ವಾಣಿಜ್ಯ

ಹೂಡಿಕೆ

ಉಳಿತಾಯಕ್ಕೆ ಇದು ಸಕಾಲ... ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು 2013-14ರ ಬಜೆಟ್ ಮಂಡಿಸಿದ್ದಾರೆ...

ಹೂಡಿಕೆ
Published On :

ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು 2013-14ರ ಬಜೆಟ್ ಮಂಡಿಸಿದ್ದಾರೆ. ಈ ವೇಳೆ ಘೋಷಿಸಲಾದ ಕೆಲವೊಂದು ಪ್ರಸ್ತಾಪಗಳು ಹೂಡಿಕೆದಾರರನ್ನು ಆಕರ್ಷಿಸಿವೆ. ತಾವೂ ಹೂಡಿಕೆ ಮಾಡಬೇಕು, ಲಾಭ ಗಳಿಸಬೇಕು ಎಂಬ ಬಯಕೆ ಹಲವರಲ್ಲಿ ಮೂಡಿದೆ. ಹೀಗಿರುವಾಗ, ಬಜೆಟ್ ಅನ್ನು ಗಣನೆಗೆ ತೆಗೆದುಕೊಂಡು ಸದ್ಯದ ಸಂದರ್ಭದಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡಬಹುದು ಎಂಬ ಬಗ್ಗೆ ಕೆಲವೊಂದು ಸಲಹೆ ಇಲ್ಲಿದೆ.

ತೆರಿಗೆ ಮುಕ್ತ ಬಾಂಡ್
ಇನ್ನೂ ಒಂದು ವರ್ಷಗಳ ಕಾಲ ತೆರಿಗೆ ಮುಕ್ತ ಮೂಲಸೌಕರ್ಯ ಬಾಂಡ್‌ಗಳನ್ನು ಒದಗಿಸಲು ಕೇಂದ್ರ ಹಣಕಾಸು ಸಚಿವ ಚಿದಂಬರಂ ಅವರು ಅನೇಕ ಸಂಸ್ಥೆಗಳಿಗೆ ಅನುಮತಿ ನೀಡಿದ್ದಾರೆ. ತೆರಿಗೆ ಮುಕ್ತ ಆದಾಯವನ್ನು ಪಡೆಯಲು ಇಚ್ಛಿಸುವವರು ನೀವಾಗಿದ್ದರೆ, ಈಗಲೇ ಸ್ವಲ್ಪ ಮೊತ್ತವನ್ನು ಇಂತಹ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿ. ಬಾಂಡ್‌ಗಳ ಅವಧಿ ಸಾಮಾನ್ಯವಾಗಿ 10 ವರ್ಷಗಳಿಂದ 15 ವರ್ಷಗಳಾಗಿರುತ್ತವೆ. ಹಾಗಾಗಿ ಇದೊಂದು ದೀರ್ಘಾವಧಿ ಹೂಡಿಕೆ ಎಂಬುದು ಮಾತ್ರ ನೆನಪಿರಲಿ.

ಈಕ್ವಿಟಿ ಮ್ಯೂಚ್ಯುವಲ್ ಫಂಡ್
ಷೇರು ಮಾರುಕಟ್ಟೆ ಮೂಲಕ ಖರೀದಿಸಿದ ಹಾಗೂ ಮಾರಾಟ ಮಾಡಲಾದ ಅಥವಾ ನೇರವಾಗಿ ಮ್ಯೂಚ್ಯುವಲ್ ಫಂಡ್‌ನಿಂದ ಪಡೆದ ಈಕ್ವಿಟಿ ಆಧಾರಿತ ಮ್ಯೂಚ್ಯುವಲ್ ಫಂಡ್‌ಗಳ ಮೇಲಿನ ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಕಡಿಮೆಯಾಗುತ್ತಿದೆ. ಇದರಿಂದಾಗಿ ಫಂಡ್‌ನ ಹೆಚ್ಚುವರಿ ವೆಚ್ಚ ಕಡಿಮೆಯಾಗುತ್ತದೆ. ಹೀಗಾಗಿ ನಿಮ್ಮಲ್ಲಿರುವ ಹಣವನ್ನು ಹೂಡಲು ಈಕ್ವಿಟಿ ಮ್ಯೂಚ್ಯುವಲ್ ಫಂಡ್ ಕೂಡ ಒಂದು ಉತ್ತಮ ಕಡಿಮೆ ವೆಚ್ಚದ ಹೂಡಿಕೆಯಾಗಿದೆ.

ಹಣದುಬ್ಬರ ಸಂಬಂಧಿ ಬಾಂಡ್
ಇತ್ತೀಚೆಗೆ ಹಣದುಬ್ಬರವು ಏರಿಕೆಯ ಹಾದಿಯಲ್ಲಿ ಸಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ತಮ್ಮ ನಿಶ್ಚಿತ ಆದಾಯದ ಬಗ್ಗೆ ಚಿಂತೆ ಆರಂಭವಾಗುತ್ತದೆ. ಹಣದುಬ್ಬರದಲ್ಲಿ ಏರಿಳಿತವಾದರೂ ನಿಶ್ಚಿತ ಆದಾಯದ ಮೂಲವು ಸುರಕ್ಷಿತವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಇಂಥವರಿಗೆ ಇಲ್ಲೊಂದು ಆಯ್ಕೆ ಇದೆ. ಸದ್ಯದಲ್ಲೇ ಹಣದುಬ್ಬರ ಸಂಬಂಧಿ ಬಾಂಡ್‌ಗಳು ಭಾರತದ ಮಾರುಕಟ್ಟೆಗೆ ಪ್ರವೇಶಿಸಲಿವೆ. ಇವುಗಳು ಹೂಡಿಕೆದಾರರಿಗೆ ಸಿಗುವ ನೈಜ ಬಡ್ಡಿ ದರವನ್ನು ಸುರಕ್ಷಿತವಾಗಿಡುತ್ತವೆ. ಹಾಗಾಗಿ ಇಂತಹ ಬಾಂಡ್‌ಗಳಲ್ಲಿ ಯಾವುದೇ ಆತಂಕವಿಲ್ಲದೇ ಹೂಡಿಕೆ ಮಾಡಬಹುದು.

ರಾಜೀವ್ ಗಾಂಧಿ ಷೇರು ಸ್ಕೀಂ
ನೀವು ಮೊದಲ ಬಾರಿಗೆ ಷೇರುಗಳಲ್ಲಿ ಹೂಡಿಕೆ ಮಾಡುತ್ತಿರುವವರಾಗಿದ್ದರೆ, ಒಂದೋ ಮ್ಯೂಚ್ಯುವಲ್ ಫಂಡ್ ಅಥವಾ ಮಾರುಕಟ್ಟೆಯಲ್ಲಿರುವ ಟಾಪ್ ಷೇರುಗಳಲ್ಲಿ ಹೂಡಿಕೆ ಮಾಡಿ, ಹೆಚ್ಚುವರಿ ತೆರಿಗೆ ವಿನಾಯ್ತಿ ಪಡೆಯಬಹುದು. ರಾಜೀವ್ ಗಾಂಧಿ ಈಕ್ವಿಟಿ ಉಳಿತಾಯ ಯೋಜನೆಯು 3 ವರ್ಷಗಳ ಕಾಲ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿಕೊಡುತ್ತದೆ. ಮೊದಲ ಬಾರಿಯ ಹೂಡಿಕೆದಾರರು ಸ್ವಲ್ಪ ಮೊತ್ತವನ್ನು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.