ವಾಣಿಜ್ಯ

ಸರ್ಕಾರಕ್ಕೆ ಹಣ ಬೇಕು; ಉದ್ಯಮದ ಜೇಬಿಗೆ ಕೈ

ಚಾಲ್ತಿ ವರ್ಷದ ಚಿದಂಬರಂ ಬಜೆಟ್‌ನಲ್ಲಿ, ಕೇಂದ್ರ ಸರ್ಕಾರದ ಉದ್ಯಮಗಳ ಷೇರುಗಳ ಮಾರಾಟದಿಂದ 40,000 ಕೋಟಿ ರೂಪಾಯಿಗಳನ್ನು ...

ಸರ್ಕಾರಕ್ಕೆ ಹಣ ಬೇಕು; ಉದ್ಯಮದ ಜೇಬಿಗೆ ಕೈ
Published On :

ಚಾಲ್ತಿ ವರ್ಷದ ಚಿದಂಬರಂ ಬಜೆಟ್‌ನಲ್ಲಿ, ಕೇಂದ್ರ ಸರ್ಕಾರದ ಉದ್ಯಮಗಳ ಷೇರುಗಳ ಮಾರಾಟದಿಂದ 40,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಉದ್ದೇಶ ಪ್ರಕಟವಾಗಿತ್ತು. ಈ ಗುರಿಯನ್ನು ಮುಟ್ಟುವುದು ಕಷ್ಟ ಎಂದು ಈಗ ಗೊತ್ತಾಗಿದೆ. ಪೇಟೆಯ ಈಗಿನ ಸ್ಥಿತಿಯಲ್ಲಿ, ಸರ್ಕಾರಿ ಕಂಪನಿಗಳ ಷೇರುಗಳಿಗೆ ಒಳ್ಳೆಯ ಬೆಲೆ ಸಿಗುವುದಿಲ್ಲ. ನಷ್ಟದಲ್ಲಿ ಉದ್ಯಮದ ಷೇರು ಮಾರಿ, ಕೊರತೆಯನ್ನು ಸರಿದೂಗಿಸುವುದರಲ್ಲಿ ಅರ್ಥವಿಲ್ಲ.
 ಈ ಮಾತನ್ನು ತಿಳಿದೇ, ಈಗ ಕೇಂದ್ರ ಸರ್ಕಾರ ತನ್ನ ಶ್ರೀಮಂತ ಉದ್ಯಮಗಳಿಂದ ಸುಮಾರು 10,000 ಕೋಟಿ ರೂಪಾಯಿಗಳ ವಿಶೇಷ ಡಿವಿಡೆಂಡ್ ಕೇಳಿ ಪಡೆಯುವ ಉದ್ದೇಶವನ್ನು ಪ್ರಕಟಿಸಿದೆ. ಪ್ರತಿ ವರ್ಷವೂ ಸರ್ಕಾರಿ ಸ್ವಾಮ್ಯದ ಉದ್ಯಮಗಳು (ಲಾಭ ಗಳಿಸಿದರೆ) ಷೇರುದಾರರಿಗೆ ಡಿವಿಡೆಂಡ್ ಕೊಡುವುದುಂಟು. ಅದರ ಜತೆಯಲ್ಲಿ ಸರ್ಕಾರಕ್ಕೆ ವಿಶೇಷವಾಗಿ 10,000 ಕೋಟಿ ರೂಪಾಯಿಗಳ ಡಿವಿಡೆಂಡ್ ಅಗತ್ಯವಿದೆ. ಕೋಲ್ ಇಂಡಿಯಾ, ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ಷೇರುಗಳೂ ಮಾರಾಟವಾಗಲಿವೆ. ವಿಶೇಷ ಡಿವಿಡೆಂಡ್‌ನ ಭಾರವನ್ನು ಬಹುಮಟ್ಟಿಗೆ ಕೋಲ್ ಇಂಡಿಯಾ ಸಂಸ್ಥೆಯೇ ಹೊರಬೇಕು.
 ಇದುವರೆಗೆ (ಡಿಸೆಂಬರ್ ಮೊದಲ ವಾರ) ಕೇಂದ್ರ ಸರ್ಕಾರ ಕಂಪನಿಗಳ ಷೇರು ಮಾರಾಟದಿಂದ ಸಂಗ್ರಹಿಸಿರುವ ಹಣ 1326 ಕೋಟಿ ಮಾತ್ರ.

ಈರುಳ್ಳಿಯ ಕಣ್ಣೀರು
ಹಲವು ತಿಂಗಳುಗಳ ಹಿಂದೆ, ಪೇಟೆಗೆ ಈರುಳ್ಳಿ ಬರುವುದು ತಡವಾದಾಗ, ಈರುಳ್ಳಿಯ ಬೆಲೆ ಕೇಜಿಗೆ 50 ರಿಂದ 80 ರುಪಾಯಿವರೆಗೂ ಹೋಗಿತ್ತು. ಆಗ ಗ್ರಾಹಕರ ಕಣ್ಣಿನಲ್ಲಿ ನೀರು ಬಂದಿದ್ದು ನಿಜ. ಅನೇಕ ಹೋಟೆಲುಗಳಲ್ಲಿ ಊಟದ ಜತೆ ಉಚಿತವಾಗಿ ಈರುಳ್ಳಿ ಕೊಡುತ್ತಿದ್ದ ಮಾಲಿಕರು ಆಗ ಈರುಳ್ಳಿಗೆಂದೇ ವಿಶೇಷ ಹಣವನ್ನೂ ವಿಧಿಸಿದ್ದರು.
ಈಗ ಆ ಕಣ್ಣೀರು ಮಾಯವಾಗಿದೆ. ಪೇಟೆಗಳಿಗೆ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡಿನ ಈರುಳ್ಳಿ ಧಾರಾಳವಾಗಿ ಬಂದಿದೆ. ಪರಿಣಾಮವಾಗಿ ಈರುಳ್ಳಿಯ ಬೆಲೆ ಕೇಜಿಗೆ 20 ರುಪಾಯಿ ಹಾಗೂ ಅದಕ್ಕೂ ಕಡಿಮೆಯಾಗಿದೆ. ಈಗ ಕಣ್ಣೀರು ಹಾಕುವುದು ತಡವಾಗಿ ಪೇಟೆಗೆ ಮಾಲನ್ನು ತಂದ ರೈತನ ಸರದಿ. ಈಗಾಗಲೇ ಮಹಾರಾಷ್ಟ್ರದಲ್ಲಿ ಈರುಳ್ಳಿಗೆ ಬೆಂಬಲ ಬೆಲೆಯ ಬೇಡಿಕೆ ಪ್ರಕಟವಾಗಿದೆ. ವಿದೇಶಗಳಲ್ಲಿ ಈಗಲೂ ಈರುಳ್ಳಿಗೆ ಒಳ್ಳೆಯ ಬೆಲೆ ಇದೆ.
ಆದರೆ ಈರುಳ್ಳಿ ರಫ್ತಿಗೆ ಮುಕ್ತ ಅವಕಾಶ ನೀಡಿದರೆ, ಆಂತರಿಕ ಪೇಟೆಯಲ್ಲಿ ಮತ್ತೆ ಬೆಲೆ ಏರುವುದೆನ್ನುವುದು ಸರ್ಕಾರದ ನೀತಿ. ನಿಜ, ಹಾಗಾಗಲೂಬಹುದು. ವಿದೇಶೀ ಪೇಟೆಗೆ ಪ್ರವೇಶವಿಲ್ಲ ಎಂದಾದರೆ ರೈತರು ಈರುಳ್ಳಿಯನ್ನೇ ಬೆಳೆಯುವುದಿಲ್ಲ. ಆಗ ಉತ್ಪಾದನೆ ಕಡಿಮೆಯಾಗಿ ಬೆಲೆ ಏರುತ್ತದೆ. ಈಗ ಆ ಸಮಸ್ಯೆ ಇಲ್ಲ. ಉತ್ಪಾದನೆ ಹೇರಳವಾಗಿದೆ. ಈಗ ಈರುಳ್ಳಿಯನ್ನು ವಿದೇಶಗಳಿಗೆ ಟನ್‌ಗೆ 1125 ರುಪಾಯಿಗಿಂತ ಕಡಿಮೆ ಬೆಲೆಯಲ್ಲಿ ಮಾರುವಂತಿಲ್ಲ. ಪಾಕಿಸ್ತಾನದ ರಫ್ತು ಬೆಲೆ ಟನ್‌ಗೆ 550 ರುಪಾಯಿ. 'ನಮ್ಮ ಈರುಳ್ಳಿಗೆ ಕನಿಷ್ಠ ರಫ್ತು ಬೆಲೆಯ ಕಡ್ಡಾಯ ಬೇಡ' ಎನ್ನುತ್ತಿದ್ದಾರೆ ಮಹಾರಾಷ್ಟ್ರದ ರೈತರು.

ಕೊನೆ ಮಾತು:  ಸಕ್ಕರೆಯ ಬೆಲೆಯಲ್ಲಿ ಏರುಪೇರಾದಾಗ, ಬೆಳೆಗಾರರಿಗೆ, ವ್ಯಾಪಾರಿಗಳಿಗೆ ಸರ್ಕಾರದ ನೆರವು ಬೇಕು. (ಅದು ಸಾರ್ವಜನಿಕರ ಹಣ) ಆದರೆ ಸಕ್ಕರೆಯ ಬೆಲೆ ಪೇಟೆಯಲ್ಲಿ ಇಳಿದಾಗ, ಬೆಲ್ಲದ ವ್ಯಾಪಾರಿಗಳು ಅದರ ಲಾಭವನ್ನು ಅಂತಿಮ ಹಂತದ ಗ್ರಾಹಕರಿಗೆ ಒದಗಿಸಲಿಲ್ಲ. ಅದೇ ರೀತಿಯಲ್ಲಿ ಸಗಟು ಪೇಟೆಯಲ್ಲಿ ಈರುಳ್ಳಿ - ಟೊಮೆಟೋ ಬೆಲೆಗಳು ಬಿದ್ದಾಗ ಗ್ರಾಹಕರಿಗೆ ಅದರ ಲಾಭ ಸಿಗಲಿಲ್ಲ. ತರಕಾರಿಯ ಬೆಲೆಯಂತೂ ಕೆಲವು ಸಂದರ್ಭಗಳಲ್ಲಿ ಸಗಟು ಬೆಲೆಯ ಎಂಟು ಪಟ್ಟಿನ (ಶೇಕಡಾ 800) ದರದಲ್ಲಿ ಚಿಲ್ಲರೆ ಪೇಟೆಯಲ್ಲಿ ಮಾರಾಟವಾಗುತ್ತದೆ. ಇದು ಯಾವ ಸೀಮೆಯ ನ್ಯಾಯ?

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.