SHE ಬ್ಯಾಂಕ್
2013-14ನೇ ಸಾಲಿನ ಮುಂಗಡ ಪತ್ರದಲ್ಲಿ ಹಣಕಾಸು ಸಚಿವ ಪಿ.ಚಿದಂಬರಂ ದೇಶದ ಮಹಿಳೆಯರಿಗೆ...

2013-14ನೇ ಸಾಲಿನ ಮುಂಗಡ ಪತ್ರದಲ್ಲಿ ಹಣಕಾಸು ಸಚಿವ ಪಿ.ಚಿದಂಬರಂ ದೇಶದ ಮಹಿಳೆಯರಿಗೆ ಸಂತೋಷವಾಗುವಂಥ ಸುದ್ದಿ ಪ್ರಕಟಿಸಿದರು. ಬರೋಬ್ಬರಿ 1 ಸಾವಿರ ಕೋಟಿ ಬಂಡವಾಳ ಇರುವ ಹಾಗೂ ಸಂಪೂರ್ಣ ಮಹಿಳೆಯರೇ ಇರುವ ಬ್ಯಾಂಕ್ ಒಂದನ್ನು ಆರಂಭಿಸುವುದು ಆ ಘೋಷಣೆ.
ಮಹಿಳಾ ಬ್ಯಾಂಕ್ ಎಂದು ಒತ್ತು ಕೊಟ್ಟು ಹೇಳುವಾಗ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವುದು ಹೇಗೆಂದರೆ ಈವರೆಗೆ ಬ್ಯಾಂಕ್‌ಗಳಲ್ಲಿ ಮಹಿಳೆಯರನ್ನು ನಿರ್ಲಕ್ಷಿಸಲಾಗಿತ್ತು. ಹೀಗಾಗಿ, ಕೇಂದ್ರ ಸರ್ಕಾರ ಮಹಿಳೆಯರನ್ನು ಆರ್ಥಿಕವಾಗಿ ಹೆಚ್ಚು ಬಲಪಡಿಸಲು ಈ ಬ್ಯಾಂಕಿನ ಸ್ಥಾಪನೆ ಮಾಡಿದೆ ಎಂದು ತಿಳಿದುಕೊಳ್ಳುವವರೇ ಹೆಚ್ಚು.
ಈಗ ಸ್ಪರ್ಧೆ ಹೆಚ್ಚಿದೆ
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಜತೆಗೆ ಖಾಸಗಿ ಕ್ಷೇತ್ರದಲ್ಲೂ ಬ್ಯಾಂಕ್‌ಗಳು ವ್ಯವಹಾರ ನಡೆಸುತ್ತಿವೆ. ಜತೆಗೆ ವಿದೇಶಗಳ ಖಾಸಗಿ ಬ್ಯಾಂಕ್‌ಗಳೂ ನಮ್ಮ ದೇಶದಲ್ಲಿ 15 ವರ್ಷಗಳಿಂದ ಕಾರ್ಯವೆಸಗುತ್ತಿವೆ. ಜಾತಿ ಮತ್ತು ಲಿಂಗ ಬೇಧವಿಲ್ಲದೆ ಹೊಸ ಪೀಳಿಗೆಯ ಬ್ಯಾಂಕ್‌ಗಳಲ್ಲಿ ಅರ್ಹತೆ ಮತ್ತು ಅಗತ್ಯತೆಯ ಮೇಲೆ ಬ್ಯಾಂಕಿಂಗ್ ಸೇವೆಯನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಸಿಗುತ್ತದೆ.
ಮಹಿಳೆಯರೇ ಮುಂದು
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹಿಳೆಯರನ್ನು ನಿರ್ಲಕ್ಷ್ಯಿಸಿದ, ಪಕ್ಷಪಾತ ಧೋರಣೆ ವ್ಯಕ್ತಪಡಿಸಿದ ಉದಾಹರಣೆ ಇಲ್ಲ. ವಾಸ್ತವವಾಗಿ ಮಹಿಳಾ ಗ್ರಾಹಕರ ಬಗ್ಗೆ ಬ್ಯಾಂಕ್‌ಗಳಲ್ಲಿ ಬಹಳ ಗೌರವ ಮತ್ತು ಮುತುವರ್ಜಿ ತೋರಿಸಲಾಗುತ್ತಿದೆ.
ಬ್ಯಾಂಕ್‌ಗಳಿಂದ ತೆಗೆದುಕೊಂಡ ಸಾಲವನ್ನು ಕ್ಲುಪ್ತ ಸಮಯದಲ್ಲಿ ಮರು ಪಾವತಿ ಮಾಡುವುದರಲ್ಲಿ ಮಹಿಳೆಯರೇ ಮುಂದು. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವರ ಬದ್ಧತೆ ಬಗ್ಗೆ ಗೌರವವಿದೆ. ಮಹಿಳೆಯರೇ ಮುಖ್ಯವಾಗಿರುವ ಸ್ವ-ಸಹಾಯ ಸಂಘಗಳನ್ನು ಪ್ರೋತ್ಸಾಹಿಸಬೇಕೆಂದು ಇರಾದೆ ಭಾರತೀಯ ಬ್ಯಾಂಕಿಂಗ್ ವಲಯಕ್ಕೆ ಇದೆ. ಜತೆಗೆ ಬ್ಯಾಂಕ್‌ಗಳಲ್ಲಿ ಮಹಿಳಾ ಸಿಬ್ಬಂದಿ ಸಂಖ್ಯೆ ಕೂಡ ಗಮನಾರ್ಹವಾಗಿಯೂ ಇದೆ. ಮಹಿಳಾ ಗ್ರಾಹಕರ ಸಂಖ್ಯೆ ಶೇ.30ರಷ್ಟಿದೆ.
ಹಾಗಿದ್ದರೆ ಬ್ಯಾಂಕ್ ಯಾಕೆ?
ರಾಜಕೀಯವಾಗಿ ಮಹಿಳೆಯರಿಗೆ ಮೀಸಲು ಕೊಡಬೇಕೆಂದು ಹಲವು ದಶಕಗಳಿಂದ ಬೇಡಿಕೆ ಇದೆ. ಅದನ್ನು ಈಡೇರಿಸಲು ಹಲವು ಸರ್ಕಾರಗಳಿಂದ ಸಾಧ್ಯವಾಗಿಲ್ಲ. ಜತೆಗೆ ದೆಹಲಿ ಅತ್ಯಚಾರ ಪ್ರಕರಣದಲ್ಲಿ ಯುಪಿಎ ಸರ್ಕಾರ ತೀವ್ರ ಮುಜುಗರ ಎದುರಿಸಿದೆ. ಹೀಗಾಗಿ ಮುಜುಗರ ತಪ್ಪಿಸಲು ಸಂಪೂರ್ಣ ಮಹಿಳೆಯರೇ ಉದ್ಯೋಗಸ್ಥರಾಗಿರುವ ಬ್ಯಾಂಕ್ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಯಿತು ಎನ್ನುವುದು ಈಗಿನ ಲೆಕ್ಕಾಚಾರ.
ಸದ್ಯ ಘೋಷಣೆಯಾಗಿರುವ ಪ್ರಕಾರ ಈ ವರ್ಷದ ನವೆಂಬರ್‌ನಲ್ಲಿ ಹೊಸ ಬ್ಯಾಂಕ್ ಆರಂಭವಾಗಲಿದೆ.
ಸವಾಲುಗಳೇನು?
ಮಹಿಳಾ ಬ್ಯಾಂಕ್ ಕೇವಲ ಮಹಿಳೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಕೇಂದ್ರೀಕರಿಸಿದರೆ ಅದು ವಾಣಿಜ್ಯಿಕವಾಗಿ ಮುಂದುವರಿಯುವುದು ಕಷ್ಟ ಸಾಧ್ಯ
ಗ್ರಾಮೀಣ ಪ್ರದೇಶಗಳಲ್ಲಿ ಸೀಮಿತವಾಗದೆ ಪಟ್ಟಣ, ನಗರ ಪ್ರದೇಶಗಳಿಗೂ ತನ್ನ ಶಾಖೆಗಳನ್ನು ವಿಸ್ತರಿಸಲೇಬೇಕಾಗುತ್ತದೆ.
ಲಾಭವೇ ಮುಖ್ಯ ಉದ್ದೇಶವಾದರೂ, ಅದನ್ನು ಕಡೆಗಣಿಸಬಾರದು. ಒಂದು ಅಂದಾಜಿನ ಪ್ರಕಾರ ಹೊಸ ಬ್ಯಾಂಕ್ ಗ್ರಾಮೀಣ ಮತ್ತು ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳ ಮಧ್ಯದ ಸ್ಲಾಟ್ ಪಡೆಯಬಹುದು.
ಹೊಸ ಬ್ಯಾಂಕ್ ವಾಣಿಜ್ಯಿಕ ಪ್ರದೇಶಗಳಲ್ಲಿ ವ್ಯಾಪಿಸದೆ ಜನವಸತಿ ಪ್ರದೇಶದಲ್ಲಿ ಹೆಚ್ಚು ಶಾಖೆಗಳನ್ನು ತೆರೆದರೆ ಅದರ ಉದ್ದೇಶ ಸಾರ್ಥಕವಾಗುತ್ತದೆ.
ಕಲ್ಪನೆ ಹೊಸದಲ್ಲ
ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ ಸಂಪೂರ್ಣ ಮಹಿಳಾ ಬ್ಯಾಂಕ್ ಹೊಸ ಕಲ್ಪನೆ ಏನಲ್ಲ. ಐದು ದಶಕಗಳ ಹಿಂದೆ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಅನುಯಾಯಿ ಇಳಾ ಭಟ್ 5 ಸಾವಿರ ಮಹಿಳೆಯರಿಂದ 1 ಲಕ್ಷ ಸಂಗ್ರಹಿಸಿ ಜವಳಿ ಮಿಲ್‌ಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗಾಗಿ ಬ್ಯಾಂಕ್ ಆರಂಭಿಸಿದ್ದರು. ಅದರ 7 ಶಾಖೆಗಳು ಈಗಲೂ ಅಹಮದಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ (1974). ಅವುಗಳು ಸಾಂಪ್ರದಾಯಿಕ ಹಣಕಾಸು ವ್ಯವಹಾರ ಮಾಡದೆ ಗ್ರಾಹಕರಿಗೆ ಹಣಕಾಸು ವ್ಯವಹಾರದ ಬಗ್ಗೆ ವಿಸ್ತೃತ ಮಾಹಿತಿ ಕೊಡುತ್ತವೆ. ಈಗ ಈ ಬ್ಯಾಂಕ್ 40 ಕೋಟಿ ಬಂಡವಾಳ ಮತ್ತು ಮೀಸಲು ನಿಧಿ ಹೊಂದಿವೆ. ಗುಜರಾತ್‌ನ ಹೊರಗೆ ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದು, ಅನುಮತಿಗಾಗಿ ಕಾಯುತ್ತಿದೆ. ಮಣಿಪಾಲದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿಂಡಿಕೇಟ್ ಬ್ಯಾಂಕ್ 1970ರಲ್ಲೇ ನವದೆಹಲಿಯ ಕರೋಲ್‌ಭಾಗ್ ಪ್ರದೇಶದಲ್ಲಿ ಮಹಿಳಾ ಶಾಖೆ ಆರಂಭಿಸಿತ್ತು. ಈಗೀಗ ಎಲ್ಲಾ ಬ್ಯಾಂಕ್‌ಗಳಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಯೋಜನೆಗಳೂ ಜಾರಿಯಲ್ಲಿವೆ.
ಪರಿಣಾಮಏನಾಗಬಹುದು?
ಲಿಂಗ, ಧರ್ಮ, ಜಾತಿ ಆಧಾರಿತ ಬ್ಯಾಂಕ್‌ಗಳು ದೇಶದ ಭಾವೈಕ್ಯದ ದೃಷ್ಟಿಯಲ್ಲಿ ಅಪಾಯಕಾರಿ ಬೆಳವಣಿಗೆ.
ಸದ್ಯ ಧರ್ಮ ಆಧಾರಿತ ಇಸ್ಲಾಮಿಕ್ ಬ್ಯಾಂಕ್ ಸ್ಥಾಪನೆಗೆ ಒತ್ತಡವಿದೆ.
ಪಿಂಚಣಿದಾರರಿಂದ ಬ್ಯಾಂಕಿಗೆ ಕೇವಲ ಕೆಲಸವಿದ್ದು, ಅವರನ್ನು ಎರಡನೇ ದರ್ಜೆ ಗ್ರಾಹಕರಂತೆ ಕಾಣಲಾಗುತ್ತಿದೆ ಎಂಬ ಆರೋಪವಿದೆ. ಹೀಗಾಗಿ ಅವರಿಗೇ ಪ್ರತ್ಯೇಕವಾಗಿ ಬ್ಯಾಂಕ್ ಆರಂಭಿಸಬೇಕು ಎಂಬ ಬೇಡಿಕೆಯಿದೆ.
ಶೈಕ್ಷಣಿಕ ಸಾಲಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ. ಅದಕ್ಕಾಗಿಯೇ ಬೇರೆ ಬ್ಯಾಂಕ್ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಹೆಚ್ಚಬಹುದು.
ಸಮಸ್ಯೆ ಏನು?
ಬ್ಯಾಂಕ್‌ನ ಆರಂಭಕ್ಕೆ ಬಜೆಟ್‌ನಲ್ಲಿ ಘೋಷಣೆ ಮಾತ್ರ ಆದದ್ದು.
ಅದರ ಕಾರ್ಯಕ್ಷೇತ್ರ, ಸಿಬ್ಬಂದಿ ನೇಮಕಕ್ಕೆ ಮಾರ್ಗದರ್ಶಿ ಸೂತ್ರ ಪ್ರಕಟವಾಗಿಲ್ಲ. ಹಣಕಾಸು ಸೇರ್ಪಡೆ, ಆದ್ಯತಾ ಆಧಾರದಲ್ಲಿ ಸಾಲ ವಿತರಣೆ, ಗ್ರಾಮೀಣ ಶಾಖೆಗಳ ನಿರ್ಬಂಧ. ಈ ಬಗ್ಗೆ ನಿಚ್ಚಳ ನಿರ್ಧಾರ ಪ್ರಕಟವಾಗಿಲ್ಲ.
-ರಮಾನಂದ ಶರ್ಮಾ
ramanandsharma28@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


