ಎಲ್ಲೈಸಿ ಈಗ ಇನ್ನಷ್ಟು ಹತ್ತಿರ

'ಯೋಗಕ್ಷೇವುಂ ವಹಾಮ್ಯಹಂ...' ಎಂಬ ಗೀತೆಯ ಸಾಲನ್ನೇ ತನ್ನ ಧ್ಯೇಯವಾಕ್ಯವಾಗಿರಿಸಿಕೊಂಡಿರುವ ಭಾರತೀಯ ಜೀವ ವಿಮಾನಿಗಮ (ಎಲ್ಐಸಿ) ಕೇವಲ ಮರಣದ ಅಪಾಯಕ್ಕಷ್ಟೇ ವಿಮಾರಕ್ಷಣೆಯಾಗಿ ಉಳಿದಿಲ್ಲ. ಭಾರತೀಯರ ಆಪತ್ಬಾಂಧವ ಎಂಬ ಹೆಗ್ಗಳಿಕೆಯೂ ಇದು ಪಡೆದುಕೊಂಡಿದೆ. ದೇಶದೊಳಗಡೆಯಿಂದ ಖಾಸಗಿ ಇನ್ಸೂರೆನ್ಸ್ ಕಂಪನಿ, ಜೊತೆಯಲ್ಲಿ ವಿದೇಶಿ ಕಂಪನಿಗಳಿಗೆ ಸರ್ಕಾರ ರತ್ನಗಂಬಳಿ ಹಾಸಿ ಸ್ವಾಗತಿಸಿದ ಬಳಿಕ ದೇಶೀಯ ದಿಗ್ಗಜ ಎಲ್ಐಸಿ ಇನ್ನಷ್ಟು ಚುರುಕಾಗಬೇಕಿದೆ.
ಆದರೂ, ಒಂದು ಮಟ್ಟದಲ್ಲಿ ಚುರುಕಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಜೂನ್ ಅಂತ್ಯದಲ್ಲಿ ದೇಶದ ವಿವಿಧೆಡೆ ಏಕಕಾಲದಲ್ಲಿ 300 ಮಿನಿ ಕಚೇರಿಗಳನ್ನು ತೆರೆದಿದೆ. ವಿತ್ತ ಸಚಿವ ಪಿ. ಚಿದಂಬರಂ ಇವುಗಳನ್ನು ಉದ್ಘಾಟಿಸಿದರು. ಇವಿಷ್ಟಲ್ಲದೇ ಇನ್ನೂ ಹೆಚ್ಚಿನ ಕಚೇರಿಗಳನ್ನು ತೆರೆದು ಗ್ರಾಹಕರನ್ನು ಸೆಳೆಯಲು ನಿಗಮ ಮುಂದಾಗಿದೆ. ಹಾಗಾಗಿ ಈಗ ಎಲ್ಐಸಿ ನಿಮಗೆ ಇನ್ನಷ್ಟು ಹತ್ತಿರ...
ಮಿನಿ ಕಚೇರಿಯಲ್ಲಿ ಏನಿರುತ್ತೆ?
ಮಿನಿ ಕಚೇರಿಯಲ್ಲಿ ನಿಗಮದಿಂದ ನಿಯೋಜಿತಗೊಂಡ ಒಬ್ಬ ಅಧಿಕಾರಿ ಮತ್ತು ಏಜೆಂಟರ್ಗಳು ಕಾರ್ಯನಿರ್ವಹಿಸುತ್ತಾರೆ. ಇಲ್ಲಿ ಗ್ರಾಹಕರಿಂದ ವಿಮಾ ಕಂತುಗಳನ್ನು ಸ್ವೀಕರಿಸಲಾಗುತ್ತದೆ. ನಿಗಮದ ಹೊಸ ಸ್ಕೀಮ್ಗಳ ಬಗ್ಗೆ ಮಾಹಿತಿ ಹಾಗೂ ಹೊಸ ಪಾಲಿಸಿ ಆರಂಭಿಸಲು ಬೇಕಾದ ಮಾಹಿತಿಗಳನ್ನು ಇಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ವಿಮಾ ವಲಯದಲ್ಲಿ ವಿದೇಶಿ ಕಂಪನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿದೆ. ಈ ವಲಯದಲ್ಲಿ ಈಗ ಇದ್ದ ಶೇ.26ರ ವಿದೇಶಿ ನೇರ ಬಂಡವಾಳವನ್ನು ಶೇ.49ಕ್ಕೆ ಹೆಚ್ಚಿಸಲು ಕೇಂದ್ರ ನಿರ್ಧರಿಸಿದ್ದರಿಂದ ಎಲ್ಐಸಿ ಪ್ರಬಲ ಪೈಪೋಟಿ ಎದುರಿಸಬೇಕಾಗಿ ಬಂದಿದೆ.
57 ವರ್ಷಗಳ ಹಿರಿಮೆ
ಎಲ್ಐಸಿ ಕೇವಲ ತೆರಿಗೆ ತಪ್ಪಿಸುವ ಸಲುವಾಗಿ ಉಳಿತಾಯ ಮಾಡುವ ಸಂಸ್ಥೆಯಲ್ಲ. ಸಂಪೂರ್ಣ ಸರ್ಕಾರಿ ಸ್ವಾಮ್ಯದ 57 ವರ್ಷಗಳಷ್ಟು ಹಿರಿತನ ಹೊಂದಿದೆ. ಪ್ರಸ್ತುತ ದೇಶದಾದ್ಯಂತ 2067 ಶಾಖೆಗಳನ್ನು, 1500 ಸ್ಯಾಟಲೈಟ್ ಶಾಖೆಗಳನ್ನು, 13 ಲಕ್ಷಕ್ಕೂ ಅಧಿಕ ಏಜೆಂಟರನ್ನು ಹೊಂದಿದೆ. 300 ಮಿನಿ ಕಚೇರಿ ಉದ್ಘಾಟನೆಯಾಗಿದೆ, ಡಿಸೆಂಬರ್ ಒಳಗೆ ಮತ್ತೆ 1700 ಕಚೇರಿಗಳನ್ನು ತೆರೆಯುವ ಉದ್ದೇಶವನ್ನು ನಿಗಮ ಹೊಂದಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕವನ್ನೊಳಗೊಂಡ ದಕ್ಷಿಣ ಮಧ್ಯ ವಲಯದಲ್ಲಿ 52 ಮಿನಿ ಕಚೇರಿ ತೆರೆಯಲಾಗಿದೆ. ಉಡುಪಿ ವಿಭಾಗದಲ್ಲಿ ಬೀರೂರು ಮತ್ತು ಬಂಟ್ವಾಳದ ಫರಂಗೀಪೇಟೆಯಲ್ಲಿ ಈಗಾಗಲೇ ಮಿನಿ ಕಚೇರಿ ತೆರೆಯಲಾಗಿದೆ. ಮುಂದಿನ ಹಂತದಲ್ಲಿ ಪ್ರತಿ 10,000 ಜನಸಂಖ್ಯೆಗೆ ಒಂದು ಮಿನಿ ಕಚೇರಿಯನ್ನು ತೆರೆಯುವ ಉದ್ದೇಶ ಹೊಂದಲಾಗಿದೆ.
ಪ್ರಸಕ್ತ ವರ್ಷದ ಬಜೆಟ್ನಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಅವರೂ ದೇಶದ ಎಲ್ಲ ಭಾಗಗಳಲ್ಲಿ ಎಲ್ಐಸಿ ಕಚೇರಿ ತೆರೆಯಲು ಯೋಜಿಸಿದ್ದಾರೆ. ಆರ್ಬಿಐ ನಿರ್ದೇಶನದ ಬಳಿಕ ಹೇಗೆ ಬ್ಯಾಂಕ್ಗಳು ವಿತ್ತೀಯ ಸೇರ್ಪಡೆ ಮೂಲಕ ಗ್ರಾಮಾಂತರ ಗ್ರಾಹಕರನ್ನು ತಲುಪುತ್ತಿದೆಯೋ ಹಾಗೇ ಎಲ್ಐಸಿಯೂ ಹೆಜ್ಜೆಯಿಡುತ್ತಿರುವುದು ಸಂತಸದ ವಿಚಾರವೇ. ಇದರಿಂದಾಗಿ ನಿಗಮ ತಳಮಟ್ಟದಲ್ಲಿರುವ ಜನರನ್ನೂ ಬಲುಬೇಗ ತಲುಪುವುದು ಸಾಧ್ಯವಾಗಲಿದೆ.
- ರಾಘವೇಂದ್ರ ಅಗ್ನಿಹೋತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


