ವಿದೇಶ

ಭಾರತದ ನಕ್ಷೆಯಲ್ಲಿ ಪಿಒಕೆ: ಅಫ್ಘಾನ್ ಕ್ರಿಕೆಟ್ ವಿಡಿಯೋ ನೋಡಿ ಬೆಚ್ಚಿಬಿದ್ದ ಪಾಕಿಸ್ತಾನ

ಇತ್ತೀಚೆಗೆ ಅಮೆರಿಕ ಕೂಡ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನ ಭಾರತದ ಭಾಗವೆಂದು ಹೇಳಿದಾಗ ಅಪಸ್ವರವೇತ್ತಿತ್ತು. ಈಗ ಅಫ್ಘಾನಿಸ್ತಾನ ಕೂಡ PoK ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತಕ್ಕೆ ಸೇರಿದೆ ಎಂದಿದ್ದು, ಪಾಕಿಸ್ತಾನಕ್ಕೆ ಇದೀಗ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆ ಕುರಿತ ವರದಿ ಇಲ್ಲಿದೆ:

ಭಾರತದ ನಕ್ಷೆಯಲ್ಲಿ ಪಿಒಕೆ: ಅಫ್ಘಾನ್ ಕ್ರಿಕೆಟ್ ವಿಡಿಯೋ ನೋಡಿ ಬೆಚ್ಚಿಬಿದ್ದ ಪಾಕಿಸ್ತಾನ
ಭಾರತದ ನಕ್ಷೆಯಲ್ಲಿ ಪಿಒಕೆ — Online Desk
Published On :

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗ. ಆದರೆ, ಪಾಕಿಸ್ತಾನ ಮಾತ್ರ ಇದರ ಬಗ್ಗೆ ಯಾವಾಗಲೂ ತಕರಾರು ತೆಗೆಯುತ್ತದೆ. ಇತ್ತೀಚೆಗೆ ಅಮೆರಿಕ ಕೂಡ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನ ಭಾರತದ ಭಾಗವೆಂದು ಹೇಳಿದಾಗ ಅಪಸ್ವರವೇತ್ತಿತ್ತು. ಈಗ ಅಫ್ಘಾನಿಸ್ತಾನ ಕೂಡ PoK ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತಕ್ಕೆ ಸೇರಿದೆ ಎಂದಿದ್ದು, ಪಾಕಿಸ್ತಾನಕ್ಕೆ ಇದೀಗ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆ ಕುರಿತ ವರದಿ ಇಲ್ಲಿದೆ:

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮುಂಬರುವ ಟಿ20 ಕ್ರಿಕೆಟ್ ಸರಣಿಯ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿರುವ ವಿಡಿಯೋ ಪ್ರೋಮೋ ಭಾರಿ ರಾಜತಾಂತ್ರಿಕ ಸಂಚಲನ ಮೂಡಿಸಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಗಳನ್ನು ಭಾರತದ ನಕ್ಷೆಯೊಳಗೆ ತೋರಿಸಿರುವುದು ಪಾಕಿಸ್ತಾನವನ್ನು ಕೆರಳಿಸಿದೆ. ಇದನ್ನು ಕಂಡ ತಕ್ಷಣವೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಈ ನಕ್ಷೆಯ ಪ್ರದರ್ಶನದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪಾಕಿಸ್ತಾನದ ವಿದೇಶಾಂಗ ಇಲಾಖೆಗೆ ತುರ್ತು ದೂರು ಕೊಂಡೊಯ್ದಿದೆ. ಜೊತೆಗೆ, ಈ ವಿಷಯವನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತಾಪಿಸಲು ಗಂಭೀರವಾಗಿ ಆಲೋಚಿಸುತ್ತಿದೆ ಎನ್ನಲಾಗಿದೆ. ಇನ್ನು, ಈಗಾಗಲೇ, ರಾಜತಾಂತ್ರಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಈಗಾಗಲೇ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಪಾಕಿಸ್ತಾನದ ಜೊತೆ ಇನ್ನು ಮುಂದೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳನ್ನು ಆಡುವುದಿಲ್ಲ ಎಂದು ಅಧಿಕೃತವಾಗಿ ಪ್ರಕಟಿಸಿದೆ.

ಮತ್ತೊಂದೆಡೆ, ವಿಡಿಯೋ ಆರಂಭದಲ್ಲಿ ಈ ಪ್ರದೇಶಗಳನ್ನು ಭಾರತದ ನಕ್ಷೆಯಲ್ಲಿ ತೋರಿಸಲಾಗಿದ್ದರೂ, ಮುಂದಿನ ಕೆಲವು ಫ್ರೇಮ್‌ಗಳಲ್ಲಿ ಕ್ಯಾಮೆರಾ ಜೂಮ್ ಔಟ್ ಆದಾಗ ಆ ಭಾಗ ಮಸುಕಾಗಿ ಕಾಣುವಂತೆ ಎಡಿಟ್ ಮಾಡಿರುವುದು ಭಾರತೀಯ ಸಾಮಾಜಿಕ ಜಾಲತಾಣಗಳ ಬಳಕೆದಾರರಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.

ಮುಂದುವರೆದು, ತಜ್ಞರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಗಡಿ ಸಂಘರ್ಷ ಹಾಗೂ ರಾಜತಾಂತ್ರಿಕ ಬಿರುಕು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನವು ಪಾಕಿಸ್ತಾನದ ಆಕ್ಷೇಪಣೆಗಳನ್ನು ಲೆಕ್ಕಿಸದೆ ಭಾರತದೊಂದಿಗೆ ತನಗಿರುವ ನಿಕಟ ಸಂಬಂಧವನ್ನು ಜಗತ್ತಿಗೆ ತೋರಿಸಲು ಈ ನಕ್ಷೆಯನ್ನು ಬಳಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏತನ್ಮಧ್ಯೆ, ಈ ಹೈ-ವೋಲ್ಟೇಜ್ ಮೂರು ಪಂದ್ಯಗಳ ಟಿ ಸರಣಿಯು ಸೆಪ್ಟೆಂಬರ್ 13 ರಿಂದ 17 ರವರೆಗೆ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶೇಷವೆಂದರೆ ಈ ಸರಣಿಗೆ ಅಫ್ಘಾನಿಸ್ತಾನವೇ ಆತಿಥೇಯ ದೇಶವಾಗಿದ್ದರೂ, ಪಂದ್ಯಗಳು ಭಾರತದಲ್ಲಿ ನಡೆಯುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.