ನ್ಯಾಷನಲ್ ಸ್ಪಾಟ್ ಎಕ್ಸ್‌ಛೇಂಜ್ ಅವಾಂತರದ ಪ್ರಕರಣ
ಕೇಂದ್ರ ಸರ್ಕಾರದ ಪರವಾನಗಿ ಪಡೆದು, ಒಂದು ರೀತಿಯಲ್ಲಿ ಅದರ ಆಶ್ರಯದಲ್ಲೇ ವಸ್ತುಗಳ ವಿನಿಮಯ, ಹಣದ ವ್ಯವಹಾರ ನಡೆಸುವ...
ಕೇಂದ್ರ ಸರ್ಕಾರದ ಪರವಾನಗಿ ಪಡೆದು, ಒಂದು ರೀತಿಯಲ್ಲಿ ಅದರ ಆಶ್ರಯದಲ್ಲೇ ವಸ್ತುಗಳ ವಿನಿಮಯ, ಹಣದ ವ್ಯವಹಾರ ನಡೆಸುವ ನ್ಯಾಷನಲ್ ಸ್ಪಾಟ್ ಎಕ್ಸ್‌ಛೇಂಜ್‌ನ ಅಸ್ತಿತ್ವ ಕೆಲವರಿಗಷ್ಟೇ ಗೊತ್ತಿರುವ ವಿಚಾರ. ಆ ಎಕ್ಸ್‌ಛೇಂಜ್‌ಗೆ ಫೈನಾನ್ಷಿಯಲ್ ಟೆಕ್ನಾಲಜೀಸ್ ಎನ್ನುವ ಸಂಸ್ಥೆ ಪ್ರಾಯೋಜಕ ಸಂಸ್ಥೆ. ಇಲ್ಲಿ ಮಾಲನ್ನು ಇಟ್ಟು, ಚೀಟಿ ಪಡೆದು, ಬೇಕಾದಾಗ ಬಿಡಿಸಿಕೊಂಡು ಹೋಗುವ ಸ್ಥಳದಲ್ಲೇ ವ್ಯಾಪಾರದ ಪದ್ಧತಿ ಇದೆ. ಒಂದು ದಿನದ ವಾಯಿದಾ ವ್ಯಾಪಾರವೂ ಉಂಟು. ಇದೊಂದು ಸಂಕೀರ್ಣ ವ್ಯವಸ್ಥೆ. ವ್ಯವಸ್ಥೆಯಲ್ಲಿ ಉದ್ದುದ್ದ ಇರುವ ಸುರಂಗಗಳನ್ನು ಅಡ್ಡಡ್ಡ ಕತ್ತರಿಸಿಕೊಂಡು ಹೋಗುವ ಸುರಂಗಗಳೂ ಇವೆ.
ಈ ಎಕ್ಸ್‌ಛೇಂಜ್‌ನ ವ್ಯವಹಾರವನ್ನು ಕಳೆದ ಆಡಳಿತ ವ್ಯವಸ್ಥೆಯ ಮುಖ್ಯಸ್ಥರು ದಿಢೀರನೆ ನಿಲ್ಲಿಸಿದರು. ಹತ್ತಾರು ಸಹಸ್ರ ಕೋಟಿ ರುಪಾಯಿಗಳಷ್ಟು ಹಣದ ಚಲಾವಣೆ ಸ್ಥಗಿತವಾಯಿತು. ದೊಡ್ಡ ಗಲಾಟೆಯೇ ಆಯಿತು. ಈಗ ಗ್ರಾಹಕರ ಹಿತರಕ್ಷಣಾ ಮಂತ್ರಾಲಯ, ವಾಯಿದಾ ಪೇಟೆಯ ಆಯೋಗಕ್ಕೆ ಸರ್ಕಾರದ ಸಂಪೂರ್ಣ ಅಧಿಕಾರವನ್ನು ಒದಗಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಆದೇಶ ನೀಡಿದೆ. ಆ ಆಯೋಗ ಎಕ್ಸ್‌ಛೇಂಜ್‌ನ ನಿಯಂತ್ರಣ ಪ್ರಾಧಿಕಾರವೂ ಹೌದು. ವಸ್ತುಗಳ ವಾಯಿದಾ ಪೇಟೆಯಲ್ಲಿ ವ್ಯವಹಾರ ನಡೆಸಿದರೆ, ಹೂಡಿದ ಬಂಡವಾಳಕ್ಕೆ ಹಲವು ಪಟ್ಟಿನ ಪ್ರಮಾಣದ ಪ್ರತಿಫಲ ಸಿಗಲಿದೆ ಎನ್ನುವ ನಂಬಿಕೆ ಅನೇಕರಲ್ಲಿದೆ. ಆ ನಂಬಿಕೆ ಸರಿಯಲ್ಲ. ಈ ವ್ಯವಹಾರ ಏನಿದ್ದರೂ ವಿಷಯ ತಿಳಿದ ಗಟ್ಟಿ ಕುಳಗಳಿಗೆ, ಕೋಟಿಗಟ್ಟಲೆ ನಷ್ಟವನ್ನು ಸಹಿಸಬಲ್ಲವರಿಗೆ ಮಾತ್ರ.
ನೆನಪಿನಲ್ಲಿರಲಿ: ಷೇರು- ಸೆಕ್ಯೂರಿಟಿ- ಕಮಾಡಿಟಿ ವಾಯಿದಾ ವ್ಯವಹಾರದಲ್ಲಿ 'ರಿಸ್ಕ್' ಇದ್ದೆ ಇತ್ತು. ವಿಷಯ ಗೊತ್ತಿಲ್ಲದೇ ಅದರ ತಂಟೆ ಬೇಡ.
ಬಡ್ಡಿದರಗಳ ಹೆಚ್ಚಳ?
ಕಳೆದ ಎರಡು ವಾರಗಳಲ್ಲಿ ಹಣದ ಚಲಾವಣೆಯ ನಿಯಂತ್ರಣಕ್ಕೆ ರಿಸರ್ವ್ ಬ್ಯಾಂಕ್ ಕೈಗೊಂಡ ಕ್ರಮಗಳಿಂದ ಪೇಟೆಯಲ್ಲಿ ಸಾಲ ಸಿಗುವುದು ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಲದ ಬಡ್ಡಿದರದ ಏರಿಕೆ ತೀರ ಸಹಜ ಪ್ರತಿಕ್ರಿಯೆ. ಸಾಲಕ್ಕೆ ಬೇಡಿಕೆ ಬರುವುದೂ ಸಹಜವೇ.
ಈಗಾಗಲೇ ಕೆಲವು ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು 'ಅನಿವಾರ್ಯವಾಗಿ' ಸ್ವಲ್ಪ ಏರಿಸಿವೆ. ಅದರ ಪರಿಣಾಮವಾಗಿ ಸಾಲದ ಬಡ್ಡಿದರವೂ ಹೆಚ್ಚಲೇ ಬೇಕು. ರಿಸರ್ವ್ ಬ್ಯಾಂಕ್‌ನ ಉದ್ದೇಶ ಇದ್ದಿದ್ದು ಅಂತಾರಾಷ್ಟ್ರೀಯ ವಿತ್ತ ಪೇಟೆಯಲ್ಲಿ ರುಪಾಯಿಯ ಮೌಲ್ಯವನ್ನು ಸಮರ್ಥಿಸುವುದು. ಆ ಉದ್ದೇಶ ಸ್ವಲ್ಪಮಟ್ಟಿಗೆ ಈಡೇರಿದೆ. ಆದರೆ ಅದರ ಅಡ್ಡ ಪರಿಣಾಮ ಸಾಲದ ಪೇಟೆಯಲ್ಲಿ ಕಂಡುಬಂದಿರುವುದು ವಿಪರ್ಯಾಸವೇ.
ಇದೊಂದು ವಿಷವೃತ್ತವೇ. ಅನುಭವಿಸಲೇಬೇಕು.
ಮರಳಿಸುವ ಭರವಸೆ
ಕಳೆದ ವಾರದ ಸುದ್ದಿಯಂತೆ, ನ್ಯಾಷನಲ್ ಸ್ಪಾಟ್ ಎಕ್ಸ್‌ಛೇಂಜ್ ಲಿಮಿಟೆಡ್‌ನಲ್ಲಿ ವ್ಯವಹಾರಕ್ಕಾಗಿ ಹಲವು ಸಹಸ್ರ ಕೋಟಿ ರುಪಾಯಿಗಳ ಬಂಡವಾಳವನ್ನು ಹೂಡಿದ್ದ ಹದಿಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ದಲ್ಲಾಳಿಗಳು, ವ್ಯವಹಾರಸ್ಥರು ತಮ್ಮ ಹಣದ ಭದ್ರತೆ ಕುರಿತು ಆತಂಕಕ್ಕೆ ಈಡಾಗಿದ್ದಾರೆ. ಸುಮಾರು 13000 ಹೂಡಿಕೆದಾರರಿಗೆ ಇನ್ನು ಎಂಟು ತಿಂಗಳಲ್ಲಿ 5574 ಕೋಟಿ ರುಪಾಯಿಗಳನ್ನು ವಾರದ ಕಂತುಗಳ ಮೂಲಕ ಹಿಂತಿರುಗಿಸುವ ಭರವಸೆ ಬಂದಿದೆ. ಅದರಲ್ಲಿ ಅದರಲ್ಲಿ ಗ್ರಾಹಕರಿಗೆ ನಂಬಿಕೆ ಮೂಡಿಲ್ಲ.
- ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

