ಸಾಲದ ಸಮಯ

ತೀರಾ ಇತ್ತೀಚಿನ ವರೆಗೆ ಬ್ಯಾಂಕ್ಗಳಲ್ಲಿ ಏರುತ್ತಿರುವ ಸುಸ್ತಿ (ಅನುತ್ಪಾದಕ ಆಸ್ತಿ) ಬಗ್ಗೆ ಯಾರೂ ತಲೆಕೆಡಿಸಿಕೊಂಡಂತಿರಲಿಲ್ಲ. ಆದರೆ ಇದೀಗ ಬ್ಯಾಂಕಿಂಗ್ ಕ್ಷೇತ್ರದ ವರಿಷ್ಠರ ಮಾತುಗಳು ಬದಲಾಗಿವೆ. ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ವಿಚಾರ ಬಂದಾಗ ಸುಸ್ತಿ ಸಾಲದ ಬಗ್ಗೆ ಆರ್ಬಿಐ ಏರುಧ್ವನಿಯಿಂದ ಮಾತನಾಡುತ್ತಿದೆ.
ಶೇ.7ರಷ್ಟು ಏರಿಕೆ
ಬ್ಯಾಂಕ್ಗಳಲ್ಲಿ ಸುಸ್ತಿ ಸಾಲದ ಪ್ರಮಾಣದ ಒಟ್ಟು ಸಾಲದ ಶೇ.4-5ರಷ್ಟು ಇರುತ್ತಿತ್ತು. ಈಗ ಒಂದು ವರ್ಷದಲ್ಲಿ ಶೇ.7ರಷ್ಟು ಏರಿಕೆಯಾಗಿದೆ. 2014ರ ಮಾರ್ಚ್ ವೇಳೆಗೆ ಅದರ ಪ್ರಮಾಣವನ್ನು ಶೇ.1ಕ್ಕೆ ಇಳಿಸಬೇಕೆಂದು ಹಣಕಾಸು ಸಚಿವರು ಕಟ್ಟಪ್ಪಣೆ ವಿಧಿಸಿದ್ದಾರೆ. ನಿರ್ದೇಶಕರ ಮಂಡಳಿಯಲ್ಲಿ ಸುಸ್ತಿ ಸಾಲದ ನಿರ್ವಹಣೆ ಬಗ್ಗೆ ಪ್ರತ್ಯೇಕ ಸಮಿತಿ ಇರಬೇಕೆಂದು ಸೂಚಿಸಿದ್ದಾರೆ.
ಸಾಲ ಮನ್ನಾ
ಉಸಿರು ಬಿಗಿಹಿಡಿದುಕೊಳ್ಳುವ ವಿಚಾರವೆಂದರೆ, ಈ ವರೆಗೆ ದೇಶದಲ್ಲಿ 75,000 ಕೋಟಿ ಸಾಲ ಮನ್ನಾ ಮಾಡಲಾಗಿದೆ. 2012ರ ಡಿಸೆಂಬರ್ನಲ್ಲಿ ಬ್ಯಾಂಕ್ಗಳಲ್ಲಿ ಸುಸ್ತಿ ಆಸ್ತಿಯ ಮೌಲ್ಯ 15, 500 ಕೋಟಿ ಇತ್ತು. 2013ರ ಮಾರ್ಚ್ನಲ್ಲಿ ಅದರ ಮೌಲ್ಯ ರು. 17, 500 ಕೋಟಿಗೆ ಏರಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದೇಶದಲ್ಲಿ ಸಾಲಗಳ ಮರುಪಾವತಿಗೆ ಮಳೆ ಮತ್ತು ಸಮರ್ಪಕ ವಿದ್ಯುತ್ ಪೂರೈಕೆ ಅಗತ್ಯ. ಹೀಗಿದ್ದಾಗ ರೈತರು ಫಸಲನ್ನು ಮಾರಿದ ದುಡ್ಡಿನಲ್ಲಿ ಸಾಲವನ್ನು ಮರು ಪಾವತಿಸುತ್ತಾರೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅದು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಗುಜರಾತ್ ಹೊರತುಪಡಿಸಿ ಬೇರೆಲ್ಲ ರಾಜ್ಯದಲ್ಲೂ ವಿದ್ಯುತ್ತಿನ ಕೊರತೆ ಇದೆ.
ವಸೂಲಿಗೆ ಮಾರ್ಗ
ಸಾಲ ವಸೂಲಿಗೆ ಬ್ಯಾಂಕ್ಗಳು ಹಲವು ಮಾರ್ಗಗಳನ್ನು ಅನುಸರಿಸುತ್ತವೆ. ಆದರೆ ಅವು ಎಷ್ಟು ಪರಿಣಾಮಕಾರಿ ಎಂದು ಯೋಚಿಸಬೇಕಾಗುತ್ತದೆ.
ಪಡೆದುಕೊಂಡ ಸಾಲವನ್ನು ಸೂಕ್ತ ಸಮಯದಲ್ಲಿ ಹಿಂದಿರುಗಿಸುವುದು ನಮ್ಮ ಧರ್ಮ. ಕಷ್ಟಕಾಲದಲ್ಲಿ ನೆರವಾದವರನ್ನು ಕೈಬಿಡಬಾರದು ಎಂಬುದನ್ನು ಮರೆಯಬಾರದು. ಬ್ಯಾಂಕಿನೊಡನೆ ಮಧುರ ಬಾಂಧವ್ಯ ಮುಂದುವರಿಸಿಕೊಂಡು, ತಾವೂ ಅಭಿವೃದ್ಧಿ ಸಾಧಿಸಬೇಕು. ಇಂಥ ಒಂದು ಮನೋಭಾವನೆಯನ್ನು ಸಾಲ ಪಡೆದವರೂ ಅನುಸರಿಸಿಕೊಂಡು ಬರುತ್ತಿದ್ದರು. ಆದರೆ ಈಗ ಇಂಥ ಮನೋಭಾವನೆ ಕಡಿಮೆಯಾಗಿದೆ. ಈಗಿನ ಮನೋಭಾವವೇ ಬೇರೆಯಾಗಿದೆ. ಸಾಲ ಮರುಪಾವತಿಯಾಗದಿದ್ದರೆ ಏನೂ ಆಗುವುದಿಲ್ಲ ಎಂಬ ಧೋರಣೆ ಈಗಿನವರು ಹೊಂದಿರುವಂತಿದೆ.
ನ್ಯಾಯದ ಬಾಗಿಲು
ಹತ್ತು ಲಕ್ಷ ರು.ಗಳ ವರೆಗಿನ ಸಾಲ ವಸೂಲಾತಿ ಪ್ರಕರಣಗಳು ನ್ಯಾಯಾಲಯಕ್ಕೆ ಹೋಗುತ್ತಿವೆ. ಆದರೆ ಅಲ್ಲಿ ಪ್ರಕರಣಗಳ ನಿರ್ಣಯಕ್ಕೆ ತೆಗೆದುಕೊಳ್ಳುವ ಸಮಯದ ಬಗ್ಗೆ ಯಾರೂ ನಿರ್ಧರಿಸುವಂತಿಲ್ಲ. ಸಾಲ ವಸೂಲಾತಿ ನ್ಯಾಯಾಲಯಗಳಲ್ಲಿ ಆರು ತಿಂಗಳಲ್ಲಿ ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕೆಂದಿದ್ದರೂ ಹಲವು ಕಾನೂನು ಪ್ರಕ್ರಿಯೆಗಳಿಂದ ಅವುಗಳು ಇತ್ಯರ್ಥವಾಗದೆ ಮುಂದುವರಿದಿವೆ.
ನ್ಯೂನತೆಗಳು
ಕಾನೂನಿನಲ್ಲಿರುವ ನ್ಯೂನತೆಗಳಿಂದಾಗಿ ಸಾಲ ವಸೂಲಾತಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಮೇಲ್ಮನವಿ ಸಲ್ಲಿಸುವ ಮುನ್ನ ಸಾಲದ ಶೇ.57ರಷ್ಟು ಮೊತ್ತವನ್ನು ಡಿಪಾಸಿಟ್ ಇರಿಸುವ ಕಟ್ಟಳೆ ಮಾಡಬೇಕು. ಜತೆಗೆ ಸಾಲ ವಸೂಲಾತಿ ಕೋರ್ಟ್ಗೆ ಸೂಕ್ತ ಸಿಬ್ಬಂದಿ ನೇಮಿಸಬೇಕು. ಜತೆಗೆ ಪ್ರತಿ ಪ್ರಕರಣದ ವಿಲೇವಾರಿಗೆ ಸಮಯ ನಿಗದಿಗೊಳಿಸಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಸಾಲಮನ್ನಾ ಸೇರಿದಂತೆ ರಾಜಕೀಯ ಪ್ರೇರಿತ ಕ್ರಮಗಳಿಗೆ ಕೊನೆ ಹಾಡಬೇಕು.
- ರಮಾನಂದ ಶರ್ಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


