ವಿಮೆ ಕ್ಲೈಮ್ ವಿಳಂಬ
ಭವಿಷ್ಯದ ಜೀವನ ಭದ್ರತೆ ಹಾಗೂ ಹಣ ಉಳಿಕೆಗೆ ವಿಮೆ ನೆರವಾಗುತ್ತದೆ. ಅಂತೆಯೇ ಇಂದು ವಿಮಾ ಕ್ಷೇತ್ರದಲ್ಲಿ ಕೋಟ್ಯಾನುಕೋಟಿ...

ಅಪೂರ್ಣ ಮಾಹಿತಿ ಇಲ್ಲವೇ ಮುಂಚೆ ಸಲ್ಲಿಸಿದ ಮಾಹಿತಿ ಹಾಗೂ ಸದ್ಯ ಕ್ಲೈಮ್ ಮಾಡುವಾಗ ಸಲ್ಲಿಸಿದ ಮಾಹಿತಿಯಲ್ಲಿ ವ್ಯತ್ಯಾಸವಾಗಿದ್ದರೆ ಹಣ ಮರುಪಾವತಿಯಲ್ಲಿ ಅನಗತ್ಯ ವಿಳಂಬವಾಗುತ್ತದೆ. ಆದರೆ ಕೆಲವು ಮುಂಜಾಗ್ರತಾ ಕ್ರಮ ಮತ್ತು ಪಾಲಿಸಿಯಲ್ಲಿನ ನಿಯಮಗಳನ್ನು ಅನುಸರಿಸಿದರೆ ಹೀಗಾಗದಂತೆ ನೋಡಿಕೊಳ್ಳಬಹುದು...
ಭವಿಷ್ಯದ ಜೀವನ ಭದ್ರತೆ ಹಾಗೂ ಹಣ ಉಳಿಕೆಗೆ ವಿಮೆ ನೆರವಾಗುತ್ತದೆ. ಅಂತೆಯೇ ಇಂದು ವಿಮಾ ಕ್ಷೇತ್ರದಲ್ಲಿ ಕೋಟ್ಯಾನುಕೋಟಿ ವಹಿವಾಟು ನಡೆಯುತ್ತಿದೆ. ಆದರೆ, ಇದು ಕೆಲವು ವಿಮಾದಾರರಿಗೆ ಅವಧಿ ಕೊನೆಯಲ್ಲಿ ತೀವ್ರ ಬೇಸರ ತರಿಸುತ್ತಿದೆ. ಹೀಗಾಗಿ, ವಿಮೆ ವರವಾಗುವ ಬದಲು ಶಾಪವಾಗಿ ಪರಿಣಮಿಸುತ್ತಿದೆ.
ಹೇಗೆ ಅಂತೀರಾ? ಪಾಲಿಸಿದಾರನು ತಾನು ಪಾಲಿಸಿ ಮಾಡಿಸಿದ ಆರಂಭದಿಂದಲೂ ತೀರುವಳಿ ಮುಗಿಯುವವರೆಗೆ ಕಂತುಗಳನ್ನು ಪಾವತಿಸುತ್ತಾನೆ. ತಾನು ಕಟ್ಟಿದ ಪ್ರೀಮಿಯಂನೊಂದಿಗೆ ನಿಗಮ ಇಲ್ಲವೇ ಕಂಪನಿಯು ಬೋನಸ್ ಸಹಿತ ಪಾಲಿಸಿಯ ಒಟ್ಟು ಮೊತ್ತವನ್ನು ವಿಮಾದಾರನ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ ಅಥವಾ ಚೆಕ್ ಮೂಲಕ ನೀಡುತ್ತದೆ (ಕೆಲವು ಪ್ರಕ್ರಿಯೆಗೆ ಅನುಗುಣವಾಗಿ). ಇದೊಂದು ನಿಯಮ. ಆದರೆ, ಈ ಸಂದರ್ಭದಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ನಿಗದಿತ ಸಮಯಕ್ಕೆ ಕ್ಲೈಮ್ ಆಗದೆ ಪಾಲಿಸಿದಾರ ಮತ್ತು ಪ್ರತಿನಿಧಿಯು ಆತಂಕಕ್ಕೆ ಒಳಗಾಗುತ್ತಾರೆ. ಕಚೇರಿಗೆ ಅಲೆದಾಟ ಆರಂಭವಾಗುತ್ತದೆ.
ಇದಕ್ಕೆ ಪ್ರಮುಖ ಕಾರಣ, ಪಾಲಿಸಿದಾರ ಮತ್ತು ಕಂಪನಿಯ ಮಧ್ಯದ ಕೊಂಡಿಯಾಗಿ ಕಾರ್ಯನಿರ್ವಹಿಸುವ ಪ್ರತಿನಿಧಿಗಳಿಬ್ಬರೂ ಮಾಡುವ ಕೆಲ ತಾಂತ್ರಿಕ ದೋಷಗಳು. ಪಾಲಿಸಿದಾರನಿಂದ ಸರಿಯಾದ ಮಾಹಿತಿ ಮತ್ತು ಪ್ರಮಾಣ ಪತ್ರಗಳನ್ನು ಪಡೆಯದಿರುವುದು. ಒಂದು ವೇಳೆ ಪಡೆದಿದ್ದರೂ ಅದನ್ನು ಕಂಪನಿಗೆ ತಿಳಿಸದೇ ಇರುವುದು.
ಇಂಥ ಅಪೂರ್ಣ ಮಾಹಿತಿ ಇಲ್ಲವೇ ಮುಂಚೆ ಸಲ್ಲಿಸಿದ ಮಾಹಿತಿ ಹಾಗೂ ಸದ್ಯ ಕ್ಲೈಮ್ ಮಾಡುವಾಗ ಸಲ್ಲಿಸಿದ ಮಾಹಿತಿಯಲ್ಲಿ ವ್ಯತ್ಯಾಸವಾಗಿದ್ದರೆ ಹಣ ಮರುಪಾವತಿಯಲ್ಲಿ ಅನಗತ್ಯ ವಿಳಂಬವಾಗುತ್ತದೆ. ಆದರೆ ಕೆಲವು ಮುಂಜಾಗ್ರತಾ ಕ್ರಮ ಮತ್ತು ಪಾಲಿಸಿಯಲ್ಲಿನ ನಿಯಮಗಳನ್ನು ಅನುಸರಿಸಿದರೆ ಹೀಗಾಗದಂತೆ ನೋಡಿಕೊಳ್ಳಬಹುದು.
ವಿಳಂಬ ತಡೆಯುವುದು ಹೇಗೆ?
ಮುಖ್ಯವಾಗಿ ಎರಡು ಸಂದರ್ಭಗಳಲ್ಲಿ ಜಾಗರೂಕರಾಗಿರಬೇಕು. ಪಾಲಿಸಿ ಮಾಡಿಸುವ ಮತ್ತು ಪಾಲಿಸಿ ಕ್ಲೈಮ್ ಮಾಡುವ ವೇಳೆ ವಿಮಾದಾರ ಹಾಗೂ ಪ್ರತಿನಿಧಿ ಇಬ್ಬರೂ ಜಾಗ್ರತೆಯಿಂದ ಇರಬೇಕಾಗುತ್ತದೆ. ಏಕೆಂದರೆ- ಪಾಲಿಸಿ ಮಾಡಿಸುವ ಸಂದರ್ಭ ವಿಮಾದಾರನ ಕುರಿತು ನಿಖರ ಮಾಹಿತಿ ಕೊಡಬೇಕು. ಅದನ್ನೇ ಅವಧಿ ಮುಗಿಯುವವರೆಗೆ ನೆನಪಿನಲ್ಲಿಟ್ಟುಕೊಂಡಿರಬೇಕು. ಇಲ್ಲವೇ ದಾಖಲಾತಿ ಪತ್ರಗಳನ್ನು ಕಾಪಾಡಿಕೊಂಡಿರಬೇಕು. ಒಂದು ವೇಳೆ ಪಾಲಿಸಿ ಕ್ಲೈಮ್ ಮಾಡುವ ವೇಳೆ ಕೊಟ್ಟ ಮಾಹಿತಿ ಮತ್ತು ಆರಂಭದಲ್ಲಿ ತಿಳಿಸಿದ ಮಾಹಿತಿಗೆ ಹೋಲಿಕೆಯಾಗದಿದ್ದರೆ ವಿಮಾ ಮೊತ್ತ ನಿಮ್ಮ ಕೈಸೇರದು. ಅದಕ್ಕಾಗಿ ಇಬ್ಬರೂ ಪಾಲಿಸಿಯ ನಾಮಿನಿ, ಅವಧಿ, ಪ್ರೀಮಿಯಂ ಮೊತ್ತ, ಬೋನಸ್, ವಿಮಾದಾರನ ವೈಯಕ್ತಿಕ ಮಾಹಿತಿ, ಆರೋಗ್ಯ ದೃಢೀಕರಣ ಮತ್ತಿತರ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ಲೈಮ್ ಮಾಡಲು ಅರ್ಜಿ ಗುಜರಾಯಿಸಬೇಕು.
ಈ ಸಂದರ್ಭದಲ್ಲಿ ಎಡವಟ್ಟುಗಳಾಗದಂತೆ ತಡೆಯಲು ಕೆಲ ಪ್ರಮುಖ ಅಂಶಗಳನ್ನು ಗಮನಿಸಿ...
ನಿಗಮಕ್ಕೆ ಪರಿಪೂರ್ಣ ಮಾಹಿತಿ
ಪಾಲಿಸಿದಾರನು ತನ್ನ ವಿಮೆಯನ್ನು ಮಾಡಿಸುವ ವೇಳೆ ವೈಯಕ್ತಿಕ ಮತ್ತು ನಾಮಿನಿಯ ಸಂಪೂರ್ಣ, ನಿಖರ ಮಾಹಿತಿಯನ್ನು ನೀಡಬೇಕು. ಇಲ್ಲಿ ಕೆಲ ವೇಳೆ ಪ್ರತಿನಿಧಿಯಿಂದಲೂ ಪ್ರಮಾದಗಳು ಜರುಗುತ್ತವೆ. ನಿಗಮವು ತನ್ನ ಪ್ರತಿನಿಧಿಗೆ ವಿಮಾದಾರನಿಂದ ಕೆಲ ಮಾಹಿತಿ ಕೇಳಿರುತ್ತದೆ. ಆಗ ಪ್ರತಿನಿಧಿಯು ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು. ಅಲ್ಲದೆ ವಿಮಾದಾರನ ಬದಲಾದ ಸಂಪರ್ಕ ವಿಳಾಸ, ದೂರವಾಣಿ ಸಂಖ್ಯೆ, ಮೇಲ್ ಅಡ್ರೆಸ್ ಮತ್ತಿತರ ಮಾಹಿತಿಯನ್ನು ಪರಿಷ್ಕರಿಸುತ್ತಿರಬೇಕು. ಪರಿಷ್ಕರಿಸದಿದ್ದರೆ ಕ್ಲೈಮ್ ಮಾಡುವ ಸಂದರ್ಭದಲ್ಲಿ ಬಾಂಡ್ ಅನ್ನು ಗಮನಿಸಿ, ಅದರಲ್ಲಿರುವ ಮಾಹಿತಿಗೆ ತಾಳೆಹಾಕಿ ಅರ್ಜಿಯನ್ನು ಖಾತ್ರಿ ಪಡಿಸಿಕೊಂಡು, ಸಲ್ಲಿಸುವುದು ಒಳಿತು.
ಮಾಹಿತಿ ಗುಟ್ಟಾಗಿಡಬೇಡಿ
ವಿಮಾದಾರನು ತಾನು ಸಲ್ಲಿಸುವ ಆರೋಗ್ಯದ ಸ್ಥಿತಿಗತಿ, ವಾಸಸ್ಥಳ, ಹವ್ಯಾಸ, ದೈಹಿಕ ನ್ಯೂನತೆ, ಪಾಲಿಸಿಯಲ್ಲಿನ ಇತರೆ ಯಾವುದೇ ಮಾಹಿತಿಯನ್ನು ನಿಖರವಾಗಿ ನೀಡಬೇಕು. ಒಂದು ವೇಳೆ ಪ್ರಸ್ತಾವ ಸಲ್ಲಿಸುವಾಗ ಸುಳ್ಳು ಅಥವಾ ತಪ್ಪು ಮಾಹಿತಿ ಕೊಟ್ಟರೆ ಅದೂ ಕ್ಲೈಮ್ ವಿಳಂಬಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ಸಂದೇಹವಿಲ್ಲದೆ ಅಗತ್ಯ ಮಾಹಿತಿ ಕೊಡಿ.
ನಾಮಿನಿ ಮಾಹಿತಿ
ವಿಮೆಯಲ್ಲಿ ವಿಮಾದಾರನಷ್ಟೇ ನಾಮಿನಿಯೂ ಹಕ್ಕನ್ನು ಹೊಂದಿರುತ್ತಾನೆ. ಹಾಗಾಗಿ ಅವನ ಕುಟುಂಬದವರೂ ಪಾಲಿಸಿಯ ಬಗ್ಗೆ ಅರಿವು ಮೂಡಿಸಿರಬೇಕು. ಏಕೆಂದರೆ, ಮುಂದೊಂದು ದಿನ ಕ್ಲೈಮ್ ಮಾಡಲು ಅವನ ಅಗತ್ಯವೂ ಬೀಳಬಹುದು. ಆಗ ಅವನು ನಿಧನನಾಗಿದ್ದರೆ ಆತನ ಮನೆಯವರು ನೆರವಾಗಬಲ್ಲರು. ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ನಾಮಿನಿ ವ್ಯಕ್ತಿ ಆಕಸ್ಮಿಕವಾಗಿ ನಿಧನ ಹೊಂದಿದರೆ ಕೂಡಲೇ ಆ ಮಾಹಿತಿಯನ್ನು ನಿಗಮಕ್ಕೆ ತಿಳಿಸಬೇಕು. ಬೇರೊಬ್ಬ ನಾಮಿನಿಯ ಹೆಸರನ್ನು ನಮೂದಿಸಬೇಕು. ಅಗತ್ಯ ಮಾಹಿತಿಯನ್ನು ಸಲ್ಲಿಸಿರಬೇಕು.
ದೃಢೀಕೃತ ದಾಖಲಾತಿ
ಪಾಲಿಸಿದಾರನು ನಿಗಮಕ್ಕೆ ಕ್ಲೈಮ್ ಮಾಡುವ ವೇಳೆ ಸಲ್ಲಿಸುವ ಅಪಘಾತ, ತೀವ್ರ ಕಾಯಿಲೆಗೆ ಒಳಗಾದಾಗ, ಆಕಸ್ಮಿಕ ಸಾವು ಇಂಥ ಪ್ರಮಾಣಪತ್ರಗಳು ಸತ್ಯಾಸತ್ಯತೆಯಿಂದ ಕೂಡಿದ್ದು ವಿಶ್ವಾಸಾರ್ಹವಾಗಿರಬೇಕು. ಪ್ರಮಾಣೀಕರಿಸಿರಬೇಕು. ಇಲ್ಲದಿದ್ದರೆ ತಿರಸ್ಕೃತವಾಗುತ್ತವೆ. ಕ್ಲೈಮ್ ವಿಳಂಬಕ್ಕೆ ಇದೂ ಕಾರಣವಾಗುತ್ತದೆ. ಅದಕ್ಕಾಗಿ ಅಗತ್ಯ ದಾಖಲಾತಿ ಪತ್ರಗಳು ನಿಖರವಾಗಿದ್ದರೆ ಬೇಗನೇ ಕ್ಲೈಮ್ ಮಾಡಿಕೊಳ್ಳಬಹುದು.
ಸಮಯ ಪಾಲನೆ
ವಿಮಾದಾರನು ತನ್ನ ಪಾಲಿಸಿಯ ಅವಧಿ ಪೂರ್ಣಗೊಳ್ಳುವುದನ್ನು ತಿಳಿದು, ಸಮಯಕ್ಕೆ ಸರಿಯಾಗಿ ಪ್ರತಿನಿಧಿಯೊಂದಿಗೆ ಚರ್ಚಿಸಿ ಇಲ್ಲವೆ ನಿಗಮದಿಂದ ತಿಳಿದು ಮೆಚ್ಯೂರಿಟಿ ದಿನಾಂಕಕ್ಕೆ ಸರಿಯಾಗಿ ಅಗತ್ಯ ಮಾಹಿತಿ ಮತ್ತು ದಾಖಲಾತಿ ಪತ್ರಗಳನ್ನು ಸಲ್ಲಿಸಬೇಕು. ಇದರಿಂದ ಕ್ಲೈಮ್ ವಿಳಂಬವಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ. ಅಲ್ಲದೆ ನಾಮಿನಿ ಮತ್ತು ವಿಮಾದಾರನು ತಮ್ಮ ವಿಳಾಸ, ಮತ್ತಿತರೆ ಮಾಹಿತಿಯನ್ನು ಪರಿಷ್ಕರಣೆ ಮಾಡಿಸುತ್ತಿದ್ದರೆ ಕ್ಲೈಮ್ ಮಾಡುವ ಸಂದರ್ಭದಲ್ಲಿ ಕಷ್ಟ ಎದುರಾಗದು.
ಕ್ಲೈಮ್ ಮಾಡುವ ಬಗೆಗಳು
ವಿಮೆಯನ್ನು ಸಾಮಾನ್ಯವಾಗಿ ಈ ಮೂರು ಬಗೆಗಳಲ್ಲಿ ವಿಂಗಡಿಸಲಾಗಿದೆ. ಪಾಲಿಸಿದಾರನು ಆಕಸ್ಮಿಕವಾಗಿ ಸಾವಿಗೀಡಾದಾಗ(ಡೆತ್ ಕ್ಲೈಮ್), ಪಾಲಿಸಿ ಅವಧಿ ಪೂರ್ಣಗೊಂಡಾಗ (ಮೆಚ್ಯೂರಿಟಿ ಕ್ಲೈಮ್ ಮತ್ತು ಅಪಘಾತಗಳು ನಡೆದಾಗ (ರೈಡರ್ಸ್ ಕ್ಲೈಮ್) ಎಂದು ಕ್ಲೈಮ್ ಮಾಡಿಕೊಳ್ಳಬಹುದು.
ಗಮನದಲ್ಲಿಡಿ...
ಇಂದು ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರ ಕಂಪ್ಯೂಟರೀಕರಣಗೊಂಡಿವೆ. ಹೀಗಾಗಿ ವಿಮಾದಾರನೂ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದರೆ ಒಳಿತು. ನಿಗಮಕ್ಕೆ ನಿಮ್ಮ ಖಾತೆ ಸಂಖ್ಯೆ ಕೊಟ್ಟರೆ ಹಣವು ನೇರವಾಗಿ ನಿಮ್ಮ ಖಾತೆಗೇ ಜಮಾವಣೆಗೊಳ್ಳುತ್ತದೆ. ಇದೂ ನಿಮ್ಮ ಅಮೂಲ್ಯ ಸಮಯ ಹಾಗೂ ಶ್ರಮ ಉಳಿತಾಯಕ್ಕೆ ಕಾರಣವಾಗುತ್ತದೆ.
- ಪಿ. ರವಿ ಕುಟುಂಬ ರಾವ್
ಬಜಾಜ್ ಅಲಯನ್ಸ್ ವಿಮೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


