ವಿದೇಶ

ಚೀನಾ ವಿಚಾರದಲ್ಲಿ ಭಾರತ ಮೊದಲೇ ಎಚ್ಚರಿಸಿತ್ತು: ಮೋದಿ ನೀಡಿದ್ದ ಎಚ್ಚರಿಕೆಯನ್ನು ಕಡೆಗಣಿಸಿ ಯುರೋಪ್ ಪಶ್ಚಾತ್ತಾಪ ಪಡುತ್ತಿದೆ ಎಂದ ಬೆಲ್ಜಿಯಂ ಪ್ರಧಾನಿ

ಭಾರತೀಯ ಉದ್ಯಮ ಒಕ್ಕೂಟದ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್, "ಚೀನಾದ ಮಾರುಕಟ್ಟೆ ತಂತ್ರಗಳು ಮತ್ತು ಆರ್ಥಿಕ ಅವಲಂಬನೆಯ ಅಪಾಯಗಳ ಕುರಿತು ಭಾರತ ನೀಡಿದ್ದ ಎಚ್ಚರಿಕೆಯನ್ನು ಯೂರೋಪ್ ನಿರ್ಲಕ್ಷಿಸಿತ್ತು" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಚೀನಾ ವಿಚಾರದಲ್ಲಿ ಭಾರತ ಮೊದಲೇ ಎಚ್ಚರಿಸಿತ್ತು: ಮೋದಿ ನೀಡಿದ್ದ ಎಚ್ಚರಿಕೆಯನ್ನು ಕಡೆಗಣಿಸಿ ಯುರೋಪ್ ಪಶ್ಚಾತ್ತಾಪ ಪಡುತ್ತಿದೆ ಎಂದ ಬೆಲ್ಜಿಯಂ ಪ್ರಧಾನಿ
ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ — Online Desk
Published On :

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ವಸ್ತುಗಳ ಆಕರ್ಷಣೆಗೆ ಮರುಳಾಗಿ ಒಂದು ದೇಶದ ಮೇಲೆ ಅತಿಯಾಗಿ ಅವಲಂಬಿತವಾದರೆ ಎದುರಾಗುವ ಅಪಾಯವೆಷ್ಟು ಎಂಬುದಕ್ಕೆ ಇಡೀ ಯುರೋಪ್ ಈಗ ಸಾಕ್ಷಿಯಾಗಿದೆ. ಹಲವು ವರ್ಷಗಳ ಹಿಂದೆಯೇ ಭಾರತ ಈ ಸಂಭಾವ್ಯ ಅಪಾಯದ ಬಗ್ಗೆ ಇಡೀ ಜಗತ್ತಿಗೆ ಮುನ್ಸೂಚನೆ ನೀಡಿತ್ತು. ಆದರೆ ಅಂದು ಭಾರತದ ಮಾತನ್ನು ಗಂಭೀರವಾಗಿ ಪರಿಗಣಿಸದ ಈ ರಾಷ್ಟ್ರಗಳು, ಇಂದು ಎದುರಾಗಿರುವ ಬಿಕ್ಕಟ್ಟಿಗೆ ಪಶ್ಚಾತ್ತಾಪ ವ್ಯಕ್ತಪಡಿಸುತ್ತಾ ಭಾರತದ ದೂರದೃಷ್ಟಿಯನ್ನು ಬಹಿರಂಗವಾಗಿಯೇ ಮುಕ್ತಕಂಠದಿಂದ ಶ್ಲಾಘಿಸುತ್ತಿವೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿಯಲ್ಲಿ ನಡೆದ ಭಾರತೀಯ ಉದ್ಯಮ ಒಕ್ಕೂಟದ (CII) ಉದ್ಯಮ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್ ಅವರು, ಚೀನಾದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ನೆರೆಯ ದೇಶ ಎಂದು ಕರೆದ ಅವರು, "ಭಾರತದ ರೆಯ ದೇಶದ ಮಾರುಕಟ್ಟೆ ತಂತ್ರಗಳು ಮತ್ತು ಆರ್ಥಿಕ ಅವಲಂಬನೆಯ ಅಪಾಯಗಳ ಕುರಿತು ಭಾರತ ನೀಡಿದ್ದ ಎಚ್ಚರಿಕೆಯನ್ನು ಯೂರೋಪ್ ನಿರ್ಲಕ್ಷಿಸಿತ್ತು". ಇದರಿಂದಾಗಿ ಸ್ವತಃ ಯುರೋಪಿನ ಕೈಗಾರಿಕಾ ನೆಲೆ ದುರ್ಬಲಗೊಂಡು ವ್ಯೂಹಾತ್ಮಕ ಅಪಾಯಗಳು ಹೆಚ್ಚಾದವು ಎಂದು ಓಪನ್ ಆಗಿ ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ಭಾರತಕ್ಕೆ ಮೊದಲ ಆದ್ಯತೆ

ಮುಂದುವರೆದು ಮಾತನಾಡಿದ ಬಾರ್ಟ್ ಡಿ ವೆವರ್, ಭಾರತ ನಮಗಿಂತ ಮುಂಚಿತವಾಗಿಯೇ ಈ ಅಪಾಯವನ್ನು ಅರಿತು ನಮಗೆ ಎಚ್ಚರಿಕೆ ನೀಡಿತ್ತು. ಆದರೆ ಯೂರೋಪ್ ಅದನ್ನು ಕೇಳಲಿಲ್ಲ. ಪ್ರಧಾನಿ ಮೋದಿಯವರ ಮಾತನ್ನು ಅಂದು ನಿರ್ಲಕ್ಷಿಸಲಾಯಿತು. ಆದರೆ ಈಗ ಯೂರೋಪ್ ಎಚ್ಚೆತ್ತುಕೊಂಡಿದೆ, ನಾವು ಈಗ ಭಾರತದ ಮಾತನ್ನು ಕೇಳುತ್ತಿದ್ದೇವೆ. ಜೊತೆಗೆ, ಕಳೆದ ಕೆಲವು ವರ್ಷಗಳು ಯೂರೋಪ್‌ಗೆ ಆರ್ಥಿಕವಾಗಿ ಕಠಿಣ ಪಾಠ ಕಲಿಸಿವೆ. ಅದರಲ್ಲೂ, ಯಾವುದೇ ಒಂದು ನಿರ್ದಿಷ್ಟ ದೇಶದ ಮೇಲಿನ ಅತಿಯಾದ ಆರ್ಥಿಕ ಅವಲಂಬನೆಯು ಭವಿಷ್ಯದಲ್ಲಿ ರಾಜಕೀಯವಾಗಿ ಒತ್ತಡ ಹೇರುವ ಆಸ್ತ್ರವಾಗಿ ಬದಲಾಗಬಹುದು ಎಂಬುದು ಯೂರೋಪ್‌ಗೆ ಮನವರಿಕೆಯಾಗಿದೆ ಎಂದರು. ಇದೇ ವೇಳೆ, ಭೌಗೋಳಿಕ ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ ಯೂರೋಪ್ ಈಗ ಪರ್ಯಾಯ ಮತ್ತು ಸುರಕ್ಷಿತ ಪೂರೈಕೆ ಸರಪಳಿಯನ್ನು ಹುಡುಕುತ್ತಿದ್ದು, ಈ ಪಟ್ಟಿಯಲ್ಲಿ ಭಾರತ ನಂಬರ್ 1 ಸ್ಥಾನದಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಏತನ್ಮಧ್ಯೆ, ಸೆಪ್ಟೆಂಬರ್ 2 ರಿಂದ 4 ರವರೆಗೆ ಭಾರತದ ಪ್ರವಾಸದಲ್ಲಿರುವ ಬೆಲ್ಜಿಯಂ ಪ್ರಧಾನಿ, ಭಾರತದೊಂದಿಗೆ ರಕ್ಷಣೆ, ಹೈ-ಟೆಕ್ನಾಲಜಿ, ಸೆಮಿಕಂಡಕ್ಟರ್ ಮತ್ತು ಹಸಿರು ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಹಾಗೂ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಬಲಪಡಿಸಲು ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.