ಕಾರ್ಡ್ ಕಿಚ್ಚು
ಬ್ಯಾಂಕ್‌ಗಳಿಂದ, ಸ್ನೇಹಿತರಿಂದ ಸಾಲ ಪಡೆಯುವುದು ಗೊತ್ತಿದೆ. ಆದರೆ ಕ್ರೆಡಿಟ್ ಕಾರ್ಡ್‌ನಿಂದ ಸಾಲ ಪಡೆಯುವುದು...

ಬ್ಯಾಂಕ್‌ಗಳಿಂದ, ಸ್ನೇಹಿತರಿಂದ ಸಾಲ ಪಡೆಯುವುದು ಗೊತ್ತಿದೆ. ಆದರೆ ಕ್ರೆಡಿಟ್ ಕಾರ್ಡ್‌ನಿಂದ ಸಾಲ ಪಡೆಯುವುದು ಗೊತ್ತಾ? ಅದು ನಿಜಕ್ಕೂ ಅಪಾಯಕಾರಿಯಾದ ವಿಚಾರ. ಅದು ಹೇಗೆ ನೋಡೋಣ.
ಕಾಲೇಜು ಮುಗಿಸಿ ಉತ್ತಮ ಸಂಬಳದ ಕೆಲಸಕ್ಕೆ ಸೇರಿದ ಹೊಸತರಲ್ಲಿ, ಅದರಲ್ಲೂ ಉತ್ತಮ ವೇತನ ಸಿಗುತ್ತದೆ ಎಂದಾದರೆ ನಿಜಕ್ಕೂ 'ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ' ಎನ್ನುವಂತಾಗುತ್ತದೆ. ಯಾವುದೇ ವಸ್ತುವನ್ನು ಖರೀದಿಸಲೇಬೇಕೆಂಬ ಗೀಳು ತನ್ನಿಂದ ತಾನೇ ಉಂಟಾಗುತ್ತದೆ. ಸಾಮಾನ್ಯವಾಗಿ ಇಂಥವರೇ ಕ್ರೆಡಿಟ್ ಕಾರ್ಡ್‌ಗಳ 'ಮೋಸದ ಕೂಪ'ಕ್ಕೆ ಸುಲಭವಾಗಿ ಬೀಳುವವರು.
ಆಗಷ್ಟೇ ಕೆಲಸಕ್ಕೆ ಸೇರಿದ್ದೀರಿ. ಕ್ರೆಡಿಟ್ ಕಾರ್ಡ್ ನೀಡುವ ಸಂಸ್ಥೆಗಳ ಪ್ರತಿನಿಧಿಗಳು ನಿಮ್ಮ ಮೊಬೈಲ್‌ಗೆ ಕರೆ ಮಾಡಿ ಬಣ್ಣದ ಮಾತುಗಳಿಂದ ಹಲವಾರು ಆಮಿಷಗಳನ್ನು ಒಡ್ಡುತ್ತಾರೆ. 'ಈ ಕಾರ್ಡ್‌ನಲ್ಲಿ ಬೆಸ್ಟ್ ಕ್ಯಾಶ್ ಬ್ಯಾಕ್ ಆಫರ್ ಇದೆ...' ಇಂಥ ಮಾತುಗಳಿಗೆ ಮರುಳಾಗದವರು ಯಾರೂ ಇಲ್ಲ. 'ಅದೆಲ್ಲ ಫ್ರೀ ಸರ್' ಎಂದು ಮನವೊಲಿಸುವ ಕ್ರೆಡಿಟ್ ಕಾರ್ಡ್ ಕಂಪನಿಗಳ ಪ್ರತಿನಿಧಿಗಳು ಅದನ್ನು ಪಡೆಯುವಲ್ಲಿಯವರೆಗೆ ಬಿಡುವುದೇ ಇಲ್ಲ. ಕಾರ್ಡ್ ಖರೀದಿಸಿದ ಬಳಿಕ ನೀವು ಎಚ್ಚರಿಕೆಯಿಂದ ಬಳಸುವುದು ಅಗತ್ಯ.
ಗೈರತ್ತಿನ ಸಂಕೇತ
- ಕೆಲವೊಂದು ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಅನ್ನುವಂಥದ್ದು ಗೈರತ್ತಿನ ಸಂಕೇತವಾಗಿರುತ್ತದೆ. ವ್ಯಾಲೆಟ್‌ನಲ್ಲಿ ಎಷ್ಟು ಕ್ರೆಡಿಟ್ ಕಾರ್ಡ್, ಆ್ಯಡ್ ಆನ್ ಕಾರ್ಡ್‌ಗಳಿವೆ... ಹೀಗೆ ಕಾರ್ಡ್‌ಗಳಿದ್ದರೆ 'ದೊಡ್ಡ ವ್ಯಕ್ತಿ' ಎಂದು ತಿಳಿದುಕೊಳ್ಳುವವರೂ ಇದ್ದಾರೆ.
- ಹೊಸ ಕಾರ್ಡ್ ಮೂಲಕ ಖರೀದಿ ಆರಂಭವಾಗುತ್ತದೆ. ಕೆಲವೊಂದು ಬಾರಿ ಈ ಗೀಳು ಎಲ್ಲಿಯವರೆಗೆ ಹೋಗುತ್ತದೆ ಎಂದರೆ ನಮ್ಮ ಬ್ಯಾಲೆನ್ಸ್ ಮಿತಿ ದಾಟಿ ಹೋಗಿರುತ್ತದೆ. ಕ್ರೆಡಿಟ್ ಕಾರ್ಡ್ ಬಿಲ್ ಕೈಸೇರಿದಾಗ ಈ ಮಾಹಿತಿ ಗೊತ್ತಾಗುತ್ತದೆ
- ಇಲ್ಲಿಂದ ಶುರುವಾಗುವುದು ನೋಡಿ ನಿಜವಾದ ಆಟ. ನಮ್ಮ ಮಿತಿಯ ಮೊತ್ತ ದಾಟಿ ಹೋದ ಮೇಲೆ ಕ್ರೆಡಿಟ್ ಕಾರ್ಡ್ ಕಂಪನಿಗಳು 'ಈಗ ಕನಿಷ್ಠ ಮೊತ್ತ ಪಾವತಿಸಿ ನಿರಾಳರಾಗಿ' ಎಂದು ಮತ್ತೆ ಬಣ್ಣದ ಲೋಕ ತೋರಿಸುತ್ತವೆ. ಇಲ್ಲಿಯೇ ಹೆಚ್ಚಿನ ಜನರು 'ಕ್ರೆಡಿಟ್ ಕಾರ್ಡ್ ಸಾಲ' ಎಂಬ ಕೂಪಕ್ಕೆ ಬೀಳುವವರು. ಈ ಬಗ್ಗೆ ಜನರಿಗೆ ಅರಿವಿಲ್ಲದಿರುವುದೇ ಕ್ರೆಡಿಟ್ ಕಾರ್ಡ್ ಕಂಪನಿಗಳಿಗೆ ಲಾಭ!!
- ಯಾವುದೇ ಖರೀದಿಯ ಬಳಿಕದ 40-50 ದಿನಗಳಿಗೆ ಮಾತ್ರ ಕ್ರೆಡಿಟ್ ಕಾರ್ಡ್ ಉಚಿತವಾಗಿ ನೀಡುತ್ತದೆ.
- ಈ ದಿನ ಕಳೆದ ಬಳಿಕ ಪ್ರತಿ ತಿಂಗಳಂತೆ ಶೇ.3.5ರಷ್ಟು ಬಡ್ಡಿ ವಿಧಿಸುತ್ತವೆ. ವಾರ್ಷಿಕವಾಗಿ ಹೇಳುವುದಿದ್ದರೆ ಶೇ.40ರ ವರೆಗೂ ಬಡ್ಡಿಯಾದಂತಾಗುತ್ತದೆ.
- ಬಿಲ್‌ನಲ್ಲಿ ಮುದ್ರಿತವಾಗಿರುವ ಮೊತ್ತದ ಶೇ.90ರಷ್ಟು ಭಾಗವನ್ನು ನಿಗದಿತ ದಿನಾಂಕಕ್ಕಿಂತ ಮೊದಲೇ ಪಾವತಿಸಿದರೂ ಅಷ್ಟೂ ಮೊತ್ತದ ಮೇಲೆ ಬಡ್ಡಿ ಬೀಳುತ್ತದೆ.
- ಕನಿಷ್ಠ ಮೊತ್ತ ಪಾವತಿ ಮಾಡಿದರೆ ಏನಾಗುತ್ತದೆ ಗೊತ್ತೇ? ಕೇವಲ ತಡವಾಗಿ ಪಾವತಿ ಮಾಡಿದ ಶುಲ್ಕ ಮಾತ್ರ ನೀವು ಕೊಟ್ಟಂತಾಗುತ್ತದೆ. ಆದರೆ ಹೆಚ್ಚುವರಿ ಬಡ್ಡಿಯನ್ನು ಪಾವತಿ ಮಾಡಲೇಬೇಕಾದ ಪರಿಸ್ಥಿತಿ ತಂದೊಡ್ಡುತ್ತದೆ. ಗರಿಷ್ಠ ಮೊತ್ತ ಪಾವತಿಸಲು ಅಸಾಧ್ಯವಾದುದಕ್ಕೆ ಕ್ರೆಡಿಟ್ ಕಾರ್ಡ್‌ದಾರನ ಕೈಯಿಂದ ಒಂದು ಹಂತಕ್ಕೆ ಕನಿಷ್ಠ ಮೊತ್ತ ಪಾವತಿ ಮಾಡುವಂತೆ ಹೇಳಿರುವುದು ಆತನ ಅಸಹಾಯಕ ಪರಿಸ್ಥಿತಿ ಎಂದು ಖಂಡಿತವಾಗಿಯೂ ತಿಳಿಯುವಂತಿಲ್ಲ. ಏಕೆಂದರೆ ಉಳಿದ ಮೊತ್ತಕ್ಕೆ ಆತ ಹೆಚ್ಚಿನ ಬಡ್ಡಿ ಮತ್ತು ಮೊತ್ತವನ್ನು ಆತ ಪಾವತಿ ಮಾಡಲೇಬೇಕಾಗುತ್ತದೆ.
- ಕ್ರೆಡಿಟ್ ಕಾರ್ಡ್‌ನಿಂದ ನಗದು ಹಣ ಪಡೆದುಕೊಂಡರಂತೂ ಕೇಳುವುದೇ ಬೇಡ. ಕೆಲವೊಂದು ಬಾರಿ ಅದು ಪರ್ಸನಲ್ ಲೋನ್‌ಗೆ ವಿಧಿಸಲಾಗುವ ಬಡ್ಡಿಗಿಂತಲೂ ಹೆಚ್ಚಾಗಿರುತ್ತದೆ.
- ಹಾಗಿದ್ದರೆ ಈ ಸಾಲ ಶೂಲದಿಂದ ಪಾರಾಗಲು ಸಾಧ್ಯವಿಲ್ಲ ಎನ್ನುತ್ತೀರಾ? ಈ ಮಾರ್ಗಗಳನ್ನು ಅನುಸರಿಸಿದರೆ ಅದು ಸಾಧ್ಯವಾಗಬಹುದು.
- ಕ್ರೆಡಿಟ್ ಕಾರ್ಡ್ ಮೂಲಕ ನಡೆಸಿದ ಖರೀದಿ ವಿವರವನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು. ಯಾವ ವಸ್ತುವಿಗೆ ಹೆಚ್ಚು ವೆಚ್ಚ ಮಾಡಿದ್ದೀರಿ ಎಂಬುದರ ಬಗ್ಗೆ ವಿಮರ್ಶೆ ಮಾಡಬೇಕು.
- ಅನಗತ್ಯ ಮನರಂಜನೆಯ ವೆಚ್ಚಕ್ಕೆ ಕಡ್ಡಾಯವಾಗಿ ನಿಯಂತ್ರಣ ಹೇರಿ, ಉಳಿತಾಯಕ್ಕೆ ಮನಸ್ಸು ಮಾಡಬೇಕು.
- ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದು ಬಿಲ್ ಪಾವತಿಸಲು ವಿಫಲರಾಗಿದ್ದರೆ ಒಂದಾದ ಬಳಿಕ ಮತ್ತೊಂದು ಕ್ರೆಡಿಟ್ ಕಾರ್ಡ್... ಹೀಗೆ ಅವುಗಳ ಬಿಲ್ ಪಾವತಿಗೆ ಕ್ರಮವನ್ನು ಕಾರ್ಡ್ ಹೊಂದಿರುವ ವ್ಯಕ್ತಿಯೇ ಮಾಡಬೇಕು.
- ಹೆಚ್ಚಿನ ಕಂಪನಿಗಳು ಬ್ಯಾಲೆನ್ಸ್ ವರ್ಗಾಯಿಸುವ ವ್ಯವಸ್ಥೆ ಹೊಂದಿರುತ್ತವೆ. ಅದನ್ನು ಉಪಯೋಗಿಸಿಕೊಂಡು ಕೊಂಚ ನಿಟ್ಟುಸಿರು ಬಿಡಬಹುದು.
- ಕ್ರೆಡಿಟ್ ಕಾರ್ಡ್ ಕಂಪನಿಗಳ 'ಹೇಳಿಕೆ'ಯಂತಿರುವ ಕನಿಷ್ಠ ಪಾವತಿ ಮಾಡುವ ಗೋಜಿಗೆ ಹೋಗುವುದು ಬೇಡ. ಬಿಲ್‌ನಲ್ಲಿರುವ ಮೊತ್ತವನ್ನು ಪಾವತಿ ಮಾಡಬೇಕು. ಏಕೆಂದರೆ ಕನಿಷ್ಠ ಮೊತ್ತ ಏನಿದ್ದರೂ ಬಡ್ಡಿಯ ಅಂಶವನ್ನು ಮಾತ್ರ ಪ್ರತಿನಿಧಿಸುತ್ತದೆ. ಹೀಗಾಗಿ ಒಂದು ಬಾರಿ ಬೆಟ್ಟದಷ್ಟಿರುವ ಕ್ರೆಡಿಟ್ ಕಾರ್ಡ್ ಸಾಲದ ಬಾಕಿ ಪಾವತಿ ಮಾಡಲು ಕಾರ್ಡ್‌ದಾರ ಹೊಂದಿರುವ ಸೇವಿಂಗ್ಸ್ ಬ್ಯಾಂಕ್ ಖಾತೆಯ ಮೊತ್ತವನ್ನು ಬಳಸಿಕೊಳ್ಳಲೇ ಬೇಕು.
- ಒಂದು ವೇಳೆ ಈ ಹಂತ ಸಾಧ್ಯವಾಗದಿದ್ದರೆ ಪರ್ಸನಲ್ ಲೋನ್ ಮೊರೆ ಹೋಗಬಹುದು. ನೆನಪಿಡಿ. ಎಲ್ಲ ಸಾಧ್ಯತೆಗಳು ಕೈಗೂಡದಿದ್ದಾಗ ಮಾತ್ರ ಈ ಮಾರ್ಗದತ್ತ ಮನಸ್ಸು ಮಾಡುವುದು ಉತ್ತಮ. ಏಕೆಂದರೆ ಕ್ರೆಡಿಟ್ ಕಾರ್ಡ್ ಸಾಲದ ಮೇಲೆ ವಿಧಿಸಲಾಗುವ ಬಡ್ಡಿಗಿಂತ ಪರ್ಸನಲ್ ಲೋನ್ ಮೇಲೆ ವಿಧಿಸಲಾಗುವ ಬಡ್ಡಿ ಕೊಂಚ ಕಡಿಮೆ.
khandige29@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


