ಚಿನ್ನದ ಸಾಲಕ್ಕೆ ಮನ್ನಣೆ

ಕಳೆದ ಕೆಲವು ವರ್ಷಗಳಿಂದ ಚಿನ್ನದ ದರ ಗಣನೀಯವಾಗಿ ಏರಿಕೆಯಾಗಿದೆ. ಭಾರಿ ಬಡ್ಡಿ ದರ ನೀಡಿ ವೈಯಕ್ತಿಕ ಸಾಲವನ್ನು ಪಡೆಯುವುದಕ್ಕಿಂತ ಮನೆಯ ಲಾಕರ್‌ನೊಳಗೆ ಬಿದ್ದಿರುವ ಚಿನ್ನಾಭರಣವನ್ನು ಅಡವಿಟ್ಟು ಸಾಲ ಪಡೆಯುವುದೇ ಒಳ್ಳೆಯದು ಎಂಬ ಭಾವನೆ ಮೂಡುತ್ತದೆ. ಹೌದು. ಇದು ನಿಜಕ್ಕೂ ಸರಿಯಾದ ಯೋಚನೆ. ಚಿನ್ನದ ಮೇಲಿನ ಸಾಲವು ವೈಯಕ್ತಿಕ ಸಾಲಕ್ಕಿಂತ ಉತ್ತಮ. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಏನಿದು ಚಿನ್ನದ ಮೇಲಿನ ಸಾಲ?
ಹಣದ ಅವಶ್ಯಕತೆ ಇದ್ದಾಗ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವ ಕ್ರಮ ಹಿಂದಿನಿಂದಲೂ ಬೆಳೆದುಬಂದಿದೆ. ಆರ್ಥಿಕವಾಗಿ ಬಲಿಷ್ಠವಾದ ವ್ಯಕ್ತಿಯು ಇಂತಹ ಸಾಲ ನೀಡುವ ಮೂಲಕ ತನ್ನ ವಹಿವಾಟನ್ನೂ ಹೆಚ್ಚಿಸಿಕೊಳ್ಳುತ್ತಿದ್ದ. ಇದೇ ಕ್ರಮವನ್ನು ಈಗ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಅನುಸರಿಸುತ್ತಿವೆ. ಈ ಸಾಲದ ಅನ್ವಯ, ಹಣದ ಅವಶ್ಯಕತೆಯಿರುವ ವ್ಯಕ್ತಿಯು ಆಭರಣದ ರೂಪದಲ್ಲಿರುವ ಚಿನ್ನವನ್ನು ಬ್ಯಾಂಕ್ ಅಥವಾ ಇತರೆ ಸಂಸ್ಥೆಯಲ್ಲಿ ಅಡವಿಡುತ್ತಾನೆ. ನಂತರ ಅಡವಿಟ್ಟ ಚಿನ್ನದ ಮೌಲ್ಯದ ಶೇ.80ರಷ್ಟನ್ನು ನಗದು ರೂಪದಲ್ಲಿ ಪಡೆಯುತ್ತಾನೆ. ಈ ಪ್ರಕ್ರಿಯೆಯ ವೇಳೆ ಆತ ಗುರುತಿನ ಚೀಟಿ, ಪಾನ್ ಕಾರ್ಡ್, ವಿಳಾಸ ಖಾತ್ರಿ ಮುಂತಾದ ಸೂಕ್ತವಾದ ದಾಖಲೆ ಪತ್ರವನ್ನು ಒದಗಿಸಬೇಕು. ಈ ಸಾಲದಲ್ಲಿ ಸಾಲಗಾರನು ಚಿನ್ನವನ್ನು ಅಡಮಾನವಿಡುವ ಕಾರಣ ಈ ಸಾಲದ ಮೇಲಿನ ಬಡ್ಡಿ ದರ ವೈಯಕ್ತಿಕ ಸಾಲಕ್ಕಿಂತ ಕಡಿಮೆಯಾಗಿರುತ್ತದೆ.
ವ್ಯತ್ಯಾಸವೇನು?
ಚಿನ್ನವನ್ನು ಬ್ಯಾಂಕ್‌ನಲ್ಲಿ ಇಡುವ ಕಾರಣ ಇದೊಂದು ಸುರಕ್ಷಿತ ಸಾಲವಾಗಿರುತ್ತದೆ
ಚಿನ್ನದ ಅಡಮಾನ ಸಾಲದ ಮರುಪಾವತಿ ಅವಧಿಯು ಕಡಿಮೆ ಇರುತ್ತದೆ. ಅಂದರೆ ಗರಿಷ್ಠ 12 ತಿಂಗಳುಗಳಾಗಿರುತ್ತದೆ.
ಇಲ್ಲಿ ಸಾಲದ ಮೊತ್ತವು ಸಾಲಗಾರ ಅಡವಿಟ್ಟ ಚಿನ್ನದ ಮೌಲ್ಯವನ್ನು ಅವಲಂಬಿಸಿರುತ್ತದೆಯೇ ವಿನಾ ಆತನ ಮರುಪಾವತಿ ಸಾಮರ್ಥ್ಯದ ಮೇಲಲ್ಲ.
ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಚಿನ್ನದ ಅಡಮಾನ ಸಾಲದ ಬಡ್ಡಿ ದರ ಕಡಿಮೆ. ಇದು ಸುಮಾರು ಶೇ.11ರಿಂದ 15ರಷ್ಟಿರುತ್ತದೆ.
ಮಧ್ಯಂತರ ಅವಧಿಯಲ್ಲಿ ಚಿನ್ನದ ಮೌಲ್ಯ ವ್ಯತ್ಯಾಸವಾದರೆ ಸ್ವಲ್ಪ ಮಟ್ಟಿನ ರಿಸ್ಕ್ ಎದುರಾಗುತ್ತದೆ.
ಚಿನ್ನದ ಸಾಲದ ಲಾಭವೇನು?
ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಚಿನ್ನದ ಮೇಲಿನ ಸಾಲದ ಪ್ರಕ್ರಿಯೆ ಕಡಿಮೆ. ಹಾಗಾಗಿ ಬೇಗನೆ ಸಾಲ ದೊರೆಯುತ್ತದೆ.
ಸಾಲಕ್ಕಾಗಿ ನೀಡುವ ದಾಖಲೆಗಳೂ ಕಡಿಮೆ
ಇಲ್ಲಿ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಯಾಗುತ್ತದೆ ಎಂಬ ನಂಬಿಕೆ ಬ್ಯಾಂಕ್‌ನವರಿಗಿರುತ್ತದೆ. ಏಕೆಂದರೆ, ಭಾರತೀಯರಿಗೂ ಚಿನ್ನಕ್ಕೂ ಒಂದು ರೀತಿಯ ಭಾವನಾತ್ಮಕ ಸಂಬಂಧವಿದೆ. ಹಾಗಾಗಿ ಮರುಪಾವತಿ ತಪ್ಪಿಸುವ ಮೂಲಕ ಚಿನ್ನಾಭರಣವನ್ನು ಕಳೆದುಕೊಳ್ಳಲು ಯಾರೂ ಇಚ್ಛಿಸುವುದಿಲ್ಲ.
ಚಿನ್ನದ ಮೇಲಿನ ಸಾಲದ ಬಡ್ಡಿ ದರ ಕಡಿಮೆ.
ಮರುಪಾವತಿ ಅವಧಿಯಲ್ಲಿ ಕೇವಲ ಬಡ್ಡಿಯನ್ನು ಮಾತ್ರ ಪಾವತಿಸುವಂತಹ ಅವಕಾಶವನ್ನೂ ಕೆಲವು ಸಂಸ್ಥೆಗಳು ನೀಡುತ್ತವೆ. ಅವಧಿ ಪೂರ್ಣಗೊಳ್ಳುವ ವೇಳೆ ಸಾಲದ ಪೂರ್ಣ ಮೊತ್ತ ಪಾವತಿಸಬೇಕು. ಹೀಗಾಗಿ ಸಾಲಗಾರನ ಮೇಲೆ ಹೊರೆಬೀಳುವುದು ತಪ್ಪುತ್ತದೆ.
ಇತರ ಸಾಲ ಪಡೆಯುವುದಕ್ಕಿಂತ ಲಾಕರ್‌ನಲ್ಲಿರುವ ಚಿನ್ನ ಅಡವಿಟ್ಟು ಸಾಲ ಪಡೆಯುವುದೇ ಉತ್ತಮ ಎಂಬ ಭಾವನೆ ಅನೇಕರಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


