ಮಿಂಚು ಬಡಿದ ಪೇಟೆ

ಕಳೆದ ಕೆಲವು ವಾರಗಳಿಂದಲೂ ಪೇಟೆಯ ಜನರ ಎಲ್ಲ ನಿರೀಕ್ಷೆಗಳೂ ಠುಸ್ಸೆಂದಿವೆ. ಬಜೆಟ್‌ನ ಅಂಕಿಅಂಶಗಳು, ಬಂಡವಾಳದ ಒಳ ಹರಿವು, ಚಾಲ್ತಿ ವರ್ಷದ ಆಮದು- ರಫ್ತು, ವ್ಯವಹಾರದ ಲೆಕ್ಕದಲ್ಲಿ ಕೊರತೆ, ಹೀಗೆ ಯಾವುದೇ ಮಾನದಂಡದಿಂದ ಅಳೆದರೂ ಪೇಟೆಯಲ್ಲಿ ನಿರೀಕ್ಷಿಸದಷ್ಟು ಉತ್ಸಾಹವಿಲ್ಲ. ಇದು ಸಾಮಾನ್ಯ ವ್ಯವಹಾರಸ್ಥರಿಗೆ ಮಾತ್ರ.
ಷೇರುಪೇಟೆ ಸುಧಾರಿಸಬೇಕಾದರೆ, ಆರ್ಥಿಕ ವ್ಯವಸ್ಥೆ ಸುಧಾರಿಸಿಕೊಳ್ಳಬೇಕು. ಅದಕ್ಕೇನು ಮಾಡಬೇಕು? ಆ ಪ್ರಶ್ನೆಗೆ ಉತ್ತರ ಹುಡುಕಲು ನೇಮಿಸಿದ್ದ ಒಂದು ಸರ್ಕಾರಿ ಸಮಿತಿ, ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹಲವು ಸಲಹೆಗಳನ್ನು ನೀಡಿದೆ. ಆ ಸಮಿತಿಯ ಶಿಫಾರಸ್ಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಸರ್ಕಾರಿ ಬ್ಯಾಂಕ್‌ಗಳು, ರಕ್ಷಣಾ ಇಲಾಖೆ, ಎಫ್‌ಎಂ ರೇಡಿಯೋ, ಮುದ್ರಣ ಮಾಧ್ಯಮ, ವಿಮಾನಯಾನ, ಚಿಲ್ಲರೆ ವ್ಯಾಪಾರ, ಟೆಲಿಕಾಂ ವಲಯಗಳ ಉದ್ಯಮಗಳಲ್ಲಿ ವಿದೇಶಿ ಬಂಡವಾಳಕ್ಕೆ ಹೆಚ್ಚು ಅವಕಾಶ ಒದಗಿಸಬೇಕಾಗುತ್ತದೆ. ಹಾಗಾದಾಗ ಭಾರತೀಯ ಉದ್ಯಮವಲಯದ ಒಂದು ಗಮನಾರ್ಹವಾದ ಭಾಗದಲ್ಲಿ ವಿದೇಶಿ ನಿರ್ಧಾರಗಳೇ ನಿರ್ಣಯವಾಗಲೂಬಹುದು. ಅನೇಕ ವಲಯಗಳಲ್ಲಿ ವಿದೇಶಿ ಬಂಡವಾಳದ ಹೂಡಿಕೆಯ ಮಿತಿಯನ್ನು ಕೈ ಬಿಡುವ ಸಲಹೆಯೂ ಇದೆ. ಇಂಥ ಪ್ರಮುಖ ವಿಷಯದಲ್ಲಿ ಸಾರ್ವಜನಿಕ ಚರ್ಚೆಯೂ ನಡೆದಿಲ್ಲ. ಸಂಸತ್ತಿನಲ್ಲೂ ಚರ್ಚೆ ಆಗಿಲ್ಲ.
ಬಹುದಿನಗಳ ನಿರೀಕ್ಷೆ
ಈಗ ಭಾರತೀಯ ಪೇಟೆಗಳಲ್ಲಿನ ಸೂಚ್ಯಂಕಗಳು ಕೆಳಗೆ ಬಿದ್ದಿದ್ದರೂ, ದೇಶದ ಆರ್ಥಿಕ ಶಕ್ತಿಗೆ ಭವಿಷ್ಯದಲ್ಲಿ ಚೇತರಿಸಿಕೊಳ್ಳುವ ಅವಕಾಶಗಳೂ ಇವೆ. ಅದನ್ನು ಬಳಸಬಲ್ಲ ಸಾಮರ್ಥ್ಯವೂ ಇದ್ದಂತಿದೆ. ಇದು ಯಾವುದೋ ಗೌಳಿ ನುಡಿದಿರುವ ಭವಿಷ್ಯವಲ್ಲ. ನೆಲದ ಮೇಲೆ ಭದ್ರವಾಗಿ ಕಾಲೂರಿ ಹಾಕಿದ ಲೆಕ್ಕಾಚಾರದ ಆಧಾರದ ಪಂಡಿತರ ಅನಿಸಿಕೆ. ಪಂಡಿತರ ಅಂದಾಜಿನಂತೆ ಈಗ ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಸಂವೇದಿ ಸೂಚ್ಯಂಕದ ಸುಮಾರು 19,300 ಅಂಕಿಗಳ ಆಜೂಬಾಜು ಇದೆ. ಅದು ವರ್ಷದ ಕೊನೆಯ ವೇಳೆಗೆ 21000ರ ಮೌಲ್ಯವನ್ನು ಮುಟ್ಟಬಹುದು. 2014ರ ಜೂನ್ ವೇಳೆಗೆ ಆ ಸೂಚ್ಯಂಕ 21200 ಅಂಕಿಯನ್ನೂ ದಾಟಬಹುದು. ಈಗಿನ ದೊಡ್ಡ ಚಿಂತೆ ಎಂದರೆ ಭಾರತೀಯ ಷೇರುಗಳನ್ನು ಹೊಂದಿರುವ ಅಮೆರಿಕದ ಸಂಸ್ಥೆಗಳು, ತಮ್ಮ ಒತ್ತಡಗಳನ್ನು ನಿಭಾಯಿಸಿಕೊಳ್ಳಲು ಏಕ್‌ದಮ್ ಪೇಟೆಯಲ್ಲಿ ಷೇರುಗಳನ್ನು ಮಾರಲು ಮುಂದಾಗುವುದು. ಅದು ಆಗಲೇ ಬೇಕು ಎಂದೇನೂ ಇಲ್ಲ. ಆದರೆ ಆಗುವ ಸಂಭವ ಇಲ್ಲದೇ ಇಲ್ಲ. ವಿತ್ತಮಂತ್ರಿ ಚಿದಂಬರಂ ಅವರೇನೋ ಹಲವು ಸುಧಾರಣಾ ಕ್ರಮಗಳನ್ನು ರೂಪಿಸಿದ್ದಾರೆ. ಆದರೆ ಅದಕ್ಕೆ ಸಂಸತ್ತಿನಲ್ಲಿ ಅಂಗೀಕಾರ ಮುದ್ರೆಯನ್ನು ಒತ್ತಿಸಿಕೊಳ್ಳುವವರು ಯಾರು?
ಕೊನೆ ಮಾತು
ಷೇರುಪೇಟೆಯ ಅನಿಶ್ಚಿತ ಸ್ಥಿತಿಯಲ್ಲಿ ದೇಶದಲ್ಲಿ 'ಹೆಚ್ಚು ಹಣ ಉಳ್ಳವರ' (ಅಂದರೆ ಹಣವನ್ನು ಬಳಸುವ ಶಕ್ತಿ ಇರುವವರ) ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ವರ್ಷದ ಹೆಚ್ಚಳ ಶೇ.22ರಷ್ಟು. ಇದೊಂದು ಅಸಾಮಾನ್ಯ ವಿಷಯವೇ.
- ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


