ವಿದೇಶ

ವಿವಿ ಫ್ರೆಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: 'ನನ್ನ ಸರದಿ ಯಾವಾಗ?' ಎಂದು ಕೂಗಿದ ಪುರುಷರು!

ಪಾರ್ಟಿಯ ನೆಲಮಾಳಿಗೆಯಲ್ಲಿದ್ದ ಬಾತ್‌ರೂಮ್‌ನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಬಾತ್‌ರೂಮ್‌ನ ಹೊರಗೆ ನಿಂತಿದ್ದ ಪುರುಷರ ಗುಂಪು, “ನನ್ನ ಸರದಿ ಯಾವಾಗ?” ಮತ್ತು “ನಾನೂ ಒಳಗೆ ಹೋಗಬೇಕು” ಎಂದು ಕೂಗುತ್ತಾ..

ವಿವಿ ಫ್ರೆಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: 'ನನ್ನ ಸರದಿ ಯಾವಾಗ?' ಎಂದು ಕೂಗಿದ ಪುರುಷರು!
ಚಿಕಾಗೋದಲ್ಲಿ ಫ್ರಟರ್ನಿಟಿ ಪಾರ್ಟಿಯಲ್ಲಿ ಅತ್ಯಾಚಾರ ಆರೋಪ
Published On :

ವಾಷಿಂಗ್ಟನ್‌: ಚಿಕಾಗೋ ವಿವಿ ಫ್ರೆಟರ್ನಿಟಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಆಘಾತಕಾರಿ ಅಂಶವೆಂದರೆ ಈ ಘಟನೆ ವೇಳೆ ಕೆಲ ಯುವಕರು ತಮ್ಮ ಸರದಿಗಾಗಿ ಕಾಯುತ್ತಿದ್ದ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳು ಆಗಾಗ್ಗೆ ಕೇಳಿಬರುತ್ತವೆ. ಈ ಹಿಂದೆ ಕಾರ್ನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರ ಮೇಲಿನ ಸಾಮೂಹಿಕ ಅತ್ಯಾಚಾರದ ಆರೋಪದ ವಿವಾದದ ಬೆನ್ನಲ್ಲೇ, ಚಿಕಾಗೋ ವಿಶ್ವವಿದ್ಯಾಲಯದ ಫ್ರೆಟರ್ನಿಟಿ ಹೌಸ್‌ನಲ್ಲಿ ನಡೆದ ಪಾರ್ಟಿಯೊಂದರಲ್ಲಿ 21 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ.

ಪಾರ್ಟಿಯ ನೆಲಮಾಳಿಗೆಯಲ್ಲಿದ್ದ ಬಾತ್‌ರೂಮ್‌ನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ಬಾತ್‌ರೂಮ್‌ನ ಹೊರಗೆ ನಿಂತಿದ್ದ ಪುರುಷರ ಗುಂಪು, “ನನ್ನ ಸರದಿ ಯಾವಾಗ?” ಮತ್ತು “ನಾನೂ ಒಳಗೆ ಹೋಗಬೇಕು” ಎಂದು ಕೂಗುತ್ತಾ ದೌರ್ಜನ್ಯಕ್ಕೆ ಪ್ರೋತ್ಸಾಹ ನೀಡಿದಂತೆ ವರ್ತಿಸುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಂತ್ರಸ್ಥ ಯುವತಿಯ ಸ್ನೇಹಿತೆ ಆರೋಪಿಸಿರುವುದಾಗಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಚಿಕಾಗೋ ವಿಶ್ವವಿದ್ಯಾಲಯದ ಪ್ರಕಾರ, ಭಾನುವಾರ ಮುಂಜಾನೆ ಆಲ್ಫಾ ಎಪ್ಸಿಲಾನ್ ಪೈ (Alpha Epsilon Pi) ಫ್ರಟರ್ನಿಟಿ ಹೌಸ್‌ನಲ್ಲಿ ನಡೆದ ಪಾರ್ಟಿಯ ವೇಳೆ 21 ವರ್ಷದ ಯುವತಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವುದಾಗಿ ದೂರು ನೀಡಿದ್ದಾರೆ.

ಚಿಕಾಗೋ ಪೊಲೀಸರು ಪ್ರಕರಣದಲ್ಲಿ ಈವರೆಗೆ ಯಾರನ್ನೂ ಆರೋಪಿಯೆಂದು ಅಧಿಕೃತವಾಗಿ ದೋಷಾರೋಪಣೆ ಮಾಡಿಲ್ಲ. ಆದರೆ, ತನಿಖೆಗೆ ಸಂಬಂಧಿಸಿದ ವ್ಯಕ್ತಿಯೊಬ್ಬರನ್ನು ಗುರುತಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಯುವತಿ ಪೊಲೀಸರಿಗೆ ದೂರು ನೀಡಿದ ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ.

ಪಾರ್ಟಿಯಲ್ಲಿ ಅಸ್ವಸ್ಥಳಾದ ಯುವತಿ

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಯುವತಿ ತನ್ನ ಸ್ನೇಹಿತೆ ಮಿಯಾ ಲಾರಾ (21) ಮತ್ತು ಮತ್ತೊಬ್ಬ ಸ್ನೇಹಿತೆಯೊಂದಿಗೆ ಫ್ರೆಟರ್ನಿಟಿಯ ಇನ್‌ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದ ಆಹ್ವಾನವನ್ನು ನೋಡಿ ಪಾರ್ಟಿಗೆ ತೆರಳಿದ್ದರು. ಚಿಕಾಗೋ ಸನ್-ಟೈಮ್ಸ್ ಪೊಲೀಸ್ ವರದಿಯನ್ನು ಉಲ್ಲೇಖಿಸಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಪಾರ್ಟಿಯಲ್ಲಿ ಮದ್ಯ ಸೇವಿಸಿ ನೃತ್ಯ ಮಾಡುತ್ತಿದ್ದ ಯುವತಿಗೆ ಬಳಿಕ ಅಸ್ವಸ್ಥತೆ ಕಾಣಿಸಿಕೊಂಡಿತ್ತು.

ಸ್ವಲ್ಪ ಸಮಯದ ನಂತರ ಆಕೆಯ ಇಬ್ಬರು ಸ್ನೇಹಿತೆಯರು ಬಾತ್‌ರೂಮ್‌ನಲ್ಲಿ ಆಕೆಯನ್ನು ಕಂಡುಕೊಂಡರು. ಯುವತಿ ಸಂಪೂರ್ಣ ಪ್ರಜ್ಞೆಯಲ್ಲಿರಲಿಲ್ಲ ಮತ್ತು ಆಕೆಯೊಂದಿಗೆ ಇದ್ದ ವ್ಯಕ್ತಿಯೂ ಭಾಗಶಃ ಬಟ್ಟೆ ಬಿಚ್ಚಿದ್ದ ಸ್ಥಿತಿಯಲ್ಲಿದ್ದ ಎಂದು ವರದಿಯಾಗಿದೆ.

ಬಾತ್‌ರೂಮ್ ಒಳಗೆ ಹೋಗಲು ಹಲವು ಪುರುಷರನ್ನು ದಾಟಿಕೊಂಡು ಬಲವಂತವಾಗಿ ಒಳನುಗ್ಗಬೇಕಾಯಿತು ಎಂದು ಸ್ನೇಹಿತೆಯರು ಪೊಲೀಸರಿಗೆ ತಿಳಿಸಿದ್ದಾರೆ. ಆ ಪುರುಷರು ಬಾತ್‌ರೂಮ್ ಒಳಗೆ ನಡೆಯುತ್ತಿದ್ದ ಕೃತ್ಯಕ್ಕೆ ಪ್ರೋತ್ಸಾಹ ನೀಡುವ ರೀತಿಯಲ್ಲಿ ಕೂಗಾಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

‘ನನ್ನ ಸರದಿ ಯಾವಾಗ?’ ಎಂದು ಕೂಗುತ್ತಿದ್ದ ಯುವಕರು

ನ್ಯೂಯಾರ್ಕ್ ಪೋಸ್ಟ್ ಜೊತೆ ಮಾತನಾಡಿರುವ ಮಿಯಾ ಲಾರಾ, ಸ್ನೇಹಿತೆಯನ್ನು ಹುಡುಕುತ್ತಾ ಫ್ರೆಟರ್ನಿಟಿ ಹೌಸ್‌ನ ವಿವಿಧ ಕಡೆಗಳಲ್ಲಿ ಪರಿಶೀಲಿಸಿದಾಗ ನೆಲಮಾಳಿಗೆಯ ಬಾತ್‌ರೂಮ್‌ನ ಹೊರಗೆ ಕೆಲವರು ಗುಂಪಾಗಿ ನಿಂತಿರುವುದನ್ನು ಕಂಡಿದ್ದಾಗಿ ಹೇಳಿದ್ದಾರೆ.

“ನನ್ನ ಸರದಿ ಯಾವಾಗ?” ಮತ್ತು “ನಾನೂ ಒಳಗೆ ಹೋಗಬೇಕು” ಎಂಬಂತಹ ಮಾತುಗಳನ್ನು ಅವರು ಕೂಗುತ್ತಿದ್ದರು ಎಂದು ಲಾರಾ ಆರೋಪಿಸಿದ್ದಾರೆ. ಬಳಿಕ ಬಾತ್‌ರೂಮ್‌ಗೆ ಪ್ರವೇಶಿಸಿದಾಗ, ಮುಂಜಾನೆ ಸುಮಾರು 2 ಗಂಟೆಗೆ ತನ್ನ ಸ್ನೇಹಿತೆ ನೆಲದ ಮೇಲೆ ಗೋಡೆಗೆ ಒರಗಿಕೊಂಡು ಕುಳಿತಿರುವುದನ್ನು ಕಂಡೆ. ಆಕೆಯ ಬಟ್ಟೆಗಳು ಬಿಚ್ಚಿದ್ದವು ಮತ್ತು ಒಳ ಉಡುಪು ಕೆಳಕ್ಕೆ ಜಾರಿತ್ತು ಎಂದು ಲಾರಾ ಹೇಳಿದ್ದಾರೆ.

ಆಕೆಯ ಕೈಮಣಿಗಳನ್ನು ವ್ಯಕ್ತಿಯೊಬ್ಬ ಹಿಡಿದುಕೊಂಡಿದ್ದಾಗ, ಯುವತಿ “ಇದನ್ನು ನಿಲ್ಲಿಸಿ” ಮತ್ತು “ನನ್ನನ್ನು ಇಲ್ಲಿಂದ ಹೊರಗೆ ಕರೆದೊಯ್ಯಿರಿ” ಎಂದು ಕಿರುಚುತ್ತಿದ್ದಳು ಎಂದು ಲಾರಾ ಆರೋಪಿಸಿದ್ದಾರೆ. ಬಳಿಕ ಆ ವ್ಯಕ್ತಿ ಫ್ರಟರ್ನಿಟಿ ಹೌಸ್‌ನಿಂದ ಹೊರಗೆ ಓಡಿಹೋದಾಗ, ಲಾರಾ ಆತನನ್ನು ಹಿಂಬಾಲಿಸಿ ತನ್ನ ಸ್ನೇಹಿತೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಪ್ರಶ್ನಿಸಿದ್ದು, ಅದಕ್ಕೆ ಆತ, “ಆಕೆಗೆ ಅದೇ ಬೇಕಿತ್ತು” ಎಂದು ಪ್ರತಿಕ್ರಿಯಿಸಿದ್ದಾಗಿ ಲಾರಾ ಆರೋಪಿಸಿದ್ದಾರೆ.

ಈ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾದ ಆರೋಪಗಳಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಆರೋಪವನ್ನು ಖಂಡಿಸಿದ ಫ್ರಟರ್ನಿಟಿ ಸಂಘಟನೆ

ಆಲ್ಫಾ ಎಪ್ಸಿಲಾನ್ ಪೈ ಸಂಘಟನೆಯು ತನ್ನ ಸದಸ್ಯರು ಈ ದೌರ್ಜನ್ಯದಲ್ಲಿ ಭಾಗಿಯಾಗಿಲ್ಲ ಅಥವಾ ಘಟನೆ ನಡೆಯುತ್ತಿದ್ದಾಗ ಅದರ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದೆ. ಸಂತ್ರಸ್ತೆಯ ಸ್ನೇಹಿತೆಯೊಬ್ಬರು ಮಾಹಿತಿ ನೀಡಿದ ತಕ್ಷಣ ಸಂಘಟನೆಯ ಸದಸ್ಯರು ನೆರವಿಗೆ ಧಾವಿಸಿ ಪಾರ್ಟಿಯನ್ನು ತಕ್ಷಣ ನಿಲ್ಲಿಸಿದರು ಎಂದು ವಿಶ್ವವಿದ್ಯಾಲಯದ ಘಟಕ ತಿಳಿಸಿದೆ.

ಅಲ್ಲದೆ ಸಂತ್ರಸ್ತೆ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಲ್ಲ ಎಂದು ಆಡಳಿತ ತಿಳಿಸಿದೆ. ಸಂಘಟನೆಯ ರಾಷ್ಟ್ರೀಯ ವಕ್ತಾರ ಜೊನಾಥನ್ ಪಿಯರ್ಸ್ ಹೇಳಿಕೆಯ ಪ್ರಕಾರ, “ಈ ದೌರ್ಜನ್ಯದಲ್ಲಿ ಆಲ್ಫಾ ಎಪ್ಸಿಲಾನ್ ಪೈ ಸದಸ್ಯರು ಭಾಗಿಯಾಗಿದ್ದಾರೆ ಅಥವಾ ಘಟನೆ ನಡೆಯುತ್ತಿದ್ದಾಗ ಅದರ ಬಗ್ಗೆ ಅವರಿಗೆ ತಿಳಿದಿತ್ತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.”

ಆರೋಪಿತ ವ್ಯಕ್ತಿಯನ್ನು ಫ್ರೆಟರ್ನಿಟಿ ಹೌಸ್‌ನಿಂದ ಹೊರಹೋಗುವಂತೆ ಮಾಡಲಾಗಿದ್ದು, ಆತ ಅಲ್ಲಿಂದ ತೆರಳುವ ದೃಶ್ಯಗಳು ಕ್ಯಾಮೆರಾಗಳಲ್ಲಿ ದಾಖಲಾಗಿವೆ ಎಂದು ಸಂಘಟನೆ ತಿಳಿಸಿದೆ. ತನಿಖೆಗೆ ಸಂಬಂಧಿಸಿದಂತೆ ಗುರುತಿಸಲಾದ ವ್ಯಕ್ತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಲ್ಲ ಮತ್ತು ಸಂಸ್ಥೆಯೊಂದಿಗೆ ಬೇರೆ ಯಾವುದೇ ಸಂಬಂಧವನ್ನೂ ಹೊಂದಿಲ್ಲ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.