ಪೆನ್ಷನ್ ಟೆನ್ಷನ್
ಉತ್ತಮ ಜೀವನ ನಿರ್ವಹಣೆ, ಕುಟುಂಬದವರ ಅಗತ್ಯಗಳ ಈಡೇರಿಕೆ, ಗುಣಮಟ್ಟದ ಜೀವನ ಶೈಲಿಗಾಗಿ ಇಂದು ಅನಿವಾರ್ಯವಾಗಿ...

ಉತ್ತಮ ಜೀವನ ನಿರ್ವಹಣೆ, ಕುಟುಂಬದವರ ಅಗತ್ಯಗಳ ಈಡೇರಿಕೆ, ಗುಣಮಟ್ಟದ ಜೀವನ ಶೈಲಿಗಾಗಿ ಇಂದು ಹಗಲೂರಾತ್ರಿ ಕಷ್ಟಪಡಲೇಬೇಕಿದೆ. ಇದು ಅನಿವಾರ್ಯ ಕೂಡ. ಒಂದು ವೇಳೆ ನೀವೂ ಈಗ ಕೈತುಂಬ ಸಂಪಾದಿಸುತ್ತಿದ್ದರೆ ನಿಮ್ಮ ನಿವೃತ್ತಿ ಜೀವನದ ಬಗ್ಗೆ ಯೋಚಿಸಿದ್ದೀರಾ? ನಿವೃತ್ತಿ ಬಳಿಕ ನಿಮ್ಮ ಜೀವನ ಹೇಗಿರಬೇಕೆಂದು ಚಿಂತಿಸಿದ್ದೀರಾ? ವೃತ್ತಿ ಜೀವನದ ಬಳಿಕವೂ ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಣ ಹೊಂದಿರಲು ಈಗಾಗಲೇ ಯೋಜನೆ ರೂಪಿಸಿದ್ದೀರಾ?
ಹಲವು ಕಾರಣಗಳಿಂದಾಗಿ ನಿವೃತ್ತಿ ಯೋಜನೆ ಹೊಂದುವುದು ಅತ್ಯಂತ ಮಹತ್ವದ ಪಡೆದಿದೆ.
- ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಅವರಿಗೆ ಸರ್ಕಾರದಿಂದ ನಿವೃತ್ತಿಗೆ ಸಂಬಂಧಿಸಿದ ಯಾವುದೇ ಯೋಜನೆಯ ಲಾಭ ಸಿಗುವುದಿಲ್ಲ. ಸ್ವ ಉದ್ಯೋಗಿಗಳು, ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಕೆಲ ಸಂಸ್ಥೆಗಳ ನೌಕರರಿಗೂ ನಿವೃತ್ತಿ ಯೋಜನೆಯ ಲಾಭ ಸಿಗುವುದಿಲ್ಲ. ಇಂಥ ನೌಕರರು ಅಥವಾ ಕಾರ್ಮಿಕರು ತಾವೇ ನಿವೃತ್ತಿ ಯೋಜನೆ ರೂಪಿಸಿಕೊಳ್ಳಬೇಕಾಗುತ್ತದೆ.
- ಜೀವನ ನಿರ್ವಹಣೆ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ ನಿಮ್ಮ ನಿವೃತ್ತಿ ಜೀವನ ಸುಗಮವಾಗಿರಲು, ಹಣಕಾಸಿನ ಕೊರತೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈಗಲೇ ಸರಿಯಾದ ರೂಪುರೇಷೆ ಹಾಕಿಕೊಳ್ಳುವುದು ಸೂಕ್ತ.
- 2011ರಲ್ಲಿ ಎಚ್‌ಎಸ್‌ಬಿಸಿ ನಡೆಸಿದ ಸಮೀಕ್ಷೆ ಪ್ರಕಾರ, ದೇಶದಲ್ಲಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ. ಶೇ.32 ಭಾರತೀಯರು ತಮ್ಮ ನಿವೃತ್ತಿ ಬಳಿಕ ಮಕ್ಕಳ ಜತೆ ವಾಸವಾಗಿರಲು ಇಚ್ಚಿಸುತ್ತಾರೆ. ಇನ್ನುಳಿದವರು ಸ್ವತಂತ್ರವಾಗಿಯೇ ನಿವೃತ್ತಿ ಜೀವನ ನಡೆಸಲು ಇಷ್ಟಪಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ವಿಭಕ್ತ ಕುಟುಂಬಗಳು ಅವಿಭಕ್ತ ಕುಟುಂಬಗಳಾಗಿ ವಿಭಜನೆಯಾಗಿ, ಪ್ರತ್ಯೇಕವಾಗಿಯೇ ವಾಸವಾಗಿರುವ ಕಾರಣ ಇವರಿಗೆ ನಿವೃತ್ತಿ ಯೋಜನೆಯ ಅವಶ್ಯಕತೆ ಹೆಚ್ಚಾಗಿದೆ.
ಯಾವಾಗ ಯೋಜನೆ ಸೂಕ್ತ?
ಉತ್ತಮ ಜೀವನ ನಡೆಸಲು ಹಾಗೂ ನಿವೃತ್ತಿ ಜೀವನದಲ್ಲಿ ಹಣಕಾಸಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಬೇಕಾದರೆ, ಕೆಲಸಕ್ಕೆ ಸೇರಿದ ಆರಂಭದಲ್ಲೇ ನಿವೃತ್ತಿ ಯೋಜನೆ ರೂಪಿಸುವುದು ಅತ್ಯುತ್ತಮ. ಉದಾ: ಒಬ್ಬ ವ್ಯಕ್ತಿ ತಮ್ಮ 35ನೇ ವಯಸ್ಸಿನಿಂದ ನಿವೃತ್ತಿ ಯೋಜನೆಗಾಗಿ ವರ್ಷಕ್ಕೆ ರು. 1 ಲಕ್ಷ ವಿನಿಯೋಗಿಸಿದರೆ ಆತ 60ನೇ ವರ್ಷದಲ್ಲಿ ರು. 1 ಕೋಟಿ ಪಡೆಯುತ್ತಾನೆ. 50ನೇ ವರ್ಷದಲ್ಲಿ ಯೋಜನೆ ಆರಂಭಿಸಿದರೆ ರು. 1 ಕೋಟಿ ಪಡೆಯಲು ರು. 5 ಲಕ್ಷಕ್ಕಿಂತ ಹೆಚ್ಚಿನ ಹಣ ಹೂಡಿಕೆ ಮಾಡಬೇಕಾಗುತ್ತದೆ. ಹೀಗಾಗಿ ಎಷ್ಟು ಮೊದಲು ನಿವೃತ್ತಿ ಯೋಜನೆ ಆರಂಭಿಸುತ್ತೀರೋ ಅಷ್ಟು ಉತ್ತಮ.
ಯೋಜನೆ ಹೇಗೆ ರೂಪಿಸಬಹುದು?
5 ಸುಲಭ ಹಂತಗಳಲ್ಲಿ ನಿವೃತ್ತಿ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
- ನಿವೃತ್ತಿ ನಂತರ ನಿಮಗೆ ಎಷ್ಟು ಹಣದ ಅವಶ್ಯಕತೆ ಇರುತ್ತದೆ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ. ಹಣದುಬ್ಬರ, ವೈದ್ಯಕೀಯ ವೆಚ್ಚದಲ್ಲಿ ಆಗುತ್ತಿರುವ ಹೆಚ್ಚಳ, ಮತ್ತಿತರ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ. ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಮತ್ತಿತರ ಖರ್ಚುಗಳನ್ನೂ ಸೇರಿಸಿ ನಿಮಗೆ ಎಷ್ಟು ಮೊತ್ತದ ಅಗತ್ಯವಿದೆ ಎಂಬುದನ್ನು ಲೆಕ್ಕಹಾಕಿ.
- ನಿವೃತ್ತಿಯ ಬಳಿಕ ಪ್ರತಿ ತಿಂಗಳು ಎಷ್ಟು ಹಣದ ಅಗತ್ಯವಿದೆ ಎಂದು ಅಂದಾಜು ಸಿದ್ಧಗೊಳಿಸಿ.
- ನಿಮ್ಮ ಆದಾಯ ಹಾಗೂ ನಿವೃತ್ತಿ ಜೀವನಕ್ಕೆ ಅಗತ್ಯವಿರುವ ಮೊತ್ತಕ್ಕೆ ಅನುಗುಣವಾಗಿ ಉಳಿತಾಯ ಆರಂಭಿಸಿ. ಎಷ್ಟು ಬೇಗ ಉಳಿತಾಯ ಆರಂಭಿಸುತ್ತೀರೋ ಅಷ್ಟು ಲಾಭ ನಿಮಗೇ ಸಿಗಲಿದೆ.
- ನಿಮ್ಮ ನಿವೃತ್ತಿ ಜೀವನದ ಅಗತ್ಯಗಳನ್ನು ಪೂರೈಸುವ ಪಾಲಿಸಿಯೊಂದನ್ನು ಆಯ್ಕೆಮಾಡಿಕೊಳ್ಳಿ.
- ನಿರಂತರವಾಗಿ ನಿಗದಿತ ಮೊತ್ತದ ಪ್ರೀಮಿಯಂ ಭರಿಸಿ.
ಯೋಜನೆಯ ಆಯ್ಕೆ ಹೇಗೆ?
ನೂರಾರು ಕಂಪನಿಗಳು ನಿವೃತ್ತಿ ಯೋಜನೆಗಳನ್ನು ಜಾರಿಗೆ ತಂದಿವೆ. ವಿಮಾ ಕಂಪನಿಗಳು ಉತ್ತಮ ಯೋಜನೆಗಳನ್ನು ಜಾರಿಗೆ ತಂದಿವೆ. ಉತ್ತಮ ನಿವೃತ್ತಿ ಯೋಜನೆ ಒಳ್ಳೆಯ ಲಾಭದ ಜತೆಗೆ ಸುರಕ್ಷತೆ ಹಾಗೂ ಹಣದುಬ್ಬರ ಮತ್ತಿತರ ಆರ್ಥಿಕ ಅನಾನುಕೂಲಗಳಿಂದ ರಕ್ಷಣೆ ಒದಗಿಸಬೇಕು. ನಿವೃತ್ತಿ ನಂತರವಷ್ಟೇ ಈ ಮೊತ್ತ ಬಳಕೆಯಾಗುವಂತಿರಬೇಕು. ಎಲ್‌ಐಸಿ ಸೇರಿದಂತೆ ಹಲವು ವಿಮಾ ಕಂಪನಿಗಳು ಪೆನ್ಷನ್ ಯೋಜನೆಗಳನ್ನು ಜಾರಿಗೆ ತಂದಿವೆ. ಇವುಗಳು ಕಡಿಮೆ ವೆಚ್ಚದ ಯೋಜನೆಗಳಾಗಿವೆ. ಒಳ್ಳೆಯ ಪೆನ್ಷನ್ ಯೋಜನೆಗಳನ್ನು ಹೊಂದಿದಲ್ಲಿ ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
(ಲೇಖಕರು ಐಸಿಐಸಿಐ ಪ್ರುಡೆನ್ಷಿಯಲ್‌ನ ಎಕ್ಸಿಕ್ಯೂಟಿವ್ ವೈಸ್‌ಪ್ರಸಿಡೆಂಟ್ ಕಾರ್ಪೊರೇಟ್ ವ್ಯೂಹರಚನೆ ಮತ್ತು ಉತ್ಪನ್ನ ವಿಭಾಗಗಳ ಮುಖ್ಯಸ್ಥ)
- ವಿನಯ್ ಅಗರ್ವಾಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


