ಇರಾನ್ ಅಣ್ವಸ್ತ್ರ ಹೊಂದಬಾರದು, ಹಾರ್ಮುಜ್ ಜಲಸಂಧಿ ಮುಕ್ತವಾಗಿರಬೇಕು: ಅಮೆರಿಕಾ ನಿಲುವಿಗೆ ಚೀನಾ ಸಹಮತ
ಇರಾನ್ ಅಣ್ವಸ್ತ್ರಗಳನ್ನು ಹೊಂದಬಾರದು ಎಂಬುದನ್ನು ಕ್ಸಿ ಜಿನ್‌ಪಿಂಗ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು ಎಂದು ಬಯಸಿದ್ದಾರೆ.

ವಾಷಿಂಗ್ಟನ್/ಬೀಜಿಂಗ್: ಇರಾನ್ ಅಣ್ವಸ್ತ್ರಗಳನ್ನು ಹೊಂದಬಾರದು ಹಾಗೂ ಜಾಗತಿಕ ಇಂಧನ ಸಾಗಣೆಗೆ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿ ಯಾವತ್ತೂ ಮುಕ್ತವಾಗಿರಬೇಕು ಎಂಬ ವಿಷಯದಲ್ಲಿ ಅಮೆರಿಕ ಮತ್ತು ಚೀನಾ ಒಂದೇ ನಿಲುವು ಹೊಂದಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಚೀನಾದ ಮೂರು ದಿನಗಳ ಮಹತ್ವದ ಭೇಟಿಯನ್ನು ಪೂರ್ಣಗೊಳಿಸಿದ ಬಳಿಕ ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಅವರು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.
ಈ ಮಾತುಕತೆಯಲ್ಲಿ ಇರಾನ್‌ನ ಪರಮಾಣು ಯೋಜನೆ, ಹಾರ್ಮುಜ್ ಜಲಸಂಧಿಯ ಪರಿಸ್ಥಿತಿ, ತೈವಾನ್ ವಿಚಾರ ಹಾಗೂ ಅಮೆರಿಕ-ಚೀನಾ ವ್ಯಾಪಾರ ಸಂಬಂಧಗಳು ಪ್ರಮುಖ ಚರ್ಚಾ ವಿಷಯಗಳಾಗಿದ್ದವು ಎಂದು ಹೇಳಿದರು.
ಇರಾನ್ ಅಣ್ವಸ್ತ್ರಗಳನ್ನು ಹೊಂದಬಾರದು ಎಂಬುದನ್ನು ಕ್ಸಿ ಜಿನ್‌ಪಿಂಗ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು ಎಂದು ಬಯಸಿದ್ದಾರೆ ಎಂದು ಟ್ರಂಪ್ ತಿಳಿಸಿದರು. ಜೊತೆಗೆ, “ಇರಾನ್ ಜಲಸಂಧಿಯನ್ನು ಮುಚ್ಚಿದರೆ ನಾವು ಕೂಡ ಅವರನ್ನು ತಡೆಯುತ್ತೇವೆ” ಎಂಬ ಕ್ಸಿ ಜಿನ್‌ಪಿಂಗ್ ಅವರ ಮಾತನ್ನೂ ಉಲ್ಲೇಖಿಸಿದರು.
ಇದೇ ವೇಳೆ ಅಮೆರಿಕಾ ನೌಕಾಪಡೆಯು ಜಲಸಂಧಿಯ ಮೇಲೆ ದೊಡ್ಡ ಹಿಡಿತ ಹೊಂದಿದೆ ಎಂದೂ ಟ್ರಂಪ್ ಅವರು ತಿಳಿಸಿದ್ದಾರೆ.
ನಾವು ಜಲಸಂಧಿಯನ್ನು ನಿಯಂತ್ರಿಸುತ್ತಿದ್ದೇವೆ. ಕಳೆದ ಎರಡು ವಾರಗಳಿಂದ ಇರಾನ್ ಯಾವುದೇ ವ್ಯಾಪಾರ ನಡೆಸಿಲ್ಲ. ಅಮೆರಿಕದ ನೌಕಾ ದಿಗ್ಬಂಧನದಿಂದ ಇರಾನ್‌ಗೆ ಪ್ರತಿದಿನ ಸುಮಾರು 500 ಮಿಲಿಯನ್ ಡಾಲರ್ ನಷ್ಟವಾಗುತ್ತಿದೆ ಎಂದು ಹೇಳಿದರು.
ಚೀನಾದೊಂದಿಗೆ ನಡೆದ ಮಾತುಕತೆಗಳು ಕೇವಲ ಭದ್ರತಾ ವಿಷಯಗಳಿಗೆ ಸೀಮಿತವಾಗಿರಲಿಲ್ಲ. ವ್ಯಾಪಾರ ಕ್ಷೇತ್ರದಲ್ಲಿಯೂ ಮಹತ್ವದ ಒಪ್ಪಂದಗಳು ನಡೆದಿವೆ ಎಂದು ಟ್ರಂಪ್ ತಿಳಿಸಿದರು.
ಚೀನಾ 200 ಬೋಯಿಂಗ್ ವಿಮಾನಗಳನ್ನು ಖರೀದಿಸಲು ಒಪ್ಪಿಕೊಂಡಿದ್ದು, ಭವಿಷ್ಯದಲ್ಲಿ ಇನ್ನೂ 750 ವಿಮಾನಗಳ ಖರೀದಿಗೆ ಬದ್ಧತೆ ವ್ಯಕ್ತಪಡಿಸಿದೆ ಎಂದು ಹೇಳಿದರು.
ಇದು ಎರಡು ಮಹಾನ್ ರಾಷ್ಟ್ರಗಳ ನಡುವಿನ ಐತಿಹಾಸಿಕ ಭೇಟಿಯಾಗಿದ್ದು ನಾನು ಇದನ್ನು ‘ಜಿ-2’ ಎಂದು ಕರೆಯುತ್ತೇನೆ. ಅಮೆರಿಕಾ ಮತ್ತು ಚೀನಾ ಜಾಗತಿಕ ರಾಜಕೀಯ ಹಾಗೂ ಆರ್ಥಿಕತೆಯಲ್ಲಿ ನಿರ್ಣಾಯಕ ಶಕ್ತಿಗಳಾಗಿರುವುದರಿಂದ ಈ ಭೇಟಿಗೆ ವಿಶೇಷ ಮಹತ್ವವಿದೆ ಎಂದು ಅವರು ಅಭಿಪ್ರಾಯಪಟ್ಟರು.
ತೈವಾನ್ ವಿಚಾರ ಕುರಿತಂತೆಯೂ ಮಾತನಾಡಿದ ಅವರು. ಚೀನಾ ತೈವಾನ್ ಸಂಪೂರ್ಣ ಸ್ವತಂತ್ರ ರಾಷ್ಟ್ರವಾಗುವುದನ್ನು ಒಪ್ಪಿಕೊಳ್ಳುವುದಿಲ್ಲ, ಆದರೆ, ತಮ್ಮ ಅಧಿಕಾರಾವಧಿಯಲ್ಲಿ ಚೀನಾ ಆಕ್ರಮಣಕಾರಿ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆ ಎಂದು ಹೇಳಿದರು.
ನಾವು ಯುದ್ಧಗಳನ್ನು ಬಯಸುವುದಿಲ್ಲ. ಪರಿಸ್ಥಿತಿ ಈಗಿರುವಂತೆಯೇ ಮುಂದುವರಿದರೆ ಚೀನಾ ಸಹ ಅದನ್ನು ಒಪ್ಪಿಕೊಳ್ಳಬಹುದು ಎಂದು ತಿಳಿಸಿದರು.
ಇದೇ ವೇಳೆ, ಸೆಪ್ಟೆಂಬರ್‌ನಲ್ಲಿ ವಾಷಿಂಗ್ಟನ್‌ಗೆ ಭೇಟಿ ನೀಡುವಂತೆ ಕ್ಸಿ ಜಿನ್‌ಪಿಂಗ್ ಅವರಿಗೆ ಆಹ್ವಾನ ನೀಡಿರುವುದಾಗಿ ಟ್ರಂಪ್ ಹೇಳಿದರು.
ಜಾಗತಿಕ ಕಚ್ಚಾ ತೈಲ ಸಾಗಣೆಯ ಬಹುಪಾಲು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವುದರಿಂದ, ಅಲ್ಲಿನ ಯಾವುದೇ ಉದ್ವಿಗ್ನತೆ ವಿಶ್ವದ ಇಂಧನ ಮಾರುಕಟ್ಟೆಗೆ ನೇರ ಪರಿಣಾಮ ಬೀರುತ್ತದೆ.
ಇತ್ತೀಚಿನ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಜಲಸಂಧಿ ಮತ್ತೊಮ್ಮೆ ಜಾಗತಿಕ ರಾಜಕೀಯದ ಕೇಂದ್ರಬಿಂದುವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




