ವಿದೇಶ

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ತನಿಖೆಯ ವೇಳೆ ರೈಫಲ್, ಗುಂಡು ತುಂಬಿದ ಮ್ಯಾಗಜೀನ್‌ಗಳು ಹಾಗೂ ದಾಳಿಗೆ ಬಳಸಬಹುದಾದ ಇತರ ಉಪಕರಣಗಳು ಆತನ ಮನೆಯಲ್ಲಿ ಪತ್ತೆಯಾಗಿವೆ.

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!
ಬಂಧಿತ ಆರೋಪಿ
Published On :

ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ಮೂಲದ ಜನರನ್ನು ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಶಿಕಾಗೋ ಪ್ರದೇಶದ ಪ್ರಸಿದ್ಧ ಹಿಂದೂ ದೇವಾಲಯವೊಂದನ್ನು ಗುರಿಯಾಗಿಸಿಕೊಂಡು ದಾಳಿಗೆ ಮುಂದಾಗಿದ್ದ ಈತನ ರೈಫಲ್ ಕೊನೆಯ ಕ್ಷಣದಲ್ಲಿ ಕೈಕೊಟ್ಟಿದ್ದರಿಂದ (Jammed) ನೂರಾರು ಜನರ ಪ್ರಾಣ ಉಳಿದಂತಾಗಿದೆ.

ಇಲಿನಾಯ್ಸ್‌ನ ಅರೋರಾ ಪ್ರದೇಶದಲ್ಲಿರುವ ಹಿಂದೂ ಆರಾಧನಾ ಸ್ಥಳವನ್ನು ಗುರಿಯಾಗಿಸಿಕೊಂಡಿದ್ದ ಆರೋಪಿ, ಭಾರತೀಯ ಮೂಲದ ಜನರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸುವ ವಿಚಾರಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಹೊಂದಿದ್ದ ಎನ್ನಲಾಗಿದೆ.

ತನಿಖೆಯ ವೇಳೆ ರೈಫಲ್, ಗುಂಡು ತುಂಬಿದ ಮ್ಯಾಗಜೀನ್‌ಗಳು ಹಾಗೂ ದಾಳಿಗೆ ಬಳಸಬಹುದಾದ ಇತರ ಉಪಕರಣಗಳು ಆತನ ಮನೆಯಲ್ಲಿ ಪತ್ತೆಯಾಗಿವೆ. ಆರೋಪಿ ದಾಳಿ ನಡೆಸಲು ಉದ್ದೇಶಿಸಿದ್ದ ನಿಖರ ಸ್ಥಳದ ಕುರಿತು ತನಿಖೆ ಮುಂದುವರಿದಿದ್ದು, ಘಟನೆಯ ಹಿಂದೆ ಇದ್ದ ಉದ್ದೇಶ ಮತ್ತು ಸಂಚಿನ ಸಂಪೂರ್ಣ ವಿವರಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪಲಾಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಬಂಧಿತ ಆರೋಪಿ. ಅಮೆರಿಕದಲ್ಲಿ ನವರಾತ್ರಿ ಸೇರಿದಂತೆ ಹಿಂದೂಗಳ ಹಬ್ಬದ ಋತು ಆರಂಭವಾಗಿರುವ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಇದಕ್ಕೂ ಎರಡು ವಾರಗಳ ಹಿಂದೆ ಓಹಿಯೋದ ರಿಚ್ಮಂಡ್ ಹೈಟ್ಸ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ವಡ್ತಾಲ್ ಧಾಮ್ ಹಿಂದೂ ಮಂದಿರವನ್ನು ಧ್ವಂಸಗೊಳಿಸಲಾಗಿತ್ತು.

ಬುಧವಾರ ರೋಲಿಂಗ್ ಮೆಡೋಸ್‌ನ ಕುಕ್ ಕೌಂಟಿ ಮೂರನೇ ಮುನ್ಸಿಪಲ್ ಜಿಲ್ಲಾ ನ್ಯಾಯಾಲಯಕ್ಕೆ ಪಪೊರಾಕಿಸ್‌ನನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದ್ದಾರೆ. ಮುಂದಿನ ವಿಚಾರಣೆ ಅಕ್ಟೋಬರ್ 30ರಂದು ನಡೆಯಲಿದೆ.

ಪಲಾಟೈನ್‌ನ ಟ್ಯಾಕೋ ಬೆಲ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಪಪೊರಾಕಿಸ್ ಸಾಮೂಹಿಕ ಗುಂಡಿನ ದಾಳಿಗೆ ಸಂಚು ರೂಪಿಸುತ್ತಿದ್ದಾನೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು.

ಆರೋಪಿ ಸಾಮೂಹಿಕ ಗುಂಡಿನ ದಾಳಿ ನಡೆಸುವ ಯೋಜನೆಯನ್ನು ವಿವರಿಸುವ ದಾಖಲೆಯೊಂದನ್ನು ದೂರುದಾರನೊಂದಿಗೆ ಹಂಚಿಕೊಂಡಿದ್ದ ಎನ್ನಲಾಗಿದೆ. ಇದರೊಂದಿಗೆ ರೈಫಲ್, ರೈಫಲ್ ಮ್ಯಾಗಜೀನ್‌ಗಳು, ದೇಹದ ರಕ್ಷಣಾ ಕವಚ ಹಾಗೂ ಇತರ ಯುದ್ಧತಂತ್ರದ ಉಪಕರಣಗಳ ಚಿತ್ರಗಳನ್ನೂ ಕಳುಹಿಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ತನಿಖೆಯ ವೇಳೆ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ, ಅಕ್ಟೋಬರ್ 11ರ ಭಾನುವಾರ ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯವೊಂದನ್ನು ಗುರಿಯಾಗಿಸಿಕೊಂಡು ಆರೋಪಿ ದಾಳಿ ನಡೆಸಲು ಯೋಜಿಸಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಆತ ದಾಳಿ ನಡೆಸಲು ಉದ್ದೇಶಿಸಿದ್ದ ನಿಖರ ಸ್ಥಳದ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ನಡುವೆ ದಾಳಿಗೆ ಸಂಚು ರೂಪಿಸಿದ್ದ ಆರೋಪಿ, ಭಾನುವಾರ ವಿಶೇಷ ದಿನವಾಗಲಿದೆ ಎಂದು ಪಪೊರಾಕಿಸ್ ತನ್ನ ಟ್ಯಾಕೋ ಬೆಲ್ ಸಹೋದ್ಯೋಗಿಗಳಿಗೆ ಹೇಳಿದ್ದ ಎನ್ನಲಾಗಿದೆ.

ಅಂದು ಬೆಳಿಗ್ಗೆ ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಿದ ಆತ, ತನ್ನ ಬಂದೂಕು ಜಾಮ್ ಆಗಿದೆ ಎಂದು ತಿಳಿಸಿದ್ದ. ಬಳಿಕ ಯಾರ ಕಣ್ಣಿಗೂ ಬೀಳದೆ ಅಲ್ಲಿಂದ ವೇಗವಾಗಿ ಹೊರಟಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಆರೋಪಿಯನ್ನು ಯಾವುದೇ ಕಾರಣಕ್ಕೂ ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಧಾರ್ಮಿಕ ಆರಾಧನಾ ಸ್ಥಳಗಳ ರಕ್ಷಣೆ ಕಾನೂನು ಜಾರಿ ಸಂಸ್ಥೆಗಳ ಪ್ರಮುಖ ಆದ್ಯತೆಯಾಗಿದೆ ಎಂದು ಪಲಾಟೈನ್ ಪೊಲೀಸ್ ಮುಖ್ಯಸ್ಥ ವಿಲಿಯಂ ನಾರ್ಡ್ ಹೇಳಿದ್ದಾರೆ.

ಪಲಾಟೈನ್ ಪೊಲೀಸರು ಆರೋಪಿ ಬಳಸಿದ್ದ ಎಲೆಕ್ಟ್ರಾನಿಕ್ ಸಂವಹನ ದಾಖಲೆಗಳು ಹಾಗೂ ಆತನ ಹೆಸರಿನಲ್ಲಿ ಸಿದ್ಧಪಡಿಸಲಾಗಿದೆ ಎನ್ನಲಾದ ‘Why I Fought: A.K.A.: (Aurora shooter's manifesto)’ ಎಂಬ ದಾಖಲೆಯನ್ನು ಪರಿಶೀಲಿಸಿದ್ದಾರೆ.

ಅದರಲ್ಲಿ ಬಿಳಿಯರ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಹಾಗೂ ಉಗ್ರವಾದಿ ಸಿದ್ಧಾಂತಗಳನ್ನು ವ್ಯಕ್ತಪಡಿಸುವ ಹೇಳಿಕೆಗಳಿದ್ದವು. ದಕ್ಷಿಣ ಏಷ್ಯಾ ಮೂಲದ ಜನರು, ಅದರಲ್ಲೂ ಭಾರತೀಯ ಮೂಲದವರ ವಿರುದ್ಧ ಹಿಂಸಾಚಾರ ನಡೆಸುವ ಉಲ್ಲೇಖಗಳೂ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಪಲಾಟೈನ್ ಮತ್ತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳು ತಕ್ಷಣ ಸಮನ್ವಯ ಸಾಧಿಸಿ ಕಾರ್ಯಾಚರಣೆ ನಡೆಸಿದ್ದವು. ಅಕ್ಟೋಬರ್ 11ರ ಸಂಜೆ ಆರೋಪಿ ತನ್ನ ಮನೆಯಿಂದ ಹೊರಬರುತ್ತಿದ್ದಾಗ ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಯಿತು.

ಬಳಿಕ ಆತನ ನಿವಾಸದಲ್ಲಿ ಶೋಧ ನಡೆಸಿದ ಪೊಲೀಸರು ಒಂದು ರೈಫಲ್, ಗುಂಡು ತುಂಬಿದ್ದ ಹಲವು ರೈಫಲ್ ಮ್ಯಾಗಜೀನ್‌ಗಳು, ನೂರಾರು ಹೆಚ್ಚುವರಿ ರೈಫಲ್ ಗುಂಡುಗಳು, ಯುದ್ಧತಂತ್ರದ ಉಪಕರಣಗಳು ಹಾಗೂ ತನಿಖೆಗೆ ಸಂಬಂಧಿಸಿರಬಹುದಾದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಳಿಯರ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಉಗ್ರವಾದಿ ಸಿದ್ಧಾಂತಗಳಿಗೆ ಸಂಬಂಧಿಸಿದ ಚಿತ್ರವಿರುವ ಪ್ಯಾಚ್ ಹೊಂದಿದ್ದ ದೇಹದ ರಕ್ಷಣಾ ಕವಚವನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.

ಪಲಾಟೈನ್ ಮತ್ತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳು ಸಂಭವನೀಯ ದಾಳಿಯ ಬೆದರಿಕೆಯ ಕುರಿತು ಅರೋರಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದವು. ಅಲ್ಲದೆ, ತಮ್ಮ ವ್ಯಾಪ್ತಿಯಲ್ಲಿರುವ ಹಿಂದೂ ದೇವಾಲಯಗಳ ಆಡಳಿತ ಮಂಡಳಿಗಳನ್ನು ಸಂಪರ್ಕಿಸಿ, ದಾಳಿಯ ಸಂಚಿನ ಬಗ್ಗೆ ಎಚ್ಚರಿಕೆ ನೀಡಿದ್ದವು.

ಇದೀಗ ಆರೋಪಿ ಪಪೊರಾಕಿಸ್ ವಿರುದ್ಧ ಭಯೋತ್ಪಾದಕ ಬೆದರಿಕೆ ಒಡ್ಡಿದ ಒಂದು ಪ್ರಕರಣ ಹಾಗೂ ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಒಂದು ಪ್ರಕರಣ ದಾಖಲಿಸಲಾಗಿದೆ. 16 ಇಂಚಿಗಿಂತ ಕಡಿಮೆ ಉದ್ದದ ನಳಿಕೆ ಹೊಂದಿರುವ ರೈಫಲ್ ಅನ್ನು ಅಕ್ರಮವಾಗಿ ಹೊಂದಿದ್ದ ಆರೋಪವೂ ಇದರಲ್ಲಿ ಸೇರಿದೆ.

ತನಿಖೆ ಇನ್ನೂ ಮುಂದುವರಿದಿದ್ದು, ಹೆಚ್ಚುವರಿ ಆರೋಪಗಳನ್ನು ದಾಖಲಿಸುವ ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕರಣದ ತನಿಖೆಯಲ್ಲಿ ಪಲಾಟೈನ್ ಪೊಲೀಸರು ಎಫ್‌ಬಿಐ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸದ್ಯ ಯಾವುದೇ ನಿರಂತರ ಬೆದರಿಕೆ ಇರುವುದು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಆರೋಪಿತ ಬೆದರಿಕೆಯ ಗಂಭೀರತೆಯನ್ನು ಯಾವುದೇ ಕಾರಣಕ್ಕೂ ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಪಲಾಟೈನ್ ಮತ್ತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳು ತಕ್ಷಣ ಮಾಹಿತಿ ಹಂಚಿಕೊಂಡು ಸಮನ್ವಯದಿಂದ ಕಾರ್ಯಾಚರಣೆ ನಡೆಸಿದ್ದರಿಂದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲು ಸಾಧ್ಯವಾಯಿತು” ಎಂದು ಪೊಲೀಸ್ ಮುಖ್ಯಸ್ಥ ವಿಲಿಯಂ ನಾರ್ಡ್ ಹೇಳಿದ್ದಾರೆ.

ಈ ನಡುವೆ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಹಿಂದೂ ಅಮೆರಿಕನ್ ಫೌಂಡೇಶನ್, ಪೊಲೀಸರ ತ್ವರಿತ ಕ್ರಮವನ್ನು ಶ್ಲಾಘಿಸಿದೆ.

ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡಿರುವುದನ್ನು ನಾವು ಅಭಿನಂದಿಸುತ್ತೇವೆ. ಸಂಭಾವ್ಯ ಬೆದರಿಕೆಗಳ ಬಗ್ಗೆ ಸಮುದಾಯದವರು ಜಾಗರೂಕರಾಗಿರಬೇಕು ಮತ್ತು ಅಂತಹ ಯಾವುದೇ ಮಾಹಿತಿ ದೊರೆತರೆ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಮನವಿ ಮಾಡುತ್ತೇವೆ. ಪ್ರತಿಯೊಂದು ಸಮುದಾಯಕ್ಕೂ ಭಯವಿಲ್ಲದೆ ಆರಾಧನೆ ನಡೆಸುವ ಹಕ್ಕಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಮತ್ತೊಂದು ಪೋಸ್ಟ್‌ನಲ್ಲಿ, ಭಾರೀ ಶಸ್ತ್ರಸಜ್ಜಿತನಾಗಿದ್ದ ಪಪೊರಾಕಿಸ್ ಈಗಾಗಲೇ ಹಿಂದೂ ದೇವಾಲಯಕ್ಕೆ ತಲುಪಿದ್ದ ಮತ್ತು ಗುಂಡಿನ ದಾಳಿ ಆರಂಭಿಸಲು ಯತ್ನಿಸಿದ್ದ. ಆದರೆ, ಬಂದೂಕು ಜಾಮ್ ಆಗಿದ್ದರಿಂದ ದಾಳಿ ನಡೆಸಲು ಸಾಧ್ಯವಾಗಲಿಲ್ಲ ಎಂದು ಸಂಘಟನೆ ಹೇಳಿಕೊಂಡಿದೆ.

ತಾನು ಸಮಾಜವಿರೋಧಿ ಮನೋಭಾವದ ಬಿಳಿಯರ ಶ್ರೇಷ್ಠತೆಯನ್ನು ಪ್ರತಿಪಾದಿಸುವ ನವ-ನಾಜಿ ಎಂದು ಆರೋಪಿ ಹೇಳಿಕೊಂಡಿದ್ದ. ದ್ವೇಷದಿಂದ ತುಂಬಿದ್ದ ಆತ, ಬಹುತೇಕ ಪ್ರತಿದಿನ ಸಾಮೂಹಿಕ ಹತ್ಯಾಕಾಂಡದ ಕಲ್ಪನೆಗಳಲ್ಲಿ ಮುಳುಗಿರುತ್ತಿದ್ದ ಎಂದೂ ಹಿಂದೂ ಅಮೆರಿಕನ್ ಫೌಂಡೇಶನ್ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.