ವಾಣಿಜ್ಯ

ಉದ್ಯಮಿಗಳ ಬಿಚ್ಚು ಮಾತು

Published On :

ರೂಪಾಯಿ ಮೌಲ್ಯದ ಕುಸಿತ ನಿಂತಿಲ್ಲ. ವಾಣಿಜ್ಯೋದ್ಯಮಿಗಳ ಪ್ರಾತಿನಿಧಿಕ ಸಂಸ್ಥೆಗಳ ವಕ್ತಾರರ ಪ್ರಕಾರ ಸದ್ಯದಲ್ಲಿ (ಅವಧಿ ಅನಿಶ್ಚಿತ) ಪರಿಸ್ಥಿತಿಯ ಸುಧಾರಣೆ ಆಗುವುದಿಲ್ಲ. ಆ ವಲಯದ ಅಭಿಪ್ರಾಯದಲ್ಲಿ ಸರ್ಕಾರದ ಅನಿಶ್ಚಿತತೆಯೇ ಬಿಕ್ಕಟ್ಟಿನ ಮೂಲ ಕಾರಣ.
ಕೆಟ್ಟ ಆಡಳಿತ, ಸುಧಾರಣೆಯ ಅಭಾವ, ದುರ್ಬಲ ರಾಜಕೀಯ ನಾಯಕತ್ವ, ನೀತಿ ನಿರೂಪಣೆಯ ಲಕ್ವ ಈಗಿನ ತೊಳಲಾಟಕ್ಕೆ ಕಾರಣ. ಅದಕ್ಕೆ ಅವರು ಕೊಡುವ ಉದಾಹರಣೆ: ಗ್ರಾಮೀಣ ಉದ್ಯೋಗ ಖಾತರಿ, ಸಾಲ ಮನ್ನ, ಆಹಾರ ಭದ್ರತೆಯ ಹೊರೆ ಇವೆಲ್ಲವೂ ಬಜೆಟ್ ಕೊರತೆಯನ್ನು ಹೆಚ್ಚಿಸಿದೆ.
ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನಾವು ರೋಗಕ್ಕೆ ಔಷಧಿ ಕೊಡಬೇಕು. ರೋಗದ ಲಕ್ಷಣಗಳಿಗಲ್ಲ. ನಿಜ. ಇದು ಸಮಸ್ಯೆಯ ಒಂದು ಮುಖ. ಅದಕ್ಕೆ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯಬೇಕೇಕೆ?
ನಮ್ಮ ಆಮದು ವ್ಯವಹಾರಕ್ಕೆ ಬಹುತೇಕ ಬಳಸುತ್ತಿರುವುದು ಡಾಲರ್ ವಿನಿಮಯವನ್ನೇ. ಹೀಗಾಗಿ ಹೆಚ್ಚಿನ ಡಾಲರ್‌ಗಳ ಅಗತ್ಯ ಬಿದ್ದಾಗ, ಅದರ ಮೌಲ್ಯ ಹೆಚ್ಚಾಗುತ್ತದೆ. ಡಾಲರ್‌ಗಳನ್ನು ನಾವು ಕೊಳ್ಳಬೇಕು. ಭಾರತದಲ್ಲೂ ಹಲವಾರು ಸಂಸ್ಥೆಗಳು ಡಾಲರ್‌ಗಳನ್ನು ಗಳಿಸುತ್ತಿವೆ. ಈಗ ಡಾಲರ್ ಲೆಕ್ಕದಲ್ಲಿ ವಸ್ತುವಿನ ಬೆಲೆ ಏರದೇ ಇದ್ದರೂ, ಆ ಸಂಸ್ಥೆಗಳಿಗೆ ಅಧಿಕ ಪ್ರಮಾಣದ ರುಪಾಯಿಗಳು ಸಿಗುತ್ತಿವೆ.
ಡಾಲರ್‌ಗಳಲ್ಲಿ ಸರಾಸರಿ, ರುಪಾಯಿಗಳಲ್ಲಿ ಖರ್ಚು ಮಾಡುವವರಿಗೆ ಈಗಿನ ಪರಿಸ್ಥಿತಿ ಹೇಳಿ ಮಾಡಿಸಿದಂತಿದೆ. ಜನ ಸಾಮಾನ್ಯರಿಗಲ್ಲ. ರಫ್ತುದಾರರು ಸ್ವಲ್ಪ ಹೆಚ್ಚು ರುಪಾಯಿಗಳನ್ನು ಗಳಿಸುತ್ತಿರಬಹುದು. ಆದರೆ ಅವರು ಬಳಸುವ ಸ್ಥಳೀಯ ಕಚ್ಚಾಮಾಲಿನ ಬೆಲೆ ಹೆಚ್ಚಿದೆ.

ಬ್ಯಾಂಕ್‌ಗಳ ಬಡ್ಡಿ
ಈಗಿನ ಪರಿಸ್ಥಿತಿಯಲ್ಲಿ ಬ್ಯಾಂಕಿಂಗ್ ವಲಯಕ್ಕೆ ಭಾರಿ ಹೊಡೆತವೇ ಬಿದ್ದಿದೆ. ಬ್ಯಾಂಕ್‌ಗಳು ಪೇಟೆಯ ಪರಿಸ್ಥಿತಿಯ ಭವಿಷ್ಯವನ್ನು ಊಹಿಸುವುದಕ್ಕೂ ಅಸಾಧ್ಯವಾಗಿದ್ದ ಕಾಲದಲ್ಲಿ ನಿಗದಿಪಡಿಸಿದ ಬಡ್ಡಿದರ ಈಗ ಏನೇನೂ ಸಾಲದು.
ಅದಕ್ಕೇ ಖಾಸಗಿ ಬ್ಯಾಂಕ್‌ಗಳು ಸಾಲದ ಮೇಲಿನ (ಠೇವಣಿಯದ್ದಲ್ಲ) ಬಡ್ಡಿ ದರವನ್ನು ಹೆಚ್ಚಿಸಿವೆ. ಆದರೆ ಸರ್ಕಾರ ಸ್ವಾಮ್ಯದ ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಿಸುವಂತಿಲ್ಲ. ಸರ್ಕಾರ ಅದನ್ನು ಒಪ್ಪುವುದಿಲ್ಲ. ಈ ನೀತಿಯಿಂದ ಮನೆ ಸಾಲ, ವಾಹನ ಸಾಲ ಪಡೆದವರು ಖಾಸಗಿ ಬ್ಯಾಂಕ್‌ಗಳಿಗೆ ಹೆಚ್ಚು ಬಡ್ಡಿ ತೆರಬೇಕಾಗಿರುವುದು ಅನಿವಾರ್ಯ. ಭಾರತೀಯ ಸ್ಟೇಟ್ ಬ್ಯಾಂಕಿನಂತಹ ದೊಡ್ಡ ಬ್ಯಾಂಕ್‌ಗಳಿಗೆ ಹಣದ ಬಿಕ್ಕಟ್ಟು ಸದ್ಯಕ್ಕಿಲ್ಲ. ಆದರೆ ಗಳಿಕೆಯ ಸಮಸ್ಯೆ ಇದೆ.

ಕೆಟ್ಟ ಸಾಲದ ವಿಚಾರ
ಬ್ಯಾಂಕ್‌ಗಳ ಅನುಮಾನಾಸ್ಪದ ಅಥವಾ ಕೆಟ್ಟ ಸಾಲದ ಪ್ರಮಾಣ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಪ್ರಖ್ಯಾತ ಆರ್ಥಿಕ ತಜ್ಞ ಸಿ. ರಂಗರಾಜನ್ ಅವರ ಪ್ರಕಾರ ಅರ್ಥ ವ್ಯವಸ್ಥೆಯಲ್ಲೇ ಕುಸಿತ ಕಂಡು ಬಂದಿರುವಾಗ, ಬ್ಯಾಂಕ್‌ಗಳ ಸಾಲದ ಪರಿಸ್ಥಿತಿಯೂ ಕೆಡುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಆದರೆ ಈಗ ದೇಶದ ಬೃಹತ್ ಉದ್ಯಮ ವಲಯದ ಹತ್ತು ಅತಿರಥ-ಮಹಾರಥ ಸಂಸ್ಥೆಗಳೇ ಇಡೀ ಬ್ಯಾಂಕಿಂಗ್ ವಲಯದ ಒಟ್ಟು ಸಾಲದ ಶೇಕಡಾ 13ರಷ್ಟು ಸಾಲ ಪಡೆದಿದ್ದು, ವ್ಯಾವಹಾರಿಕವಾಗಿ ಈಗ ಮುಗ್ಗರಿಸುತ್ತಿರುವಂತಿದೆ. ಆ ಉದ್ಯಮಗಳ ಗಾತ್ರ- ಬ್ಯಾಂಕ್‌ಗಳ ಸಹನೆ ಶಕ್ತಿಗಳೇ ಈಗಿನ ಪರಿಸ್ಥಿತಿಯನ್ನು ಕಾಪಾಡಬೇಕು.

ಕೊನೆ ಮಾತು: ನಮ್ಮ ರಾಜಕಾರಣಿಗಳಿಗೆ ಈಗಿನ ಆರ್ಥಿಕ ಬಿಕ್ಕಟ್ಟಿನ ಭೀಕರ ಸ್ವರೂಪವೇ ಅರ್ಥವಾಗಿರುವಂತಿಲ್ಲ. ಅವರಿಗೆ ನಾಪತ್ತೆಯಾಗಿರುವ ಕಲ್ಲಿದ್ದಲು ಗಣಿಗಳ ಹಕ್ಕಿನ ಹಂಚಿಕೆಯ ಕಡತಗಳೇ ಮುಖ್ಯವಾಗಿ ಕಂಡು ಬರುತ್ತಿದ್ದು ಆರ್ಥಿಕ ದಿವಾಳಿಕೋರತನದ ಭೀತಿಯ ಅರಿವು ಲವಲೇಶವೂ ಇದ್ದಂತಿಲ್ಲ. 

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.