ವಿದೇಶಿ ಹಾಟ್ ಮನಿ

1991ರಲ್ಲಿ, ಸುಧಾರಣೆ ಯುಗದ ಆರಂಭದಲ್ಲಿ ಷೇರು ಬಜಾರಿನ ಜನರಿಗೆ ತುಂಬಾ ಖುಷಿಯನ್ನು ಕೊಟ್ಟ ಸರ್ಕಾರದ ನಿರ್ಧಾರ ಎಂದರೆ ವಿದೇಶಿ ವಿತ್ತೀಯ ಸಂಸ್ಥೆಗಳಿಗೆ ಭಾರತೀಯ ಷೇರುಪೇಟೆಯಲ್ಲಿ ವ್ಯವಹಾರ ನಡೆಸುವ ಅವಕಾಶಕ್ಕೆ ಸಂಬಂಧಿಸಿದ್ದು.
ಆರಂಭದ ದಿನಗಳಲ್ಲಿ ಇಲ್ಲಿನ ಹೂಡಿಕೆದಾರರು, ಹವ್ಯಾಸಿ ವ್ಯವಹಾರಸ್ಥರು ವಿದೇಶಿ ಹಣದ ಆಗಮನದಿಂದ, ಷೇರುಗಳ ಬೆಲೆ ಏರಿದಾಗ ಲಾಭ ಮಾಡಿಕೊಂಡಿದ್ದು ನಿಜ. ಆದರೆ ಆಗ ಯಾರೂ ಆ ವಿದೇಶಿ ಹಣ (ಅದನ್ನು ಹಾಟ್ ಮನಿ ಎನ್ನುತ್ತಾರೆ ಈಗ ಪೇಟೆಯ ಜನ) ಬಂದಷ್ಟೇ ವೇಗದಲ್ಲಿ ಹೊರಗೆ ಹೋಗಲೂಬಹುದು ಎನ್ನುವುದನ್ನು ಗಮನಿಸಲಿಲ್ಲ.
ಇದರಿಂದ ಈಗ ಷೇರು ಬಜಾರು ನಿರಂತರವಾಗಿ ಪ್ರಪಾತದ ಅಂಚಿನಲ್ಲೇ ಇರುವಂತಾಗಿದೆ. ಭಾರತೀಯ ಷೇರುಪೇಟೆಯಲ್ಲಿ ಹೂಡಿಕೆಯಾಗಿರುವ ವಿದೇಶಿ ಹಣದ ಮೌಲ್ಯ ಸುಮಾರು 22000 ಕೋಟಿ ಡಾಲರ್‌ಗಳಷ್ಟು. ಅಷ್ಟು ಹಣ ಏಕ್‌ದಂ ಹೊರಗೆ ಹೋದರೆ, ಪೇಟೆಯಲ್ಲಿ ಆಗಬಹುದಾದ ಅನಾಹುತ (ರಕ್ತಪಾತ) ಅನೇಕರನ್ನು ಗಾಬರಿಗೊಳಿಸಿದೆ. ಆತಂಕವೂ ಆಗಿದೆ.
ಸಾಮಾನ್ಯ ವ್ಯವಹಾರಸ್ಥರು ಷೇರುಪೇಟೆಯಲ್ಲಿ ವ್ಯವಹರಿಸಬೇಕಾದರೆ ಈಗ ಸ್ವಲ್ಪ ಎಚ್ಚರಿಕೆಯಿಂದಿರಬೇಕು. ಅತಿಪ್ರತಿಷ್ಠಿತ ಕಂಪನಿಗಳಲ್ಲೇ ವಿದೇಶಿ ಹೂಡಿಕೆಯೂ ಹೆಚ್ಚಾಗಿರುವುದು. ವಿದೇಶಿ ಹಣ ಏಕ್‌ದಂ ಹೋಗದೇ ಇರಬಹುದು. ಆ ಮಾತು ಬೇರೆ.
ಅಕ್ಕಿ ಬೆಲೆ ವಿಚಾರ
ಪೇಟೆಯಲ್ಲಿ ಅಕ್ಕಿ ಬೆಲೆ ಏರುತ್ತಲೇ ಇದೆ. ಆಹಾರದ ಇನ್‌ಫ್ಲೇಷನ್‌ಗೆ ತರಕಾರಿಯ ಬೆಲೆಯನ್ನು ಬಿಟ್ಟರೆ, ಅಕ್ಕಿಯ ಬೆಲೆ ಹೆಚ್ಚಳವೇ ಅತಿ ದೊಡ್ಡ ಕಾರಣ. ಇದಕ್ಕೆ ಸರ್ಕಾರವೇ ಅತಿದೊಡ್ಡ ದಾಸ್ತಾನುಗಾರನ ರೀತಿ ವರ್ತಿಸುತ್ತಿರುವುದೇ ಕಾರಣ. ನಿಜ. ಇದು ಕಳ್ಳದಾಸ್ತಾನಲ್ಲ. ಆದರೆ ಪರಿಣಾಮ ಒಂದೇ.
ಅಕ್ಟೋಬರ್‌ನಲ್ಲಿ ಸರ್ಕಾರದ ಅಗ್ಗದ ಧಾನ್ಯ ಪೂರೈಕೆ ಕಾರ್ಯಕ್ರಮಕ್ಕೆ ಬೇಕಾದ ಸಂಗ್ರಹಣದಲ್ಲಿ ಅಕ್ಕಿಯ ಪಾಲು 70 ಲಕ್ಷ ಟನ್. ಆ ಲೆಕ್ಕಾಚಾರ ಸರ್ಕಾರದ್ದೇ. ಆದರೆ ಈಗ ಸಂಗ್ರಹಿಸಿರುವ ಅಕ್ಕಿಯ ಪ್ರಮಾಣ 210 ಲಕ್ಷ ಟನ್.
ಈ ಪ್ರಮಾಣದ ಮಾಲು ಪೇಟೆಯಿಂದ ಹೊರಗಿದ್ದರೆ, ಅಕ್ಕಿಯ ಪೂರೈಕೆಯಲ್ಲಿ ಕೊರತೆ ಕಂಡುಬರದೇ ಇನ್ನೇನಾಗುತ್ತೇ? ಅಕ್ಕಿಯ ಬೆಲೆಯ ಏರಿಕೆ ಹೆಚ್ಚು ಕಡಿಮೆ ಈ ತಿಂಗಳಲ್ಲಿ ಶೇ.18-20ರಷ್ಟು. ಬಡವರು- ಕಡು ಬಡವರಿಗೆ ಸರ್ಕಾರ ಕೇಜಿಗೊಂದು ರುಪಾಯಿನಂತೆ ಅಕ್ಕಿಯನ್ನು ಪೂರೈಸುತ್ತದೆ. ಆ ಜನವರ್ಗಕ್ಕೂ, ಆಹಾರ ಧಾನ್ಯಗಳ ಮುಕ್ತಪೇಟೆಗೂ ಈಗ ಸಂಬಂಧವೇ ಇಲ್ಲ ಎನ್ನುವಂತಾಗಿದೆ.
ಬ್ರ್ಯಾಂಡೆಡ್ ಅಕ್ಕಿಯನ್ನು ಬಳಸುವ ಅತಿ ಶ್ರೀಮಂತ ವರ್ಗವನ್ನು ಬಿಟ್ಟರೆ, ಉಳಿದ ಜನರ ಗತಿ ಏನಾಗಬೇಕು? ಸರ್ಕಾರದ ಜವಾಬ್ದಾರಿ ಶೇ.67ರಷ್ಟು ಜನರ ಅಗತ್ಯವಷ್ಟೇ. ಅವರಲ್ಲಿ ಎಷ್ಟು ಜನರು ನಿಜವಾಗಿಯೂ ಬಡವರು ಎಷ್ಟು ಜನ ಅಲ್ಲ ಎನ್ನುವ ವಿಚಾರ ಸರ್ಕಾರದ ಪಾಲಿಗೆ ಶುಷ್ಕವಾದ ವಿವಾದ. ಆದರೆ ಬಡವರಲ್ಲದವರೂ ದೇಶದಲ್ಲಿ ಬದುಕಬೇಕಲ್ಲ?
ಸರ್ಕಾರದ ಉಗ್ರಾಣಗಳಲ್ಲಿ ಧಾನ್ಯ ಕೊಳೆಯುತ್ತದೆ. ಹಾಳಾಗುತ್ತದೆ. ಬಾಡಿಗೆ, ಸಾಗಾಣಿಕೆಯ ವೆಚ್ಚ ಹೆಚ್ಚಿದೆ. ಆದರೂ ಸರ್ಕಾರ ತನ್ನ ವಶದಲ್ಲಿರುವ ಅಕ್ಕಿಯ ದಾಸ್ತಾನಿನ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲವಂತೆ.
ಈ ನೀತಿಗೇನು ಹೇಳುವುದು?
ಒಂದು ವಿತ್ತಪತ್ರಿಕೆ ತನ್ನ ಸಂಪಾದಕೀಯದಲ್ಲಿ ಸರ್ಕಾರದ ನೀತಿಯನ್ನು ದೇಶದ್ರೋಹ ಎಂದಿದೆ. ಅದು ತುಂಬಾ ಖಾರವಾದ ಪದವಾದರೂ ವಾಸ್ತವ ಸ್ಥಿತಿ ಅದಕ್ಕಿಂತ ಭಿನ್ನವಾಗೇನೂ ಇಲ್ಲ.
ಕೊನೆಮಾತು
ಪೇಟೆಯ ಪಟ್ಟಿಗೆ ಸೇರಿದ ಸರ್ಕಾರಿ ಬ್ಯಾಂಕ್‌ಗಳಲ್ಲಿ ಹೂಡಿಕೆದಾರರು ವಿಶ್ವಾಸ ಕಳೆದುಕೊಂಡಿರುವಂತಿದೆ. ಮ್ಯೂಚುಯಲ್ ಫಂಡ್‌ಗಳೂ ಈಗ ಆ ಷೇರುಗಳನ್ನು ಕೊಳ್ಳುತ್ತಿಲ್ಲ. ಪೇಟೆಯಲ್ಲೇ ಮಾರುತ್ತಿವೆ. ಈ ಸ್ಥಿತಿಗೆ ಯಾರು ಹೊಣೆ? ಅದನ್ನು ಪತ್ತೆ ಹಚ್ಚಲು ಒಂದು ಸಮಿತಿಯ ರಚನೆಯಾಗಬೇಕು. ಅದರಲ್ಲಿ ಸರ್ಕಾರದ ಜನರು ಇರಬಾರದು ಎಂದು ಕೇಳುವುದು ತಲೆಹರಟೆಯೇ?
- ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


