Operation Epic Fury: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಾಗೆ ಮಹಾಘಾತ; F-35 ಸೇರಿ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ..!
MQ-9 ರೀಪರ್ ಡ್ರೋನ್‌ಗಳು ಅಮೆರಿಕದ ಅತ್ಯಂತ ಪ್ರಮುಖ ನಿಗಾವ್ಯವಸ್ಥೆ ಹಾಗೂ ದಾಳಿ ಸಾಮರ್ಥ್ಯ ಹೊಂದಿರುವ ಡ್ರೋನ್‌ಗಳಾಗಿದ್ದು, ಅವುಗಳ ನಷ್ಟ ಅಮೆರಿಕದ ಕಾರ್ಯಾಚರಣಾ ಸಾಮರ್ಥ್ಯಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಗಣಿಸಲಾಗುತ್ತಿದೆ.

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಆರಂಭಿಸಿದ್ದ ‘ಆಪರೇಶನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆ ಅಮೆರಿಕ ಸೇನೆಗೆ ಭಾರೀ ನಷ್ಟವನ್ನುಂಟುಮಾಡಿದೆ ಎಂಬ ಅಚ್ಚರಿಯ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
ಅಮೆರಿಕ ಕಾಂಗ್ರೆಸ್ ಅಧೀನದಲ್ಲಿರುವ ಸಂಸತ್ತೀಯ ಸಂಶೋಧನಾ ಸೇವೆ (CRS) ಬಿಡುಗಡೆ ಮಾಡಿದ ವರದಿ ಪ್ರಕಾರ, ಫೆಬ್ರವರಿ 28ರಿಂದ ಆರಂಭವಾದ ಈ ಸೈನಿಕ ಕಾರ್ಯಾಚರಣೆಯಲ್ಲಿ ಅಮೆರಿಕದ ಒಟ್ಟು 42 ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ತಿಳಿಸಲಾಗಿದೆ.
ಈ ವರದಿ ಹೊರಬಿದ್ದ ಬಳಿಕ ಅಮೆರಿಕದ ಸೈನಿಕ ಸಾಮರ್ಥ್ಯ, ಯುದ್ಧ ತಂತ್ರ ಮತ್ತು ಭಾರೀ ವೆಚ್ಚದ ಕುರಿತ ಚರ್ಚೆಗಳು ತೀವ್ರಗೊಂಡಿವೆ.
ವರದಿಯಲ್ಲಿ ಉಲ್ಲೇಖಿಸಿರುವ ಅಂಕಿಅಂಶಗಳ ಪ್ರಕಾರ, ನಾಲ್ಕು F-15E ಸ್ಟ್ರೈಕ್ ಈಗಲ್ ಯುದ್ಧ ವಿಮಾನಗಳು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಒಂದು F-35A ಲೈಟ್ನಿಂಗ್-II ಫೈಟರ್ ಜೆಟ್, ಒಂದು A-10 ಥಂಡರ್‌ಬೋಲ್ಟ್ ವಿಮಾನ, ಏಳು KC-135 ಸ್ಟ್ರಾಟೋಟ್ಯಾಂಕರ್ ಇಂಧನ ಪೂರೈಕೆ ವಿಮಾನಗಳು, ಒಂದು E-3 ಸೆಂಟ್ರಿ AWACS ಮೇಲ್ವಿಚಾರಣಾ ವಿಮಾನ, ಎರಡು MC-130J ಕಮಾಂಡೋ-II ವಿಶೇಷ ಕಾರ್ಯಾಚರಣೆ ವಿಮಾನಗಳು ಹಾಗೂ ಒಂದು HH-60W ಜಾಲಿ ಗ್ರೀನ್-II ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ಹಾನಿಗೊಳಗಾಗಿವೆ ಎಂದು ಹೇಳಲಾಗಿದೆ.
ಅದರ ಜೊತೆಗೆ ಅಮೆರಿಕಾದ ಡ್ರೋನ್ ವ್ಯವಸ್ಥೆಯ ಮೇಲೂ ಭಾರೀ ಹೊಡೆತ ಬಿದ್ದಿದೆ. 24 MQ-9 ರೀಪರ್ ಡ್ರೋನ್‌ಗಳು ಮತ್ತು ಒಂದು MQ-4C ಟ್ರಿಟಾನ್ ಡ್ರೋನ್ ನಾಶವಾಗಿರುವ ಅಥವಾ ಬಳಕೆಗೆ ಅಸಮರ್ಥವಾಗಿರುವ ಮಾಹಿತಿ ವರದಿಯಲ್ಲಿ ಉಲ್ಲೇಖವಾಗಿದೆ.
ವಿಶೇಷವಾಗಿ MQ-9 ರೀಪರ್ ಡ್ರೋನ್‌ಗಳು ಅಮೆರಿಕದ ಅತ್ಯಂತ ಪ್ರಮುಖ ನಿಗಾವ್ಯವಸ್ಥೆ ಹಾಗೂ ದಾಳಿ ಸಾಮರ್ಥ್ಯ ಹೊಂದಿರುವ ಡ್ರೋನ್‌ಗಳಾಗಿದ್ದು, ಅವುಗಳ ನಷ್ಟ ಅಮೆರಿಕದ ಕಾರ್ಯಾಚರಣಾ ಸಾಮರ್ಥ್ಯಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಗಣಿಸಲಾಗುತ್ತಿದೆ.
CRS ತನ್ನ ವರದಿಯಲ್ಲಿ ಈ ಮಾಹಿತಿಯನ್ನು ಅಮೆರಿಕ ರಕ್ಷಣಾ ಇಲಾಖೆ, ಸೆಂಟ್ರಲ್ ಕಮಾಂಡ್ ಹಾಗೂ ವಿವಿಧ ಮಾಧ್ಯಮ ವರದಿಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ ಎಂದು ತಿಳಿಸಿದೆ.
ಯುದ್ಧ ಚಟುವಟಿಕೆಗಳು ಇನ್ನೂ ಮುಂದುವರಿಯುತ್ತಿರುವುದರಿಂದ, ಅಂತಿಮ ನಷ್ಟದ ಅಂಕಿಅಂಶಗಳಲ್ಲಿ ಬದಲಾವಣೆ ಸಂಭವಿಸಬಹುದು ಎಂದೂ ತಿಳಿಸಲಾಗಿದೆ.
ಈ ನಡುವೆ ಇರಾನ್ ವಿರುದ್ಧದ ಸೈನಿಕ ಕಾರ್ಯಾಚರಣೆಗಳಿಂದ ಉಂಟಾಗುತ್ತಿರುವ ಆರ್ಥಿಕ ಹೊರೆ ಅಮೆರಿಕ ಸರ್ಕಾರಕ್ಕೆ ಮತ್ತೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಮೇ 12ರಂದು ನಡೆದ ಹೌಸ್ ಅಪ್ರೊಪ್ರಿಯೇಷನ್ಸ್ ಸಬ್‌ಕಮಿಟಿ ಸಭೆಯಲ್ಲಿ ಪೆಂಟಗನ್ ಕಾರ್ಯನಿರ್ವಹಣಾ ಲೆಕ್ಕಪತ್ರಾಧಿಕಾರಿ ಜೂಲ್ಸ್ ಡಬ್ಲ್ಯೂ. ಹರ್ಸ್ಟ್ III ಮಾತನಾಡಿ, ಯುದ್ಧೋಪಕರಣಗಳ ದುರಸ್ತಿ ಮತ್ತು ಬದಲಾವಣೆಯ ವೆಚ್ಚಗಳು ನಿರೀಕ್ಷೆಗಿಂತ ಹೆಚ್ಚಾಗಿವೆ ಎಂದು ಹೇಳಿದ್ದಾರೆ.
ಹೀಗಾಗಿ ಇರಾನ್ ವಿರುದ್ಧದ ಯುದ್ಧ ಕಾರ್ಯಾಚರಣೆಗಳ ಒಟ್ಟು ವೆಚ್ಚ ಈಗಾಗಲೇ 29 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಅಂದಾಜಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



