ಹೊಸ ಬ್ಯಾಂಕ್

ಬರೋಬ್ಬರಿ ಎರಡೂವರೆ ದಶಕಗಳ ನಂತರ ದೇಶದಲ್ಲಿ ಹೊಸ ಬ್ಯಾಂಕ್‌ಗಳು ಆಗಮನವಾಗಲಿದೆ. 1991ರಲ್ಲಿ ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಮುಕ್ತಗೊಂಡ ನಂತರ ವಿದೇಶಿ ಬ್ಯಾಂಕ್‌ಗಳ ಕಾರ್ಯಚಟುವಟಿಕೆಗೆ ಅನುಮತಿ ನೀಡಲಾಗಿತ್ತೇ ಹೊರತು ಹೊರತು ಹೊಸ ಬ್ಯಾಂಕ್‌ಗಳ ಸ್ಥಾಪನೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿರಲಿಲ್ಲ. ಈಗ ಹಣಕಾಸು ಕ್ಷೇತ್ರದ ದಿಕ್ಸೂಚಿ ಬದಲಾಗಿದೆ. ಬದಲಾದ ಅಗತ್ಯಗಳಿಗೆ ತಕ್ಕಂತೆ ಹೊಸ ಬ್ಯಾಂಕ್‌ಗಳ ಅಗತ್ಯ ಉಂಟಾಗಿದೆ.
2 ವರ್ಷಗಳ ಚರ್ಚೆ
2010-2011ನೇ ಹಣಕಾಸು ವರ್ಷದಲ್ಲಿ ಹೊಸ ಬ್ಯಾಂಕ್‌ಗಳ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಹಾಗೂ ಹೀಗೂ 2 ವರ್ಷ ಚರ್ಚೆ ನಡೆದು ಹೊಸ ಬ್ಯಾಂಕ್ ಸ್ಥಾಪನೆಗೆ ನಿಯಮ ಬಹುತೇಕ ಸಿದ್ಧಗೊಂಡಿದೆ. ಆರಂಭದ ಬಂಡವಾಳ, ಸಿಬ್ಬಂದಿ ನಿಯೋಜನೆ, ಪ್ರವರ್ತಕರ ಪಾಲು, ಅವರ ಅಧಿಕಾರ ನಿರ್ವಹಣೆ, ಹಣಕಾಸು ಇಲಾಖೆಯ ಅಧಿಕಾರ, ಭಾರತೀಯ ರಿಸರ್ವ್ ಬ್ಯಾಂಕ್‌ನ ಪಾತ್ರದ ಬಗ್ಗೆ ಬಹುತೇಕ ಅಂತಿಮ ನಿರ್ಣಯವಾಗಿದೆ.
ಇನ್ನೂ 4 ಲಕ್ಷ ಹಳ್ಳಿಗಳಿಗೆ
ನಗರ ಪ್ರದೇಶಗಳಲ್ಲಿ ಹೊಸ ಹೊಸ ಬ್ಯಾಂಕ್‌ಗಳು, ವಿವಿಧ ರೀತಿಯ ಠೇವಣಿ ಯೋಜನೆ, ಸಾಲ ಯೋಜನೆ ಜನರನ್ನು ಆಕರ್ಷಿಸುತ್ತಿರಬಹುದು. ಆದರೆ ದೇಶದ ಇನ್ನೂ 5 ಲಕ್ಷ ಹಳ್ಳಿಗಳಿಗೆ ಬ್ಯಾಂಕ್ ಸೇವೆಯೇ ಲಭ್ಯವಾಗಿಲ್ಲ. ಕೇಂದ್ರ ಹಣಕಾಸು ಇಲಾಖೆ ವರದಿ ಪ್ರಕಾರ ಶೇ.40 ಮಂದಿಗೆ ಮಾತ್ರ ಬ್ಯಾಂಕಿಂಗ್ ಸೇವೆ ಲಭ್ಯವಾಗುತ್ತಿದೆ.
ಹೊಸ ಬ್ಯಾಂಕ್‌ಗಳು ಎಂಥವು?
ಬ್ಯಾಂಕ್‌ಗಳು ದೇಶದ ಹಣಕಾಸು ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಲಿ ಇರುವ ರಾಷ್ಟ್ರೀಕೃತ ಬ್ಯಾಂಕ್‌ಗಳು ನವದೆಹಲಿಯಂಥ ಮೆಟ್ರೋಪಾಲಿಟನ್ ನಗರದಿಂದ ಗ್ರಾಮೀಣ ಪ್ರದೇಶವರೆಗಿನ ಎಲ್ಲ ವರ್ಗಗಳ ಗ್ರಾಹಕರನ್ನು ಗೌರವಿಸಿ ಸೇವೆ ನೀಡುತ್ತಿವೆ. ಆದರೆ ಹೊಸ ಬ್ಯಾಂಕ್‌ಗಳನ್ನು ತೆರೆಯಲು ಉತ್ಸಾಹ ಹೊಂದಿರುವುದು ಕಾರ್ಪೊರೇಟ್ ಸಂಸ್ಥೆಗಳು. ಹೊಸ ನಿಯಮ ಪ್ರಕಾರ ಬ್ಯಾಂಕ್ ಸ್ಥಾಪನೆ ಮಾಡಲು ಕನಿಷ್ಠ # 1000 ಕೋಟಿ ಬಂಡವಾಳವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಇಡಬೇಕು. ಹೀಗಾಗಿ ಅವುಗಳು ಗ್ರಾಮೀಣ ಪ್ರದೇಶದ ಗ್ರಾಹಕರತ್ತ ಸ್ಪಂದಿಸುತ್ತವೆಯೇ ಎನ್ನುವುದು ಪ್ರಶ್ನಾರ್ಹವಾಗಿದೆ.
ಲಾಭವೇ ಗುರಿಯಾದೀತೇ?
ತಾಂತ್ರಿಕವಾಗಿ ಹೊಸ ಬ್ಯಾಂಕ್‌ಗಳು ಈಗಿನ ಎಲ್ಲ ಬ್ಯಾಂಕ್‌ಗಳಿಗಿಂತ ಅದ್ಭುತವಾಗಿ ಇರಲಿವೆ ಎನ್ನುವುದು ಖಂಡಿತ. ಅವುಗಳ ಕಾರ್ಯಶೈಲಿ ಗಮನಿಸಿದಾಗ ಬ್ಯಾಂಕ್‌ಗಳ ಶಾಖೆಗಳ ಕೊರತೆ ತುಂಬಬಲ್ಲವೇ ಎನ್ನುವುದು ಈಗಿನ ಪ್ರಶ್ನೆ. ಕಾರ್ಪೊರೇಟ್ ಸಂಸ್ಥೆಗಳು ಪ್ರವರ್ತಿಸುವ ಬ್ಯಾಂಕ್‌ಗಳು ಲಾಭವನ್ನೇ ಗುರಿಯಾಗಿಟ್ಟುಕೊಂಡು ವ್ಯವಹಾರ ನಡೆಸುವುದು ಬಹುತೇಕ ಖಚಿತ. ಹೀಗಾಗಿ, ಬಡವರು, ದಿನಗೂಲಿಗಳು, ಎರಡನೇ ದರ್ಜೆ ಗುಮಾಸ್ತರು ಅವುಗಳಿಗೆ ಪ್ರವೇಶ ಪಡೆಯಬಹುದೇ, ಸಣ್ಣ ಮತ್ತು ಮಧ್ಯಮ ಪ್ರಮಾಣದ ನಗರ/ಪಟ್ಟಣಗಳಲ್ಲಿ ಶಾಖೆಗಳನ್ನು ವಿಸ್ತರಸಲಿವೆಯೇ ಎನ್ನುವುದು ಕುತೂಹಲಕಾರಿ ಅಂಶ.
ಸ್ಥಳೀಯ ಭಾಷೆ ಇದ್ದೀತೆ?
ಸದ್ಯ ದೇಶಾದ್ಯಂತ ಇರುವ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ರಂಗದ ಕೆಲವು ಬ್ಯಾಂಕ್‌ಗಳಲ್ಲಿ ತ್ರಿ ಭಾಷಾ ಸೂತ್ರ (ಇಂಗ್ಲಿಷ್, ಹಿಂದಿ ಮತ್ತು ಆಯಾ ರಾಜ್ಯ ಭಾಷೆ. ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡ) ಜಾರಿಯಲ್ಲಿದೆ. ಇದರಿಂದಾಗಿ ಇಂಗ್ಲಿಷ್/ಹಿಂದಿ ಭಾಷೆ ಅರಿವು ಇಲ್ಲದಿರುವ ವ್ಯಕ್ತಿಗಳಿಗೂ ಬ್ಯಾಂಕ್ ವಹಿವಾಟನ್ನು ಸುಲಲಿತವಾಗಿ ನಡೆಸಲು ಅವಕಾಶ ಉಂಟು. ಆದರೆ ಹೊಸತಾಗಿ ಬರುವ ಖಾಸಗಿ ಬ್ಯಾಂಕ್‌ಗಳು ಇಂಥ ಸೂತ್ರ ಪಾಲಿಸುತ್ತವೆಯೇ ಎಂದು ಕಾಲವೇ ಹೇಳಬೇಕಷ್ಟೆ.
ಶಾಖೆ ವಿಸ್ತರಣೆಯೂ ಅಷ್ಟೆ. ಹೆಚ್ಚು ಪ್ರಮಾಣದ ಉದ್ದಿಮೆ ಮತ್ತು ಕೈಗಾರಿಕಾ ಚಟುವಟಿಕೆ ಇರುವ ಸ್ಥಳಗಳಿಗೆ ಕೇಂದ್ರೀಕೃತವಾಗುವ ಸಾಧ್ಯತೆಯೇ ಹೆಚ್ಚು.
ಸಾಲ ಕೊಡುವರೇ?
ಇದು ಎಂಥಾ ಪ್ರಶ್ನೆ ಎಂದುಕೊಳ್ಳಬೇಡಿ. ಯಾಕೆಂದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಖಾಸಗಿ ರಂಗದ ಕೆಲವು ಬ್ಯಾಂಕ್‌ಗಳು ಜಾನುವಾರುಗಳ ಖರೀದಿ, ಕೃಷಿ ಸಾಲ ಇತ್ಯಾದಿ ಸ್ಥಳೀಯ ಅಗತ್ಯಗಳನ್ನು ಪೂರೈಸುವ ಬಗ್ಗೆ ಸಾಲ ನೀಡುತ್ತಿವೆ. ಅದೇ ರೀತಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಅಗತ್ಯ ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್‌ಗಳು ನೆರವಾಗುತ್ತಿವೆ. ಆದರೆ ಹೊಸತಾಗಿ ಬರುವ ಬ್ಯಾಂಕ್‌ಗಳು ಇಂಥದ್ದೆಲ್ಲ ಆದ್ಯತೆ ನೀಡುತ್ತವೆಯೇ ಎನ್ನುವುದು ಈಗಿನ ಪ್ರಶ್ನೆ. ಸಿಬ್ಬಂದಿ ನೇಮಕದಲ್ಲಿ ಮತ್ತು ಗ್ರಾಹಕರ ಠೇವಣಿಯಲ್ಲಿ ಅನುಚಿತ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮವಾಗಿಯೇ ಖಾಸಗಿ ಬ್ಯಾಂಕ್‌ಗಳನ್ನು 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದ್ದರು.
ದೇಶದಲ್ಲಿ ಖಾಸಗಿ ಬ್ಯಾಂಕ್‌ಗಳ ಸಾಧನೆ
ಹತ್ತು ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಂಡು ಕೇಳರಿಯದ ಸಾಧನೆ ಮಾಡುತ್ತೇವೆ ಎಂದು ಅದ್ಧೂರಿಯಿಂದ ಮಾರುಕಟ್ಟೆ ಪ್ರವೇಶ ಮಾಡಿದ ಕೆಲ ಖಾಸಗಿ ಬ್ಯಾಂಕ್‌ಗಳು ಮುಳುಗಿ ಹೋಗಿವೆ. ಮತ್ತೆ ಕೆಲವು ಬೇರೆ ಬ್ಯಾಂಕ್‌ಗಳು ಇತರ ಬ್ಯಾಂಕ್‌ಗಳಲ್ಲಿ ವಿಲೀನ ಹೊಂದಿವೆ (ಉದಾ- ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಲ್ಲಿ ವಿಲೀನ ಹೊಂದಿದ್ದು).
ಈಗಿನ ಬ್ಯಾಂಕಿಂಗ್ ಕ್ಷೇತ್ರದ ಸಮಸ್ಯೆ
- ಸಿಬ್ಬಂದಿ ಕೊರತೆ ಮತ್ತು ಏರುತ್ತಿರುವ ಅನುತ್ಪಾದಕ ಆಸ್ತಿ.
- ಸದ್ಯ ಅನುತ್ಪಾದಕ ಆಸ್ತಿ ಶೇ.4. ಅದನ್ನು ತಗ್ಗಿಸುವ ಕ್ರಮಗಳಿದ್ದರೂ ಯಶಸ್ವಿಯಾಗಿಲ್ಲ.
- ರಾಜಕಾರಣಿಗಳ ಮಧ್ಯಪ್ರವೇಶ ಪ್ರಮುಖ ನಿರ್ಣಯಗಳಿಗೆ ಅಡ್ಡಿ
ಹೊಸ ಬ್ಯಾಂಕ್‌ಗಳು ಏನು ಮಾಡಬಹುದು?
- ಖಾಸಗಿ ಬ್ಯಾಂಕ್‌ಗಳಿಗೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಿಗೆ ಇರುವಂಥ ಬದ್ಧತೆ ಮತ್ತು ಗಂಭೀರತೆ ಇರುವುದಿಲ್ಲ.
- ಸರ್ಕಾರದ ಕಾನೂನಿಗೆ ತಲೆಬಾಗುವಂತೆ ತೋರ್ಪಡಿಸಿ ಆಯ್ದ ಪ್ರದೇಶದಲ್ಲಿ ಶಾಖೆಗಳನ್ನು ತೆರೆಯಬಹುದು.
- ಅವುಗಳ ಸೇವೆ ನಗರ ಕೇಂದ್ರಿತವಾಗಿದ್ದು, ಗ್ರಾಮೀಣ ಪ್ರದೇಶಕ್ಕೆ ಹೊಂದಿಕೊಳ್ಳುವುದು ಕಷ್ಟ.
- ಸಮಾಜದ ಮೇಲ್‌ಸ್ತರದ ವರ್ಗ, ಉದ್ದಿಮೆಗಳಿಗೆ ನೆರವು ನೀಡಲಿವೆ.
- ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹೆಚ್ಚಿನ ಸಮಸ್ಯೆ ಉಂಟಾಗಲಾರದು.
- ರಮಾನಂದ ಶರ್ಮಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


