ರಿಟರ್ನ್ಸ್ ಫೈಲ್

ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದು ಕಡ್ಡಾಯ. ಆದರೆ, ಹೆಚ್ಚಿನವರು ಫೈಲ್ ಮಾಡುವ ಕೊನೇ ದಿನಾಂಕದವರೆಗೂ ಕಾದು ಕೊನೆಗೆ ಗೊಂದಲದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಯಾವ್ಯಾವ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಅಂತಹ ಮಾಹಿತಿಗಳ ಬಗ್ಗೆ ವಿವರ ಇಲ್ಲಿದೆ.
ರಿಟರ್ನ್ಸ್ ಫೈಲ್ ಮಾಡಿ
ತೆರಿಗೆಯು ವೇತನದಿಂದಲೇ ಕಡಿತಗೊಂಡಿದೆ. ಹಾಗಾಗಿ ರಿಟರ್ನ್ಸ್ ಫೈಲ್ ಮಾಡಬೇಕಾದ ಅಗತ್ಯವಿಲ್ಲ ಎಂದೇ ಅನೇಕರು ಭಾವಿಸುತ್ತಾರೆ. ಆದರೆ, ತೆರಿಗೆ ಕಡಿತಗೊಂಡರೂ ನೀವು ರಿಟರ್ನ್ಸ್ ಫೈಲ್ ಮಾಡಲೇಬೇಕು. ನಿಮ್ಮ ಆದಾಯವು ತೆರಿಗೆ ವಿನಾಯ್ತಿ ಮಿತಿಗಿಂತ ಕಡಿಮೆಯಿದ್ದರೂ ನೀವು ರಿಟರ್ನ್ಸ್ ಫೈಲ್ ಮಾಡುವುದರಿಂದ, ಸಾಲ ಪಡೆಯುವಾಗ, ವೀಸಾಗೆ ಅರ್ಜಿ ಸಲ್ಲಿಸುವಾಗ, ವಿಮೆ ಪಡೆಯುವಾಗ ಸಹಾಯಕ್ಕೆ ಬರುತ್ತದೆ.
ಸೂಕ್ತವಾದ ಅರ್ಜಿ
ಭಾರತದಲ್ಲಿ 8 ಬಗೆಯ ಐಟಿಆರ್ ಅರ್ಜಿಗಳಿವೆ. ನಿಮ್ಮ ಆದಾಯದ ವರ್ಗೀಕರಣಕ್ಕೆ ಅನುಗುಣವಾಗಿ ಅರ್ಜಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾ, ವೇತನ, ಪಿಂಚಣಿ ಹಾಗೂ ಬಡ್ಡಿಯಿಂದ ಆದಾಯ ಬರುತ್ತಿದ್ದರೆ ಐಟಿಆರ್-1 ಅರ್ಜಿ ಪಡೆಯಬೇಕು. ಬಂಡವಾಳದ ಆದಾಯ, ಬಾಡಿಗೆಯಿಂದ ಬರುವ ಆದಾಯ ಹೊಂದಿದ್ದು ಹಾಗೂ ಗೃಹ ಸಾಲ ಮರುಪಾವತಿ ಮಾಡುತ್ತಿದ್ದರೆ ಐಟಿಆರ್-2 ಅರ್ಜಿ ಪಡೆಯಬೇಕು.
ವಿನಾಯಿತಿ ಆದಾಯ
ಮ್ಯೂಚ್ಯುವಲ್ ಫಂಡ್‌ನಿಂದ ಪಡೆದ ಡಿವಿಡೆಂಡ್, ಭದ್ರತಾ ಪತ್ರದಿಂದ ಬರುವ ದೀರ್ಘಾವಧಿ ಬಂಡವಾಳದ ಆದಾಯ ತೆರಿಗೆ ವಿನಾಯಿತಿಗೆ ಒಳಪಡುತ್ತವೆ. ಇವುಗಳ ಮೇಲೆ ತೆರಿಗೆ ಪಾವತಿಸಬೇಕಾದ ಅಗತ್ಯವಿರುವುದಿಲ್ಲ. ಆದರೂ, ರಿಟರ್ನ್ಸ್ ಫೈಲ್ ಮಾಡುವಾಗ ಈ ಬಗ್ಗೆ ವಿವರ ನೀಡಬೇಕು.
ವಾರ್ಷಿಕ ಮಾಹಿತಿ ರಿಟರ್ನ್
ರಿಟರ್ನ್ಸ್ ಫೈಲ್ ವೇಳೆ ಆ ವರ್ಷದಲ್ಲಿ ಮಾಡಿದ ಪ್ರಮುಖ ಹೂಡಿಕೆ, ಚರ ಆಸ್ತಿಯ ವ್ಯವಹಾರ, ನಗದು ಠೇವಣಿ, ಮಿತಿಯನ್ನು ಮೀರಿದ ಕ್ರೆಡಿಟ್ ಕಾರ್ಡ್ ವೆಚ್ಚ ಮುಂತಾದ ವಿವರ ಬಹಿರಂಗಪಡಿಸಬೇಕು. ಉದಾ, 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಪಾವತಿ, 1 ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ಷೇರು ಖರೀದಿ ಇತ್ಯಾದಿ.
ಬ್ಯಾಂಕ್‌ನಿಂದ ಬಂದ ಬಡ್ಡಿ
ಬ್ಯಾಂಕ್‌ನಲ್ಲಿಟ್ಟ ಠೇವಣಿಗೆ ಪಡೆದ ಬಡ್ಡಿಗೂ ತೆರಿಗೆ ಪಾವತಿಸಬೇಕು. ಉಳಿತಾಯ ಖಾತೆಗೆ ಬರುವ ಬಡ್ಡಿಯೂ ತೆರಿಗೆಗೆ ಅರ್ಹವಾದದ್ದು. ಹಾಗಾಗಿ ರಿಟರ್ನ್ಸ್ ಫೈಲ್ ಮಾಡುವ ವೇಳೆ ಇವುಗಳನ್ನೂ ನಮೂದಿಸಿ.
ಐಟಿಆರ್-5 ಸಲ್ಲಿಸಿ
ಡಿಜಿಟಲ್ ಸಹಿಯಿಲ್ಲದೇ ಆನ್‌ಲೈನ್‌ನಲ್ಲಿ ರಿಟರ್ನ್ಸ್ ಫೈಲ್ ಮಾಡಿದ್ದರೆ, ಫೈಲ್ ಮಾಡಿದ 30 ದಿನಗಳೊಳಗೆ ಐಟಿಆರ್-5 ಅರ್ಜಿಯನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಸಲ್ಲಿಸದಿದ್ದರೆ ರಿಟರ್ನ್ಸ್ ಫೈಲ್ ಮಾಡಿಲ್ಲ ಎಂದೇ ಪರಿಗಣಿಸಲಾಗುತ್ತದೆ.
ಬ್ಯಾಂಕ್ ಮಾಹಿತಿ ಒದಗಿಸಿ
ಬ್ಯಾಂಕ್ ಖಾತೆ ಸಂಖ್ಯೆ, ಎಂಐಸಿಆರ್ ಕೋಡ್ ಅನ್ನು ಸರಿಯಾಗಿ ನಮೂದಿಸಿ. ಆಗ ಮಾತ್ರ ರಿಟರ್ನ್ಸ್ ಹಣ ಯಾವುದೇ ಸಮಸ್ಯೆಯಿಲ್ಲದೇ ಖಾತೆಗೆ ಬಂದು ಬೀಳುತ್ತದೆ. ಸಮಸ್ಯೆ ಎದುರಾದರೆ, ಸರಿಯಾದ ಮಾಹಿತಿ ಒದಗಿಸಿದ ಕ್ಯಾನ್ಸಲ್ ಆದ ಚೆಕ್‌ವೊಂದನ್ನು ಒದಗಿಸಬೇಕು.
ಸಮಯಕ್ಕೆ ಸರಿಯಾಗಿ ಫೈಲ್
ಸೂಕ್ತ ಸಮಯಕ್ಕೆ ರಿಟರ್ನ್ಸ್ ಫೈಲ್ ಮಾಡಿ. ಕೊನೇ ದಿನಾಂಕದ ಬಳಿಕ ರಿಟರ್ನ್ಸ್ ಫೈಲ್ ಮಾಡಿದರೆ ನಷ್ಟವನ್ನು ಕ್ಯಾರಿ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಿಗದಿತ ಅವಧಿಗೆ ಮುಂಚಿತವಾಗಿಯೇ ಫೈಲ್ ಮಾಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


