ಇನ್‌ಫೋಸಿಸ್‌ನ ಕಥೆ

ಇನ್‌ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆಗೆ ದೇಶ ವಿದೇಶದಲ್ಲಿ ಒಂದು ಒಳ್ಳೆಯ ಹೆಸರಿದೆ. ಧರ್ಮ ಸಮಾಜದ ತತ್ವ- ಆದರ್ಶಗಳ, ಉದ್ಯಮ- ವಾಣಿಜ್ಯ ಸಂಸ್ಥೆ ಎನ್ನುವ ಕೀರ್ತಿಯೂ ಇದೆ.
ಈಗಾಗಲೇ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಲಯಗಳಲ್ಲಿ ಪ್ರಕಟವಾಗಿರುವಂತೆ, ಕಳೆದ ಮೂರು ವರ್ಷಗಳಿಂದಲೂ ಸಂಸ್ಥೆಯ ಬೆಳೆಯುವ ಸಾಮರ್ಥ್ಯ ಉಡುಗಿದೆ ಎನ್ನುವ ಭಾವನೆ ಮೂಡಿತ್ತು. ದೊಡ್ಡ ಸಂಸ್ಥೆಗಳ ವಿಚಾರದಲ್ಲಿ ಇಂಥ ಭಾವನೆ ಮೂಡಿದರೆ ಸಾಕು, ದೊಡ್ಡ ರೀತಿಯ ಅವಾಂತರವೇ ಸೃಷ್ಟಿಯಾಗುತ್ತದೆ. ಇಲ್ಲೂ ಆಗಿದ್ದು ಹಾಗೇ. ಈ ಹಂತದಲ್ಲಿ ಹೊಸ ನಾಯಕತ್ವವನ್ನು ತರುವ ಸ್ಥಿತಿಯಲ್ಲಿ ಸಂಸ್ಥೆ ಇರಲಿಲ್ಲ. ಕೊನೆಗೆ ಸಂಸ್ಥೆಯನ್ನು ಆರಂಭದ ದೆಸೆಯಿಂದಲೂ ಉನ್ನತ ಶಿಖರಕ್ಕೇರಿಸಿ, ನಿವೃತ್ತರಾಗಿದ್ದ ಎನ್.ಆರ್. ನಾರಾಯಣ ಮೂರ್ತಿ ಅವರನ್ನೇ ಹಿಂದಕ್ಕೆ ಕರೆತರಲು ನಿರ್ಧಾರವಾಯಿತು.
ಷೇರು ಬಜಾರಿಗೆ ಆ ಸುದ್ದಿಯೇ ಸಾಕಾಯಿತು. ಇನ್‌ಫೋಸಿಸ್ ಷೇರುಗಳಲ್ಲಿ ಹೆಚ್ಚು ಆಸಕ್ತಿಯನ್ನು ಪ್ರದರ್ಶಿಸುವ ಪ್ರವೃತ್ತಿ ಆರಂಭವಾಯಿತು. ನಾರಾಯಣ ಮೂರ್ತಿ ಅವರ ಸಹಾಯಕರಾಗಿ, ಹೆಚ್ಚಿನ ಅಧಿಕಾರವೂ ಇಲ್ಲದೇ ಅವರ ಪುತ್ರ ರೋಹನ ಮೂರ್ತಿ ಕೂಡಾ ಬಂದಿದ್ದಾರೆ. ಇಬ್ಬರಿಗೂ ತಲಾ ವಾರ್ಷಿಕ ವೇತನ ಒಂದೇ ಒಂದು ರುಪಾಯಿ. ಆದರೆ ಸಂಸ್ಥೆಯಲ್ಲಿ ಅವರ ಆಸಕ್ತಿ ದೊಡ್ಡದು. ಷೇರುಗಳೂ ಇವೆ.
ನಾರಾಯಣ ಮೂರ್ತಿ ಅವರ 'ಪುನರಾಗಮನ' ಸರ್ವರನ್ನೂ ಸಂತಸದಿಂದ ಕುಣಿದಾಡುವಂತೇನೂ ಮಾಡಿಲ್ಲ. ಅನೇಕರ ಪ್ರಕಾರ ಸಂಸ್ಥೆಗೆ ಹೊಸತನ, ಹೊಸ ಚೈತನ್ಯ ಹಾಗೂ ಹೊಸ ಸ್ವರೂಪವನ್ನು ತಂದುಕೊಡುವ ಅವಕಾಶ ಕಳೆದುಹೊಗಿದೆ. ಈ ಮಾತಿನಲ್ಲಿ ಹುರುಳಿದೆ. ಇಲ್ಲ ಎಂದೇನೂ ಅಲ್ಲ. ಆದರೆ ಷೇರುಪೇಟೆಯಲ್ಲಿ ನಾರಾಯಣಮೂರ್ತಿ ಪುನರಾಗಮನದ ಸುದ್ದಿಯೇ ಷೇರುಪೇಟೆಯನ್ನು 2500 ರುಪಾಯಿಗಳಿಗೆ ಏರಿಸಲು ಸಾಕಾಗಿತ್ತು. ನಾರಾಯಣ ಮೂರ್ತಿ ಮಾಯಾ ದಂಡವನ್ನೇನೂ ತಂದಿಲ್ಲ. ಅವರಿಗೂ ಬದಲಾದ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಲ್ಲ. ಆಸೆಯಂತೂ ಚಿಗುರಿದೆ.
ಬ್ಯಾಂಕ್ ಷೇರುಗಳು
ಷೇರು ಬಜಾರಿನಲ್ಲಿ ಅನುಮಾನ ಬಂದಾಗಲೆಲ್ಲಾ ಸಾಮಾನ್ಯ ವ್ಯವಹಾರಸ್ಥರ ಗಮನ ಬ್ಯಾಂಕ್ ಷೇರುಗಳತ್ತ ಹರಿಯುವುದು ಸಹಜ. ಬ್ಯಾಂಕ್ ಎನ್ನುವ ಪದಕ್ಕೇ ಭದ್ರತೆ ಎನ್ನುವ ನಂಬಿಕೆ ಅನೇಕರಲ್ಲಿದೆ. ಅದು ತಪ್ಪೇನೂ ಅಲ್ಲ. ಈಗ ಭಾರತೀಯ ಬ್ಯಾಂಕ್ ಷೇರುಗಳ ವ್ಯವಹಾರದ ವರದಿ ಹಾಗೂ ಷೇರುಪೇಟೆಯ ಆಸಕ್ತಿಯನ್ನು ಗಮನಿಸಿದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗಿಂತ ಖಾಸಗಿ ವಲಯದ ಬ್ಯಾಂಕ್‌ಗಳ ಪರಿಸ್ಥಿತಿ ತೃಪ್ತಿಕರ. ಹಲವಾರು ಕಾರಣಗಳಿಂದಾಗಿ, ಸರ್ಕಾರಿ ಬ್ಯಾಂಕ್‌ಗಳು ಸೊರಗಿವೆ. ಅದರ ಪರಿಣಾಮವಾಗಿ ಸದರಿ ಬ್ಯಾಂಕ್‌ಗಳ ಷೇರುಗಳ ಬೆಲೆಗಳೂ ಇಳಿಮುಖವಾಗಿವೆ.
ಆದರೆ ಇದೇನೂ ಶಾಶ್ವತ ಪರಿಸ್ಥಿತಿ ಅಲ್ಲ. ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಿದಂತೆ (ಅದಂತೂ ಆಗಲೇ ಬೇಕಲ್ಲ) ಸರ್ಕಾರಿ ಬ್ಯಾಂಕ್‌ಗಳ ಸ್ಥಿತಿಯೂ ಉತ್ತಮವಾಗುವುದು ಖಚಿತ. ಆಗ ಷೇರುಗಳ ಬೆಲೆ ತಾನೇ ತಾನಾಗಿ ಹೆಚ್ಚುವುದು ಸಹಜ. ಲಾಭಕ್ಕಾಗಿ ಎರಡು ವರ್ಷಗಳಷ್ಟು ಕಾಯಬಲ್ಲ ಶಕ್ತಿ ಇರುವವರು ಬಂಡವಾಳ ಹೂಡಿಕೆಯ ಸ್ವರೂಪದಲ್ಲಿ ಈಗಿನ ಅಗ್ಗದ ದರದಲ್ಲಿ ಸರ್ಕಾರಿ ಬ್ಯಾಂಕ್‌ಗಳ ಷೇರುಗಳನ್ನು ಕೊಂಡಿಟ್ಟು ಕೊಂಡರೆ, ಭವಿಷ್ಯದಲ್ಲಿ ಅದರ ಫಲವನ್ನು ಅನುಭವಿಸಬಹುದು.
ಕೊನೆ ಮಾತು
ರಾಜಕೀಯ ಪ್ರಪಂಚದ ಆಗುಹೋಗುಗಳು ಪೇಟೆಯ ಮೇಲೆ ತಮ್ಮದೇ ಆದ ಪರಿಣಾಮವನ್ನು ಬೀರುವುದು ಖಂಡಿತ. ಇನ್ನೇನು ಕೆಲವೇ ವಾರಗಳಲ್ಲಿ ರಾಜಕೀಯ ವಿದ್ಯಮಾನಗಳು ಕ್ಷಿಪ್ರಗತಿಯಲ್ಲಿ ನಡೆಯುವುದೂ ಖಂಡಿತ. ಅದನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ಷೇರುಪೇಟೆಯಲ್ಲಿ ವ್ಯವಹರಿಸುವವರು ಜಾಣರು.
- ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


