ಶುಭ ಸಮಾಚಾರವೇ. ಆದರೆ ಷೇರುಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಿಲ್ಲ. ಕಳೆದ ದೀಪಾವಳಿ ವೇಳೆಯಾದರೂ ಷೇರುಗಳ ಬೆಲೆ ಮೇಲೆ ಬರಬಹುದೆಂದು ನೀರಿಕ್ಷೆಯಲ್ಲಿದ್ದ ಹಲವರಿಗೆ ನಿರಾಶದಾಯಕವಾದ ವಾತಾವರಣವೇ ಉಂಟಾಯಿತು.
ನಷ್ಟ ಮಾಡಿಕೊಂಡು ಷೇರು ಮಾರುವುದಕ್ಕಿಂತ ಭಾರತೀಯ ಷೇರು ಪೇಟೆ ಚೇತರಿಸಿಕೊಳ್ಳುವ ಆಶಾಭಾವನೆಯಿಂದ ದೀರ್ಘಾವಧಿ ಹೂಡಿಕೆದಾರರು ಇನ್ನಷ್ಟು ದಿನ ಕಾಯುವುದು ಅನಿವಾರ್ಯ.
ರುಪಾಯಿ ಮೌಲ್ಯ ಚೇತರಿಕೆ
ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಆರ್‌ಬಿಐ ನೂತನ ಗವರ್ನರ್ ರಘುರಾಮ ರಾಜನ್ ಅಧಿಕಾರ ವಹಿಸಿಕೊಂಡಾಗ 1 ಡಾಲರ್‌ಗೆ ರು. 68 ಇದ್ದ ರುಪಾಯಿ ಮೌಲ್ಯ ಚೇತರಿಸಿಕೊಂಡು ರು. 63ಕ್ಕೆ ಬಂದು ತಲುಪಿದೆ. ಇದರ ಪರಿಣಾಮ 18,500 ಇದ್ದ ಮುಂಬೈ ಷೇರು ಪೇಟೆ ಸೂಚ್ಯಂಕ 21,000ರವರೆಗೆ ಮುಟ್ಟಿದೆ. ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿರುವುದರಿಂದ ರುಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಪೇಟೆ ಮೇಲೆ ನಂಬಿಕೆಹೊಂದಿ ಹಣ ಹೂಡಲು ಮುಂದಾಗುತ್ತಿದ್ದಾರೆ.
ಗೋಲ್ಡ್‌ಮನ್ ಸ್ಯಾಚ್ ಎನ್ನುವಷೇರುಪೇಟೆ ಪರಿಣಿತ ವಿದೇಶಿ ಕಂಪನಿಯೊಂದು ಭಾರತೀಯ ಷೇರು ಮಾರುಕಟ್ಟೆ ಇನ್ನೂ ಹೆಚ್ಚಿನ ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಆದರೆ, ಗ್ರಾಹಕರು ಎಚ್ಚರಿಕೆಯೊಂದಿಗೆ ಹಣ ಹೂಡುವುದು ಅವಶ್ಯಕ.
ಮಾರ್ಗದರ್ಶಿ ಸೂತ್ರ
= ಯಾವುದೇ ಕಂಪನಿಯ ಷೇರು ಕೊಳ್ಳುವ ಮೊದಲು ಅದರ ಹಣಕಾಸಿನ ಸ್ಥಿತಿಗತಿಯನ್ನು ಪರಿಶೀಲಿಸಿ, ಸಮಗ್ರ ಮಾಹಿತಿ ತಿಳಿದುಕೊಂಡು ಹೂಡಿಕೆ ಮಾಡಿ.
= ಷೇರು ವಹಿವಾಟಿನಲ್ಲಿ ಹಲವು ರೀತಿಯ ವಂಚನೆಯಂತಹ ಘಟನೆಗಳು ನಡೆಯುವುದುಂಟು. ತಾತ್ಕಾಲಿಕವಾಗಿ ಕೆಲವು ಷೇರುಗಳ ಬೆಲೆ ಹೆಚ್ಚು ಏರಿಕೆ ಕಂಡು, ನಂತರ ತೀವ್ರ ಕುಸಿತ ಕಾಣುತ್ತವೆ.
= ಹಲವಾರು ಹೊಸ ಕಂಪನಿಗಳು ಹೊಸ ಷೇರುಗಳನ್ನು ಬಿಡುಗಡೆ ಮಾಡುತ್ತವೆ. ಇವುಗಳನ್ನು ಖರೀದಿಸುವಾಗ ಎಚ್ಚರ ವಹಿಸಲೇಬೇಕು.
= ಅಂತರ್ಜಾಲದಲ್ಲಿ ಷೇರು ವಹಿವಾಟಿಗೆ ಸಂಬಂಧಿಸಿದಂತೆ ಕೆಲವು ಪರಿಣಿತರೆನಿಸಿಕೊಂಡವರು ಇಂತಹ ಷೇರುಗಳನ್ನೇ ಖರೀದಿಸಿ, ಇವುಗಳಿಂದ ಹೆಚ್ಚಿನ ಲಾಭ ಸಂಪಾದಿಸಬಹುದು ಎಂದು ಮಾಹಿತಿ ನೀಡುತ್ತಾರೆ. ಆದರೂ ಇನ್ನಷ್ಟು ಸೂಕ್ತ ಮಾಹಿತಿ ಕಲೆ ಹಾಕಿ ಷೇರು ಕೊಳ್ಳುವುದು ಉತ್ತಮ.
= ಕೆಲವು ಷೇರು ಹೂಡಿಕೆದಾರರೂ ಗ್ರಾಹಕರ ದಾರಿ ತಪ್ಪಿಸುವುದುಂಟು. ತಾವು ಖರೀದಿಸಿದ ಷೇರುಗಳು ಉತ್ತಮ ಲಾಭ ನೀಡಿವೆ. ಬೇರೆ ಗ್ರಾಹಕರು ಇಂತವುಗಳನ್ನೇ ಖರೀದಿಸಿದರೆ ಲಾಭ ಗಳಿಸಬಹುದು ಎನ್ನುವ ಮಾಹಿತಿ ನೀಡುತ್ತಾರೆ. ಅದನ್ನು ಆಧರಿಸಿ ಷೇರು ಖರೀದಿಸುವುದು ಸೂಕ್ತವಲ್ಲ.
= ಕಂಪನಿಗಳ ಪ್ರತಿ ವರ್ಷದ ಲಾಭಾಂಶ, ಡಿವಿಡೆಂಡ್, ಬೋನಸ್ ಷೇರು ನೀಡುವ ಬಗ್ಗೆ ತಿಳಿದು ಅಂಥ ಷೇರುಗಳನ್ನು ಖರೀದಿಸಬಹುದು.
= ನಿಪ್ಟಿಯ ಟಾಪ್ 50 ಷೇರುಗಳಲ್ಲಿ ಹೂಡಿಕೆ ಉತ್ತಮ.
= ಷೇರು ಹೂಡಿಕೆ ನಂತರ ದೀರ್ಘಾವಧಿ ಹಾಗೇ ಬಿಡಬಾರದು. ಮೇಲಿಂದ ಮೇಲೆ ಷೇರು ಬೆಲೆ ಏರಿಕೆ, ಇಳಿತ ಪರಿಶೀಲಿಸಬೇಕು. ನಿಮಗೆ ಆ ಷೇರು ಸೂಕ್ತವಲ್ಲವೆಂದು ತಿಳಿದರೆ ಬೇರೆ ಷೇರುಗಳ ಮೇಲೆ ಹೂಡಿಕೆ ಮಾಡಬಹುದು.
= ತಮ್ಮ ಆದಾಯದಲ್ಲಿ ಸ್ವಲ್ಪ ಭಾಗ ಮಾತ್ರ ಷೇರಿನಲ್ಲಿ ಹೂಡುವುದು ಸೂಕ್ತ. ಅಲ್ಲದೆ, ಒಂದೇ ಷೇರಿನಲ್ಲಿ ಹಣ ಹೂಡದೇ ಕೆಲವು ಉತ್ತಮ ಷೇರುಗಳ ಆಯ್ಕೆ ಮಾಡಿ, ಎಲ್ಲವುಗಳಲ್ಲಿ ಸ್ವಲ್ಪ ಹಣ ಹೂಡಿದರೆ ನಷ್ಟದ ಸಾಧ್ಯತೆ ಕಡಿಮೆ.
= ಯಾರದ್ದೋ ಮಾತು ಕೇಳಿ, ಸೂಕ್ತ ಮಾಹಿತಿ ತಿಳಿಯದೇ ಹಣ ಹೂಡಬಾರದು.
= ಪ್ರತಿ ಷೇರಿನ ಆದಾಯ ಹೆಚ್ಚಿರಬೇಕು. ಕಂಪನಿಯ ಸಾಲದ ಮೊತ್ತ ಕಂಪನಿಯ ಬಂಡವಾಳದ ಮೊತ್ತಕ್ಕಿಂತ ಕಡಿಮೆ ಇರಬೇಕು.
= ಷೇರಿನ ಬೆಲೆಯು ನಿಕೃಷ್ಟವಾಗಿರಬಾರದು. ಅಲ್ಲದೇ ಕಂಪನಿಯು ತನ್ನ ಷೇರುಗಳನ್ನು ಅಡವಿಟ್ಟಿರಬಾರದು.
ಮೋದಿ ಅಲೆ ಪ್ರಭಾವ
ಮುಂಬೈ ಷೇರು ಪೇಟೆ ಸೂಚ್ಯಂಕ 20-21 ಸಾವಿರದ ಮಧ್ಯೆ ಹೊಯ್ದಾಡುತ್ತಿದೆ. ಆರ್‌ಬಿಐಗೆ ಹೊಸ ಗವರ್ನರ್ ಬಂದ ನಂತರ ರುಪಾಯಿ ಮೌಲ್ಯ ಸ್ವಲ್ಪ ಚೇತರಿಕೆ ಕಂಡಿದೆ. ಸೂಚ್ಯಂಕ ಏರಿಕೆಗೆ ರಾಜಕೀಯ ಸ್ಥಿತಿಗತಿಯೂ ಪ್ರಮುಖ ಕಾರಣವಾಗಿದೆ. ನರೇಂದ್ರ ಮೋದಿಯವರ ಅಲೆ ದೇಶದಲ್ಲಿ ಹೆಚ್ಚುತ್ತಿದ್ದು, ಕೇಂದ್ರದಲ್ಲಿ ಮುಂದೆ ಅವರ ಸರ್ಕಾರವೇನಾದರೂ ರಚನೆಯಾದರೆ ಭಾರತೀಯ ಷೇರುಪೇಟೆ ಸೂಚ್ಯಂಕ 25,000 ಗಡಿ ತಲುಪಬಹುದು ಎನ್ನುವುದು ಹಲವರ ಲೆಕ್ಕಾಚಾರವಾಗಿದೆ. ಆದ್ದರಿಂದ ದೇಶದ, ಹೊರ ದೇಶದ ಹೂಡಿಕೆದಾರರೂ ಭಾರತೀಯ ಷೇರು ಪೇಟೆಯಲ್ಲಿ ಹಣ ಹೂಡಲು ಮುಂದಾಗುತ್ತಿದ್ದಾರೆ.
- ರಾಜಶೇಖರಗೌಡ ಚನ್ನಪ್ಪಗೌಡ್ರ
ಹುಬ್ಬಳ್ಳಿಯ (ಐಎಫ್‌ಸಿಐ) ಫೈನಾನ್ಸಿಯಲ್ ಸರ್ವೀಸ್ ಲಿಮಿಟೆಡನ್ ಶಾಖಾ ವ್ಯವಸ್ಥಾಪಕ.
- ಮಹಾಂತೇಶ ಕುಳ್ಳೊಳ್ಳಿ
mantu97350@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


