ವಾಣಿಜ್ಯ

ಡಾಲರ್ಸ್ ಕಾಲೋನಿ

ವಿದೇಶಿ ಬ್ಯಾಂಕ್‌ಗಳಿಗೆ ಇನ್ನು ಸಲೀಸು; ಅದೂ ಶಾಖೆಗಳ ವಿಸ್ತರಣೆ ವಿಚಾರವಾಗಿ. ಹೊಸತಾಗಿ ದೇಶದಲ್ಲಿ ವ್ಯವಹಾರಕ್ಕೆ...

ಡಾಲರ್ಸ್ ಕಾಲೋನಿ
Published On :

ವಿದೇಶಿ ಬ್ಯಾಂಕ್‌ಗಳಿಗೆ ಇನ್ನು ಸಲೀಸು; ಅದೂ ಶಾಖೆಗಳ ವಿಸ್ತರಣೆ ವಿಚಾರವಾಗಿ. ಹೊಸತಾಗಿ ದೇಶದಲ್ಲಿ ವ್ಯವಹಾರಕ್ಕೆ ಅನುಕೂಲವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಂಡಿದೆ.

ಸದ್ಯ ಭಾರತದಲ್ಲಿ ಪ್ರತಿ 30 ಲಕ್ಷ ಮಂದಿಗೆ ವಿದೇಶಿ ಬ್ಯಾಂಕ್‌ಗಳ ಸೇವೆ ಲಭ್ಯವಾಗುತ್ತಿದೆ. ಆದರೆ ಇನ್ನು ಮುಂದೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಂತೆ ವಿದೇಶಿ ಬ್ಯಾಂಕ್‌ಗಳೂ ಸಮರ್ಥವಾಗಿ ಸೇವೆ ಒದಗಿಸುವುದು ಹಾಗೂ ಶಾಖೆಗಳನ್ನು ತೆರೆಯಲು ವರಿಷ್ಠ ಬ್ಯಾಂಕ್ ಅನುಮತಿ ನೀಡಿದೆ. ಇದಕ್ಕಾಗಿ ಹೊಸತಾಗಿ ನೀತಿ ನಿಯಮಗಳನ್ನು ರಚಿಸಲಾಗಿದೆ.

ಏನಿದು ಹೊಸ ನೀತಿ?
ಸದ್ಯ ಕಾನೂನಿನ ಪ್ರಕಾರ, ವಿದೇಶಿ ಬ್ಯಾಂಕ್‌ಗಳು ಶೇ.74ರ ವರೆಗೆ ಭಾರತೀಯ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲು ಅನುಮತಿ ಇದೆ.
ಹೊಸ ನೀತಿಯ ಪ್ರಕಾರ, ಯಾವುದೇ ವಿದೇಶಿ ಬ್ಯಾಂಕ್ ನಮ್ಮ ದೇಶದಲ್ಲಿರುವ ಸ್ಥಳೀಯ ಬ್ಯಾಂಕ್‌ಗಳನ್ನು ಖರೀದಿಸಿ, ಆ ಮೂಲಕ ತನ್ನ ಹಣಕಾಸು ವ್ಯವಹಾರಗಳನ್ನು ವಿಸ್ತರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಅಂದರೆ ವಿದೇಶಿ ಬ್ಯಾಂಕ್‌ಗಳೇ ನೇರವಾಗಿ ನಿಯಂತ್ರಣ ಹೊಂದಿರುವ ಬ್ಯಾಂಕ್‌ಗಳು ದೇಶಿಯವಾಗಿರುವ ಖಾಸಗಿ ಬ್ಯಾಂಕ್‌ಗಳನ್ನು ಖರೀದಿಸುವ ಹೊಸ ಮಾರ್ಪಾಡನ್ನು ತರಲಾಗಿದೆ.
ಸದ್ಯದ ಮಿತಿಯಲ್ಲಿ ಸ್ಥಳೀಯ ಬ್ಯಾಂಕ್‌ನ ಶೇ.5ಕ್ಕಿಂತ ಹೆಚ್ಚಿನ ಷೇರುಗಳನ್ನು ಯಾವುದೇ ಒಂದು ವಿದೇಶಿ ಬ್ಯಾಂಕ್ ಹೊಂದುವಂತಿಲ್ಲ.
ಇದುವರೆಗೆ ವಿದೇಶಿ ಬ್ಯಾಂಕ್‌ಗಳು ನೇರವಾಗಿ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವ್ಯವಹರಿಸುವಂತಿರಲಿಲ್ಲ. ಬದಲಾಗಿ ಅವುಗಳು ನಿಗದಿತ ಬ್ಯಾಂಕ್‌ನಲ್ಲಿ ಹಣ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಮುಂದೇನಾಗಲಿದೆ?
ವಿದೇಶಿ ಬ್ಯಾಂಕ್‌ಗಳು ಸ್ಥಳೀಯವಾಗಿ ನಷ್ಟದಲ್ಲಿರುವ ಬ್ಯಾಂಕ್‌ಗಳನ್ನು ಖರೀದಿಸಿ ತಮ್ಮ ಹಣಕಾಸು ವ್ಯವಹಾರ ವಿಸ್ತರಿಸಿಕೊಳ್ಳಲಿವೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದಷ್ಟು ಖರೀದಿ ಮತ್ತು ವಿಲೀನ ಪ್ರಕ್ರಿಯೆ (ಎಂ ಆ್ಯಂಡ್ ಎ) ಬಿರುಸುಗೊಳ್ಳಲಿದೆ.

ಸದ್ಯದ ಸ್ಥಿತಿ ಹೇಗಿದೆ?
ಸದ್ಯ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 43 ವಿದೇಶಿ ಬ್ಯಾಂಕ್‌ಗಳು ಬೆಂಗಳೂರು ಸೇರಿದಂತೆ ದೇಶದ ಆಯ್ದ ನಗರಗಳಲ್ಲಿವೆ.
ಅವುಗಳು ದೇಶದ 334 ನಗರಗಳಲ್ಲಿ ಶಾಖೆಗಳನ್ನು ವಿಸ್ತರಿಸಿ ವಹಿವಾಟು ನಡೆಸುತ್ತಿವೆ. ಅಂದರೆ ಶೇ.0.5ಕ್ಕಿಂತ ಕಡಿಮೆ ಜನರಿಗೆ ವಿದೇಶಿ ಬ್ಯಾಂಕ್‌ಗಳ ಸೇವೆ ಲಭಿಸುತ್ತಿದೆ.

ಡಬ್ಲ್ಯೂಟಿಒಗೆ ವಾಗ್ದಾನ
ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯೂಟಿಓ)ಗೆ ಭಾರತೀಯ ರಿಸರ್ವ್ ಬ್ಯಾಂಕ್ ವಾಗ್ದಾನ ಮಾಡಿದಂತೆ ಪ್ರತಿ ವರ್ಷ 12 ವಿದೇಶಿ ಬ್ಯಾಂಕ್‌ಗಳ ಶಾಖೆಗಳನ್ನು ಆರಂಭಿಸಲು ಅನುಮತಿ ನೀಡಲೇಬೇಕು.

ಯಾವ ರೀತಿ ಆಡಳಿತ?
ವಿದೇಶಿ ಬ್ಯಾಂಕ್‌ನ ನೇರ ಅಧೀನ ಸಂಸ್ಥೆ ಹಣಕಾಸು ವ್ಯವಹಾರ. ಅಂದರೆ, ಬ್ಯಾಂಕ್ ಎಂಬ ರೀತಿಯಲ್ಲಿ ಕಾರ್ಯ ನಿರ್ವಹಿಸಲು ರು. 500 ಕೋಟಿ ಠೇವಣಿ ಇರಿಸಬೇಕು. ಇದರ ಜತೆಗೆ ಬಲು ಕಠಿಣವಾಗಿರುವ ಕಾರ್ಪೊರೇಟ್ ನಿಯಮಗಳನ್ನೂ ಪಾಲಿಸುವಂತೆ ತಾಕೀತು ಮಾಡಿದೆ.
ಬ್ಯಾಂಕ್‌ನ ನಿರ್ದೇಶಕ ಮಂಡಳಿಯಲ್ಲಿರುವವರು ಅದರಲ್ಲೇ ಅಧಿಕಾರ ಉಳ್ಳವರಾಗಿರಬಾರದು. ಅರ್ಧದಷ್ಟು ಮಂದಿ ಭಾರತೀಯ ಪ್ರಜೆಗಳಾಗಿರಬೇಕು.     ಅವುಗಳ ಷೇರುಗಳನ್ನು ಬಾಂಬೆ ಷೇರುಪೇಟೆಯಲ್ಲಿ ಲಿಸ್ಟ್ ಆಗುವಂತೆ ಮಾಡಲು ಅನುಮತಿ ಇದೆ.

ನಿಯಂತ್ರಣಕ್ಕೆ ಅವಕಾಶ
ವಿದೇಶಿ ಬ್ಯಾಂಕ್‌ಗಳ ನೇರ ಅಧೀನ ಸಂಸ್ಥೆಗಳು (ಹೋಲಿ ಒನ್ಡ್ ಸಬ್ಸಿಡಿಯರಿ) ದೇಶದ ಒಟ್ಟಾರೆ ಬ್ಯಾಂಕಿಂಗ್ ವ್ಯವಸ್ಥೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ಅವುಗಳ ಮೇಲೆ ನಿಯಂತ್ರಣ ಹೇರಲು ಆರ್‌ಬಿಐಗೆ ಅವಕಾಶವಿದೆ.

ಯಾಕೆ ಈ ಕ್ರಮ?
ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಬ್ಯಾಂಕ್‌ಗಳಿಗೆ ಅವಕಾಶ ನೀಡುವ ಉದ್ದೇಶವೇನೆಂದರೆ ದೇಶಿಯವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚು ವೃತ್ತಿಪರತೆ, ಅತ್ಯಾಧುನಿಕ ಹಣಕಾಸು ಸೇವೆಗಳನ್ನು ಗ್ರಾಹಕರಿಗೆ ಒದಗಿಸುವಂತೆ ಮಾಡುವುದು ಗುರಿ ಎನ್ನುವುದು ಆರ್‌ಬಿಐ ಹೇಳಿಕೆ.
ಅದು ಸಾಧ್ಯವಾದೀತೇ?

ಹೇಳಿ ಕೇಳಿ ವಿದೇಶಿ ಬ್ಯಾಂಕ್‌ಗಳು ಲಾಭ ಇರುವತ್ತ ದೃಷ್ಟಿ ಹರಿಸುತ್ತವೆ. ಯಾವುದೋ ಗ್ರಾಮೀಣ ಮಟ್ಟದಲ್ಲಿ ಅವುಗಳು ತಮ್ಮ ಶಾಖೆ ವಿಸ್ತರಿಸುತ್ತವೆಯೋ ಎಂದು ಕೇಳಿದರೆ ಸದ್ಯದ ಉತ್ತರ- 'ಇಲ್ಲ'. ಹಾಗಾಗಿ, ಹೆಚ್ಚಿನ ಸೇವೆಗಳನ್ನು ಒದಗಿಸಲು ಎಂಬ ವಾದಕ್ಕೆ ಪುಷ್ಟಿ ಸಿಗಬೇಕೆಂದರೆ, ಈಗ ದೇಶದಲ್ಲಿರುವ ವಿದೇಶಿ ಬ್ಯಾಂಕ್‌ಗಳ ಕಾರ್ಯವೈಖರಿ ಅವಲೋಕಿಸಿದರೆ ತಿಳಿದೀತು.

ವಿದೇಶಿ ಬ್ಯಾಂಕ್ ಶಾಖೆಗಳು

  • ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ 100
  • ಎಚ್‌ಎಸ್‌ಬಿಸಿ 50
  • ಸಿಟಿ ಬ್ಯಾಂಕ್ 43
  • ಡಾಯಿಷ್ ಬ್ಯಾಂಕ್ 17
  • ಡಿಬಿಎಸ್ ಬ್ಯಾಂಕ್ 12
- ಸದಾಶಿವ ಕೆ.
khandige29@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.